76. ಅಲ್-ಇನ್ಸಾನ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಮನುಷ್ಯನು, ತಾನೊಂದು ಪ್ರಸ್ತಾಪ ಯೋಗ್ಯ ವಸ್ತುವೇ ಅಲ್ಲವಾಗಿದ್ದ ಕಾಲವೊಂದನ್ನು ಕಳೆದಿಲ್ಲವೇ
2ನಾವು ಮನುಷ್ಯನನ್ನು ಪರೀಕ್ಷಿಸಲಿಕ್ಕಾಗಿ, ಅವನನ್ನು ಮಿಶ್ರಿತ ವೀರ್ಯದಿಂದ ಸೃಷ್ಟಿಸಿರುವೆವು. ಮತ್ತು ನಾವು ಅವನನ್ನು ಕೇಳ ಬಲ್ಲವನಾಗಿಯೂ ನೋಡ ಬಲ್ಲವನಾಗಿಯೂ ಮಾಡಿರುವೆವು
3ನಾವೇ ಅವನಿಗೆ ದಾರಿಯನ್ನು ತೋರಿಸಿದೆವು. ಇನ್ನವನು ಕೃತಜ್ಞನಾಗಲಿ ಅಥವಾ ಕೃತಘ್ನನಾಗಲಿ
4ನಾವು ಧಿಕ್ಕಾರಿಗಳಿಗಾಗಿ ಸರಪಣಿಗಳನ್ನೂ ನೊಗಗಳನ್ನೂ ಭುಗಿಲೇಳುವ ಬೆಂಕಿಯನ್ನೂ ಸಿದ್ಧಪಡಿಸಿಟ್ಟಿರುವೆವು
5ಸಜ್ಜನರು (ಸ್ವರ್ಗದಲ್ಲಿ) ಪಾನ ಪಾತ್ರೆಯಿಂದ ಕರ್ಪೂರ ಮಿಶ್ರಿತ ಪಾನೀಯವೊಂದನ್ನು ಸೇವಿಸುತ್ತಿರುವರು
6ಆ ಚಿಲುಮೆಯಿಂದ ಅಲ್ಲಾಹನ ದಾಸರು ಕುಡಿಯುವರು ಮತ್ತು ಅದರಿಂದ ಹಲವು ಕಾಲುವೆಗಳನ್ನು ಹೊರಡಿಸುವರು
7(ಇಹಲೋಕದಲ್ಲಿ) ಅವರು, ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ಮತ್ತು ಸರ್ವವ್ಯಾಪಿ ಸಂಕಟದ ದಿನವನ್ನು ಅಂಜುತ್ತಿರುತ್ತಾರೆ
8ಅವರು ಅವನ (ಅಲ್ಲಾಹನ) ಮೆಚ್ಚುಗೆಗಾಗಿ ನಿರ್ಗತಿಕರಿಗೆ, ಅನಾಥರಿಗೆ ಮತ್ತು ಕೈದಿಗಳಿಗೆ ಉಣ ಬಡಿಸುತ್ತಾರೆ
9(ಮತ್ತು ಅವರು ಹೇಳುತ್ತಾರೆ;) ‘‘ನಾವು ಕೇವಲ ಅಲ್ಲಾಹನ ಮೆಚ್ಚುಗೆಗಾಗಿ ನಿಮಗೆ ಉಣಿಸುತ್ತಿದ್ದೇವೆ. ನಿಮ್ಮಿಂದ ನಾವು ಯಾವುದೇ ಪ್ರತಿಫಲವನ್ನಾಗಲಿ ಕೃತಜ್ಞತೆಯನ್ನಾಗಲಿ ಬಯಸುವುದಿಲ್ಲ’’
10‘‘ನಮಗೆ ನಮ್ಮೊಡೆಯನ ಕಡೆಯಿಂದ ಬರಲಿರುವ ಕರಾಳ ಹಾಗೂ ಕಠೋರ (ಪುನರುತ್ಥಾನ) ದಿನದ ಭಯವಿದೆ’’
11ಅಲ್ಲಾಹನು ಅವರನ್ನು ಆ ದಿನದ ಹಾನಿಯಿಂದ ರಕ್ಷಿಸುವನು. ಮತ್ತು ಅವರಿಗೆ ಉಲ್ಲಾಸ ಹಾಗೂ ಸಂತೋಷವನ್ನು ನೀಡುವನು
12ಅವರ ಸಹನೆಯ ಫಲವಾಗಿ ಅವರಿಗೆ ಸ್ವರ್ಗ ಹಾಗೂ ರೇಶ್ಮೆಯ ಉಡುಗೆಯನ್ನು ದಯಪಾಲಿಸುವನು
13ಅಲ್ಲಿ ಅವರು ಆಸನಗಳ ಮೇಲೆ ದಿಂಬುಗಳಿಗೆ ಒರಗಿ ಕೊಂಡಿರುವರು. ಅಲ್ಲಿ ಅವರು ತೀಕ್ಷ್ಣ ಬಿಸಿಲನ್ನಾಗಲಿ ತೀವ್ರ ಚಳಿಯನ್ನಾಗಲೀ ಕಾಣಲಾರರು
14ಅದರ (ಸ್ವರ್ಗ ತೋಟದ) ನೆರಳು ಅವರನ್ನು ಆವರಿಸಿರುವುದು. ಅದರಲ್ಲಿನ ಹಣ್ಣಿನ ಗೊಂಚಲುಗಳು ಅವರಿಗೆ ಎಟುಕುತ್ತಿರುವವು
15ಬೆಳ್ಳಿಯ ಪಾತ್ರೆಗಳನ್ನೂ ಶುಭ್ರವಾದ ಗಾಜಿನ ಪಾನ ಪಾತ್ರೆಗಳನ್ನೂ ಅವರ ಸುತ್ತ ಒಯ್ಯಲಾಗುವುದು
16ಅದು ಕಲಾತ್ಮಕವಾಗಿ ಅಲಂಕರಿಸಿದ ಬೆಳ್ಳಿಯ ಗಾಜಾಗಿರುವುದು ಮತ್ತು ಅವುಗಳನ್ನು ತುಂಬುವವರು ಸರಿಯಾದ ಪ್ರಮಾಣದಲ್ಲಿ ತುಂಬಿರುವರು
17ಅಲ್ಲಿ ಅವರಿಗೆ ಶುಂಠಿಯ ಮಿಶ್ರಣವಿರುವ ಪಾನೀಯಗಳನ್ನು ಕುಡಿಸಲಾಗುವುದು
18ಅಲ್ಲಿ ಸಲ್ ಸಬೀಲ್ ಎಂಬ ಹೆಸರಿನ ಒಂದು ಚಿಲುಮೆ ಇರುವುದು
19ಸದಾ ಬಾಲಕರಾಗಿರುವವರು ಅಲ್ಲಿ ಸಂಚರಿಸುತ್ತಿರುವರು. ನೀವು ಅವರನ್ನು ಕಂಡರೆ, ಅವರು ಚದುರಿದ ಮುತ್ತುಗಳೆಂದು ಭಾವಿಸುವಿರಿ
20ಅಲ್ಲಿ ನೀವು ಎಲ್ಲಿ ನೋಡಿದರೂ ಧಾರಾಳ ಅನುಗ್ರಹಗಳನ್ನು ಮತ್ತು ಒಂದು ಬೃಹತ್ ಸಾಮ್ರಾಜ್ಯವನ್ನೇ ಕಾಣುವಿರಿ
21ಅವರ ಮೇಲುಡುಪು ನುಣ್ಣಗೆಯ ಹಸಿರು ರೇಷ್ಮೆ ಹಾಗೂ ಉಣ್ಣೆಯದ್ದಾಗಿರುವುದು ಮತ್ತು ಅವರಿಗೆ ಬೆಳ್ಳಿಯ ಕಡಗಗಳನ್ನು ತೊಡಿಸಲಾಗುವುದು ಮತ್ತು ಅವರ ಒಡೆಯನು ಅವರಿಗೆ ಒಂದು ನಿರ್ಮಲ ಪಾನೀಯವನ್ನು ಕುಡಿಸುವನು
22‘‘ಇದು ನಿಮ್ಮ ಪ್ರತಿಫಲ. ನಿಮ್ಮ ಶ್ರಮವು ಸ್ವೀಕೃತವಾಗಿದೆ’’ (ಎಂದು ಅವರೊಡನೆ ಹೇಳಲಾಗುವುದು)
23ದೂತರೇ, ನಾವು ಈ ಕುರ್ಆನನ್ನು ಹಂತ ಹಂತವಾಗಿ ನಿಮಗೆ ಇಳಿಸಿ ಕೊಟ್ಟಿರುವೆವು
24ನೀವು ನಿಮ್ಮೊಡೆಯನಿಗಾಗಿ ಸಹನಶೀಲರಾಗಿರಿ ಮತ್ತು ಅವರ (ಧಿಕ್ಕಾರಿಗಳ) ಪೈಕಿ ಯಾವುದೇ ಪಾಪಿಯ ಅಥವಾ ಕೃತಘ್ನನ ಮಾತನ್ನು ಅನುಸರಿಸಬೇಡಿರಿ
25ಸಂಜೆ ಮತ್ತು ಮುಂಜಾನೆಯ ವೇಳೆ ನೀವು ನಿಮ್ಮ ಒಡೆಯನ ನಾಮ ಸ್ಮರಣೆ ಮಾಡಿರಿ
26ಮತ್ತು ಇರುಳಲ್ಲಿ ಅವನಿಗೆ ಸಾಷ್ಟಾಂಗವೆರಗಿರಿ ಹಾಗೂ ಇರುಳಿನ ಧೀರ್ಘ ಭಾಗದಲ್ಲಿ ಅವನ ಪಾವಿತ್ರವನ್ನು ಜಪಿಸಿರಿ
27ಅವರು ಬೇಗನೆ ಸಿಗುವುದನ್ನು (ಇಹಲೋಕವನ್ನು) ಪ್ರೀತಿಸುತ್ತಾರೆ ಮತ್ತು ತಮ್ಮ ಮುಂದಿರುವ (ಲೋಕಾಂತ್ಯದ) ಮಹಾ ದಿನವನ್ನು ಕಡೆಗಣಿಸಿ ಬಿಡುತ್ತಾರೆ
28ನಾವೇ ಅವರನ್ನು ಸೃಷ್ಟಿಸಿರುವೆವು ಮತ್ತು ಅವರ ಶರೀರದ ಗಂಟುಗಳನ್ನು ಬಲ ಪಡಿಸಿರುವೆವು ಮತ್ತು ನಾವು ಬಯಸಿದರೆ ಅವರ ಬದಲಿಗೆ ಅವರಂತಹ ಇತರರನ್ನು ತರಬಲ್ಲೆವು
29ಇದೊಂದು ಉಪದೇಶವಾಗಿದೆ. ಇಷ್ಟ ಉಳ್ಳವನು ತನ್ನ ಒಡೆಯನ ಕಡೆಗಿರುವ ದಾರಿಯನ್ನು ಅನುಸರಿಸಲಿ
30ಅಲ್ಲಾಹನು ಇಚ್ಛಿಸುವ ತನಕ ನಿಮ್ಮ ಯಾವ ಇಚ್ಛೆಯೂ ನಡೆಯದು. ಅಲ್ಲಾಹನು ಖಂಡಿತ ಎಲ್ಲವನ್ನೂ ಬಲ್ಲವನೂ ಯುಕ್ತಿವಂತನೂ ಆಗಿರುತ್ತಾನೆ
31ಅವನು ತಾನಿಚ್ಛಿಸಿದವರನ್ನು ತನ್ನ ಅನುಗ್ರಹದೊಳಗೆ ಸೇರಿಸಿಕೊಳ್ಳುತ್ತಾನೆ ಮತ್ತು ಅಕ್ರಮಿಗಳಿಗಾಗಿ ಅವನು ಕಠಿಣ ಶಿಕ್ಷೆಯನ್ನು ಸಿದ್ದವಾಗಿಟ್ಟಿದ್ದಾನೆ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath