ಜ್ಞಾನೋಕ್ತಿಗಳು 17
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ವ್ಯಾಜ್ಯದ ಮನೆಯಲ್ಲಿ ತುಂಬಿದ ಔತಣಕ್ಕಿಂತಲೂ, ಸಮಾಧಾನದ ಒಣತುತ್ತೇ ಮೇಲು.
2ಜಾಣನಾದ ಆಳು ಮಾನಕಳೆದ ಮನೆಮಗನ ಮೇಲೆ ಅಧಿಕಾರಮಾಡುವನು, ಮನೆಮಕ್ಕಳೊಂದಿಗೆ ಬಾಧ್ಯತೆಯನ್ನು ಹೊಂದುವನು.
3ಬೆಳ್ಳಿಬಂಗಾರಗಳನ್ನು ಪುಟಕುಲಿಮೆಗಳು ಶೋಧಿಸುವವು, ಹೃದಯಗಳನ್ನು ಶೋಧಿಸುವವನು ಯೆಹೋವನೇ.
4ಕೆಡುಕನು ಕೆಟ್ಟ ತುಟಿಗಳನ್ನು ಗಮನಿಸುವನು, ಸುಳ್ಳುಗಾರನು ನಾಶನದ ನಾಲಿಗೆಗೆ ಕಿವಿಗೊಡುವನು.
5ಬಡವರನ್ನು ಹಾಸ್ಯಮಾಡುವವನು ಸೃಷ್ಟಿಕರ್ತನನ್ನೇ ಹೀನೈಸುವನು, ಪರರ ವಿಪತ್ತಿಗೆ ಹಿಗ್ಗುವವನು ದಂಡನೆಯನ್ನು ಹೊಂದದಿರನು.
6ಮಕ್ಕಳ ಸಂತತಿಯವರು ವೃದ್ಧರಿಗೆ ಕಿರೀಟ, ತಂದೆತಾಯಿಗಳು ಮಕ್ಕಳಿಗೆ ಭೂಷಣ.
7ಉತ್ತಮವಾದ ಮಾತು ಮೂರ್ಖನಿಗೆ ಅಯುಕ್ತ, ಸುಳ್ಳುಮಾತು ಉತ್ತಮನಿಗೆ ಮತ್ತೂ ಅಯುಕ್ತ.
8ಕೊಡುವವನ ದೃಷ್ಟಿಗೆ ಲಂಚವು ಚಿಂತಾಮಣಿಯಾಗಿದೆ, ಎಲ್ಲಿ ಹೋದರೂ ಅವನಿಗೆ ಅನುಕೂಲವೇ.
9ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು, ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.
10ಮಂದಮತಿಗೆ ನೂರು ಪೆಟ್ಟು ಹೊಡೆಯುವುದಕ್ಕಿಂತಲೂ, ಗದರಿಕೆಯೇ ವಿವೇಕಿಗೆ ಹೆಚ್ಚಾದ ಶಿಕ್ಷೆ.
11ದುರಾತ್ಮನಿಗೆ ದಂಗೆಯ ಮೇಲೆಯೇ ಮನಸ್ಸು, ಕ್ರೂರದೂತನು ಅವನನ್ನು ಆಕ್ರಮಿಸುವನು.
12ಮೂರ್ಖತನದಲ್ಲಿ ಮುಳುಗಿರುವ ಮೂಢನನ್ನು ಎದುರಾಗುವುದಕ್ಕಿಂತಲೂ, ಮರಿಗಳನ್ನು ಕಳೆದುಕೊಂಡ ಕರಡಿಯನ್ನು ಎದುರಾಗುವುದು ಲೇಸು.
13ಉಪಕಾರಕ್ಕೆ ಅಪಕಾರಮಾಡುವವನ ಮನೆಗೆ ಕೇಡು ತಪ್ಪದು.
14ವ್ಯಾಜ್ಯದ ಆರಂಭವು ಏರಿಗೆ ಬಿಲಬಿದ್ದಂತೆ, ಸಿಟ್ಟೇರುವುದಕ್ಕೆ ಮುಂಚೆ ಜಗಳವನ್ನು ಬಿಟ್ಟುಬಿಡು.
15ದುಷ್ಟನನ್ನು ಶಿಷ್ಟನೆಂದು, ಶಿಷ್ಟನನ್ನು ದುಷ್ಟನೆಂದು ನಿರ್ಣಯಿಸುವವರಿಬ್ಬರೂ ಯೆಹೋವನಿಗೆ ಅಸಹ್ಯರು.
16ಜ್ಞಾನವನ್ನು ಕೊಳ್ಳಲು ಮೂಢನ ಕೈಯಲ್ಲಿ ಹಣವೇಕೆ? ಅವನಿಗೆ ಬುದ್ಧಿಯೇ ಇಲ್ಲವಲ್ಲಾ.
17ಮಿತ್ರನ ಪ್ರೀತಿಯು ನಿರಂತರ, ಸಹೋದರನ ಜನ್ಮವು ಆಪತ್ತಿನಲ್ಲಿ ಸಾರ್ಥಕ.
18ನೆರೆಯವನಿಗಾಗಿ ಪ್ರಮಾಣಮಾಡಿ ಹೊಣೆಯಾದವನು ಬುದ್ಧಿಹೀನನೇ ಸರಿ.
19ಪಾಪಪ್ರಿಯನು ಕಲಹಪ್ರಿಯ, ಸೊಕ್ಕಿನಿಂದ ಮಾತನಾಡುವವನು ಕೇಡು ಬರಮಾಡಿಕೊಳ್ಳುವನು.
20ವಕ್ರ ಹೃದಯನು ಶುಭವನ್ನು ಪಡೆಯನು, ಕೆಟ್ಟ ನಾಲಿಗೆಯವನು ವಿಪತ್ತಿಗೆ ಸಿಕ್ಕಿಬೀಳುವನು.
21ಮೂರ್ಖನನ್ನು ಹೆತ್ತವರಿಗೆ ವ್ಯಥೆ, ಮೂರ್ಖನ ತಂದೆಗೆ ವ್ಯಸನ.
22ಹರ್ಷಹೃದಯವು ಒಳ್ಳೆಯ ಔಷಧ, ಕುಗ್ಗಿದ ಮನದಿಂದ ಅನಾರೋಗ್ಯ.
23ದುಷ್ಟನು ಲಂಚವನ್ನು ಗುಪ್ತವಾಗಿ ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುವನು.
24ವಿವೇಕಿಗೆ ಜ್ಞಾನವೇ ಗುರಿಯಾಗಿರುವುದು, ಮೂಢನ ದೃಷ್ಟಿಯು ದಿಗಂತಗಳಲ್ಲಿಯೂ ಅಲೆಯುವುದು.
25ಜ್ಞಾನಹೀನನಾದ ಮಗನು ತಂದೆಗೆ ಕಿರಿಕಿರಿ, ತಾಯಿಗೆ ಕರಕರೆ.
26ಶಿಷ್ಟನಿಗೆ ದಂಡನೆ ಯುಕ್ತವಲ್ಲ, ಧರ್ಮಿಷ್ಠನಿಗೆ ಪೆಟ್ಟು ಅಧರ್ಮ.
27ಮಿತವಾಗಿ ಮಾತನಾಡುವವನು ಜ್ಞಾನಿ, ಶಾಂತಾತ್ಮನು ವಿವೇಕಿ.
28ಮೂಢನು ಕೂಡ ಸುಮ್ಮನಿದ್ದರೆ ಜ್ಞಾನಿಯೆಂತಲೂ, ತುಟಿಗಳನ್ನು ಬಿಗಿಹಿಡಿದರೆ ವಿವೇಕಿಯೆಂತಲೂ ಅನ್ನಿಸಿಕೊಳ್ಳುವನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath