ಜ್ಞಾನೋಕ್ತಿಗಳು 6
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನೊಂದಿಗೆ ಪ್ರಮಾಣ ಮಾಡಿಕೊಂಡಿದ್ದರೆ,
2ನೀನು ಮಾತುಕೊಟ್ಟು ಪಾಶಕ್ಕೆ ಸಿಕ್ಕಿಕೊಂಡಿದ್ದೀ, ನಿನ್ನ ವಾಗ್ದಾನವು ನಿನ್ನನ್ನು ಹಿಡಿದಿದೆ.
3ಹೀಗಿರಲು, ಮಗನೇ, ನೀನು ನೆರೆಯವನ ಕೈಗೆ ಸಿಕ್ಕಿಕೊಂಡದ್ದರಿಂದ ತಪ್ಪಿಸಿಕೊಳ್ಳುವ ಒಂದು ಕೆಲಸ ಮಾಡು, ನಡೆ, ತ್ವರೆಪಡು, ಆ ನೆರೆಯವನನ್ನು ಅಂಗಲಾಚಿ ಬೇಡಿಕೋ,
4ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನ ರೆಪ್ಪೆಗಳನ್ನು ಮುಚ್ಚಬೇಡ;
5ಬೇಟೆಗಾರನ ಕೈಯಿಂದ ಜಿಂಕೆಯು ಓಡುವಂತೆಯೂ, ಪಕ್ಷಿಯು ಹಾರಿ ಹೋಗುವ ಹಾಗೂ ತಪ್ಪಿಸಿಕೋ.
6ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ.
7ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ,
8ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
9ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ?
10“ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ?
11ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
12ನೀಚನೂ, ದುಷ್ಟನೂ ಆಗಿರುವ ಮನುಷ್ಯನ ನಡತೆಯನ್ನು ನೋಡು, ಅವನು ವಕ್ರ ಮಾತಿನವನಾಗಿದ್ದಾನೆ,
13ಕಣ್ಣನ್ನು ಮಿಟಕಿಸುತ್ತಾನೆ, ಕಾಲಿನಿಂದ ಕೆರೆಯುತ್ತಾನೆ, ಬೆರಳ ಸನ್ನೆಮಾಡುತ್ತಾನೆ.
14ಅವನ ಮನಸ್ಸಿನಲ್ಲಿರುವುದು ದ್ರೋಹವೇ; ಯಾವಾಗಲೂ ಕೇಡನ್ನು ಕಲ್ಪಿಸುತ್ತಾನೆ, ಜಗಳದ ಬೀಜವನ್ನು ಬಿತ್ತುತ್ತಾನೆ.
15ಆದಕಾರಣ ಅವನಿಗೆ ತಟ್ಟನೆ ವಿಪತ್ತು ಸಂಭವಿಸುವುದು, ಏಳದ ಹಾಗೆ ಫಕ್ಕನೆ ಮುರಿಯಲ್ಪಡುವನು.
16ಯೆಹೋವನು ಹಗೆಮಾಡುವ ವಿಷಯಗಳು ಆರು ಇವೆ, ಹೌದು, ಏಳು ಸಂಗತಿಗಳು ಆತನಿಗೆ ಅಸಹ್ಯವಾಗಿ ತೋರುತ್ತವೆ.
17ಅವು ಯಾವುವೆಂದರೆ, ಹೆಮ್ಮೆಯ ಕಣ್ಣು, ಸುಳ್ಳಿನ ನಾಲಿಗೆ, ನಿರ್ದೋಷಿಗಳ ರಕ್ತವನ್ನು ಸುರಿಸುವ ಕೈ,
18ದುರಾಲೋಚನೆಗಳನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತ್ವರೆಪಡುವ ಕಾಲು,
19ಅಸತ್ಯವಾಡುವ ಸುಳ್ಳುಸಾಕ್ಷಿ ಮತ್ತು ಒಡಹುಟ್ಟಿದವರಲ್ಲಿ ಜಗಳಗಳನ್ನು ಬಿತ್ತುವವನು ಇವುಗಳೇ.
20ಕಂದಾ, ತಂದೆಯ ಆಜ್ಞೆಯನ್ನು ಕೈಕೊಳ್ಳು, ತಾಯಿಯ ಉಪದೇಶವನ್ನು ಬಿಡಬೇಡ.
21ಅವುಗಳನ್ನು ಸದಾ ನಿನ್ನ ಹೃದಯದಲ್ಲಿ ಇಟ್ಟುಕೋ, ನಿನ್ನ ಕೊರಳಿಗೆ ಅವುಗಳನ್ನು ಧರಿಸಿಕೋ.
22ನೀನು ನಡೆಯುವಾಗ ಆ ಉಪದೇಶವು ನಿನ್ನನ್ನು ಮುನ್ನಡೆಸುವುದು, ಮಲಗಿಕೊಂಡಾಗ ಅದು ನಿನ್ನನ್ನು ಕಾಯುವುದು, ಎಚ್ಚರಗೊಂಡಾಗ ನಿನ್ನೊಂದಿಗೆ ಮಾತನಾಡುವುದು.
23ಆಜ್ಞೆಯೇ ದೀಪ, ಉಪದೇಶವೇ ಬೆಳಕು, ಶಿಕ್ಷಣಪೂರ್ವಕವಾದ ಬೋಧನೆಯೇ ಜೀವದ ಮಾರ್ಗ.
24ಅದು ಕೆಟ್ಟ ಸ್ತ್ರೀಯಿಂದಲೂ, ವೇಶ್ಯೆಯ ಸಿಹಿನುಡಿಯಿಂದಲೂ ನಿನ್ನನ್ನು ರಕ್ಷಿಸತಕ್ಕದ್ದಾಗಿದೆ.
25ನಿನ್ನ ಹೃದಯವು ಅವಳ ಸೌಂದರ್ಯವನ್ನು ಮೋಹಿಸದಿರಲಿ, ಅವಳು ತನ್ನ ಕಣ್ಣುರೆಪ್ಪೆಗಳಿಂದ ನಿನ್ನನ್ನು ವಶಮಾಡಿಕೊಂಡಾಳು, ನೋಡಿಕೋ.
26ವೇಶ್ಯೆಯಿಂದ ಯಾವನಿಗಾದರೂ ಒಂದು ರೊಟ್ಟಿ ಮಾತ್ರ ಗತಿಯಾಗುವುದು, ಪರಸ್ತ್ರೀಯೋ ಅಮೂಲ್ಯವಾದ ಜೀವವನ್ನು ಬೇಟೆಯಾಡುವಳು.
27ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆ ಸುಡುವುದಿಲ್ಲವೋ?
28ಧಗಧಗಿಸುವ ಕೆಂಡದ ಮೇಲೆ ನಡೆದರೆ ಕಾಲು ಬೇಯುವುದಿಲ್ಲವೋ?
29ನೆರೆಯವನ ಹೆಂಡತಿಯ ಹತ್ತಿರ ಹೋಗುವವನಿಗೆ ಹೀಗೆಯೇ ಆಗುವುದು, ಯಾರು ಅವಳನ್ನು ಮುಟ್ಟುವನೋ ಅವನು ದಂಡನೆಯನ್ನು ಹೊಂದದೇ ಇರನು.
30ಕಳ್ಳನು ಹೊಟ್ಟೆಗಿಲ್ಲದೆ ಹಸಿವೆಯನ್ನು ನೀಗಿಸಲು ಕಳವು ಮಾಡಿದರೆ ಜನರು ಅಷ್ಟೇನೂ ಹೀಯಾಳಿಸರು.
31ಅವನ ತಪ್ಪು ಬಯಲಾದರೆ ಅವನು ಏಳರಷ್ಟು ಕೊಡಬೇಕಾಗುವುದು, ಅಥವಾ ತನ್ನ ಮನೆಯ ಆಸ್ತಿಯನ್ನೆಲ್ಲಾ ಕೊಟ್ಟು ತೀರಿಸಲೇಬೇಕು.
32ವ್ಯಭಿಚಾರಿಯೋ ಕೇವಲ ಬುದ್ಧಿಹೀನನು, ಇಂಥಾ ಕಾರ್ಯವನ್ನು ಮಾಡುವವನು ತನ್ನನ್ನೇ ನಾಶಪಡಿಸಿಕೊಳ್ಳುವನು.
33ಅವನಿಗೆ ಗಾಯವೂ, ಅವಮಾನವೂ ಆಗುವವು, ಅವನ ಕೆಟ್ಟ ಹೆಸರು ಎಂದಿಗೂ ಅಳಿಸಲ್ಪಡದು.
34ಏಕೆಂದರೆ ಮತ್ಸರವು ಪತಿಗೆ ಕ್ರೋಧವನ್ನು ಉಂಟುಮಾಡುತ್ತದೆ, ಅವನು ಮುಯ್ಯಿತೀರಿಸತಕ್ಕ ದಿನದಲ್ಲಿ ವ್ಯಭಿಚಾರಿಯನ್ನು ಉಳಿಸನು.
35ಅವನು ಯಾವ ಈಡನ್ನೂ ಮುಟ್ಟನು; ಎಷ್ಟು ಲಂಚಕೊಟ್ಟರೂ ಒಪ್ಪನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath