ಪ್ರಕಟಣೆ 7
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಇದಾದ ನಂತರ ನಾಲ್ಕು ಮಂದಿ ದೇವದೂತರು ಭೂಮಿಯ ನಾಲ್ಕು ದಿಕ್ಕುಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಅಥವಾ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ಚತುರ್ದಿಕ್ಕುಗಳ ಗಾಳಿಗಳನ್ನು ತಡೆಹಿಡಿದಿರುವುದನ್ನು ಕಂಡೆನು.
2ಇದಲ್ಲದೆ ಮತ್ತೊಬ್ಬ ದೇವದೂತನು ಜೀವಸ್ವರೂಪನಾದ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಣದಿಕ್ಕಿನಿಂದ ಏರಿಬರುವುದನ್ನು ಕಂಡೆನು. ಅವನು ಭೂಮಿಗೂ ಸಮುದ್ರಕ್ಕೂ ಕೇಡನ್ನುಂಟುಮಾಡಲು ಅನುಮತಿ ಹೊಂದಿದ ಆ ನಾಲ್ಕು ಮಂದಿ ದೇವದೂತರಿಗೆ,
3“ನಾವು ನಮ್ಮ ದೇವರ ದಾಸರಿಗೆ ಹಣೆಯ ಮೇಲೆ ಮುದ್ರೆ ಒತ್ತುವ ತನಕ ಭೂಮಿಯನ್ನಾಗಲಿ, ಸಮುದ್ರವನ್ನಾಗಲಿ, ಮರಗಳನ್ನಾಗಲಿ ನಾಶಮಾಡಬೇಡಿರಿ” ಎಂದು ಮಹಾಶಬ್ದದಿಂದ ಕೂಗಿ ಹೇಳಿದನು.
4ಮುದ್ರೆ ಒತ್ತಿಸಿಕೊಂಡವರ ಸಂಖ್ಯೆಯು ಪ್ರಸಿದ್ಧವಾದಾಗ ಅದನ್ನು ನಾನು ಕೇಳಿಸಿಕೊಂಡೆನು. ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆಯೊತ್ತಿಸಿಕೊಂಡವರ ಸಂಖ್ಯೆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ.
5ಯೂದನ ಕುಲದವರಲ್ಲಿ ಮುದ್ರೆಹಾಕಿಸಿಕೊಂಡವರು ಹನ್ನೆರಡು ಸಾವಿರ, ರೂಬೇನನ ಕುಲದವರಲ್ಲಿ ಹನ್ನೆರಡು ಸಾವಿರ, ಗಾದ್ ಕುಲದವರಲ್ಲಿ ಹನ್ನೆರಡು ಸಾವಿರ,
6ಅಷೇರನ ಕುಲದವರಲ್ಲಿ ಹನ್ನೆರಡು ಸಾವಿರ, ನಫ್ತಾಲಿಯ ಕುಲದವರಲ್ಲಿ ಹನ್ನೆರಡು ಸಾವಿರ, ಮನಸ್ಸೆಯ ಕುಲದವರಲ್ಲಿ ಹನ್ನೆರಡು ಸಾವಿರ,
7ಸಿಮೆಯೋನನ ಕುಲದವರಲ್ಲಿ ಹನ್ನೆರಡು ಸಾವಿರ, ಲೇವಿಯ ಕುಲದವರಲ್ಲಿ ಹನ್ನೆರಡು ಸಾವಿರ, ಇಸ್ಸಕಾರನ ಕುಲದವರಲ್ಲಿ ಹನ್ನೆರಡು ಸಾವಿರ,
8ಜೆಬುಲೋನನ ಕುಲದವರಲ್ಲಿ ಹನ್ನೆರಡು ಸಾವಿರ, ಯೋಸೇಫನ ಕುಲದವರಲ್ಲಿ ಹನ್ನೆರಡು ಸಾವಿರ, ಬೆನ್ಯಾಮೀನನ ಕುಲದವರಲ್ಲಿ ಮುದ್ರೆ ಹಾಕಿಸಿಕೊಂಡವರು ಹನ್ನೆರಡು ಸಾವಿರ ಮಂದಿ ಇದ್ದರು.
9ಇದಾದ ನಂತರ ಇಗೋ, ಯಾರಿಂದಲೂ ಎಣಿಸಲಾಗದಂಥ ಮಹಾ ಜನಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಜಾತಿಗಳವರೂ ಸಕಲ ಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.
10ಅವರು, “ರಕ್ಷಣೆಯೆಂಬುದು ಸಿಂಹಾಸನಾರೂಢನಾದ ನಮ್ಮ ದೇವರ ಮತ್ತು ಯಜ್ಞದ ಕುರಿಮರಿಯಾದಾತನಿಗೆ ಸೇರಿದ್ದು” ಎಂದು ಮಹಾಧ್ವನಿಯಿಂದ ಕೂಗಿದರು.
11ಅಷ್ಟರಲ್ಲಿ ದೇವದೂತರೆಲ್ಲರೂ ಸಿಂಹಾಸನದ ಸುತ್ತಲು ನಿಂತಿದ್ದರು. ಹಿರಿಯರು ಮತ್ತು ನಾಲ್ಕು ಜೀವಿಗಳು ಇವುಗಳ ಸುತ್ತಲೂ ನಿಂತುಕೊಂಡಿದ್ದರು ಅವರು ಸಿಂಹಾಸನದ ಮುಂದೆ ಅಡ್ಡಬಿದ್ದು,
12“ಆಮೆನ್! ಸ್ತೋತ್ರವೂ, ಮಹಿಮೆಯು, ಜ್ಞಾನವೂ ಕೃತಜ್ಞತಾಸ್ತುತಿಯೂ, ಗೌರವವೂ, ಶಕ್ತಿಯೂ, ಪರಾಕ್ರಮವೂ ನಮ್ಮ ದೇವರಿಗೆ ಯುಗಯುಗಾಂತರಗಳಲ್ಲಿಯೂ ಇರಲಿ, ಆಮೆನ್!” ಎಂದು ಹೇಳುತ್ತಾ ದೇವರನ್ನು ಆರಾಧಿಸಿದರು.
13ಆಗ ಇದನ್ನು ನೋಡಿ ಹಿರಿಯರಲ್ಲಿ ಒಬ್ಬನು, “ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡಿರುವವರಾದ ಇವರು ಯಾರು? ಎಲ್ಲಿಂದ ಬಂದರು” ಎಂದು ನನ್ನನ್ನು ಕೇಳಲು, “ಅಯ್ಯಾ ನೀನೇ ಬಲ್ಲೆ” ಎಂದೆನು.
14ಅವನು ನನಗೆ, “ಇವರು ಆ ಮಹಾಸಂಕಟದಿಂದ ಹೊರಬಂದವರು, ಯಜ್ಞದ ಕುರಿಮರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳನ್ನು ತೊಳೆದು ಶುಭ್ರಮಾಡಿಕೊಂಡಿದ್ದಾರೆ.
15ಈ ಕಾರಣದಿಂದ ಅವರು ದೇವರ ಸಿಂಹಾಸನದ ಮುಂದೆ ಇದ್ದುಕೊಂಡು ಆತನ ಆಲಯದಲ್ಲಿ ಹಗಲಿರುಳೂ ಆತನಿಗೆ ಆರಾಧನೆ ಮಾಡುತ್ತಾ ಇದ್ದಾರೆ. ಸಿಂಹಾಸನದ ಮೇಲೆ ಕುಳಿತಿರುವಾತನೇ ಅವರಿಗೆ ಬಿಡಾರವಾಗಿರುವನು.
16ಇನ್ನೆಂದಿಗೂ ಅವರಿಗೆ ಹಸಿವೆಯಾಗಲಿ, ಬಾಯಾರಿಕೆಯಾಗಲಿ ಆಗುವುದಿಲ್ಲ, ಅವರಿಗೆ ಸೂರ್ಯನ ಬಿಸಿಲಾದರೂ, ಯಾವ ಝಳವಾದರೂ ತಟ್ಟುವುದಿಲ್ಲ.
17ಏಕೆಂದರೆ ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಮರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ಅವರನ್ನು ನಡಿಸುತ್ತಾನೆ. ದೇವರು ಅವರ ಕಣ್ಣಿನಿಂದ ಕಣ್ಣೀರನ್ನೆಲ್ಲಾ ಒರೆಸಿಬಿಡುವನು.” ಎಂದು ಹೇಳಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath