ಇಸ್ಲಾಂ
ಹಿಂದೆ

56. ಅಲ್-ವಾಕಿಯಾ

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ವೈಭವಪೂರ್ಣ ಹಾಗೂ ಗೌರವಾನ್ವಿತನಾದ ನಿಮ್ಮ ಒಡೆಯನ ಹೆಸರು ಸಮೃದ್ಧಿದಾಯಕವಾಗಿದೆ

2ಸಂಭವಿಸಬೇಕಾದುದು ಸಂಭವಿಸಿ ಬಿಟ್ಟಾಗ

3ಅದರ ಸಂಭವ ಸುಳ್ಳಾಗಿರದು

4ಅದು (ಕೆಲವರನ್ನು) ಕೀಳಾಗಿಸುವುದು ಮತ್ತು (ಕೆಲವರನ್ನು) ಮೇಲಾಗಿಸುವುದು

5ಭೂಮಿಯು ತೀವ್ರ ಕಂಪನದಿಂದ ತತ್ತರಿಸಿ ಬಿಡುವುದು

6ಮತ್ತು ಪರ್ವತಗಳು ನುಚ್ಚು ನೂರಾಗಿ ಬಿಡುವವು

7ಮತ್ತು ಅವು ಧೂಳಾಗಿ ಹಾರಾಡ ತೊಡಗುವವು

8ಮತ್ತು ನೀವು ಮೂರು ವರ್ಗಗಳಾಗುವಿರಿ

9ಬಲ ಭಾಗದವರು. ಎಂತಹ (ಭಾಗ್ಯವಂತರು) ಆ ಬಲಭಾಗದವರು

10ಮತ್ತು ಎಡ ಭಾಗದವರು. ಎಂತಹ (ಭಾಗ್ಯಹೀನರು) ಆ ಎಡ ಭಾಗದವರು

11ಮತ್ತು ಮುಂದೆ ಹೋದವರು ಮುಂದೆಯೇ ಇರುವರು

12ಅವರು (ಅಲ್ಲಾಹನ) ಸಮೀಪ ವರ್ತಿಗಳಾಗಿರುವರು

13(ಅವರು) ಅನುಗ್ರಹಗಳು ತುಂಬಿದ ಉದ್ಯಾನಗಳಲ್ಲಿರುವರು

14(ಅವರಲ್ಲಿ) ಹೆಚ್ಚಿನವರು ಹಿಂದಿನ ಕಾಲದವರಾಗಿರುವರು

15ಮತ್ತು ಕಡಿಮೆ ಮಂದಿ ಅನಂತರದವರಾಗಿರುವರು

16ಅವರು ಸ್ವರ್ಣಾಲಂಕೃತ ಪೀಠಗಳಲ್ಲಿರುವರು

17ಅವುಗಳಲ್ಲಿ ದಿಂಬುಗಳಿಗೊರಗಿ ಎದುರು ಬದುರಾಗಿರುವರು

18ಶಾಶ್ವತ ಬಾಲಕರು ಅವರ ಸುತ್ತ ಚಲಿಸುತ್ತಿರುವರು –

19– ಲೋಟೆ ಹಾಗೂ ಹೂಜಿಗಳಲ್ಲಿ ಶುದ್ಧವಾದ ಪಾನೀಯಗಳನ್ನು ಹೊತ್ತು

20ಅದರಿಂದ ಅವರಿಗೆ ತಲೆ ನೋವಾಗದು ಮತ್ತು ಬುದ್ಧಿಯೂ ಮಂದವಾಗದು

21(ಅಲ್ಲಿ) ಅವರ ಆಯ್ಕೆಯ ಹಣ್ಣು ಹಂಪಲುಗಳಿರುವವು

22ಅವರು ಅಪೇಕ್ಷಿಸುವ ಪಕ್ಷಿಯ ಮಾಂಸವಿರುವುದು

23ಮತ್ತು ವಿಶಾಲ ಕಣ್ಣಿನ ಸ್ವರ್ಗ ಕನ್ಯೆಯರಿರುವರು

24ಅವರು ಜೋಪಾನವಾಗಿ ಮುಚ್ಚಿಟ್ಟ ಮುತ್ತಿನಂತಿರುವರು

25(ಇದು) ಅವರು ಮಾಡಿದ ಕರ್ಮಗಳ ಪ್ರತಿಫಲ

26ಅಲ್ಲಿ ಅವರು ಯಾವುದೇ ಅನಗತ್ಯ ಮಾತನ್ನಾಗಲಿ ಕೆಟ್ಟ ಸಂಭಾಷಣೆಯನ್ನಾಗಲಿ ಕೇಳಲಾರರು

27‘ಸಲಾಮ್, ಸಲಾಮ್’ (ಶಾಂತಿ, ಶಾಂತಿ) ಎಂಬ ಹಾರೈಕೆಯ ಹೊರತು

28ಮತ್ತು ಬಲ ಭಾಗದವರು, (ಎಂತಹ ಭಾಗ್ಯವಂತರು) ಆ ಬಲ ಭಾಗದವರು

29(ಅವರಿರುವಲ್ಲಿ ಲಭ್ಯವಿರುವವು;) ಮುಳ್ಳಿಲ್ಲದ ಬುಗರಿಗಳು

30ಗೊನೆ ಗೊನೆಯಾಗಿರುವ ಬಾಳೆ ಹಣ್ಣುಗಳು

31ವ್ಯಾಪಕ ನೆರಳು

32ಹರಿಯುವ ನೀರು

33ಮತ್ತು ಧಾರಾಳ ಹಣ್ಣು ಹಂಪಲುಗಳು

34ಅವು ಎಂದೂ ಮುಗಿದು ಹೋಗಲಾರವು ಮತ್ತು (ಅವುಗಳ ಬಳಕೆಗೆ) ಯಾವುದೇ ಅಡೆತಡೆಯೂ ಇರಲಾರದು

35(ಅವರು) ಎತ್ತರದ ಆಸನಗಳಲ್ಲಿರುವರು

36ನಾವೇ ಅವರನ್ನು (ಸ್ವರ್ಗ ಕನ್ಯೆಯರನ್ನು ) ಸೃಷ್ಟಿಸಿರುವೆವು

37ನಾವು ಅವರನ್ನು ಕನ್ಯೆಯರಾಗಿಸಿರುವೆವು

38ಪ್ರೀತಿಪಾತ್ರರಾಗಿ, ಸಹವಯಸ್ಕರಾಗಿ ಮಾಡಿರುವೆವು –

39– ಬಲಭಾಗದವರಿಗಾಗಿ

40(ಅವರಲ್ಲಿ) ಹಿಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು

41ಮತ್ತು ಮುಂದಿನವರೂ ಹೆಚ್ಚಿನ ಸಂಖ್ಯೆಯಲ್ಲಿರುವರು

42ಇನ್ನು ಎಡಭಾಗದವರು. (ಎಂತಹ ಭಾಗ್ಯಹೀನರು) ಆ ಎಡಭಾಗದವರು

43ಅವರು ಉರಿಯುವ ಗಾಳಿ ಹಾಗೂ ಕುದಿಯುವ ನೀರಿನಲ್ಲಿರುವರು

44ಕರಾಳ ಹೊಗೆಯ ನೆರಳಲ್ಲಿರುವರು

45ಅದರಲ್ಲಿ ತಂಪೂ ಇರದು, ಹಿತವೂ ಇರದು

46ಈ ಹಿಂದೆ ಅವರು ಭಾರೀ ಸುಖ ಭೋಗದಲ್ಲಿದ್ದರು

47ಮಹಾ ಪಾಪ ಕೃತ್ಯಗಳಲ್ಲಿ ತಲ್ಲೀನರಾಗಿ ಉದ್ಧಟರಾಗಿದ್ದರು

48ಮತ್ತು ಅವರು ಹೇಳುತ್ತಿದ್ದರು; ನಾವು ಸತ್ತು ಮಣ್ಣಾಗಿ ಹಾಗೂ ಎಲುಬುಗಳಾಗಿ ಮಾರ್ಪಟ್ಟ ಬಳಿಕ, ನಮ್ಮನ್ನೇನು ಮತ್ತೆ ಜೀವಂತ ಗೊಳಿಸಲಾಗುವುದೇ

49ನಮ್ಮ ತಾತ ಮುತ್ತಾತಂದಿರನ್ನೂ (ಜೀವಂತಗೊಳಿಸಲಾಗುವುದೇ)

50ಹೇಳಿರಿ; ಖಂಡಿತವಾಗಿಯೂ ಹಿಂದಿನವರನ್ನೂ ಮುಂದಿನವರನ್ನೂ

51ಒಂದು ನಿರ್ದಿಷ್ಟ ದಿನದ ವೇಳೆ ಒಟ್ಟು ಸೇರಿಸಲಾಗುವುದು

52ಆ ಬಳಿಕ ಓ ದಾರಿಗೆಟ್ಟ ಧಿಕ್ಕಾರಿಗಳೇ, ನೀವು

53‘ಝಕ್ಕೂಮ್’ ಮರದ ಭಾಗವನ್ನು ತಿನ್ನಬೇಕಾಗುವುದು

54ಅದರಿಂದಲೇ ಹೊಟ್ಟೆ ತುಂಬಿಸಿಕೊಳ್ಳಬೇಕಾಗುವುದು

55ಅದರ ಜೊತೆಗೆ ಕುದಿಯುವ ನೀರನ್ನೂ ಕುಡಿಯಬೇಕಾಗುವುದು

56ಬಾಯಾರಿದ ಒಂಟೆಯಂತೆ ಅದನ್ನು ನೀವು ಕುಡಿಯುವಿರಿ

57ಇದುವೇ, ಪ್ರತಿಫಲದ ದಿನ ಅವರಿಗೆ ಸಿಗಲಿರುವ ಆತಿಥ್ಯ

58ನಾವು ನಿಮ್ಮನ್ನು ಸೃಷ್ಟಿಸಿರುವೆವು. ಇಷ್ಟಾಗಿಯೂ ನೀವೇಕೆ (ಅದನ್ನು) ಅಂಗೀಕರಿಸುವುದಿಲ್ಲ

59ನೀವು (ಗರ್ಭದೊಳಕ್ಕೆ) ಹರಿಸಿ ಬಿಡುವ ವಸ್ತುವನ್ನು (ವೀರ್ಯವನ್ನು) ನೀವು ನೋಡಿದಿರಾ

60ಅದನ್ನು (ಶಿಶುವಾಗಿ) ಸೃಷ್ಟಿಸುವವರು ನೀವೋ, ಅಥವಾ ನಾವು ಅದರ ಸೃಷ್ಟಿಕರ್ತರೋ

61ನಾವು ನಿಮ್ಮ ನಡುವೆ ಮರಣವನ್ನು ನಿಶ್ಚಯಿಸಿ ಬಿಟ್ಟಿರುವೆವು. ಮತ್ತು ನಾವು ಖಂಡಿತ ಅಶಕ್ತರಲ್ಲ

62– ನಿಮ್ಮ ಬದಲಿಗೆ ನಿಮ್ಮಂತಹ ಇತರರನ್ನು ತರುವುದಕ್ಕೆ. ಮತ್ತು ನಿಮಗೆ ಅರಿವೇ ಇಲ್ಲದ ಸ್ಥಳದಲ್ಲಿ ನಿಮ್ಮನ್ನು ಜೀವಂತಗೊಳಿಸುವುದಕ್ಕೆ

63(ನಿಮ್ಮ) ಪ್ರಥಮ ಜನನದ ಕುರಿತು ನಿಮಗೆ ಖಂಡಿತ ತಿಳಿದಿದೆ. ಹೀಗಿರುತ್ತಾ ನೀವೇಕೆ ಚಿಂತನೆ ನಡೆಸುವುದಿಲ್ಲ

64ನೀವು ಬಿತ್ತುವ ವಸ್ತುವನ್ನು ನೀವು ನೋಡಿದಿರಾ

65ಅದನ್ನು (ಆ ಬೀಜವನ್ನು, ಬೆಳೆಯಾಗಿ) ಬೆಳೆಸುವವರು ನೀವೋ ಅಥವಾ ನಾವು ಅದರ ಬೆಳೆಗಾರರೋ

66ನಾವು ಬಯಸಿದರೆ ಅದನ್ನು ಕೇವಲ ಹೊಟ್ಟಾಗಿಸಿ ಬಿಡಬಲ್ಲೆವು ಮತ್ತು ನೀವು ಏನೇನೋ ಹತಾಶ ಮಾತುಗಳನ್ನಾಡುತ್ತಾ ಉಳಿಯ ಬೇಕಾಗುವುದು –

67– ನಾವು ಸಂಪೂರ್ಣವಾಗಿ ದಂಡನೆಗೆ ತುತ್ತಾದೆವೆಂದು

68ಮತ್ತು ನಾವು ಸಂಪೂರ್ಣ ವಂಚಿತರಾಗಿ ಬಿಟ್ಟೆವೆಂದು

69ನೀವು ಕುಡಿಯುವ ನೀರನ್ನು ನೀವು ನೋಡಿದಿರಾ

70ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ಸುರಿಸುವವರು ನಾವೋ

71ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿಸ ಬಲ್ಲೆವು. ಇಷ್ಟಾಗಿಯೂ ನೀವೇಕೆ ಕೃತಜ್ಞರಾಗುವುದಿಲ್ಲ

72ನೀವು ಉರಿಸುವ ಬೆಂಕಿಯನ್ನು ನೀವು ನೋಡಿದಿರಾ

73ಅದರ ಮರವನ್ನು ಹುಟ್ಟಿಸುವವರು ನೀವೋ ಅಥವಾ ಹುಟ್ಟಿಸುವವರು ನಾವೋ

74ಅದನ್ನು ನಾವು, (ನರಕವನ್ನು) ನೆನಪಿಸುವ ಸಾಧನವಾಗಿಸಿರುವೆವು ಮತ್ತು ಪ್ರಯಾಣಿಕರ ಪಾಲಿಗೆ ಲಾಭದಾಯಕವಾಗಿಸಿರುವೆವು

75ನೀವೀಗ ನಿಮ್ಮ ಮಹಾನ್ ಒಡೆಯನ ಹೆಸರಿನ ಪಾವಿತ್ರವನ್ನು ಜಪಿಸಿರಿ

76ನಾನಿದೋ, ನಕ್ಷತ್ರಗಳು ಪತನವಾಗುವ ನೆಲೆಯ ಆಣೆ ಹಾಕುತ್ತೇನೆ

77ನೀವು ಅರ್ಥ ಮಾಡಿಕೊಳ್ಳುವುದಾದರೆ ಇದು ನಿಜಕ್ಕೂ ಒಂದು ಮಹಾನ್ ಪ್ರಮಾಣವಾಗಿದೆ

78ಈ ಕುರ್‌ಆನ್, ಖಂಡಿತ ಗೌರವಾನ್ವಿತವಾಗಿದೆ

79ಇದೊಂದು ಸುರಕ್ಷಿತ ಗ್ರಂಥದಲ್ಲಿದೆ

80ಪಾವನರಲ್ಲದವರು ಅದನ್ನು ಮುಟ್ಟುವುದಿಲ್ಲ

81ಸಕಲ ಲೋಕಗಳ ಒಡೆಯನು ಇದನ್ನು ಇಳಿಸಿ ಕೊಟ್ಟಿರುವನು

82ನೀವೇನು ಈ ಸಂದೇಶವನ್ನು ಕಡೆಗಣಿಸುತ್ತಿರುವಿರಾ

83ಮತ್ತು ನಿಮಗೆ ನೀಡಲಾಗಿರುವ ಕೊಡುಗೆಯನ್ನು ಅಲ್ಲಗಳೆಯುತ್ತಿರುವಿರಾ

84ಹಾಗಾದರೆ, (ನಿಮ್ಮ ಆಪ್ತನ) ಜೀವವು ಕೊರಳಿಗೆ ಮುಟ್ಟಿದಾಗ

85ಆಗ ನೀವು ಕೇವಲ ನೋಡುತ್ತಿರುತ್ತೀರಿ

86ಮತ್ತು ಆಗ ನಾವು ಆತನಿಗೆ, ನಿಮಗಿಂತ ಸಮೀಪವಿರುತ್ತೇವೆ – ಆದರೆ ನಿಮಗೆ ಕಾಣಿಸುವುದಿಲ್ಲ

87ನೀವು ಸ್ವತಂತ್ರರಾಗಿದ್ದರೆ, ಹೀಗೇಕೆ

88ನೀವು ಸತ್ಯವಂತರಾಗಿದ್ದರೆ, ಅದನ್ನು (ಆತನ ಆತ್ಮವನ್ನು) ಮರಳಿಸಿರಿ –

89ಅವನು (ಅಲ್ಲಾಹನ) ಆಪ್ತನಾಗಿದ್ದರೆ –

90(ಅವನಿಗಾಗಿ) ಕಂಪು ತುಂಬಿದ ಪುಷ್ಪಗಳು ಹಾಗೂ ಅನುಗ್ರಹ ತುಂಬಿದ ಸ್ವರ್ಗೋದ್ಯಾನಗಳಿವೆ

91ಇನ್ನು ಅವನು, ಬಲಭಾಗದವನಾಗಿದ್ದರೆ, –

92’’ಬಲಭಾಗದವರ ಕಡೆಯಿಂದ ನಿನಗೆ ಸಲಾಮ್ (ಶಾಂತಿ)’’ (ಎಂದು ಹಾರೈಸಲಾಗುವುದು)

93ಅವನು ಸತ್ಯವನ್ನು ತಿರಸ್ಕರಿಸಿ, ದಾರಿಗೆಟ್ಟವನಾಗಿದ್ದರೆ –

94ಅವನ ಆತಿಥ್ಯಕ್ಕೆ ಕುದಿಯುವ ನೀರು ಇರುವುದು

95ಮತ್ತು ಅವನನ್ನು ನರಕಾಗ್ನಿಗೆ ಎಸೆಯಲಾಗುವುದು

96ಇದು ಖಚಿತ ಸಂಭವವಾಗಿದೆ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath