ಕೀರ್ತನೆಗಳು 106
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನಿಗೆ ಸ್ತೋತ್ರ! ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡಿರಿ. ಆತನು ಒಳ್ಳೆಯವನು. ಆತನ ಕೃಪೆಯು ಶಾಶ್ವತವಾಗಿರುವುದು.
2ಯೆಹೋವನ ಮಹತ್ಕಾರ್ಯಗಳನ್ನು ಯಾರು ವರ್ಣಿಸಬಲ್ಲರು? ಆತನನ್ನು ತಕ್ಕಂತೆ ಕೀರ್ತಿಸುವುದು ಯಾರಿಂದಾದೀತು?
3ಯಾವಾಗಲೂ ನ್ಯಾಯವನ್ನು ಕಾಪಾಡುವವರೂ, ನೀತಿಯನ್ನು ಪಾಲಿಸುವವರೂ ಧನ್ಯರು.
4ಯೆಹೋವನೇ, ನನ್ನನ್ನು ನೆನಪುಮಾಡಿಕೊಂಡು, ನಿನ್ನ ಪ್ರಜೆಗೆ ತೋರಿಸುವ ದಯೆಯನ್ನು ನನಗೂ ತೋರಿಸು. ನನ್ನನ್ನು ರಕ್ಷಿಸಲಿಕ್ಕೆ ಬಾ,
5ಆಗ ನೀನು ಆರಿಸಿಕೊಂಡ ಪ್ರಜೆಯ ಏಳಿಗೆಯನ್ನು ನೋಡಿ, ನಾನೂ ಅವರೊಂದಿಗೆ ಸಂತೋಷಿಸುವೆನು; ನಿನ್ನ ಸ್ವಕೀಯರೊಂದಿಗೆ ನಾನೂ ಹಿಗ್ಗುವೆನು.
6ನಮ್ಮ ಪೂರ್ವಿಕರಂತೆ ನಾವೂ ಪಾಪಿಗಳು; ಅಪರಾಧಮಾಡಿದೆವು; ದುಷ್ಟತನವನ್ನು ನಡೆಸಿದೆವು.
7ನಮ್ಮ ಪೂರ್ವಿಕರು ಐಗುಪ್ತದಲ್ಲಿ ನಿನ್ನ ಅದ್ಭುತಕ್ರಿಯೆಗಳನ್ನು ಲಕ್ಷಿಸಲಿಲ್ಲ; ನಿನ್ನ ಕೃಪಾತಿಶಯವನ್ನು ಸ್ಮರಿಸಲಿಲ್ಲ. ಅವರು ಕೆಂಪು ಸಮುದ್ರದ ಬಳಿಯಲ್ಲಿ ನಿನಗೆ ತಿರುಗಿಬಿದ್ದರು.
8ಆದರೂ ಆತನು ತನ್ನ ಹೆಸರಿನ ನಿಮಿತ್ತವಾಗಿಯೂ, ತನ್ನ ಶೌರ್ಯವನ್ನು ಪ್ರಕಟಿಸುವುದಕ್ಕಾಗಿಯೂ ಅವರನ್ನು ರಕ್ಷಿಸಿದನು.
9ಆತನು ಗದರಿಸಲು ಕೆಂಪು ಸಮುದ್ರವು ಒಣಗಿಹೋಯಿತು; ಅಡವಿಯನ್ನೋ ಎಂಬಂತೆ ಸಾಗರವನ್ನು ದಾಟಿಸಿದನು.
10ಹಗೆಗಳ ಕೈಯಿಂದ ಅವರನ್ನು ತಪ್ಪಿಸಿದನು; ವೈರಿಯ ಹಸ್ತದಿಂದ ಬಿಡಿಸಿದನು.
11ಜಲರಾಶಿಯು ಅವರ ವಿರೋಧಿಗಳನ್ನು ಮುಚ್ಚಿಬಿಟ್ಟಿತು; ಒಬ್ಬನೂ ಉಳಿಯಲಿಲ್ಲ.
12ಆಗ ಅವರು ಆತನ ಮಾತನ್ನು ನಂಬಿ ಆತನನ್ನು ಕೀರ್ತಿಸಿದರು.
13ಆದರೆ ಅವರು ಬೇಗನೆ ಆತನ ಕೆಲಸಗಳನ್ನು ಮರೆತು, ಆತನ ನಡೆಸುವಿಕೆಗೆ ಕಾದಿರದೆ,
14ಅರಣ್ಯದಲ್ಲಿ ಅತಿ ಆಶೆಗೊಂಡವರಾಗಿ, ಅಡವಿಯಲ್ಲಿ ದೇವರನ್ನು ಪರೀಕ್ಷಿಸಿದರು.
15ಆತನು ಅವರ ಆಶೆಯನ್ನು ಪೂರೈಸಿದರೂ, ಅವರ ಪ್ರಾಣಕ್ಕೆ ಕ್ಷಯವನ್ನು ಬರಮಾಡಿದನು.
16ಅವರು ಪಾಳೆಯದಲ್ಲಿ ಮೋಶೆಯ ಮೇಲೆಯೂ, ಯೆಹೋವನು ಪ್ರತಿಷ್ಠಿಸಿದ ಆರೋನನ ಮೇಲೆಯೂ ಹೊಟ್ಟೆಕಿಚ್ಚುಪಡಲು,
17ಭೂಮಿಯು ಬಾಯ್ದೆರೆದು ದಾತಾನನನ್ನು ನುಂಗಿಬಿಟ್ಟಿತು; ಅಬಿರಾಮನ ಕಡೆಯವರನ್ನು ಮುಚ್ಚಿಬಿಟ್ಟಿತು.
18ಅವರ ಮಧ್ಯದಲ್ಲಿ ಬೆಂಕಿಯುಂಟಾಯಿತು; ಅಗ್ನಿಜ್ವಾಲೆಯು ದುಷ್ಟರನ್ನು ದಹಿಸಿಬಿಟ್ಟಿತು.
19ಹೋರೇಬಿನಲ್ಲಿ ಎರಕದ ಬಸವನನ್ನು ಮಾಡಿ, ಅದಕ್ಕೆ ಅಡ್ಡಬಿದ್ದರು.
20ಹೀಗೆ ಅವರು ತಮ್ಮ ದಿವ್ಯಮಹಿಮೆಯ ದೇವರನ್ನು ಬಿಟ್ಟು, ಹುಲ್ಲು ತಿನ್ನುವ ಎತ್ತಿನ ಮೂರ್ತಿಯನ್ನು ಹಿಡಿದುಕೊಂಡರು.
21ಐಗುಪ್ತದಲ್ಲಿ ಮಹತ್ತುಗಳನ್ನೂ, ಹಾಮನ ದೇಶದಲ್ಲಿ ಅದ್ಭುತಗಳನ್ನೂ,
22ಕೆಂಪು ಸಮುದ್ರದ ಬಳಿಯಲ್ಲಿ ಘೋರಕೃತ್ಯಗಳನ್ನೂ ನಡೆಸಿದ, ತಮ್ಮ ರಕ್ಷಕನಾದ ದೇವರನ್ನು ಮರೆತೇ ಬಿಟ್ಟರು.
23ಆದುದರಿಂದ ಆತನು ಅವರನ್ನು ಸಂಹರಿಸುವೆನು ಎನ್ನಲು, ಆತನು ಆರಿಸಿಕೊಂಡ ಮೋಶೆಯು ಮಧ್ಯಸ್ಥನಾಗಿ, ಅವರನ್ನು ಸಂಹರಿಸದಂತೆ ಆತನ ಕೋಪವನ್ನು ಶಾಂತಪಡಿಸಿದನು.
24ಅವರು ಆ ರಮಣೀಯ ದೇಶವನ್ನು ತಿರಸ್ಕರಿಸಿದರು, ಆತನ ಮಾತನ್ನು ನಂಬಲಿಲ್ಲ.
25ತಮ್ಮ ತಮ್ಮ ಗುಡಾರಗಳಲ್ಲಿ ಗುಣುಗುಟ್ಟಿ, ಯೆಹೋವನ ಮಾತಿಗೆ ಕಿವಿಗೊಡಲಿಲ್ಲ.
26ಇದರಿಂದ ಆತನು ಅವರನ್ನು ಅರಣ್ಯದಲ್ಲಿಯೇ ಬೀಳಿಸುವೆನೆಂದೂ,
27ಅವರ ಸಂತಾನವನ್ನು ದೇಶಾಂತರಗಳಲ್ಲಿ ಚದುರಿಸಿ, ಅನ್ಯಜನಾಂಗಗಳ ನಡುವೆ ನಾಶಮಾಡುವೆನೆಂದೂ ಕೈಯೆತ್ತಿದನು.
28ಅವರು ತಮ್ಮನ್ನು ಬಾಳ್ ಪೆಗೋರನ ಸೇವೆಗೆ ಒಪ್ಪಿಸಿ, ಮೂರ್ತಿಗಳಿಗೆ ಯಜ್ಞ ಮಾಡಿದ್ದನ್ನು ಊಟಮಾಡಿದರು.
29ಈ ತಮ್ಮ ಕ್ರಿಯೆಗಳಿಂದ ಆತನನ್ನು ಕೆಣಕಿದರು; ಅವರಲ್ಲಿ ವ್ಯಾಧಿಯುಂಟಾಯಿತು.
30ಫೀನೆಹಾಸನು ಎದ್ದು ಅವರನ್ನು ದಂಡಿಸಲು, ಆ ವ್ಯಾಧಿಯು ನಿಂತುಹೋಯಿತು.
31ಅವನು ಮಾಡಿದ್ದು ತಲಾತಲಾಂತರಕ್ಕೂ ನೀತಿಯೆಂದು ಎಣಿಸಲ್ಪಟ್ಟಿತು.
32ಅವರು ಮೆರೀಬ ಪ್ರವಾಹದ ಸಮೀಪದಲ್ಲಿ ಆತನನ್ನು ರೇಗಿಸಿದರು. ಅವರ ದೆಸೆಯಿಂದ ಮೋಶೆಗೆ ಕೇಡು ಉಂಟಾಯಿತು.
33ಅವರು ದೇವರಾತ್ಮನಿಗೆ ವಿರುದ್ಧವಾಗಿ ನಿಂತಿದ್ದರಿಂದ, ಮೋಶೆ ದುಡುಕಿ ಮಾತನಾಡಿದನು.
34ಅನ್ಯ ಜನಾಂಗದವರನ್ನು ಸಂಹರಿಸಬೇಕೆಂಬ, ಯೆಹೋವನ ಆಜ್ಞೆಗೆ ಅವಿಧೇಯರಾಗಿ,
35ಅವರೊಡನೆ ಕೂಡಿಕೊಂಡು, ಅವರ ದುರಾಚಾರಗಳನ್ನು ಕಲಿತುಕೊಂಡರು.
36ಅವರ ವಿಗ್ರಹಗಳನ್ನು ಸೇವಿಸಿದರು; ಅವು ಅವರಿಗೆ ಉರುಲಿನಂತಾದವು.
37ಅವರು ತಮ್ಮ ಗಂಡು ಹೆಣ್ಣು ಮಕ್ಕಳನ್ನು ಭೂತಗಳಿಗೆ ಬಲಿಕೊಟ್ಟರು.
38ಕಾನಾನ್ಯರ ಮೂರ್ತಿಗಳ ಅರ್ಪಣೆಗೋಸ್ಕರ, ತಮ್ಮ ಮಕ್ಕಳ ನಿರಪರಾಧ ರಕ್ತವನ್ನು ಸುರಿಸಿದರು; ಇಂಥ ಕೊಲೆಗಳಿಂದ ದೇಶವನ್ನು ಹೊಲೆಮಾಡಿದರು.
39ಅವರು ತಮ್ಮ ದುಷ್ಕೃತ್ಯಗಳಿಂದ ಅಶುದ್ಧರಾದರು. ದುರಾಚಾರಗಳಿಂದ ದೇವದ್ರೋಹಿಗಳಾದರು.
40ಆಗ ಯೆಹೋವನ ಕೋಪವು ಅವರ ಮೇಲೆ ಉರಿಗೊಂಡಿತು; ಆತನು ತನ್ನ ಸ್ವಾಸ್ತ್ಯವಾದ ಪ್ರಜೆಗಳನ್ನು ಅಸಹ್ಯಿಸಿ,
41ಅವರನ್ನು ಅನ್ಯಜನಾಂಗಗಳ ಕೈಗೆ ಒಪ್ಪಿಸಿದನು. ವೈರಿಗಳು ಅವರ ಮೇಲೆ ಅಧಿಕಾರ ನಡೆಸಿದರು;
42ಶತ್ರುಗಳು ಅವರನ್ನು ಕುಗ್ಗಿಸಿದರು; ಅವರ ಕೈಕೆಳಗೆ ತಗ್ಗಿಹೋದರು.
43ಆತನು ಅವರನ್ನು ಅನೇಕಾವರ್ತಿ ರಕ್ಷಿಸಿದರೂ, ಅವರು ತಮ್ಮ ಆಲೋಚನೆಯನ್ನೇ ಅನುಸರಿಸಿ ಅವಿಧೇಯರಾದರು; ತಮ್ಮ ಅಕ್ರಮದಿಂದಲೇ ಹೀನಸ್ಥಿತಿಗೆ ಬಂದರು.
44ಆದರೆ ಆತನು ಕಷ್ಟದಲ್ಲಿದ್ದ, ಅವರ ಮೊರೆಯನ್ನು ಕೇಳಿ ಪರಾಂಬರಿಸಿದನು.
45ತನ್ನ ಒಡಂಬಡಿಕೆಯನ್ನು ನೆನಪುಮಾಡಿಕೊಂಡು, ತನ್ನ ಕೃಪಾತಿಶಯದಿಂದ ಅವರನ್ನು ಕನಿಕರಿಸಿದನು.
46ಸೆರೆಯೊಯ್ದವರ ದಯೆಗೆ ಅವರು ಪಾತ್ರರಾಗುವಂತೆ ಮಾಡಿದನು.
47ಯೆಹೋವನೇ, ನಮ್ಮ ದೇವರೇ, ರಕ್ಷಿಸು; ಅನ್ಯಜನಗಳಲ್ಲಿ ಚದರಿರುವ ನಮ್ಮನ್ನು ತಿರುಗಿ ಕೂಡಿಸು. ಆಗ ನಿನ್ನ ಪರಿಶುದ್ಧ ನಾಮವನ್ನು ಕೊಂಡಾಡುವೆವು; ನಿನ್ನ ಸ್ತೋತ್ರದಲ್ಲಿ ಹೆಚ್ಚಳಪಡುವೆವು.
48ಇಸ್ರಾಯೇಲ್ ದೇವರಾದ ಯೆಹೋವನಿಗೆ, ಯುಗಯುಗಾಂತರಗಳವರೆಗೂ ಕೊಂಡಾಟವಾಗಲಿ; ಸರ್ವಜನರೂ “ಆಮೆನ್” ಎನ್ನಲಿ. ಯೆಹೋವನಿಗೆ ಸ್ತೋತ್ರ!
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath