53. ಆನ್-ನಜ್ಮ್
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಹಾಗೆಯೇ, ಇರುಳಲ್ಲೂ, ನಕ್ಷತ್ರಗಳು ಕಣ್ಮರೆಯಾಗುವ ವೇಳೆಯೂ ನೀವು ಅವನ ಪಾವಿತ್ರವನ್ನು ಜಪಿಸಿರಿ
2ನಕ್ಷತ್ರವು ಕಣ್ಮರೆಯಾಗುವ ಸಮಯದ ಆಣೆ
3ನಿಮ್ಮ ಸಂಗಾತಿ (ದೂತರು) ದಾರಿತಪ್ಪಿಲ್ಲ ಮತ್ತು ಅವರು ತಪ್ಪು ದಾರಿಯಲ್ಲಿ ನಡೆಯುತ್ತಿಲ್ಲ
4ಅವರು ತಮ್ಮ ಅಪೇಕ್ಷೆಯಿಂದ ಮಾತನಾಡುವುದಿಲ್ಲ
5ಇದು, (ಕುರ್ಆನ್) – ಅವರಿಗೆ ನೀಡಲಾಗಿರುವ ದಿವ್ಯ ಸಂದೇಶವಲ್ಲದೆ ಬೇರೇನಲ್ಲ
6ಇದನ್ನು ಅವರಿಗೆ ಶಕ್ತಿಶಾಲಿಯಾಗಿರುವವನು (ಮಲಕ್) ಕಲಿಸಿ ಕೊಟ್ಟಿರುವನು
7ಅವನು ತುಂಬಾ ಬಲಿಷ್ಠನು. ಅವನು (ನಿಜರೂಪದಲ್ಲಿ) ಮುಂದೆ ಬಂದನು
8ಅವನು ಬಾನಿನ ಎತ್ತರದ ಅಂಚಿನಲ್ಲಿದ್ದನು
9ಮತ್ತೆ ಅವನು ಹತ್ತಿರ ಬಂದನು ಮತ್ತು ಇನ್ನಷ್ಟು ನಿಕಟನಾದನು
10ಕೊನೆಗೆ ಅವನು ಬಿಲ್ಲಿನ ಎರಡು ತುದಿಗಳಷ್ಟು ಅಥವಾ ಅದಕ್ಕಿಂತ ಕಡಿಮೆ ಅಂತರದಲ್ಲಿದ್ದನು
11ಆಬಳಿಕ, ಅವನು (ಅಲ್ಲಾಹನು) ತನ್ನ ದಾಸನಿಗೆ ನೀಡಬೇಕಾದ ಸಂದೇಶವನ್ನು ನೀಡಿದನು
12ತಾನು ಕಂಡದ್ದು ಸುಳ್ಳೆಂದು ಅವರ (ದೂತರ) ಮನಸ್ಸು ಹೇಳಲಿಲ್ಲ
13ನೀವೀಗ, ಅವರು ಕಂಡದ್ದರ ಕುರಿತು ಅವರೊಡನೆ ಜಗಳಾಡುವಿರಾ
14ಅವರು ಆತನನ್ನು ಎರಡನೇ ಬಾರಿಯೂ ಕಂಡರು
15‘ಸಿದ್ರತುಲ್ ಮುನ್ತಹಾ’ದ ಬಳಿ
16ಅದರ ಬಳಿಯೇ ಇದೆ, ಸ್ವರ್ಗದ ವಿಶ್ರಾಂತಿ ನಿಲಯ
17ಸಿದ್ರಃವನ್ನು ಏನು ಆವರಿಸಿತೋ ಅದು ಆವರಿಸಿದಾಗ
18ದೃಷ್ಟಿಯು ಎಡವಲೂ ಇಲ್ಲ, ಮಿತಿಮೀರಲೂ ಇಲ್ಲ
19ಖಚಿತವಾಗಿ ಅವರು ತಮ್ಮ ಒಡೆಯನ ಕೆಲವು ದೊಡ್ಡ ಪ್ರಮಾಣಗಳನ್ನು ಕಂಡರು
20ನೀವು ಕಂಡಿರಾ ‘ಲಾತ್’ ಹಾಗೂ ‘ಉಝ್ಝಾ’ ಗಳನ್ನು
21ಮತ್ತು ‘ಮನಾತ್’ ಎಂಬ ಮೂರನೆಯದೊಂದನ್ನು
22ನಿಮಗೆ ಪುತ್ರರು ಮತ್ತು ಅವನಿಗೆ ಪುತ್ರಿಯರೇ
23ಇದು ತೀರಾ ಅಸಮರ್ಪಕ ವಿತರಣೆಯಾಗಿದೆ
24ನಿಜವಾಗಿ ಅವೆಲ್ಲಾ ಕೇವಲ ನೀವು ಮತ್ತು ನಿಮ್ಮ ಪೂರ್ವಜರು ಇಟ್ಟು ಬಿಟ್ಟಿರುವ ಕೆಲವು ಹೆಸರುಗಳು ಮಾತ್ರ. ಅದರ ಪರವಾಗಿ ಅಲ್ಲಾಹನು ಯಾವ ಪುರಾವೆಯನ್ನೂ ಇಳಿಸಿ ಕೊಟ್ಟಿಲ್ಲ. ಅವರು ಕೇವಲ ತಮ್ಮ ಊಹೆಯನ್ನು ಹಾಗೂ ಸ್ವೇಚ್ಛೆಯನ್ನು ಮಾತ್ರವೇ ಅನುಸರಿಸುತ್ತಿದ್ದಾರೆ. ಇದೀಗ ಅವರ ಬಳಿಗೆ ಅವರ ಒಡೆಯನ ಕಡೆಯಿಂದ ಮಾರ್ಗದರ್ಶನವು ಬಂದಿದೆ
25ಮನುಷ್ಯನಿಗೇನು, ಅವನು ಬಯಸಿದ್ದೆಲ್ಲವೂ ಸಿಕ್ಕಿ ಬಿಡುತ್ತದೆಯೇ
26ನಿಜವಾಗಿ, ಅಂತ್ಯವೂ ಆದಿಯೂ ಅಲ್ಲಾಹನಿಗೇ ಸೇರಿದೆ
27ಆಕಾಶಗಳಲ್ಲಿ ಅದೆಷ್ಟೋ ‘ಮಲಕ್’ಗಳಿದ್ದಾರೆ. ಅವರ ಶಿಫಾರಸ್ಸಿನಿಂದ ಯಾವ ಲಾಭವೂ ಆಗುವುದಿಲ್ಲ – ತಾನಿಚ್ಛಿಸುವವನ ಪರವಾಗಿ ಅಲ್ಲಾಹನು ಅನುಮತಿ ನೀಡುವ ಹಾಗೂ ಅವನು ಇಷ್ಟ ಪಡುವ ಮುನ್ನ
28ಪರಲೋಕದಲ್ಲಿ ನಂಬಿಕೆ ಇಲ್ಲದವರು ಮಲಕ್ಗಳಿಗೆ ಹೆಣ್ಮಕ್ಕಳ ಹೆಸರುಗಳನ್ನಿಡುತ್ತಾರೆ
29ಅವರಿಗೆ ಆ ಕುರಿತು ಯಾವ ಜ್ಞಾನವೂ ಇಲ್ಲ. ಅವರು ಕೇವಲ ಊಹೆಯನ್ನಷ್ಟೇ ಅನುಸರಿಸುತ್ತಿದ್ದಾರೆ. ಮತ್ತು ಊಹೆಯು ಸತ್ಯಕ್ಕೆ ಕಿಂಚಿತ್ತೂ ಪರ್ಯಾಯವಲ್ಲ
30ನಮ್ಮ ಉಪದೇಶದಿಂದ ಮುಖ ತಿರುಗಿಸಿ ಕೊಂಡಿರುವವನನ್ನು ಕಡೆಗಣಿಸಿರಿ – ಅವನು ಬಯಸುವುದು ಕೇವಲ ಇಹಲೋಕದ ಬದುಕನ್ನು ಮಾತ್ರ
31ಅದುವೇ ಅವರ ಜ್ಞಾನದ ಮಿತಿಯಾಗಿದೆ. ಖಂಡಿತವಾಗಿಯೂ ನಿಮ್ಮ ಒಡೆಯನು – ತನ್ನ ಮಾರ್ಗದಿಂದ ದೂರ ಸರಿದಿರುವವನು ಯಾರೆಂಬುದನ್ನು ಚೆನ್ನಾಗಿ ಬಲ್ಲನು ಮತ್ತು ಸರಿದಾರಿಯಲ್ಲಿರುವವನು ಯಾರೆಂಬುದನ್ನೂ ಅವನು ಚೆನ್ನಾಗಿ ಬಲ್ಲನು
32ಆಕಾಶಗಳಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲವೂ ಅಲ್ಲಾಹನಿಗೇ ಸೇರಿವೆ. ಕೆಟ್ಟ ಕರ್ಮಗಳನ್ನು ಮಾಡಿದವರಿಗೆ ಅವನು ಅವರ ಕರ್ಮಕ್ಕನುಸಾರವಾದ ಪ್ರತಿಫಲವನ್ನು ನೀಡುವನು ಮತ್ತು ಸತ್ಕರ್ಮಗಳನ್ನು ಮಾಡಿದವರಿಗೆ ಸತ್ಫಲವನ್ನು ನೀಡುವನು
33ಅವರು (ಸತ್ಕರ್ಮಿಗಳು), ಸಣ್ಣ ಪುಟ್ಟ ಪ್ರಮಾದಗಳ ಹೊರತು, ಎಲ್ಲ ದೊಡ್ಡ ಪಾಪಕೃತ್ಯಗಳಿಂದ ಹಾಗೂ ಅಶ್ಲೀಲ ಕಾರ್ಯಗಳಿಂದ ದೂರ ಉಳಿಯುತ್ತಾರೆ. ಖಂಡಿತವಾಗಿಯೂ ನಿಮ್ಮೊಡೆಯನು ವಿಶಾಲ ಕ್ಷಮಾ ಗುಣ ಉಳ್ಳವನಾಗಿದ್ದಾನೆ. ಅವನಂತೂ, ತಾನು ನಿಮ್ಮನ್ನು ಭೂಮಿಯಿಂದ ಹುಟ್ಟಿಸಿದಾಗಲೂ, ನೀವು ನಿಮ್ಮ ತಾಯಂದಿರ ಹೊಟ್ಟೆಗಳೊಳಗೆ ಪುಟ್ಟ ಮಕ್ಕಳಾಗಿದ್ದಾಗಲೂ ನಿಮ್ಮನ್ನು ಚೆನ್ನಾಗಿ ಬಲ್ಲನು. ನೀವು ನಿಮ್ಮ ಪಾವಿತ್ರದ ಕುರಿತು ಕೊಚ್ಚಿಕೊಳ್ಳಬೇಡಿ. ಧರ್ಮನಿಷ್ಠನು ಯಾರೆಂಬುದನ್ನು ಅವನು ಚೆನ್ನಾಗಿ ಬಲ್ಲನು
34ನೀವು ನೋಡಿದಿರಾ, ಮುಖ ತಿರುಗಿಸಿ ಕೊಂಡವನನ್ನು
35ಅವನು ಸ್ವಲ್ಪವನ್ನು ಮಾತ್ರ (ದಾನವಾಗಿ) ಕೊಟ್ಟನು ಮತ್ತು (ಉಳಿದುದನ್ನು) ತಡೆದಿಟ್ಟುಕೊಂಡನು
36ಅವನ ಬಳಿ ಕಾಣದ ಲೋಕದ ಜ್ಞಾನವಿದೆಯೇ ಮತ್ತು ಅವನು ಅದನ್ನು (ಕಾಣದ ಲೋಕವನ್ನು) ಕಾಣುತ್ತಿದ್ದಾನೆಯೇ
37ಅವನಿಗೆ ತಿಳಿಸಲಾಗಿಲ್ಲವೇ, ಮೂಸಾರ ಹೊತ್ತಗೆಗಳಲ್ಲಿರುವ ವಿಷಯವನ್ನು
38ಮತ್ತು (ದಿವ್ಯಾದೇಶಗಳನ್ನು) ಪಾಲಿಸಿದ ಇಬ್ರಾಹೀಮರ (ಸಮಾಚಾರವನ್ನು)
39(ಪರಲೋಕದಲ್ಲಿ) ಹೊರೆ ಹೊರುವ ಯಾವನೂ ಇನ್ನೊಬ್ಬನ ಹೊರೆಯನ್ನು ಹೊರಲಾರನು
40ಮತ್ತು ಮಾನವನಿಗೆ, ಅವನು ಶ್ರಮಿಸಿದಷ್ಟಲ್ಲದೆ ಬೇರೇನೂ ಸಿಗದು
41ಮತ್ತು ಅವನ ಶ್ರಮವು (ಪ್ರತಿಫಲದ ರೂಪದಲ್ಲಿ) ಬೇಗನೇ ಕಾಣಲು ಸಿಗುವುದು
42ಆ ಬಳಿಕ ಅವನಿಗೆ ಪೂರ್ಣ ಪ್ರತಿಫಲ ನೀಡಲಾಗುವುದು
43ಮತ್ತು (ಎಲ್ಲವೂ ತೆರಳುವ) ಅಂತಿಮ ನೆಲೆಯು ನಿಮ್ಮ ಒಡೆಯನ ಕಡೆಗೇ ಇದೆ
44ಖಂಡಿತವಾಗಿಯೂ ಅವನೇ (ಅಲ್ಲಾಹನೇ) ನಗಿಸುತ್ತಾನೆ ಮತ್ತು ಅಳಿಸುತ್ತಾನೆ
45ಮತ್ತು ಅವನೇ ಸಾಯಿಸುತ್ತಾನೆ ಮತ್ತು ಬದುಕಿಸುತ್ತಾನೆ
46ಅವನೇ, ಗಂಡು ಮತ್ತು ಹೆಣ್ಣೆಂಬ ಜೊತೆಗಳನ್ನು ಸೃಷ್ಟಿಸಿದವನು –
47– ಸುರಿಸಲಾದ ವೀರ್ಯದಿಂದ
48ಪುನಃ ಜೀವಂತಗೊಳಿಸುವ ಹೊಣೆಯೂ ಅವನ ಮೇಲೆಯೇ ಇದೆ
49ಅವನೇ, ಸ್ವಾಯತ್ತಗೊಳಿಸಿದವನು ಹಾಗೂ ಸಂಪನ್ನಗೊಳಿಸಿದವನು
50ಅವನೇ ‘ಶಿಅ್ರಾ’ದ (ತಾರೆಯ) ಒಡೆಯನು
51ಅವನೇ, ಪ್ರಥಮ ‘ಆದ್’ರನ್ನು ನಾಶ ಮಾಡಿದವನು
52ಮತ್ತು ಸಮೂದರನ್ನೂ ಅಷ್ಟೇ. ಅವನು (ಅವರಲ್ಲಿ) ಯಾರನ್ನೂ ಉಳಿಸಲಿಲ್ಲ
53ಈ ಹಿಂದೆ ನೂಹರ ಜನಾಂಗವನ್ನು (ಅವನು ನಾಶಮಾಡಿದ್ದನು). ಖಂಡಿತವಾಗಿಯೂ ಅವರು ತುಂಬಾ ಅಕ್ರಮಿಗಳಾಗಿದ್ದರು ಹಾಗೂ ವಿದ್ರೋಹಿಗಳಾಗಿದ್ದರು
54ಮತ್ತು ಅವನು ಮಗುಚಿ ಬಿದ್ದ (ಲೂತ್ರ ಜನಾಂಗದ) ನಾಡನ್ನು ನುಚ್ಚು ನೂರು ಮಾಡಿದನು
55ಆವರಿಸುವ ವಸ್ತುವೊಂದು ಅದನ್ನು (ಆ ನಾಡನ್ನು) ಆವರಿಸಿಕೊಂಡಿತ್ತು
56(ಮಾನವಾ,) ನೀನಿನ್ನು ನಿನ್ನೊಡೆಯನ ಯಾವೆಲ್ಲ ಕೊಡುಗೆಗಳ ಕುರಿತು ಸಂಶಯಿಸುವೆ
57ಅವರು (ದೂತರು) ಈ ಹಿಂದೆ ಎಚ್ಚರಿಸಲು ಬಂದವರ ಸಾಲಿನ, ಒಬ್ಬ ಎಚ್ಚರಿಸುವವರಾಗಿದ್ದಾರೆ
58ಹತ್ತಿರ ಬರಬೇಕಾದುದು (ಲೋಕಾಂತ್ಯದ ಘಳಿಗೆ) ಹತ್ತಿರ ಬಂದು ಬಿಟ್ಟಿದೆ
59ಅಲ್ಲಾಹನ ಹೊರತು ಬೇರಾರೂ ಅದನ್ನು ನಿವಾರಿಸಲಾರರು
60ನೀವೇನು ಈ ಮಾತಿನ ಕುರಿತು ಅಚ್ಚರಿ ಪಡುತ್ತಿದ್ದೀರಾ
61ಮತ್ತು ನೀವು ನಗುತ್ತೀರಿ, ಅಳುವುದಿಲ್ಲ
62ನೀವು ಭಾರೀ ದೊಡ್ಡಸ್ತಿಕೆ ಮೆರೆಯುತ್ತೀರಿ
ಮೂಲ: Abdussalam Puthige
WEBREATH · 11:11
«If you are thankful, I will give you more» — Quran 14:7
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath