ಜೆಕರ್ಯನು 1
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಎಂಟನೆಯ ತಿಂಗಳಲ್ಲಿ ಯೆಹೋವನು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನೂ ಅದ ಜೆಕರ್ಯನೆಂಬ ಪ್ರವಾದಿಗೆ ಈ ವಾಕ್ಯವನ್ನು ದಯಪಾಲಿಸಿದನು.
2ಅದೇನೆಂದರೆ, “ಯೆಹೋವನು ನಿಮ್ಮ ಪೂರ್ವಿಕರ ಮೇಲೆ ಬಹು ಕೋಪಗೊಂಡಿದ್ದಾನೆ.
3ಆದಕಾರಣ ನೀನು ನಿನ್ನ ಜನರಿಗೆ ಹೀಗೆ ಹೇಳು, ‘ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ನನ್ನ ಕಡೆಗೆ ಪುನಃ ತಿರುಗಿಕೊಳ್ಳಿರಿ’” ಇದು ಸೇನಾಧೀಶ್ವರನಾದ ಯೆಹೋವನ ನುಡಿ, “ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
4ನಿಮ್ಮ ಪೂರ್ವಿಕರಂತಿರಬೇಡಿರಿ; ಪೂರ್ವಕಾಲದ ಪ್ರವಾದಿಗಳು ಅವರಿಗೆ, “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನಿಮ್ಮ ದುರ್ಮಾರ್ಗ, ದುಷ್ಕೃತ್ಯಗಳಿಂದ ಹಿಂದಿರುಗಿರಿ’ ಎಂದು ಸಾರಿದರೂ ಅವರು ನನ್ನ ಮಾತನ್ನು ಕಿವಿಗೊಟ್ಟು ಕೇಳಲಿಲ್ಲ” ಇದು ಯೆಹೋವನ ನುಡಿ.
5“ನಿಮ್ಮ ಪೂರ್ವಿಕರು ಎಲ್ಲಿ? ಪ್ರವಾದಿಗಳು ಸದಾಕಾಲ ನಿತ್ಯನಿರಂತರವಾಗಿ ಇರುವರೇ?
6ಆದರೆ ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯಗಳೂ ಮತ್ತು ವಿಧಿಗಳೂ ನಿಮ್ಮ ಪೂರ್ವಿಕರನ್ನು ಹಿಂದಟ್ಟಿ ಹಿಡಿದು ಶಾಶ್ವತವಾಗಿ ಉಳಿದಿದೆ. ಅವರು ತಿರುಗಿಕೊಂಡು, ಸೇನಾಧೀಶ್ವರ ಯೆಹೋವನಿಗೆ ‘ನಮ್ಮ ದುಷ್ಕೃತ್ಯಗಳಿಗೆ ತಕ್ಕ ಹಾಗೆ ನಮಗೆ ಏನು ಮಾಡಬೇಕೆಂದು ಸಂಕಲ್ಪಿಸಿದನೋ ಅದನ್ನು ನಮಗೆ ಮಾಡಿದ್ದಾನಲ್ಲಾ’” ಅಂದುಕೊಂಡರು.
7ದಾರ್ಯಾವೆಷನ ಆಳ್ವಿಕೆಯ ಎರಡನೆಯ ವರ್ಷದ ಹನ್ನೊಂದನೆಯ ತಿಂಗಳಿನ ಅಂದರೆ ಶೆಬಾಟ್ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ ಯೆಹೋವನ ವಾಕ್ಯವು ಇದ್ದೋವಿನ ಮೊಮ್ಮಗನೂ ಬೆರೆಕ್ಯನ ಮಗನಾದ ಜೆಕರ್ಯನೆಂಬ ಪ್ರವಾದಿಗೆ ಕೇಳಿಬಂತು,
8“ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಇಗೋ, ಕೆಂಪು ಕುದುರೆಯನ್ನು ಹತ್ತಿದ ಒಬ್ಬ ಪುರುಷನು ತಗ್ಗಿನಲ್ಲಿರುವ ಸುಗಂಧವೃಕ್ಷಗಳ ನಡುವೆ ನಿಂತಿದ್ದನು; ಅವನ ಹಿಂದೆ ಕೆಂಪು, ಕಂದು, ಬಿಳಿ ಕುದುರೆಗಳು ಮತ್ತು ಅವರ ಸವಾರರಿದ್ದರು.
9ನನಗೆ ಕನಸಿನ ಅರ್ಥವನ್ನು ವಿವರಿಸುವ ದೇವದೂತನನ್ನು, ‘ಸ್ವಾಮಿ ಇವರು ಯಾರು?’” ಎಂದು ನಾನು ಕೇಳಲು ಆತನು ನನಗೆ, “ಇವರು ಇಂಥವರೆಂದು ನಿನಗೆ ತೋರಿಸುವೆನು” ಎಂಬುದಾಗಿ ಹೇಳಿದನು.
10ಕೂಡಲೆ ಸುಗಂಧವೃಕ್ಷಗಳ ನಡುವೆ ನಿಂತಿದ್ದವನು, “ಇವರು ಲೋಕಸಂಚಾರಾರ್ಥವಾಗಿ ಯೆಹೋವನಿಂದ ಕಳುಹಿಸಲ್ಪಟ್ಟವರು” ಎಂದು ಉತ್ತರಕೊಟ್ಟನು.
11ಆಗ ಅವರು ಸುಗಂಧವೃಕ್ಷಗಳ ನಡುವೆ ನಿಂತಿದ್ದ ಆ ಯೆಹೋವನ ದೂತನಿಗೆ, “ನಾವು ಲೋಕದಲ್ಲಿ ಸಂಚರಿಸಿ ಬಂದಿದ್ದೇವೆ. ಇಗೋ ಲೋಕವೆಲ್ಲಾ ನೆಮ್ಮದಿಯಾಗಿ ಸುಮ್ಮನಿದೆ” ಎಂದು ಅರಿಕೆಮಾಡಿದರು.
12ಇದನ್ನು ಕೇಳಿ ಯೆಹೋವನ ದೂತನು, “ಸೇನಾಧೀಶ್ವರನಾದ ಯೆಹೋವನೇ, ನೀನು ಎಪ್ಪತ್ತು ವರ್ಷಗಳಿಂದ ರೋಷಗೊಂಡಿರುವ ಯೆರೂಸಲೇಮ್ ಮೊದಲಾದ ಯೆಹೂದದ ಪಟ್ಟಣಗಳನ್ನು ಎಷ್ಟು ಕಾಲ ಕರುಣಿಸದೆ ಇರುವಿ” ಎಂದು ಬಿನ್ನವಿಸಲು,
13ನನ್ನೊಂದಿಗೆ ಮಾತನಾಡಿದ ದೂತನಿಗೆ, ಯೆಹೋವನು ಕರುಣೆ ಹಾಗೂ ಒಳ್ಳೆಯ ಮಾತುಗಳಿಂದ ಉತ್ತರಕೊಟ್ಟನು.
14ಆಗ ಆ ದೂತನು ನನಗೆ ಈ ಅಪ್ಪಣೆ ಮಾಡಿದನು, “ನೀನು ಹೀಗೆ ಸಾರಿ ಹೇಳಬೇಕು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ‘ಯೆರೂಸಲೇಮಿಗೂ, ಚೀಯೋನಿಗೂ ಅವಮಾನವಾಯಿತಲ್ಲಾ’ ಎಂದು ಬಹಳವಾಗಿ ಅಸಮಾಧಾನಗೊಂಡಿದ್ದೇನೆ.
15ನೆಮ್ಮದಿಯಾಗಿರುವ ಜನಾಂಗಗಳ ಮೇಲೆ ನಾನು ಬಹಳ ಕೋಪಗೊಂಡಿದ್ದೇನೆ; ನಾನು ಯೆರೂಸಲೇಮಿನ ಮೇಲೆ ಸ್ವಲ್ಪ ಮಾತ್ರ ಸಿಟ್ಟುಗೊಂಡು ಮಾಡಬೇಕೆಂದಿದ್ದ ಕೇಡಿಗಿಂತ ಅವರೇ ಹೆಚ್ಚಾಗಿ ಕೇಡಿಗೆ ಕೇಡು ಸೇರಿಸಿಕೊಂಡರು.”
16ಹೀಗಿರಲು ಯೆಹೋವನು ಇಂತೆನ್ನುತ್ತಾನೆ, “ನಾನು ಕನಿಕರವುಳ್ಳವನಾಗಿ ಯೆರೂಸಲೇಮಿಗೆ ಹಿಂದಿರುಗಿದ್ದೇನೆ; ನನ್ನ ಆಲಯವು ಪುನಃ ಅಲ್ಲಿ ಕಟ್ಟಲ್ಪಡುವುದು; ಯೆರೂಸಲೇಮಿನಲ್ಲಿ ನೂಲು ಎಳೆಯಲ್ಪಡುವುದು” ಇದು ಸೇನಾಧೀಶ್ವರನಾದ ಯೆಹೋವನ ನುಡಿ.
17ಮತ್ತೊಮ್ಮೆ ಹೀಗೆ ಸಾರಿ ಹೇಳು, ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ಇನ್ನು ನನ್ನ ಪಟ್ಟಣಗಳಲ್ಲಿ ಶುಭವು ತುಂಬಿ ತುಳುಕುವುದು; ಯೆಹೋವನು ಇನ್ನು ಚೀಯೋನನ್ನು ಸಂತೈಸುವನು, ಯೆರೂಸಲೇಮನ್ನು ಮತ್ತೆ ತನಗಾಗಿ ಆರಿಸಿಕೊಳ್ಳುವನು.”
18ನಾನು ಕಣ್ಣೆತ್ತಿ ನೋಡಲು ಇಗೋ, ನಾಲ್ಕು ಕೊಂಬುಗಳು ಕಾಣಿಸಿದವು.
19ವಿವರಿಸುವ ದೂತನನ್ನು ಕುರಿತು, “ಇವು ಏನು?” ಎಂದು ನಾನು ಕೇಳಿದ್ದಕ್ಕೆ ಅವನು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನು ಚದುರಿಸುವ ಕೊಂಬುಗಳು” ಎಂದು ಉತ್ತರಕೊಟ್ಟನು.
20ಅನಂತರ ಯೆಹೋವನು ನನಗೆ ನಾಲ್ಕು ಮಂದಿ ಕಮ್ಮಾರರನ್ನು ತೋರಿಸಿದನು.
21ಆಗ ನಾನು, “ಇವರು ಏನು ಮಾಡುವುದಕ್ಕೆ ಬಂದಿದ್ದಾರೆ?” ಎಂದು ಕೇಳಲು ಅವನು, “ಈ ಕೊಂಬುಗಳು ಯೆಹೂದದವರಲ್ಲಿ ಯಾರೂ ತಲೆಯೆತ್ತದಂತೆ ಅವರನ್ನು ಚದುರಿಸಿವೆಯಷ್ಟೆ; ಇವರಾದರೋ ಯೆಹೂದ ದೇಶದವರನ್ನು ಚದುರಿಸಬೇಕೆಂದು ತಲೆಯೆತ್ತಿದ ಜನಾಂಗಗಳ ಕೊಂಬುಗಳನ್ನು ಹೆದರಿಸಿ ಕೆಡುವುದಕ್ಕೆ ಬಂದಿದ್ದಾರೆ” ಎಂದು ಹೇಳಿದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath