ಕ್ರಿಶ್ಚಿಯನ್ ಧರ್ಮ
ಹಿಂದೆ

ಪ್ರಕಟಣೆ 16

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಆಲಯದೊಳಗಿಂದ ಬಂದ ಮಹಾಧ್ವನಿಯನ್ನು ನಾನು ಕೇಳಿದೆನು. ಅದು ಆ ಏಳು ಮಂದಿ ದೇವದೂತರಿಗೆ, “ನೀವು ಹೋಗಿ ಆ ಏಳು ಬಟ್ಟಲುಗಳಲ್ಲಿರುವ ದೇವರ ಕೋಪವನ್ನು ಭೂಮಿಯ ಮೇಲೆ ಸುರಿಯಿರಿ” ಎಂದು ಹೇಳಿತು.

2ಆಗ ಮೊದಲನೆಯ ದೇವದೂತನು ಹೋಗಿ ತನ್ನ ಬಟ್ಟಲಲ್ಲಿ ಇದ್ದದ್ದನ್ನು ಭೂಮಿಯ ಮೇಲೆ ಸುರಿಯಲು ಮೃಗದ ಗುರುತನ್ನು ಹಾಕಿಸಿಕೊಂಡವರು, ಅದರ ವಿಗ್ರಹವನ್ನು ಆರಾಧಿಸುವ ಎಲ್ಲಾ ಜನರ ಮೇಲೆ ಭೀಕರವಾದ ಕೆಟ್ಟ ಹುಣ್ಣುಗಳು ಎದ್ದವು.

3ಎರಡನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸಮುದ್ರದಲ್ಲಿ ಸುರಿದನು. ಅದು ಸತ್ತ ಮನುಷ್ಯನ ರಕ್ತದ ಹಾಗಾಯಿತು ಮತ್ತು ಸಮುದ್ರದಲ್ಲಿದ್ದ ಸಕಲ ಜೀವಿಗಳೂ ಸತ್ತವು.

4ಮೂರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ನದಿಗಳ ಮತ್ತು ನೀರಿನ ಬುಗ್ಗೆಗಳ ಮೇಲೆ ಸುರಿದನು. ಆಗ ಅವುಗಳ ನೀರು ರಕ್ತವಾಯಿತು.

5ಆ ಮೇಲೆ ಜಲಾಧಿಪತಿಯಾದ ದೂತನು, “ನೀನು ಇರುವಾತನೂ ಇದ್ದಾತನೂ ಪರಿಶುದ್ಧನಾಗಿರುವಾತನು ಆಗಿರುವ ದೇವರು, ಏಕೆಂದರೆ ನೀನು ಈ ರೀತಿ ನ್ಯಾಯತೀರ್ಪುಗಳನ್ನು ಮಾಡಿದ್ದರಿಂದ ನೀತಿಸ್ವರೂಪನೇ ಆಗಿರುವಿ.

6ಅವರು ನೀತಿವಂತರ ಮತ್ತು ಪ್ರವಾದಿಗಳ ರಕ್ತವನ್ನು ಸುರಿಸಿದ್ದರಿಂದ, ನೀನು ಅವರಿಗೆ ರಕ್ತವನ್ನೇ ಕುಡಿಯುವುದಕ್ಕೆ ಕೊಟ್ಟಿದ್ದೀ ಅದಕ್ಕೆ ಅವರು ಪಾತ್ರರು.” ಎಂದು ಹೇಳುವುದನ್ನು ಕೇಳಿದೆನು.

7ಆ ಮೇಲೆ ಯಜ್ಞವೇದಿಯು ಮಾತನಾಡುತ್ತಾ, “ದೇವರಾದ ಕರ್ತನೇ ಸರ್ವಶಕ್ತನೇ, ನಿನ್ನ ನ್ಯಾಯತೀರ್ಪುಗಳು ಸತ್ಯವೂ ನ್ಯಾಯವೂ ಆಗಿವೆ” ಎಂದು ಹೇಳುವುದನ್ನು ಕೇಳಿದೆನು.

8ನಾಲ್ಕನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಸೂರ್ಯನ ಮೇಲೆ ಸುರಿದನು. ಆಗ ಸೂರ್ಯನಿಗೆ ಬೆಂಕಿಯಂಥ ಬಿಸಿಲಿನಿಂದ ಮನುಷ್ಯರನ್ನು ಸುಡುವ ಅನುಮತಿ ಕೊಡಲ್ಪಟ್ಟಿತು.

9ಮನುಷ್ಯರು ಬಲವಾದ ಬಿಸಿಲಿನಿಂದ ಸುಟ್ಟುಹೋದಾಗ್ಯೂ ಅವರು ಈ ಉಪದ್ರವಗಳ ಮೇಲೆ ಅಧಿಕಾರ ಹೊಂದಿರುವ ದೇವರ ನಾಮವನ್ನು ದೂಷಿಸಿದಲ್ಲದೆ, ಅವರು ಪಶ್ಚಾತ್ತಾಪಪಡಲಿಲ್ಲ ಆತನಿಗೆ ಮಹಿಮೆಯನ್ನು ಸಲ್ಲಿಸಲಿಲ್ಲ.

10ಐದನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಮೃಗದ ಸಿಂಹಾಸನದ ಮೇಲೆ ಸುರಿಯಲು ಅದರ ರಾಜ್ಯವು ಕತ್ತಲಾಯಿತು. ಜನರು ಯಾತನೆಯಿಂದ ತಮ್ಮ ನಾಲಿಗೆಗಳನ್ನು ಕಚ್ಚಿಕೊಂಡು,

11ತಮ್ಮ ಯಾತನೆಗಳಿಗಾಗಿಯೂ ಹುಣ್ಣುಗಳ ದೆಸೆಯಿಂದಲೂ ಪರಲೋಕದ ದೇವರನ್ನು ದೂಷಿಸಿದಲ್ಲದೆ. ಅವರು ತಮ್ಮ ಕೃತ್ಯಗಳಿಗಾಗಿ ಮಾನಸಾಂತರ ಹೊಂದಲಿಲ್ಲ.

12ಆರನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ಯೂಫ್ರೆಟಿಸ್ ಎಂಬ ಮಹಾ ನದಿಯಲ್ಲಿ ಸುರಿಯಲು, ಪೂರ್ವದಿಕ್ಕಿನಿಂದ ಬರುವ ರಾಜರಿಗೆ ಮಾರ್ಗ ಸಿದ್ಧವಾಗುವಂತೆ ಅದರ ನೀರು ಬತ್ತಿಹೋಯಿತು.

13ಆಗ ಘಟಸರ್ಪದ ಬಾಯಿಂದ, ಮೃಗದ ಬಾಯಿಂದ ಮತ್ತು ಸುಳ್ಳುಪ್ರವಾದಿಯ ಬಾಯಿಂದ ಕಪ್ಪೆಗಳಂತಿದ್ದ ಮೂರು ಅಶುದ್ಧಾತ್ಮಗಳು ಬರುವುದನ್ನು ಕಂಡೆನು.

14ಇವು ಸೂಚಕಕಾರ್ಯಗಳನ್ನು ಮಾಡುವ ಭೂತಾತ್ಮಗಳಾಗಿದ್ದು ಭೂಲೋಕದ ಎಲ್ಲಾ ರಾಜರುಗಳ ಬಳಿಗೆ ಹೋಗಿ ಸರ್ವಶಕ್ತನಾದ ದೇವರ ಮಹಾದಿನದ ಯುದ್ಧಕ್ಕಾಗಿ ಅವರನ್ನು ಕೂಡಿಸುತ್ತಿದ್ದವು.

15“ಇಗೋ ಕಳ್ಳನು ಬರುವಂತೆ ಬರುತ್ತೇನೆ. ತಾನು ಬೆತ್ತಲೆಯಾಗಿ ತಿರುಗಾಡಿ ಜನರಿಂದ ಅವಮಾನಕ್ಕೆ ಗುರಿಯಾಗದಂತೆ ಎಚ್ಚರವಾಗಿದ್ದು ತನ್ನ ವಸ್ತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳುವವನು ಧನ್ಯನು.”

16ಆಗ ಅವು ಭೂರಾಜರನ್ನು ಇಬ್ರಿಯ ಭಾಷೆಯಲ್ಲಿ ಅರ್ಮಗೆದ್ದೋನ್ ಎಂದು ಕರೆಯಲ್ಪಡುವ ಸ್ಥಳಕ್ಕೆ ಕೂಡಿಸಿದವು.

17ಏಳನೆಯ ದೇವದೂತನು ತನ್ನ ಬಟ್ಟಲಲ್ಲಿ ಇದ್ದದ್ದನ್ನು ವಾಯುಮಂಡಲದ ಮೇಲೆ ಸುರಿಯಲು ಆಗ ಆಲಯದ ಸಿಂಹಾಸನದಿಂದ ಮಹಾಧ್ವನಿಯು ಉಂಟಾಗಿ “ಸಂಭವಿಸಿ ಆಯಿತು” ಎಂದು ಹೇಳಿತು.

18ಆಗ ಮಿಂಚುಗಳೂ, ನಾದಗಳೂ, ಗುಡುಗುಗಳೂ ಉಂಟಾದವು ಇದಲ್ಲದೆ ಮಹಾ ಭೂಕಂಪವಾಯಿತು. ಮನುಷ್ಯರು ಭೂಮಿಯ ಮೇಲೆ ಇದ್ದಂದಿನಿಂದ ಅಂಥ ದೊಡ್ಡ ಭೂಕಂಪವಾಗಿರಲಿಲ್ಲ.

19ಮಹಾ ಪಟ್ಟಣವು ಮೂರು ಭಾಗವಾಗಿ ಬಿರಿಯಿತು ಮತ್ತು ಜನಾಂಗಗಳ ಪಟ್ಟಣಗಳು ಬಿದ್ದವು. ಆಗ ದೇವರು ತನ್ನ ಸನ್ನಿಧಿಯಲ್ಲಿ ಬಾಬೆಲನ್ನು ಜ್ಞಾಪಿಸಿಕೊಂಡು ತನ್ನ ಉಗ್ರಕೋಪವೆಂಬ ದ್ರಾಕ್ಷಾರಸದಿಂದ ತುಂಬಿದ ಪಾತ್ರೆಯನ್ನು ಆ ನಗರಕ್ಕೆ ಕೊಟ್ಟನು.

20ಆಗ ಪ್ರತಿಯೊಂದು ದ್ವೀಪವು ಓಡಿಹೋಗಿ ಮರೆಯಾದವು ಬೆಟ್ಟಗಳು ಕಾಣದಂತಾದವು.

21ಮತ್ತು ಆಕಾಶದಿಂದ ಮನುಷ್ಯರ ಮೇಲೆ ದೊಡ್ಡ ಆಲಿಕಲ್ಲಿನ ಮಳೆ ಸುರಿಯಿತು. ಒಂದೊಂದು ಅಲಿಕಲ್ಲು ಸುಮಾರು ನಲ್ವತ್ತು ಕಿಲೊಗ್ರಾಮಿನಷ್ಟು ತೂಕವಾಗಿತ್ತು. ಆ ಆಲಿಕಲ್ಲಿನ ಮಳೆಯ ಉಪದ್ರವವು ಬಹಳ ವಿಪರೀತವಾದ್ದರಿಂದ ಆ ಮಳೆಯಲ್ಲಿ ಸಿಕ್ಕಿಕೊಂಡ ಮನುಷ್ಯರು ದೇವರನ್ನು ದೂಷಿಸಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath