ಜ್ಞಾನೋಕ್ತಿಗಳು 31
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅರಸನಾದ ಲೆಮೂವೇಲನ ಮಾತುಗಳು, ಅಂದರೆ ಅವನ ತಾಯಿಯು ಅವನಿಗೆ ಉಪದೇಶಿಸಿದ ದೈವೋಕ್ತಿಯು,
2ಏನು, ಕಂದಾ? ನನ್ನ ಗರ್ಭಪುತ್ರನೇ, ಏನು, ನನ್ನ ಹರಕೆಯ ಮಗುವೇ, ನಾನು ಏನು ಹೇಳಲಿ?
3ನಿನ್ನ ತ್ರಾಣವನ್ನು ಸ್ತ್ರೀಯರಿಗೆ ಒಪ್ಪಿಸಬೇಡ, ರಾಜರಿಗೆ ವಿನಾಶಕರವಾದ ದಾರಿಗೆ ತಿರುಗಬೇಡ.
4ದ್ರಾಕ್ಷಾರಸವನ್ನು ಕುಡಿಯುವುದು ರಾಜರಿಗೆ ಯೋಗ್ಯವಲ್ಲ, ಲೆಮೂವೇಲನೇ, ಅದು ರಾಜರಿಗೆ ಯೋಗ್ಯವಲ್ಲ, “ಮದ್ಯವೆಲ್ಲಿ?” ಎನ್ನುವುದು ಪ್ರಭುಗಳಿಗೆ ವಿಹಿತವಲ್ಲ.
5ಕುಡಿದರೆ ಅವರು ಧರ್ಮನಿಯಮಗಳನ್ನು ಮರೆತುಬಿಟ್ಟು, ಬಾಧೆಪಡುವವರೆಲ್ಲರ ನ್ಯಾಯವನ್ನು ವ್ಯತ್ಯಾಸಮಾಡುವರು.
6ಮದ್ಯವನ್ನು ಗತಿಯಿಲ್ಲದವನಿಗೂ, ದ್ರಾಕ್ಷಾರಸವನ್ನು ಮನೋವ್ಯಥೆಪಡುವವನಿಗೂ ಕೊಟ್ಟರೆ ಕೊಡು.
7ಕುಡಿದು ಬಡತನವನ್ನು ಮರೆತುಬಿಡಲಿ, ಶ್ರಮೆಯನ್ನು ಇನ್ನೂ ಜ್ಞಾಪಕಕ್ಕೆ ತಾರದಿರಲಿ.
8ಬಾಯಿಲ್ಲದವರಿಗೂ, ಹಾಳಾಗಿ ಹೋಗುತ್ತಿರುವವರೆಲ್ಲರಿಗೂ, ನ್ಯಾಯವಾಗುವಂತೆ ಬಾಯಿ ತೆರೆ.
9ಬಾಯನ್ನು ತೆರೆದು ನ್ಯಾಯವನ್ನು ತೀರಿಸು, ದೀನದರಿದ್ರರ ವ್ಯಾಜ್ಯ ಮಾಡು.
10ಗುಣವತಿಯಾದ ಸತಿಯು ಎಲ್ಲಿ ಸಿಕ್ಕುವಳು? ಆಕೆಯು ಹವಳಕ್ಕಿಂತಲೂ ಬಹೂ ಅಮೂಲ್ಯಳು.
11ಪತಿಯ ಹೃದಯವು ಆಕೆಯಲ್ಲಿ ಭರವಸವಿಡುವುದು, ಅವನು ಕೊಳ್ಳೆ ಕೊಳ್ಳೆಯಾಗಿ ಸಂಪಾದಿಸುವನು.
12ಆಕೆಯು ಜೀವಮಾನದಲ್ಲೆಲ್ಲಾ ಅವನಿಗೆ ಅಹಿತವನ್ನು ಮಾಡದೆ, ಹಿತವನ್ನೇ ಮಾಡುತ್ತಿರುವಳು.
13ಉಣ್ಣೆಯನ್ನೂ, ಸೆಣಬನ್ನೂ ಹುಡುಕಿ ತಂದು, ಕೈಕೆಲಸವನ್ನು ಆಸಕ್ತಿಯಿಂದ ಮಾಡುವಳು.
14ವ್ಯಾಪಾರದ ಹಡಗುಗಳಂತೆ, ದೂರದಿಂದ ಬೇಕಾದ ಆಹಾರವನ್ನು ತರುವಳು.
15ಇನ್ನೂ ಕತ್ತಲಿರುವಾಗಲೇ ಎದ್ದು, ಮನೆಯವರಿಗೆ ಆಹಾರವನ್ನು, ನೀಡುವಳು ದಾಸಿಯರಿಗೆ ದಿನದ ಕೆಲಸಗಳನ್ನು ಹಂಚುವಳು.
16ಹೊಲವನ್ನು ನೋಡಿ ಯೋಚಿಸಿ ಕೊಂಡುಕೊಳ್ಳುವಳು, ತನ್ನ ಕೈಗೆಲಸದ ಲಾಭದಿಂದ ದ್ರಾಕ್ಷಿತೋಟವನ್ನು ಮಾಡಿಸುವಳು.
17ನಡುವಿನ ಬಲವೆಂಬ ಪಟ್ಟಿಯನ್ನು ಕಟ್ಟಿಕೊಂಡು, ತೋಳುಗಳನ್ನು ಶಕ್ತಿಗೊಳಿಸುವಳು.
18ವಿವೇಚಿಸಿ ಬಹುಲಾಭವಾಯಿತೆಂದು ತಿಳುಕೊಳ್ಳುವಳು, ಆಕೆಯ ದೀಪವು ರಾತ್ರಿಯಲ್ಲೆಲ್ಲಾ ಆರದು.
19ರಾಟೆಯ ಮೇಲೆ ಕೈ ಹಾಕಿ, ಕದರನ್ನು ಹಿಡಿಯುವಳು.
20ಬಡವರಿಗಾಗಿ ಕೈ ಬಿಚ್ಚಿ, ದಿಕ್ಕಿಲ್ಲದವರಿಗೆ ಕೈ ನೀಡುವಳು.
21ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.
22ತನಗಾಗಿ ರತ್ನಗಂಬಳಿಗಳನ್ನು ಮಾಡುವಳು, ಆಕೆಯ ಉಡುಪು ನಾರುಮಡಿ, ರಕ್ತಾಂಬರ.
23ಆಕೆಯ ಪತಿಯು ನ್ಯಾಯಸ್ಥಾನದಲ್ಲಿ, ದೇಶದ ಹಿರಿಯರ ಮಧ್ಯದಲ್ಲಿ ಕುಳಿತಿರುವಾಗ ಪ್ರಸಿದ್ಧನಾಗಿ ಕಾಣುವನು.
24ಹಚ್ಚಡಗಳನ್ನು ನೆಯ್ದು ಮಾರಾಟಮಾಡುವಳು, ನಡುಕಟ್ಟುಗಳನ್ನು ವರ್ತಕನಿಗೆ ಒದಗಿಸುವಳು.
25ಬಲವನ್ನು, ತೇಜಸ್ಸನ್ನು ಹೊದ್ದುಕೊಂಡಿರುವಳು, ಭವಿಷ್ಯತ್ತಿನ ಭಯವಿಲ್ಲದೆ ನಗುತ್ತಿರುವಳು.
26ಬಾಯಿದೆರೆದು ಜ್ಞಾನವನ್ನು ತೋರ್ಪಡಿಸುವಳು. ಆಕೆಯ ನಾಲಿಗೆಯು ಬುದ್ಧಿಯನ್ನು ಪ್ರೀತಿಪೂರ್ವಕವಾಗಿ ಹೇಳುವುದು.
27ಸೋಮಾರಿತನದ ಅನ್ನವನ್ನು ತಿನ್ನದೆ, ಗೃಹಕೃತ್ಯಗಳನ್ನೆಲ್ಲಾ ನೋಡಿಕೊಳ್ಳುವಳು.
28ಮಕ್ಕಳು ಎದ್ದುನಿಂತು ಆಕೆಯನ್ನು “ಧನ್ಯಳು” ಎಂದು ಹೇಳುವರು.
29ಪತಿಯು ಸಹ, “ಬಹುಮಂದಿ ಸ್ತ್ರೀಯರು ಗುಣವತಿಯರಾಗಿ ನಡೆದಿದ್ದಾರೆ, ಅವರೆಲ್ಲರಿಗಿಂತಲೂ ನೀನೇ ಶ್ರೇಷ್ಠಳು” ಎಂದು ಆಕೆಯನ್ನು ಕೊಂಡಾಡುವನು.
30ಸೌಂದರ್ಯವು ನೆಚ್ಚತಕ್ಕದ್ದಲ್ಲ, ಲಾವಣ್ಯವು ನೆಲೆಯಲ್ಲ, ಯೆಹೋವನಲ್ಲಿ ಭಯಭಕ್ತಿಯುಳ್ಳವಳೇ ಸ್ತೋತ್ರಪಾತ್ರಳು.
31ಆಕೆಯ ಕೈಕೆಲಸಕ್ಕೆ ಪ್ರತಿಫಲವನ್ನು ಸಲ್ಲಿಸಿರಿ, ಆಕೆಯ ಕಾರ್ಯಗಳೇ ಪುರದ್ವಾರಗಳಲ್ಲಿ ಆಕೆಯನ್ನು ಪ್ರಶಂಸಿಸಲಿ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath