ಕ್ರಿಶ್ಚಿಯನ್ ಧರ್ಮ
ಹಿಂದೆ

ಕೀರ್ತನೆಗಳು 104

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ನನ್ನ ಮನವೇ, ಯೆಹೋವನನ್ನು ಕೊಂಡಾಡು. ಯೆಹೋವನೇ, ನನ್ನ ದೇವರೇ, ನೀನು ಸರ್ವೋತ್ತಮನು; ಪ್ರಭಾವ ಮತ್ತು ಮಹತ್ವಗಳಿಂದ ಭೂಷಿತನಾಗಿರುವೆ.

2ಬೆಳಕನ್ನು ವಸ್ತ್ರದಂತೆ ಹೊದ್ದುಕೊಂಡಿರುವೆ; ಆಕಾಶವನ್ನು ಗುಡಾರದಂತೆ ಎತ್ತಿ ಹರಡಿರುವೆ.

3ನೀರಿನ ಮೇಲೆ ತೊಳೆಗಳನ್ನು ನಿಲ್ಲಿಸಿ ಉಪ್ಪರಿಗೆಗಳನ್ನು ಕಟ್ಟಿಕೊಂಡು; ಮೋಡಗಳನ್ನು ವಾಹನವಾಗಿ ಮಾಡಿಕೊಂಡಿರುವೆ; ವಾಯುವಿನ ರೆಕ್ಕೆಗಳ ಮೇಲೆ ಸಂಚರಿಸುತ್ತೀ.

4ಗಾಳಿಯನ್ನು ನಿನ್ನ ದೂತರನ್ನಾಗಿಯೂ, ಅಗ್ನಿಜ್ವಾಲೆಯನ್ನು ಸೇವಕರನ್ನಾಗಿಯೂ ಮಾಡಿಕೊಳ್ಳುತ್ತೀ.

5ಭೂಮಿಯು ಯುಗಯುಗಾಂತರಕ್ಕೂ ಕದಲದ ಹಾಗೆ ಅದನ್ನು ದೃಢವಾದ ಅಸ್ತಿವಾರದ ಮೇಲೆ ಸ್ಥಾಪಿಸಿದ್ದೀ.

6ನೀನು ಅದನ್ನು ಆದಿಸಾಗರವೆಂಬ ವಸ್ತ್ರದಿಂದ ಹೊದಿಸಿದ್ದೀ; ನೀರು ಪರ್ವತಗಳನ್ನೂ ಮುಚ್ಚಿಬಿಟ್ಟಿತ್ತು.

7ನೀನು ಗದರಿಸಲು ಅದು ಓಡಿಹೋಯಿತು; ನಿನ್ನ ಗರ್ಜನೆಗೆ ಹೆದರಿ ನೀನು ನೇಮಿಸಿದ ಸ್ಥಳಕ್ಕೆ ಹೋಗಲು,

8ಪರ್ವತಗಳು ಎದ್ದವು; ತಗ್ಗುಗಳು ಇಳಿದವು.

9ಜಲರಾಶಿಗಳು ಬಂದು ಪುನಃ ಭೂಮಿಯನ್ನು ಮುಚ್ಚಿಕೊಳ್ಳದ ಹಾಗೆ, ನೀನು ಮೇರೆಗಳನ್ನು ಗೊತ್ತುಮಾಡಿದಿ.

10ಬುಗ್ಗೆಗಳನ್ನು ತಗ್ಗುಗಳಿಗೆ ಬರಮಾಡುತ್ತೀ; ಅವು ಪರ್ವತಗಳ ನಡುವೆ ಹರಿದುಹೋಗುತ್ತವೆ.

11ಅವು ಅಡವಿಯ ಮೃಗಗಳಿಗೆ ನೀರುಕೊಡುತ್ತವೆ; ಕಾಡುಕತ್ತೆಗಳು ದಾಹ ತೀರಿಸಿಕೊಳ್ಳುತ್ತವೆ.

12ಪಕ್ಷಿಗಳು ಅವುಗಳ ಬಳಿಯ ಮರಗಳ ಕೊಂಬೆಗಳಲ್ಲಿ ವಾಸವಾಗಿದ್ದು ಗಾನಮಾಡುತ್ತವೆ.

13ನೀನು ನಿನ್ನ ಮೇಲಂತಸ್ತುಗಳಿಂದ ಪರ್ವತಗಳಿಗೆ ನೀರು ಕೊಡುತ್ತೀ; ನಿನ್ನ ಕಾರ್ಯಫಲದಿಂದ ಭೂಮಿಯು ತೃಪ್ತಿಹೊಂದುತ್ತದೆ.

14ಪಶುಗಳಿಗೋಸ್ಕರ ಹುಲ್ಲನ್ನು ಮೊಳಿಸುತ್ತೀ; ಮನುಷ್ಯರಿಗೋಸ್ಕರ ಪೈರುಗಳನ್ನು ಹುಟ್ಟಿಸುತ್ತೀ. ಅವರು ಭೂವ್ಯವಸಾಯಮಾಡಿ ಆಹಾರವನ್ನು,

15ಹೃದಯಾನಂದಕರವಾದ ದ್ರಾಕ್ಷಾರಸವನ್ನು, ಮುಖಕ್ಕೆ ಕಾಂತಿಯನ್ನು ಉಂಟುಮಾಡುವ ಎಣ್ಣೆಯನ್ನು, ಪ್ರಾಣಾಧಾರವಾದ ರೊಟ್ಟಿಯನ್ನು ಸಂಪಾದಿಸಿಕೊಳ್ಳುತ್ತಾರೆ.

16ಯೆಹೋವನು ನೆಟ್ಟ ಮರಗಳಾದ ಲೆಬನೋನಿನ ದೇವದಾರು ವೃಕ್ಷಗಳಿಗೆ ಬೇಕಾದಷ್ಟು ಜಲವಿರುತ್ತದೆ.

17ಪಕ್ಷಿಗಳು ಅವುಗಳಲ್ಲಿ ಗೂಡು ಕಟ್ಟಿಕೊಳ್ಳುತ್ತವೆ; ತುರಾಯಿ ಮರಗಳಲ್ಲಿ ಬಕಪಕ್ಷಿಗಳು ವಾಸಿಸುತ್ತವೆ.

18ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ, ಬೆಟ್ಟದ ಮೊಲಗಳಿಗೆ ಬಂಡೆಗಳೂ ಆಶ್ರಯಸ್ಥಾನಗಳಾಗಿವೆ.

19ವಿಶೇಷಕಾಲಗಳ ಸೂಚನೆಗಾಗಿ ಚಂದ್ರನನ್ನು ನಿರ್ಮಿಸಿರುವೆ; ಸೂರ್ಯನು ತನ್ನ ಅಸ್ತಮಾನ ಸಮಯವನ್ನು ಬಲ್ಲನು.

20ನೀನು ಕತ್ತಲೆಯನ್ನು ಬರಮಾಡಲು ರಾತ್ರಿಯಾಗುತ್ತದೆ. ಆಗ ಕಾಡಿನ ಮೃಗಗಳೆಲ್ಲಾ ಹೊರಬರುತ್ತವೆ.

21ಪ್ರಾಯದ ಸಿಂಹಗಳು ಬೇಟೆಗಾಗಿ ಗರ್ಜಿಸುತ್ತವೆ; ದೇವರಿಂದ ಆಹಾರವನ್ನು ಕೇಳಿಕೊಳ್ಳುತ್ತವೆ.

22ಸೂರ್ಯೋದಯವಾಗಲು ಅವು ಬಂದು ತಮ್ಮ ಗವಿಗಳಲ್ಲಿ ಮಲಗಿಕೊಳ್ಳುತ್ತವೆ.

23ಮನುಷ್ಯನು ತನ್ನ ಕೆಲಸಕ್ಕೆ ಹೊರಟು ಹೋಗುತ್ತಾನೆ; ಸಾಯಂಕಾಲದವರೆಗೆ ದುಡಿಯುತ್ತಾನೆ.

24ಯೆಹೋವನೇ, ನಿನ್ನ ಕೈಕೆಲಸಗಳು ಬಗೆ ಬಗೆಯಾಗಿವೆ. ಅವುಗಳನ್ನೆಲ್ಲಾ ಜ್ಞಾನದಿಂದಲೇ ಮಾಡಿರುವೆ; ಭೂಲೋಕವು ನಿನ್ನ ಆಸ್ತಿಯಿಂದ ತುಂಬಿರುತ್ತದೆ.

25ಇಗೋ, ಬಹುವಿಶಾಲವಾದ ಸಮುದ್ರವು! ಅದರೊಳಗೆ ಲೆಕ್ಕವಿಲ್ಲದಷ್ಟು ಸಣ್ಣ, ದೊಡ್ಡ ಜೀವಜಂತುಗಳು ಚಲಿಸುತ್ತಿರುತ್ತವೆ.

26ಅದರಲ್ಲಿ ಹಡಗುಗಳು ಸಂಚರಿಸುತ್ತವೆ ನೀನು ಉಂಟುಮಾಡಿದ ಲಿವ್ಯಾತಾನವು ಅದರಲ್ಲಿ ಆಡುತ್ತದೆ.

27ಇವುಗಳು ಹೊತ್ತುಹೊತ್ತಿಗೆ ಆಹಾರಕ್ಕೋಸ್ಕರ ನಿನ್ನನ್ನೇ ನಿರೀಕ್ಷಿಸುತ್ತವೆ.

28ನೀನು ಕೊಡಲು ಅವು ತೆಗೆದುಕೊಳ್ಳುತ್ತವೆ; ನೀನು ಕೈತೆರೆಯಲು ಅವು ಒಳ್ಳೇಯದನ್ನು ಹೊಂದಿ ತೃಪ್ತಿಗೊಳ್ಳುತ್ತವೆ.

29ನೀನು ವಿಮುಖನಾಗಲು ತಲ್ಲಣಿಸುತ್ತವೆ; ಅವುಗಳ ಶ್ವಾಸವನ್ನು ತೆಗೆದುಬಿಡಲು ಅವು ಸತ್ತು ತಿರುಗಿ ಮಣ್ಣಿಗೆ ಸೇರುತ್ತವೆ.

30ನೀನು ಜೀವಶ್ವಾಸವನ್ನು ಊದಲು ಅವು ಹೊಸದಾಗಿ ಹುಟ್ಟುತ್ತವೆ. ನೀನು ಭೂಮಿಯನ್ನು ನೂತನಪಡಿಸುತ್ತಿರುತ್ತಿ.

31ಯೆಹೋವನ ಮಹಿಮೆಯು ಸದಾಕಾಲವೂ ಇರಲಿ; ಯೆಹೋವನಿಗೆ ಆತನ ಸೃಷ್ಟಿಗಳಿಂದ ಸಂತೋಷವಾಗಲಿ.

32ಆತನು ದೃಷ್ಟಿಸಿದ ಮಾತ್ರದಿಂದಲೇ ಭೂಮಿಯು ಕಂಪಿಸುತ್ತದೆ; ಮುಟ್ಟುತ್ತಲೇ ಪರ್ವತಗಳು ಹೊಗೆಹಾಯುತ್ತವೆ.

33ನಾನು ಬದುಕಿರುವವರೆಗೂ ಯೆಹೋವನನ್ನು ಕೀರ್ತಿಸುತ್ತಿರುವೆನು; ಜೀವಮಾನವೆಲ್ಲಾ ನನ್ನ ದೇವರನ್ನು ಭಜಿಸುತ್ತಿರುವೆನು.

34ನನ್ನ ಧ್ಯಾನದಿಂದ ಆತನಿಗೆ ಮೆಚ್ಚಿಕೆಯಾಗಲಿ; ನಾನಾದರೋ ಯೆಹೋವನಲ್ಲಿ ಆನಂದಿಸುವೆನು.

35ಪಾಪಾತ್ಮರು ಭೂಲೋಕದಲ್ಲಿ ಮುಗಿದುಹೋಗಲಿ; ದುಷ್ಟರು ನಿರ್ಮೂಲವಾಗಲಿ. ನನ್ನ ಮನವೇ, ಯೆಹೋವನನ್ನು ಕೊಂಡಾಡು; ಯೆಹೋವನಿಗೆ ಸ್ತೋತ್ರ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath