ಪ್ರಕಟಣೆ 14
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆನಂತರ ನಾನು ನೋಡಲಾಗಿ ಯಜ್ಞದ ಕುರಿಮರಿಯಾದಾತನು ಚೀಯೋನ್ ಪರ್ವತದ ಮೇಲೆ ನಿಂತಿರುವುದನ್ನು ಕಂಡೆನು. ಆತನ ಜೊತೆಯಲ್ಲಿ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಮಂದಿ ಇದ್ದರು. ಅವರ ಹಣೆಯ ಮೇಲೆ ಆತನ ಹೆಸರೂ ಆತನ ತಂದೆಯ ಹೆಸರೂ ಬರೆಯಲ್ಪಟ್ಟಿದ್ದವು.
2ಇದಲ್ಲದೆ ಪರಲೋಕದಿಂದ ಜಲಪ್ರವಾಹದ ಘೋಷದಂತೆಯೂ ದೊಡ್ಡ ಗುಡುಗಿನ ಶಬ್ದದಂತೆಯೂ ಇದ್ದ ಮಹಾಶಬ್ದವನ್ನು ಕೇಳಿದೆನು. ನಾನು ಕೇಳಿದ ಆ ಶಬ್ದವು ವೀಣೆಗಳನ್ನು ನುಡಿಸಿಕೊಂಡು ಹಾಡುತ್ತಿರುವ ವೀಣೆಗಾರರ ಶಬ್ದದಂತಿತ್ತು.
3ಅವರು ಸಿಂಹಾಸನದ ಮುಂದೆಯೂ ಆ ನಾಲ್ಕು ಜೀವಿಗಳ ಮತ್ತು ಹಿರಿಯರ ಮುಂದೆಯೂ ಹೊಸ ಹಾಡನ್ನು ಹಾಡಿದರು. ಭೂಲೋಕದಿಂದ ಕೊಂಡುಕೊಳ್ಳಲ್ಪಟ್ಟ ಆ ಒಂದು ಲಕ್ಷದ ನಲವತ್ತನಾಲ್ಕು ಸಾವಿರ ಜನರ ಹೊರತು ಬೇರೆ ಯಾರೂ ಆ ಹಾಡನ್ನು ಕಲಿಯಲಾರರು.
4ಇವರು ಕನ್ಯೆಯರಂತೆ ಕಳಂಕರಹಿತರು, ಸ್ತ್ರೀ ಸಹವಾಸದಿಂದ ಮಲಿನರಾಗದವರು. ಯಜ್ಞದ ಕುರಿಮರಿಯಾದಾತನು ಎಲ್ಲಿ ಹೋದರೂ ಇವರು ಆತನನ್ನು ಹಿಂಬಾಲಿಸುವರು. ಇವರು ಮನುಷ್ಯರೊಳಗಿಂದ ಸ್ವಕೀಯ ಜನರಾಗಿ ಕೊಂಡುಕೊಳ್ಳಲ್ಪಟ್ಟು ದೇವರಿಗೂ ಯಜ್ಞದ ಕುರಿಯಾದಾತನಿಗೂ ಪ್ರಥಮಫಲದಂತಾದರು.
5ಇವರ ಬಾಯಲ್ಲಿ ಸುಳ್ಳು ಇರಲೇ ಇಲ್ಲ. ಇವರು ನಿರ್ದೋಷಿಗಳಾಗಿದ್ದಾರೆ.
6ಮತ್ತೊಬ್ಬ ದೇವದೂತನು ಆಕಾಶಮಧ್ಯದಲ್ಲಿ ಹಾರಾಡುತ್ತಿರುವುದನ್ನು ಕಂಡೆನು. ಭೂನಿವಾಸಿಗಳಾಗಿರುವ ಸಕಲ ಜನಾಂಗ, ಕುಲ, ಭಾಷೆ, ಜನಗಳೆಲ್ಲರಿಗೆ ಸಾರಿಹೇಳುವುದಕ್ಕಾಗಿ ನಿತ್ಯವಾದ ಶುಭವರ್ತಮಾನವು ಆತನಲ್ಲಿತ್ತು.
7ಆ ದೂತನು, “ನೀವೆಲ್ಲರೂ ದೇವರಿಗೆ ಭಯಪಟ್ಟು ಆತನಿಗೆ ಮಹಿಮೆಯನ್ನು ಸಲ್ಲಿಸಿರಿ. ಏಕೆಂದರೆ ಆತನು ನ್ಯಾಯತೀರ್ಪು ಮಾಡುವ ಸಮಯವು ಬಂದಿದೆ. ಭೂಲೋಕ ಪರಲೋಕಗಳನ್ನೂ, ಸಮುದ್ರವನ್ನೂ, ನೀರಿನ ಬುಗ್ಗೆಗಳನ್ನೂ ಉಂಟುಮಾಡಿದಾತನನ್ನು ಆರಾಧಿಸಿರಿ” ಎಂದು ಮಹಾಧ್ವನಿಯಿಂದ ಹೇಳಿದನು.
8ಅವನ ಹಿಂದೆ ಎರಡನೆಯ ದೇವದೂತನು ಬಂದು, “ಬಿದ್ದಳು! ಬಿದ್ದಳು! ಬಾಬೆಲೆಂಬ ಮಹಾನಗರಿಯು ಬಿದ್ದಳು, ಆಕೆಯು ಸಕಲ ಜನಾಂಗಗಳಿಗೆ ತನ್ನ ಅತಿ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿಸಿದಳು” ಎಂದು ಹೇಳಿದನು.
9ಅವನ ಹಿಂದೆ ಮೂರನೆಯ ದೇವದೂತನು ಬಂದು, “ಯಾವನಾದರೂ ಯಾವುದೇ ಮೃಗವನ್ನೂ ಅದರ ವಿಗ್ರಹವನ್ನೂ ಆರಾಧಿಸಿ ತನ್ನ ಹಣೆಯ ಮೇಲಾಗಲಿ ಕೈಯ ಮೇಲಾಗಲಿ ಅದರ ಗುರುತು ಹಾಕಿಸಿಕೊಂಡಿದ್ದರೆ,
10ಅವನೂ ಸಹ ದೇವರ ಕೋಪವೆಂಬ ಪಾತ್ರೆಯಲ್ಲಿ ಏನೂ ಬೆರಸದೇ ಹಾಕಿದ ದೇವರ ರೌದ್ರವೆಂಬ ದ್ರಾಕ್ಷಾರಸವನ್ನು ಕುಡಿಯುವನು. ಪರಿಶುದ್ಧ ದೇವದೂತರ ಮುಂದೆಯೂ ಯಜ್ಞದ ಕುರಿಮರಿಯಾದಾತನ ಮುಂದೆಯೂ ಬೆಂಕಿಯಿಂದಲೂ ಗಂಧಕದಿಂದಲೂ ಯಾತನೆಪಡುವನು.
11ಅಂಥವರ ಯಾತನೆಯ ಹೊಗೆಯು ಯುಗಯುಗಾಂತರಗಳಲ್ಲಿಯೂ ಏರುತ್ತಾ ಹೋಗುತ್ತದೆ, ಮೃಗವನ್ನು ಮತ್ತು ಅದರ ವಿಗ್ರಹವನ್ನು ಆರಾಧಿಸುವವರಾಗಲಿ, ಅದರ ಹೆಸರಿನ ಗುರುತನ್ನು ಹೊಂದಿದವರಾಗಲಿ ಹಗಲೂ ರಾತ್ರಿ ವಿಶ್ರಾಂತಿಯಿಲ್ಲದೆ ಇರುವರು” ಎಂದು ಮಹಾಶಬ್ದದಿಂದ ಹೇಳಿದನು.
12ಇದರಲ್ಲಿ ದೇವರ ಆಜ್ಞೆಗಳನ್ನೂ, ಯೇಸುವಿನ ಬಗ್ಗೆ ನಂಬಿಕೆಯನ್ನೂ ಕೈಕೊಂಡು ನಡೆಯುತ್ತಿರುವ ದೇವಜನರ ತಾಳ್ಮೆಯು ಇಲ್ಲಿ ತೋರಿಬರಬೇಕಾಗಿದೆ.
13ಪರಲೋಕದಿಂದ ಒಂದು ಧ್ವನಿಯು ನನಗೆ ಕೇಳಿಸಿತು. ಅದು, “ಇಂದಿನಿಂದ ಕರ್ತನ ಭಕ್ತರಾಗಿ ಸಾಯುವವರು ಧನ್ಯರು ಎಂಬುದಾಗಿ ಬರೆ” ಎಂದು ನನಗೆ ಹೇಳಿತು. ಅದಕ್ಕೆ ಆತ್ಮನು, “ಹೌದು, ಅವರು ಧನ್ಯರೇ. ಅವರು ತಮ್ಮ ಶ್ರಮೆಗಳಿಂದ ಮುಕ್ತರಾಗಿ ವಿಶ್ರಮಿಸಿಕೊಳ್ಳುತ್ತಾರೆ ಮತ್ತು ಅವರ ಸುಕೃತ್ಯಗಳು ಅವರನ್ನು ಹಿಂಬಾಲಿಸುತ್ತವೆ” ಎಂದು ಹೇಳುತ್ತಾನೆ.
14ಆಗ ನಾನು ನೋಡಲಾಗಿ ಇಗೋ, ಒಂದು ಬಿಳಿ ಮೇಘವು ಕಾಣಿಸಿತು. ಆ ಮೇಘದ ಮೇಲೆ ಮನುಷ್ಯಕುಮಾರನಂತಿದ್ದ ಒಬ್ಬಾತನು ಕುಳಿತಿರುವುದನ್ನು ಕಂಡೆನು. ಆತನ ತಲೆಯ ಮೇಲೆ ಚಿನ್ನದ ಕಿರೀಟವೂ, ಆತನ ಕೈಯಲ್ಲಿ ಹರಿತವಾದ ಕುಡುಗೋಲೂ ಇದ್ದವು.
15ಆಗ ಮತ್ತೊಬ್ಬ ದೂತನು ದೇವಾಲಯದೊಳಗಿನಿಂದ ಬಂದು ಮೇಘದ ಮೇಲೆ ಕುಳಿತಿದ್ದಾತನಿಗೆ, “ಭೂಮಿಯ ಪೈರು ಮಾಗಿದೆ, ಕೊಯ್ಯುವ ಕಾಲ ಬಂದಿದೆ. ನಿನ್ನ ಕುಡುಗೋಲನ್ನು ಹಾಕಿ ಪೈರನ್ನು ಕೊಯ್ಯಿ” ಎಂದು ಮಹಾಧ್ವನಿಯಿಂದ ಕೂಗಿದನು.
16ಮೇಘದ ಮೇಲೆ ಕುಳಿತಿದ್ದಾತನು ತನ್ನ ಕುಡುಗೋಲನ್ನು ಭೂಮಿಯ ಮೇಲೆ ಹಾಕಿದನು. ಆಗ ಭೂಮಿಯ ಪೈರು ಕೊಯ್ಯಲ್ಪಟ್ಟಿತು.
17ಮತ್ತೊಬ್ಬ ದೇವದೂತನು ಪರಲೋಕದಲ್ಲಿರುವ ದೇವಾಲಯದೊಳಗಿನಿಂದ ಬಂದನು. ಅವನ ಬಳಿಯೂ ಹರಿತವಾದ ಕುಡುಗೋಲು ಇತ್ತು.
18ತರುವಾಯ ಬೆಂಕಿಯ ಮೇಲೆ ಅಧಿಕಾರ ಹೊಂದಿದ್ದ ಇನ್ನೊಬ್ಬ ದೂತನು ಯಜ್ಞವೇದಿಯ ಬಳಿಯಿಂದ ಬಂದು, ಆ ಹರಿತವಾದ ಕುಡುಗೋಲಿನವನಿಗೆ, “ನಿನ್ನ ಹರಿತವಾದ ಕುಡುಗೋಲನ್ನು ಹಾಕಿ ಭೂಮಿಯ ದ್ರಾಕ್ಷಿಗೊಂಚಲುಗಳನ್ನು ಕೊಯ್ಯಿ. ಅದರ ಹಣ್ಣುಗಳು ಪೂರಾ ಮಾಗಿವೆ” ಎಂದು ಮಹಾಧ್ವನಿಯಿಂದ ಕೂಗಿದನು.
19ಆಗ ಆ ದೂತನು ತನ್ನ ಕುಡುಗೋಲಿನಿಂದ ಭೂಮಿಯ ಮೇಲಿನ ದ್ರಾಕ್ಷಿಬಳ್ಳಿಯಲ್ಲಿದ್ದ ದ್ರಾಕ್ಷಿಹಣ್ಣನ್ನು ಕೊಯ್ದು ಕೂಡಿಸಿ, ದೇವರ ರೌದ್ರವೆಂಬ ದ್ರಾಕ್ಷಿಯ ದೊಡ್ಡ ಆಲೆಗೆ ಹಾಕಿದನು.
20ಆಗ ಆಲೆಯನ್ನು ಪಟ್ಟಣದ ಹೊರಗೆ ತೆಗೆದುಕೊಂಡು ಹೋಗಿ ತುಳಿದರು. ಆ ಆಲೆಯೊಳಗಿಂದ ರಕ್ತವು ಹೊರಟು ಕುದುರೆಗಳ ಕಡಿವಾಣಗಳನ್ನು ಮುಟ್ಟುವಷ್ಟು ಮೇಲಕ್ಕೆ ಬಂದು ಮುನ್ನೂರು ಕಿಲೋಮೀಟರಿನಷ್ಟು ದೂರ ಹರಿಯಿತು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath