ಇಸ್ಲಾಂ
ಹಿಂದೆ

50. ಕ್ವಾಫ್

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಕ್ವಾಫ್. ಗೌರವಾನ್ವಿತ ಕುರ್‌ಆನಿನ ಆಣೆ

2ಅವರಲ್ಲೇ ಒಬ್ಬನು ಎಚ್ಚರಿಸುವವನಾಗಿ ಅವರ ಬಳಿಗೆ ಬಂದ ಕುರಿತು ಅವರು ಅಚ್ಚರಿ ಪಡುತ್ತಿದ್ದಾರೆ. ಆದ್ದರಿಂದಲೇ ಧಿಕ್ಕಾರಿಗಳು ಹೇಳುತ್ತಾರೆ; ‘‘ಇದು ತೀರಾ ವಿಚಿತ್ರವಾಗಿದೆ’’

3‘‘ನಾವು ಸತ್ತು ಮಣ್ಣಾದ ಬಳಿಕ (ಮತ್ತೆ ಜೀವ ಪಡೆಯುವುದೇ)? ಆ ಪುನರಾಗಮನ ತೀರಾ ದೂರದ ಸಾಧ್ಯತೆಯಾಗಿದೆ (ಅಸಾಧ್ಯವಾಗಿದೆ)’’

4ಭೂಮಿಯು ಅವರಿಂದ (ಅವರ ಮೃತ ಶರೀರದಿಂದ) ಏನನ್ನು ಕಿತ್ತುಕೊಂಡಿದೆ ಎಂಬುದನ್ನು ನಾವು ಚೆನ್ನಾಗಿ ಬಲ್ಲೆವು ಮತ್ತು ನಮ್ಮ ಬಳಿ ಎಲ್ಲವನ್ನೂ ಸುರಕ್ಷಿತವಾಗಿ ದಾಖಲಿಸಿಡುವ ಗ್ರಂಥವಿದೆ

5ನಿಜವಾಗಿ, ಸತ್ಯವು ತಮ್ಮ ಬಳಿಗೆ ಬಂದಾಗ ಅವರು ಅದನ್ನು ತಿರಸ್ಕರಿಸಿರುವರು ಮತ್ತು ಅವರು ಗೊಂದಲದಲ್ಲಿದ್ದಾರೆ

6ಅವರೇನು, ತಮ್ಮ ಮೇಲಿರುವ ಆಕಾಶದೆಡೆಗೆ, ನಾವು ಅದನ್ನು ಹೇಗೆ ರಚಿಸಿದ್ದೇವೆ ಮತ್ತು ಹೇಗೆ ಅದನ್ನು ಅಲಂಕರಿಸಿದ್ದೇವೆಂದು ನೋಡುವುದಿಲ್ಲವೇ? ಅದರಲ್ಲಿ ಯಾವ ಕುಂದು ಕೊರತೆಯೂ ಇಲ್ಲ

7ಭೂಮಿಯನ್ನು ನಾವು ಹರಡಿ ಬಿಟ್ಟರುವೆವು ಮತ್ತು ನಾವು ಅದರಲ್ಲಿ ಪರ್ವತಗಳನ್ನು ನೆಟ್ಟಿರುವೆವು. ಹಾಗೂ ಅದರಲ್ಲಿ ಎಲ್ಲ ಬಗೆಯ ಸುಂದರ ವಸ್ತುಗಳನ್ನು ಬೆಳೆಸಿರುವೆವು

8ಇವು (ಅಲ್ಲಾಹನೆಡೆಗೆ) ಒಲಿಯುವ ಪ್ರತಿಯೊಬ್ಬ ದಾಸನ ಕಣ್ಣು ತೆರೆಸುವ ಮತ್ತು ಅವನಿಗೆ ಪಾಠವಾಗುವ ಸಾಧನಗಳಾಗಿವೆ

9ಅದೇ ರೀತಿ, ನಾವು ಆಕಾಶದಿಂದ ಸಮೃದ್ಧ ನೀರನ್ನು ಇಳಿಸಿರುವೆವು ಹಾಗೂ ಆ ಮೂಲಕ ತೋಟಗಳನ್ನು ಮತ್ತು ಹೊಲಗಳ ಧಾನ್ಯಗಳನ್ನು ಬೆಳೆಸಿರುವೆವು

10ಮತ್ತು (ಅದರಿಂದಲೇ), ಸಂಪನ್ನ ಗೊಂಚಲುಗಳಿರುವ, ಎತ್ತರದ ಖರ್ಜೂರದ ಗಿಡಗಳನ್ನು ಬೆಳೆಸಿರುವೆವು

11ಇವೆಲ್ಲಾ (ನಮ್ಮ) ದಾಸರಿಗಾಗಿರುವ ಆಹಾರಗಳು. ಮತ್ತು ನಾವು, ನಿರ್ಜೀವವಾಗಿರುವ ನಾಡುಗಳಿಗೆ ಆ (ನೀರಿನ) ಮೂಲಕ, ಮರು ಜೀವ ನೀಡುವೆವು. ಹೀಗೆಯೇ ನಡೆಯಲಿದೆ ಸತ್ತವರನ್ನು (ಮತ್ತೆ ಜೀವಂತಗೊಳಿಸಿ) ಹೊರತೆಗೆಯುವ ಕ್ರಿಯೆ

12ಅವರಿಗಿಂತ ಹಿಂದೆ ನೂಹರ ಜನಾಂಗದವರು, ರಸ್ಸ್‌ನ ನಿವಾಸಿಗಳು ಮತ್ತು ಸಮೂದ್ ಜನಾಂಗದವರು ತಿರಸ್ಕರಿಸಿದ್ದರು

13ಹಾಗೆಯೇ, ಆದ್ ಜನಾಂಗದವರು, ಫಿರ್‌ಔನ್ ಹಾಗೂ ಲೂತ್‌ರ ಬಂಧುಗಳು

14ಐಕಃದವರು ಹಾಗೂ ತುಬ್ಬಅ್ ಜನಾಂಗದವರು – ಅವರೆಲ್ಲರೂ ದೇವದೂತರನ್ನು ತಿರಸ್ಕರಿಸಿದ್ದರು. ಅವರಿಗೆ ನೀಡಲಾಗಿದ್ದ (ಶಿಕ್ಷೆಯ) ಮುನ್ನೆಚ್ಚರಿಕೆಯು ಅನುಷ್ಠಾನವಾಗಿಬಿಟ್ಟಿತ್ತು

15ನಾವೇನು ಪ್ರಥಮ ಬಾರಿಯ ಸೃಷ್ಟಿ ಕ್ರಿಯೆಯಿಂದ ದಣಿದು ಹೋಗಿದ್ದೇವೆಯೇ? ನಿಜವಾಗಿ, (ಮತ್ತೆ) ಹೊಸದಾಗಿ ಸೃಷ್ಟಿಯಾಗುವ ಕುರಿತು ಅವರು ಸಂಶಯದಲ್ಲಿದ್ದಾರೆ

16ನಾವೇ ಮನುಷ್ಯನನ್ನು ಸೃಷ್ಟಿಸಿರುವೆವು ಮತ್ತು ಅವನ ಮನಸ್ಸಿನೊಳಗಿನ ಗೊಂದಲಗಳನ್ನೂ ನಾವು ಚೆನ್ನಾಗಿ ಬಲ್ಲೆವು. ನಿಜವಾಗಿ ನಾವು ಅವನ ಜೀವನಾಡಿಗಿಂತಲೂ ಅವನಿಗೆ ಹತ್ತಿರವಾಗಿರುವೆವು

17ಅವನ ಬಲಭಾಗದಲ್ಲೂ ಎಡ ಭಾಗದಲ್ಲೂ ಕುಳಿತಿರುವ ಇಬ್ಬರು ಬರಹಗಾರರು (ಅವನ ಎಲ್ಲ ಕರ್ಮಗಳನ್ನು) ಬರೆದಿಡುತ್ತಾರೆ

18ಅವನು ಆಡುವ ಯಾವ ಮಾತನ್ನೂ, ಸದಾ ಜಾಗೃತನಾಗಿರುವ ಕಾವಲುಗಾರನೊಬ್ಬನು ದಾಖಲಿಸದೆ ಇರುವುದಿಲ್ಲ

19ಕೊನೆಗೆ, ನಿಜಕ್ಕೂ ಮರಣದ ಅಮಲು ಬಂದುಬಿಟ್ಟಾಗ (ಅವನೊಡನೆ), ‘‘ನೀನು ಅಂಜುತ್ತಿದ್ದುದು ಇದನ್ನೇ’’ ಎನ್ನಲಾಗುವುದು

20ಮತ್ತು ಕಹಳೆಯನ್ನು ಊದಲಾಗುವುದು. ಅದುವೇ, ಮುನ್ನೆಚ್ಚರಿಕೆ ನೀಡಲಾಗಿದ್ದ ದಿನ

21ಅಂದು ಪ್ರತಿಯೊಬ್ಬನೂ (ಅಲ್ಲಾಹನ ಮುಂದೆ) ಹಾಜರಾಗುವನು. ಅವನ ಜೊತೆ (ಅವನನ್ನು) ನಡೆಸುವ ಒಬ್ಬನಿರುವನು ಮತ್ತು ಒಬ್ಬ ಸಾಕ್ಷಿಯೂ ಇರುವನು

22(ಅವನೊಡನೆ ಹೇಳಲಾಗುವುದು;) ‘‘ನೀನು ಈ (ದಿನದ) ಕುರಿತು ನಿಶ್ಚಿಂತನಾಗಿದ್ದೆ. ಇದೀಗ ನಾವು ನಿನ್ನ ತೆರೆಯನ್ನು ನಿನ್ನಿಂದ ಸರಿಸಿ ಬಿಟ್ಟಿರುವೆವು. ಇದೋ, ಇಂದು ನಿನ್ನ ದೃಷ್ಟಿ ಬಹಳ ತೀಕ್ಷ್ಣವಾಗಿದೆ’’

23ಅವನ ಜೊತೆಗಿರುವವನು ಹೇಳುವನು; ‘‘ಇದು ನನ್ನ ಬಳಿ ಸಿದ್ಧವಾಗಿರುವ, (ಅವನ ಕರ್ಮಗಳ) ದಾಖಲೆ’’

24(ಅಪ್ಪಣೆಯಾಗುವುದು;) ‘‘ನೀವಿಬ್ಬರು, ಪ್ರತಿಯೊಬ್ಬ ಕೃತಘ್ನ, ವಿದ್ರೋಹಿಯನ್ನು ನರಕದೊಳಕ್ಕೆ ಎಸೆದು ಬಿಡಿರಿ’’

25‘‘ಸತ್ಕಾರ್ಯಕ್ಕೆ ತಡೆಯೊಡ್ಡುತ್ತಿದ್ದ, ಅತಿರೇಕವೆಸಗುತ್ತಿದ್ದ (ಹಾಗೂ) ಸಂಶಯ ಬಿತ್ತುತ್ತಿದ್ದಾತನನ್ನು (ನರಕದೊಳಕ್ಕೆ ಎಸೆಯಿರಿ)’’

26‘‘ಅವನು ಅಲ್ಲಾಹನ ಜೊತೆ ಇತರರನ್ನು ದೇವರಾಗಿಸಿಕೊಂಡಿದ್ದನು. ಇದೀಗ ಅವನನ್ನು ಕಠಿಣ ಶಿಕ್ಷೆಯೊಳಕ್ಕೆ (ನರಕಕ್ಕೆ) ಎಸೆದುಬಿಡಿರಿ’’

27ಅವನ ಸಂಗಾತಿಯಾಗಿದ್ದವನು ಹೇಳುವನು; ‘‘ನಮ್ಮೊಡೆಯಾ, ಅವನನ್ನು ವಿದ್ರೋಹಿಯಾಗಿಸಿದವನು ನಾನಲ್ಲ. ಸ್ವತಃ ಅವನೇ ತಪ್ಪು ದಾರಿಯಲ್ಲಿ ಬಹುದೂರ ಹೊರಟು ಹೋಗಿದ್ದನು’’

28(ಅಲ್ಲಾಹನು) ಹೇಳುವನು; ನೀವು ನನ್ನ ಮುಂದೆ ಜಗಳಾಡಬೇಡಿ, ನಿಮಗೆ ನಾನು ಮುನ್ನೆಚ್ಚರಿಕೆಯನ್ನು ಹಿಂದೆಯೇ ಕಳಿಸಿಕೊಟ್ಟಿದ್ದೆ

29ನನ್ನ ಬಳಿ ಮಾತು ಬದಲಾಗುವುದಿಲ್ಲ. ಮತ್ತು ನಾನು ದಾಸರ ಮೇಲೆ ಅಕ್ರಮವೆಸಗುವವನಲ್ಲ

30ಅಂದು ನಾವು ನರಕದೊಡನೆ, ‘‘ನೀನು ತುಂಬಿದೆಯಾ?’’ ಎಂದು ಕೇಳುವೆವು. ಅದು ‘‘ಇನ್ನಷ್ಟು ಇದೆಯೇ?’’ ಎನ್ನುವುದು

31ಮತ್ತು ನಾವು ಸ್ವರ್ಗವನ್ನು ನಿಕಟಗೊಳಿಸುವೆವು. ಅದೆಂದೂ (ಅವರಿಂದ) ದೂರವಾಗದು

32ಇದನ್ನೇ ವಾಗ್ದಾನ ಮಾಡಲಾಗಿತ್ತು; ನಿಮಗೆ ಹಾಗೂ (ಅಲ್ಲಾಹನತ್ತ) ಒಲವು ತೋರುತ್ತಲಿರುವ ಮತ್ತು ಸದಾ ಜಾಗೃತನಾಗಿರುವ ಪ್ರತಿಯೊಬ್ಬನಿಗೆ

33(ಹಾಗೆಯೇ) ಕಣ್ಣಾರೆ ಕಾಣದೆಯೇ, ಆ ಅಪಾರ ದಯಾಮಯನ ಭಕ್ತನಾಗಿರುವವನಿಗೆ ಮತ್ತು ಪದೇ ಪದೇ (ಅಲ್ಲಾಹನತ್ತ) ಒಲಿಯುವ ಮನಸ್ಸಿನೊಂದಿಗೆ ಬಂದಿರುವವನಿಗೆ

34(ಅವರೊಡನೆ ಹೇಳಲಾಗುವುದು;) ಶಾಂತಿಯೊಂದಿಗೆ ಇದನ್ನು ಪ್ರವೇಶಿಸಿರಿ. ಇದುವೇ, ಶಾಶ್ವತ ದಿನ

35ಅಲ್ಲಿ ಅವರಿಗೆ ಅವರು ಬಯಸಿದ್ದೆಲ್ಲವೂ ಸಿಗಲಿದೆ, ಮಾತ್ರವಲ್ಲ, ನಮ್ಮ ಬಳಿ ಮತ್ತಷ್ಟಿದೆ

36ಅವರಿಗಿಂತ (ಮಕ್ಕಃದವರಿಗಿಂತ) ಹಿಂದೆ ನಾವು ಅದೆಷ್ಟೋ ಜನಾಂಗಗಳನ್ನು ನಾಶ ಮಾಡಿರುವೆವು. ಅವರು ಇವರಿಗಿಂತ ತುಂಬಾ ಆದರೆ, ಕೊನೆಗೆ ‘‘ಪಲಾಯನಕ್ಕೆ ದಾರಿಯುಂಟೇ?’’ ಎನ್ನುತ್ತಾ ಅವರು ನಾಡು ನಾಡು ಅಲೆಯ ತೊಡಗಿದರು

37ಇದರಲ್ಲಿ ಖಂಡಿತ ಪಾಠವಿದೆ, ಮನಸ್ಸುಳ್ಳವರಿಗೆ ಅಥವಾ ಕಿವಿಗೊಟ್ಟು ಕೇಳುವವರು ಮತ್ತು ನೋಡುವವರಿಗೆ

38ಆಕಾಶಗಳನ್ನು ಹಾಗೂ ಭೂಮಿಯನ್ನು ಮತ್ತು ಅವುಗಳ ನಡುವೆ ಇರುವ ಎಲ್ಲವನ್ನೂ ನಾವು ಆರು ದಿನಗಳಲ್ಲಿ ಸೃಷ್ಟಿಸಿರುವೆವು ಮತ್ತು ನಮ್ಮನ್ನು ಯಾವ ದಣಿವೂ ಬಾಧಿಸಲಿಲ್ಲ

39ಅವರಾಡುವ ಮಾತುಗಳ ಕುರಿತು ನೀವು ಸಹನಶೀಲರಾಗಿರಿ. ಮತ್ತು ಸೂರ್ಯೋದಯಕ್ಕೆ ಮುನ್ನವೂ ಸೂರ್ಯಾಸ್ತಮಾನಕ್ಕೆ ಮುನ್ನವೂ ನಿಮ್ಮ ಒಡೆಯನನ್ನು ಪ್ರಶಂಸಿಸುತ್ತಾ ಅವನ ಪಾವಿತ್ರವನ್ನು ಜಪಿಸಿರಿ

40ಮತ್ತು ರಾತ್ರಿಯ ವೇಳೆಯಲ್ಲೂ ಸಾಷ್ಟಾಂಗವೆರಗಿದ ಬಳಿಕವೂ ಅವನ ಪಾವಿತ್ರವನ್ನು ಜಪಿಸಿರಿ

41ಕೇಳಿರಿ, ಕೂಗುವವನು ಹತ್ತಿರದಿಂದಲೇ ಕೂಗುವ ಒಂದು ದಿನ (ಬರಲಿದೆ)

42ಅಂದು ಅವರು ನಿಜಕ್ಕೂ ಒಂದು ಆರ್ಭಟವನ್ನು ಕೇಳುವರು. ಅದುವೇ

43(ಗೋರಿಗಳಿಂದ) ಹೊರಡುವ ದಿನವಾಗಿರುವುದು

44ಖಂಡಿತ ನಾವೇ ಜೀವನವನ್ನು ನೀಡುತ್ತೇವೆ ಮತ್ತು ನಾವೇ ಸಾಯಿಸುತ್ತೇವೆ ಮತ್ತು ನಮ್ಮೆಡೆಗೇ (ಎಲ್ಲರೂ) ಮರಳಬೇಕಾಗಿದೆ

45ಅವರ ಮೇಲಿಂದ ಭೂಮಿಯು ಬಿರಿದು ಬಿಡುವ ದಿನ ಅವರು (ಅದರೊಳಗಿಂದ) ಧಾವಿಸುವರು. ಈ ಜಮಾವಣೆಯು ನಮ್ಮ ಮಟ್ಟಿಗೆ ಸುಲಭವಾಗಿದೆ

ಮೂಲ: Abdussalam Puthige

WEBREATH · 11:11

«If you are thankful, I will give you more» — Quran 14:7

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath