ಜ್ಞಾನೋಕ್ತಿಗಳು 1
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಇಸ್ರಾಯೇಲರ ಅರಸನಾಗಿದ್ದ ದಾವೀದನ ಮಗನಾದ ಸೊಲೊಮೋನನ ಜ್ಞಾನೋಕ್ತಿಗಳು.
2ಇವುಗಳಿಂದ ಜನರು ಜ್ಞಾನವನ್ನು ಮತ್ತು ಶಿಕ್ಷಣವನ್ನು ಪಡೆದು, ಬುದ್ಧಿವಾದಗಳನ್ನು ಗ್ರಹಿಸಿಕೊಳ್ಳುವರು.
3ಅವರು ವಿವೇಕಮಾರ್ಗದಲ್ಲಿ ಅಂದರೆ ನೀತಿ, ನ್ಯಾಯ ಮತ್ತು ಧರ್ಮಮಾರ್ಗಗಳಲ್ಲಿ ಶಿಕ್ಷಿತರಾಗುವರು.
4ಈ ನುಡಿಗಳು ಮೂಢರಿಗೆ ಜಾಣತನವನ್ನೂ, ಯೌವನಸ್ಥರಿಗೆ ತಿಳಿವಳಿಕೆಯನ್ನು ಮತ್ತು ಬುದ್ಧಿಯನ್ನು ಉಂಟುಮಾಡುವವು.
5ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಡಿಂತ್ಯವನ್ನು ಹೊಂದುವನು, ವಿವೇಕಿಯು ಮತ್ತಷ್ಟು ಉಚಿತಾಲೋಚನೆಯನ್ನು ಹೊಂದುವನು.
6ಇವು ಗಾದೆ, ಸಾಮ್ಯ, ಜ್ಞಾನಿಗಳ ನುಡಿ ಮತ್ತು ಒಗಟುಗಳನ್ನು ತಿಳಿಯಲು ಸಾಧನವಾಗಿವೆ.
7ಯೆಹೋವನ ಭಯವೇ ತಿಳಿವಳಿಕೆಗೆ ಮೂಲವು, ಮೂರ್ಖರಾದರೋ ಜ್ಞಾನವನ್ನು ಮತ್ತು ಶಿಕ್ಷಣವನ್ನು ತಿರಸ್ಕರಿಸುವರು.
8ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ.
9ಅವು ನಿನ್ನ ತಲೆಗೆ ಸುಂದರವಾದ ಪುಷ್ಪಕಿರೀಟ, ಕೊರಳಿಗೆ ಹಾರದಂತಿರುವುದು.
10ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.
11ಅವರು, “ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚುಹಾಕೋಣ, ನಿರಪರಾಧಿಯನ್ನು ಕಾರಣವಿಲ್ಲದೆಯೇ ಹಿಡಿಯುವುದಕ್ಕೆ ಕಾದಿರೋಣ.
12ಪಾತಾಳವು ತನ್ನೊಳಗೆ ಇಳಿಯುವವರನ್ನು ಸಂಪೂರ್ಣವಾಗಿ ನುಂಗುವಂತೆ, ನಾವೂ ಇವರನ್ನು ಜೀವದೊಡನೆ ನುಂಗಿಬಿಡೋಣ.
13ಸಕಲವಿಧವಾದ ಅಮೂಲ್ಯ ಸಂಪತ್ತನ್ನು ಕಂಡುಹಿಡಿದು, ಕೊಳ್ಳೆಮಾಡಿ ನಮ್ಮ ಮನೆಗಳಲ್ಲಿ ತುಂಬಿಕೊಳ್ಳೋಣ.
14ನಮ್ಮ ಸಂಗಡ ಚೀಟು ಹಾಕು; ನಮ್ಮೆಲ್ಲರ ಹಣದ ಚೀಲ ಒಂದೇ ಆಗಿರಲಿ” ಎಂದು ಹೇಳಿದರೆ,
15ಮಗನೇ, ಅವರೊಡನೆ ದಾರಿಯಲ್ಲಿ ನಡೆಯಬಾರದು, ಅವರ ಮಾರ್ಗದಲ್ಲಿ ನೀನು ಹೆಜ್ಜೆಯಿಡಬೇಡ.
16ಅವರ ಕಾಲುಗಳು ಕೇಡನ್ನು ಹಿಂಬಾಲಿಸಿ ಓಡುವವು, ಅವರು ರಕ್ತವನ್ನು ಸುರಿಸಲು ಆತುರಪಡುವರು.
17ಪಕ್ಷಿಗಳ ಕಣ್ಣೆದುರಿಗೆ ಬಲೆಯನ್ನೊಡ್ಡುವುದು ವ್ಯರ್ಥ.
18ಇವರಾದರೋ ಸ್ವರಕ್ತವನ್ನು ಸುರಿಸಿಕೊಳ್ಳುವುದಕ್ಕೆ ಹೊಂಚುಹಾಕುತ್ತಾರೆ, ಸ್ವಜೀವವನ್ನು ತೆಗೆದುಕೊಳ್ಳುವುದಕ್ಕೆ ಕಾದಿರುತ್ತಾರೆ.
19ಸೂರೆಮಾಡುವವರೆಲ್ಲರ ದಾರಿಯು ಹೀಗೆಯೇ ಸರಿ; ಕೊಳ್ಳೆಯು ಕೊಳ್ಳೆಗಾರರ ಜೀವವನ್ನೇ ಕೊಳ್ಳೆಮಾಡುವುದು.
20ಜ್ಞಾನವೆಂಬಾಕೆಯು ಬೀದಿಗಳಲ್ಲಿ ಕೂಗುತ್ತಾಳೆ, ಚೌಕಗಳಲ್ಲಿ ಧ್ವನಿಮಾಡುತ್ತಾಳೆ.
21ಪೇಟೆಯ ಮುಖ್ಯಸ್ಥಾನದಲ್ಲಿ ಆಕೆ ಕೂಗುತ್ತಾಳೆ, ಊರ ಬಾಗಿಲಿನಲ್ಲಿ ಆಕೆಯು ನುಡಿಯುವುದೇನೆಂದರೆ,
22“ಮೂಢರೇ, ಮೂಢತನವನ್ನು ಎಂದಿನ ತನಕ ಪ್ರೀತಿಸುವಿರಿ? ಧರ್ಮನಿಂದಕರು ನಿಂದಿಸುವುದಕ್ಕೆ ಎಷ್ಟುಕಾಲ ಇಷ್ಟಪಡುವರು? ಜ್ಞಾನಹೀನರು ತಿಳಿವಳಿಕೆಯನ್ನು ಎಷ್ಟರವರೆಗೆ ಹಗೆಮಾಡುವರು?
23ನನ್ನ ಗದರಿಕೆಗೆ ಲಕ್ಷ್ಯಕೊಡಿರಿ; ಇಗೋ, ನಿಮ್ಮ ಮೇಲೆ ನನ್ನ ಆತ್ಮವನ್ನು ಸುರಿಸಿ, ನನ್ನ ಮಾತುಗಳನ್ನು ನಿಮಗೆ ತಿಳಿಯಪಡಿಸುವೆನು.
24ನಾನು ಕರೆದಾಗ ನೀವು ತಿರಸ್ಕರಿಸಿದಿರಿ. ಕೈ ಚಾಚಿದರೂ ಯಾರೂ ನನ್ನನ್ನು ಗಮನಿಸಲಿಲ್ಲ;
25ನನ್ನ ಬುದ್ಧಿವಾದವನ್ನು ಲಕ್ಷ್ಯಕ್ಕೆ ತಾರದೆ, ನನ್ನ ತಿದ್ದುಪಾಟನ್ನು ಬೇಡವೆಂದು ತಳ್ಳಿಬಿಟ್ಟಿದ್ದೀರಿ.
26ಆದಕಾರಣ ಬಿರುಗಾಳಿಯಂತೆ ಅಪಾಯವೂ, ತುಫಾನಿನಂತೆ ಆಪತ್ತೂ ಬಂದು, ನಿಮಗೆ ಶ್ರಮಸಂಕಟಗಳು ಸಂಭವಿಸುವಾಗ
27ನಿಮ್ಮ ಅಪಾಯದಲ್ಲಿ ನಾನೂ ನಗುವೆನು; ನಿಮ್ಮ ಆಪತ್ತಿನಲ್ಲಿ ಪರಿಹಾಸ್ಯ ಮಾಡುವೆನು.
28ಆಗ ಅವರು ನನಗೆ ಮೊರೆಯಿಟ್ಟರೂ ನಾನು ಉತ್ತರಕೊಡೆನು, ನನ್ನನ್ನು ಆತುರದಿಂದ ಹುಡುಕಿದರೂ ನಾನು ಕಾಣಿಸೆನು.
29ಯಾಕೆಂದರೆ ಅವರು ಯೆಹೋವನ ಭಯಭಕ್ತಿಗೆ ಮನಸ್ಸು ಕೊಡದೆ ತಿಳಿವಳಿಕೆಯನ್ನು ಹಗೆಮಾಡಿದರು.
30ನನ್ನ ಬೋಧನೆಯನ್ನು ಕೇಳಲೊಲ್ಲದೆ, ನನ್ನ ಗದರಿಕೆಯನ್ನೆಲ್ಲಾ ತಾತ್ಸಾರಮಾಡಿದರು.
31ಆದುದರಿಂದ ಅವರು ತಮ್ಮ ನಡತೆಯ ಫಲವನ್ನು ಅನುಭವಿಸಿ, ಸ್ವಂತ ಕುಯುಕ್ತಿಗಳನ್ನೇ ಹೊಟ್ಟೆತುಂಬಾ ಉಣ್ಣಬೇಕಾಗುವುದು.
32ಮೂಢರು ತಮ್ಮ ಉದಾಸೀನತೆಯಿಂದಲೇ ಹತರಾಗುವರು, ಜ್ಞಾನಹೀನರು ತಮ್ಮ ನಿಶ್ಚಿಂತೆಯಿಂದಲೇ ನಾಶವಾಗುವರು.
33ನನ್ನ ಮಾತಿಗೆ ಕಿವಿಗೊಡುವವನಾದರೋ ಸುರಕ್ಷಿತನಾಗಿದ್ದು, ಯಾವ ಕೇಡಿಗೂ ಭಯಪಡದೆ ನೆಮ್ಮದಿಯಾಗಿ ಬಾಳುವನು” ಎಂಬುದೇ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath