ಜ್ಞಾನೋಕ್ತಿಗಳು 8
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಜ್ಞಾನವೆಂಬಾಕೆಯು ಕರೆಯುತ್ತಾಳಲ್ಲವೇ? ವಿವೇಕವೆಂಬ ಆಕೆಯು ಧ್ವನಿಗೈಯುತ್ತಾಳಲ್ಲವೇ?
2ಆಕೆಯು ರಾಜಮಾರ್ಗಗಳ ಮುಖ್ಯಸ್ಥಾನದಲ್ಲಿ, ದಾರಿಯ ಪಕ್ಕದಲ್ಲಿ, ನಡುಬೀದಿಯಲ್ಲಿ ನಿಂತುಕೊಳ್ಳುತ್ತಾಳೆ.
3ಆಕೆ ಪಟ್ಟಣದ ಪ್ರವೇಶ ದ್ವಾರದಲ್ಲಿ, ಬಾಗಿಲುಗಳೊಳಗೆ ಜನಸೇರುವ ಸ್ಥಳದಲ್ಲಿ ಹೀಗೆ ಕೂಗುತ್ತಾಳೆ,
4“ಜನರೇ, ನಿಮ್ಮನ್ನೇ ಕರೆಯುತ್ತೇನೆ, ಮಾನವರಿಗಾಗಿಯೇ ಧ್ವನಿಗೈಯುತ್ತೇನೆ.
5ಮೂಢರೇ, ಜಾಣತನವನ್ನು ಕಲಿತುಕೊಳ್ಳಿರಿ, ಜ್ಞಾನಹೀನರೇ, ಬುದ್ಧಿಯನ್ನು ಗ್ರಹಿಸಿಕೊಳ್ಳಿರಿ.
6ಕೇಳಿರಿ, ನಾನು ಶ್ರೇಷ್ಠವಾದ ಸಂಗತಿಗಳನ್ನು ಹೇಳುವೆನು, ಯಥಾರ್ಥಕ್ಕಾಗಿಯೇ ತುಟಿಗಳನ್ನು ತೆರೆಯುವೆನು,
7ನನ್ನ ಬಾಯಿ ಸತ್ಯವನ್ನೇ ಆಡುವುದು, ದುಷ್ಟತನವು ನನ್ನ ತುಟಿಗಳಿಗೆ ಅಸಹ್ಯವಾಗಿದೆ.
8ನನ್ನ ಮಾತುಗಳೆಲ್ಲಾ ನೀತಿಭರಿತವಾಗಿವೆ, ಅವುಗಳಲ್ಲಿ ಕಪಟವೂ, ವಕ್ರತೆಯೂ ಇಲ್ಲ.
9ಅವೆಲ್ಲಾ ಗ್ರಹಿಕೆಯುಳ್ಳವನಿಗೆ ನ್ಯಾಯವಾಗಿಯೂ, ತಿಳಿವಳಿಕೆಯನ್ನು ಪಡೆದವರಿಗೆ ಯಥಾರ್ಥವಾಗಿಯೂ ತೋರುವವು.
10ನನ್ನ ಬೋಧನೆಯನ್ನು ಬೆಳ್ಳಿಗಿಂತಲೂ ಮತ್ತು ಜ್ಞಾನೋಪದೇಶವನ್ನು ಅಪರಂಜಿಗಿಂತಲೂ ಉತ್ತಮವೆಂದು ಹೊಂದಿಕೊಳ್ಳಿರಿ.
11ಜ್ಞಾನವು ಹವಳಕ್ಕಿಂತಲೂ ಶ್ರೇಷ್ಠ, ಇಷ್ಟವಸ್ತುಗಳೆಲ್ಲವೂ ಅದಕ್ಕೆ ಸಮವಲ್ಲ.
12ಜ್ಞಾನವೆಂಬ ನನಗೆ ಜಾಣ್ಮೆಯೇ ನಿವಾಸ, ಯುಕ್ತಿಗಳ ತಿಳಿವಳಿಕೆಯನ್ನು ಹೊಂದಿದ್ದೇನೆ.
13ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ; ಗರ್ವ, ಅಹಂಭಾವ, ದುರ್ಮಾರ್ಗತನ, ಕುಟಿಲ ಭಾಷಣ ಇವುಗಳನ್ನು ಹಗೆಮಾಡುತ್ತೇನೆ.
14ಸದ್ಯೋಚನೆಯೂ, ಸುಜ್ಞಾನವೂ, ಸಾಮರ್ಥ್ಯವೂ ನನ್ನಲ್ಲಿವೆ, ವಿವೇಕವೂ ನಾನೇ.
15ನನ್ನ ಸಹಾಯದಿಂದ ರಾಜರು ಆಳುವರು, ಅಧಿಪತಿಗಳು ಸಹ ನ್ಯಾಯತೀರಿಸುವರು.
16ನನ್ನ ಮೂಲಕ ಪ್ರಭುಗಳು, ನಾಯಕರು ಅಂತು ಭೂಪತಿಗಳೆಲ್ಲರೂ ದೊರೆತನ ಮಾಡುವರು.
17ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ, ಆತುರದಿಂದ ಹುಡುಕುವವರು ನನ್ನನ್ನು ಕಂಡುಕೊಳ್ಳುವರು.
18ನನ್ನಲ್ಲಿ ಧನ, ಘನತೆ, ಶ್ರೇಷ್ಠಸಂಪತ್ತೂ, ನೀತಿಯೂ ಇರುತ್ತವೆ.
19ನನ್ನಿಂದಾಗುವ ಫಲವು ಬಂಗಾರಕ್ಕಿಂತಲೂ ಹೌದು ಅಪರಂಜಿಗಿಂತಲೂ ಉತ್ತಮ. ನನ್ನ ಮೂಲಕವಾದ ಆದಾಯವು ಚೊಕ್ಕ ಬೆಳ್ಳಿಗಿಂತಲೂ ಅಮೂಲ್ಯವಾಗಿದೆ.
20ನಾನು ಹಿಡಿದಿರುವ ದಾರಿಯು ನೀತಿಯೇ, ನ್ಯಾಯಮಾರ್ಗಗಳಲ್ಲಿ ನಡೆಯುತ್ತೇನೆ.
21ಹೀಗಿರಲು ನನ್ನನ್ನು ಪ್ರೀತಿಸುವವರಿಗೆ ಧನದ ಬಾಧ್ಯತೆಯನ್ನು ಅನುಗ್ರಹಿಸಿ, ಅವರ ಬೊಕ್ಕಸಗಳನ್ನು ತುಂಬಿಸುವೆನು.
22ಯೆಹೋವನು ತನ್ನ ಸೃಷ್ಟಿಕ್ರಮದಲ್ಲಿ ಮೊದಲು ನನ್ನನ್ನು ನಿರ್ಮಿಸಿದನು; ಆತನ ಪುರಾತನಕಾರ್ಯಗಳಲ್ಲಿ ನಾನೇ ಪ್ರಥಮ.
23ಪ್ರಾರಂಭದಲ್ಲಿ, ಭೂಮಿಯು ಹುಟ್ಟುವುದಕ್ಕಿಂತ ಮುಂಚೆ, ಅನಾದಿಕಾಲದಲ್ಲಿ ಸ್ಥಾಪಿಸಲ್ಪಟ್ಟೆನು.
24ಜಲನಿಧಿಗಳಾಗಲಿ, ನೀರು ತುಂಬಿದ ಬುಗ್ಗೆಗಳಾಗಲಿ ಇಲ್ಲದಿರುವಾಗ ನಾನು ಹುಟ್ಟಿದೆನು.
25ಬೆಟ್ಟಗುಡ್ಡಗಳು ಬೇರೂರಿ ನಿಲ್ಲುವುದಕ್ಕೆ ಮುಂಚೆ ಆತನು ಭೂಲೋಕವನ್ನಾಗಲಿ, ಬಯಲನ್ನಾಗಲಿ,
26ಭೂಮಿಯ ಮೊದಲನೆಯ ಅಣುರೇಣನ್ನಾಗಲಿ ನಿರ್ಮಿಸದೆ ಇರುವಾಗ ನಾನು ಹುಟ್ಟಿದೆನು.
27ಆತನು ಸಾಗರದ ಮೇಲೆ ಚಕ್ರಾಕಾರವಾದ ಗೆರೆಯನ್ನು ಎಳೆದು, ಆಕಾಶಮಂಡಲವನ್ನು ಸ್ಥಾಪಿಸುವಾಗ ಅಲ್ಲಿದ್ದೆನು.
28ಆತನು ಗಗನವನ್ನು ಮೇಲೆ ಸ್ಥಿರಪಡಿಸಿ, ಸಾಗರದ ಬುಗ್ಗೆಗಳನ್ನು ನೆಲೆಗೊಳಿಸಿದನು.
29ಪ್ರವಾಹಗಳು ತನ್ನ ಅಪ್ಪಣೆಯನ್ನು ಮೀರದ ಹಾಗೆ ಆತನು ಸಮುದ್ರಕ್ಕೆ ಮೇರೆಯನ್ನು ನೇಮಿಸಿ, ಭೂಮಿಯ ಅಸ್ತಿವಾರಗಳನ್ನು ಗೊತ್ತುಮಾಡುವಾಗ,
30ನಾನು ಆತನ ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ, ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ,
31ಆತನ ಭೂಲೋಕದಲ್ಲಿ ಉಲ್ಲಾಸಿಸುತ್ತಾ, ಮಾನವಸಂತಾನದಲ್ಲಿ ಹರ್ಷಿಸುತ್ತಾ ಇದ್ದೆನು.
32ಮಕ್ಕಳೇ, ಈಗ ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾರ್ಗಗಳನ್ನು ಅನುಸರಿಸುವವರು ಧನ್ಯರೇ ಸರಿ.
33ನನ್ನ ಉಪದೇಶವನ್ನು ಕೇಳಿರಿ, ಅದನ್ನು ಬಿಡದೆ ಜ್ಞಾನವಂತರಾಗಿರಿ.
34ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನವೂ ಕಾಯುತ್ತಾ ಬಾಗಿಲಿನ ನಿಲವುಗಳ ಹತ್ತಿರವಿದ್ದು, ಜಾಗರೂಕನಾಗಿ ನನ್ನ ಮಾತುಗಳನ್ನು ಕೇಳುವವನು ಭಾಗ್ಯವಂತನು.
35ಯಾವನು ನನ್ನನ್ನು ಹೊಂದುತ್ತಾನೋ ಅವನು ಜೀವವನ್ನು ಹೊಂದುತ್ತಾನೆ; ಅವನು ಯೆಹೋವನ ದಯೆಗೆ ಗುರಿಯಾಗುವನು.
36ಯಾವನು ನನಗೆ ತಪ್ಪುಮಾಡುತ್ತಾನೋ ಅವನು ತನ್ನ ಆತ್ಮಕ್ಕೆ ಕೇಡುಮಾಡಿಕೊಳ್ಳುತ್ತಾನೆ; ನನ್ನನ್ನು ಹಗೆಮಾಡುವವರೆಲ್ಲರೂ ಮರಣವನ್ನು ಪ್ರೀತಿಸುತ್ತಾರೆ.”
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath