ಜ್ಞಾನೋಕ್ತಿಗಳು 7
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಕಂದಾ, ನನ್ನ ಮಾತುಗಳನ್ನು ಮನಸ್ಸಿನಲ್ಲಿಟ್ಟುಕೋ, ನನ್ನ ಆಜ್ಞೆಗಳನ್ನು ನಿಧಿಯಂತೆ ಕಾಪಾಡಿಕೋ.
2ನನ್ನ ಉಪದೇಶವನ್ನು ಕಣ್ಣುಗುಡ್ಡೆಯಂತೆ ಪಾಲಿಸು, ನನ್ನ ಆಜ್ಞೆಗಳನ್ನು ಕೈಕೊಂಡು ಬಾಳು.
3ಅವುಗಳನ್ನು ನಿನ್ನ ಬೆರಳುಗಳಿಗೆ ಉಂಗುರವಾಗಿ ಧರಿಸಿಕೋ, ಹೃದಯದ ಹಲಗೆಯಲ್ಲಿ ಅವುಗಳನ್ನು ಬರೆದುಕೋ.
4ಜ್ಞಾನವನ್ನು, “ನೀನು ನನ್ನ ಅಕ್ಕಾ” ಎಂದು ಹೇಳು, ವಿವೇಕವನ್ನು, “ಪ್ರಿಯೇ” ಎಂದು ಕರೆ.
5ಅವು ಜಾರಳಿಂದ ಮತ್ತು ಸವಿಮಾತನಾಡುವ ಪರಸ್ತ್ರೀಯಿಂದ ನಿನ್ನನ್ನು ರಕ್ಷಿಸುವವು.
6ನಾನು ನನ್ನ ಮನೆಯ ಕಿಟಕಿಯ ಜಾಲರಿಯಿಂದ ಇಣಿಕಿ ನೋಡಲು
7ಅಲ್ಪಬುದ್ಧಿಯುಳ್ಳ ಅನೇಕ ಯುವಕರು ಕಾಣಿಸಿದರು. ಅವರಲ್ಲಿ ಜ್ಞಾನಹೀನನಾದ ಒಬ್ಬ ಯೌವನಸ್ಥನನ್ನು ಕಂಡೆನು.
8ಅವನು ಸಂಜೆಯ ಮೊಬ್ಬಿನಲ್ಲಿ, ಮಧ್ಯರಾತ್ರಿಯ ಅಂಧಕಾರದಲ್ಲಿ,
9ಅವಳ ಮನೆಯ ಹತ್ತಿರ ಬೀದಿಯಲ್ಲಿ ಹಾದುಹೋಗುತ್ತಾ, ಅವಳ ಮನೆಯ ಕಡೆಗೆ ತಿರುಗಿದ್ದನ್ನು ಕಂಡೆನು.
10ಇಗೋ ವೇಶ್ಯಾರೂಪವನ್ನು ಧರಿಸಿಕೊಂಡಿದ್ದ ಒಬ್ಬ ಕಪಟ ಸ್ತ್ರೀಯು ಅವನನ್ನು ಎದುರುಗೊಂಡಳು.
11ಇವಳು ಕೂಗಾಟದವಳು, ಹಟಮಾರಿ, ಮನೆಯಲ್ಲಿ ನಿಲ್ಲತಕ್ಕವಳೇ ಅಲ್ಲ;
12ಒಂದು ವೇಳೆ ಬೀದಿಗಳಲ್ಲಿರುವಳು, ಮತ್ತೊಂದು ವೇಳೆ ಚೌಕಗಳಲ್ಲಿರುವಳು, ಅಂತು ಪ್ರತಿಯೊಂದು ಮೂಲೆಯಲ್ಲಿಯೂ ಹೊಂಚು ಹಾಕುವಳು.
13ಅವನನ್ನು ಹಿಡಿದು, ಮುದ್ದಾಡಿ ನಾಚಿಕೆಗೆಟ್ಟವಳಾಗಿ,
14“ಎಲೈ, ಈ ದಿನ ನನ್ನ ಹರಕೆಗಳನ್ನು ಸಲ್ಲಿಸಿದ್ದೇನೆ, ಸಮಾಧಾನ ಯಜ್ಞಶೇಷವು ನನ್ನಲ್ಲಿದೆ,
15ಆದಕಾರಣ ನಿನ್ನನ್ನು ಎದುರುಗೊಳ್ಳಲು ಬಂದೆನು, ನಿನ್ನನ್ನು ಆತುರದಿಂದ ಹುಡುಕಿ ಕಂಡುಕೊಂಡೆನು.
16ನನ್ನ ಮಂಚದಲ್ಲಿ ಸುಪ್ಪತ್ತಿಯನ್ನೂ, ಐಗುಪ್ತದೇಶದ ನೂಲಿನ ವಿಚಿತ್ರ ವಸ್ತ್ರಗಳನ್ನೂ ಹಾಸಿದ್ದೇನೆ.
17ಹಾಸಿಗೆಯ ಮೇಲೆ ರಕ್ತಬೋಳ, ಅಗುರು, ಲವಂಗ, ಚಕ್ಕೆ ಇವುಗಳ ಚೂರ್ಣಗಳಿಂದ ಸುವಾಸನೆಗೊಳಿಸಿದ್ದೇನೆ.
18ಬಾ, ಬೆಳಗಿನ ತನಕ ಬೇಕಾದಷ್ಟು ರಮಿಸುವ, ಕಾಮವಿಲಾಸಗಳಿಂದ ಸಂತೋಷಿಸುವ.
19ಯಜಮಾನನು ಮನೆಯಲ್ಲಿಲ್ಲ, ದೂರ ಪ್ರಯಾಣದಲ್ಲಿದ್ದಾನೆ.
20ಹಣದ ಗಂಟನ್ನು ತೆಗೆದುಕೊಂಡು ಹೋಗಿದ್ದಾನೆ, ಹುಣ್ಣಿಮೆಗೆ ಮನೆಗೆ ಬರುವನು” ಎಂದು ಹೇಳುವಳು.
21ಅವಳು ಅವನನ್ನು ತನ್ನ ಸವಿಮಾತುಗಳಿಂದ ಮನವೊಲಿಸಿ, ಬಹಳವಾಗಿ ಪ್ರೇರೇಪಿಸಿ ಸಮ್ಮತಿಪಡಿಸುತ್ತಾಳೆ.
22ಹೋರಿಯು ವಧ್ಯಸ್ಥಾನಕ್ಕೆ ಹೋಗುವ ಹಾಗೂ, ಬೇಡಿಬಿದ್ದಿರುವ ಮೂರ್ಖನು ದಂಡನೆಗೆ ನಡೆಯುವಂತೆಯೂ,
23ಪಕ್ಷಿಯು ಬಲೆಯ ಕಡೆಗೆ ಓಡುವಂತೆಯೂ, ಅವನು ತನ್ನ ಪ್ರಾಣಾಪಾಯವನ್ನು ತಿಳಿಯದೆ, ಬಾಣವು ತನ್ನ ಕಾಳಿಜವನ್ನು ತಿವಿಯುವ ಮೇರೆಗೂ, ಅವನು ತಟ್ಟನೆ ಅವಳ ಹಿಂದೆ ಹೋಗುತ್ತಾನೆ.
24ಈಗ, ಮಕ್ಕಳೇ, ನನ್ನ ಕಡೆಗೆ ಕಿವಿಗೊಡಿರಿ, ನನ್ನ ಮಾತುಗಳನ್ನು ಆಲಿಸಿರಿ.
25ನಿನ್ನ ಹೃದಯವು ಅವಳ ನಡತೆಯ ಕಡೆಗೆ ತಿರುಗದಿರಲಿ, ತಪ್ಪಿಹೋಗಿಯೂ ಅವಳ ಮಾರ್ಗದಲ್ಲಿ ನಡೆಯಬೇಡ.
26ಅವಳಿಂದ ಗಾಯಪಟ್ಟು ಬಿದ್ದವರು ಬಹು ಜನರು, ಹತರಾದವರೋ ಲೆಕ್ಕವೇ ಇಲ್ಲ.
27ಅವಳ ಮನೆಯು ಪಾತಾಳದ ದಾರಿ, ಅದು ಮೃತ್ಯುವಿನ ಅಂತಃಪುರಕ್ಕೆ ಇಳಿದುಹೋಗುತ್ತದೆ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath