ಕ್ರಿಶ್ಚಿಯನ್ ಧರ್ಮ
ಹಿಂದೆ

ಫಿಲೆಮೋನನಿಗೆ 1

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೂ, ಸಹೋದರನಾದ ತಿಮೊಥೆಯನೂ, ನಮಗೆ ಪ್ರಿಯನೂ ಜೊತೆ ಸೇವಕನೂ ಆಗಿರುವ ಫಿಲೆಮೋನನೆಂಬ ನಿನಗೂ,

2ಮತ್ತು ಸಹೋದರಿಯಾದ ಅಪ್ಫಿಯಳಿಗೂ, ನಮ್ಮ ಸಹ ಹೋರಾಟಗಾರನಾದ ಅರ್ಖಿಪ್ಪನಿಗೂ ನಿನ್ನ ಮನೆಯಲ್ಲಿ ಸೇರಿಬರುವ ಸಭೆಯವರಿಗೂ ಬರೆಯುವುದೇನಂದರೆ:

3ನಮ್ಮ ತಂದೆಯಾದ ದೇವರಿಂದಲೂ, ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯೂ, ಶಾಂತಿಯೂ ಆಗಲಿ.

4ಕರ್ತನಾದ ಯೇಸುವಿನ ಮೇಲೆ ನೀನು ಇಟ್ಟಿರುವ ನಂಬಿಕೆ, ಪ್ರೀತಿ ಹಾಗೂ ದೇವಜನರ ಮೇಲಿರುವ ನಿನ್ನ ಪ್ರೀತಿಯನ್ನು ಕುರಿತು ಕೇಳಿದ್ದರಿಂದ,

5ನನ್ನ ಪ್ರಾರ್ಥನೆಗಳಲ್ಲಿ ಯಾವಾಗಲೂ ನಿನ್ನನ್ನು ನೆನಪು ಮಾಡಿಕೊಂಡು ನಾನು ದೇವರಿಗೆ ಸ್ತೋತ್ರವನ್ನು ಸಲ್ಲಿಸುತ್ತೇನೆ, ನಿನಗಾಗಿ ವಿಜ್ಞಾಪನೆ ಮಾಡುತ್ತೇನೆ.

6ಕ್ರಿಸ್ತನಲ್ಲಿ ನಮಗೆ ದೊರಕಿರುವ ಎಲ್ಲಾ ಸುವರಗಳನ್ನು ಕುರಿತು ನೀನು ತಿಳಿವಳಿಕೆಯನ್ನು ಹೊಂದುತ್ತಿರುವೆ. ಕ್ರಿಸ್ತ ನಂಬಿಕೆಯಲ್ಲಿರುವ ನಿನ್ನ ಅನ್ಯೋನ್ಯತೆಯೂ ಕ್ರಿಸ್ತನಿಗೆ ಅತಿಯಾದ ಮಹಿಮೆಯನ್ನು ಉಂಟುಮಾಡಬೇಕೆಂದು ಪ್ರಾರ್ಥಿಸುತ್ತೇನೆ.

7ಸಹೋದರನೇ, ನಿನ್ನ ಮೂಲಕ ದೇವಜನರ ಹೃದಯಗಳಿಗೆ ಪ್ರೋತ್ಸಾಹವೂ, ಪ್ರೇರಣೆಯೂ ಉಂಟಾದುದರಿಂದ ಅವರ ಬಗ್ಗೆ ಇರುವ ಪ್ರೀತಿಯಿಂದ ನನಗೆ ಬಹಳ ಆನಂದವೂ, ಸಮಾಧಾನವೂ ಉಂಟಾಯಿತು.

8ವೃದ್ಧನೂ, ಈಗ ಕ್ರಿಸ್ತಯೇಸುವಿನ ನಿಮಿತ್ತ ಸೆರೆಯಾಳಾಗಿರುವ ಈ ಪೌಲನೆಂಬ ನಾನು ಪ್ರೀತಿಯ ನಿಮಿತ್ತ ನಿನ್ನನ್ನು ಬೇಡಿಕೊಳ್ಳುತ್ತಿದ್ದೇನೆ.

9ನೀನು ಯುಕ್ತವಾದದ್ದನ್ನು ಮಾಡಬೇಕೆಂದು ಆಜ್ಞಾಪಿಸುವುದಕ್ಕೆ ನನಗೆ ಕ್ರಿಸ್ತನಲ್ಲಿ ಪೂರ್ಣ ಅಧಿಕಾರವಿದ್ದರೂ ಹಾಗೆ ಆಜ್ಞಾಪಿಸದೇ

10ನಾನು ಸೆರೆಯಲ್ಲಿ ಬಂಧಿಯಾಗಿರುವಾಗ ನನ್ನ ಮಗನಂತೆ ಬಂದ ಓನೇಸಿಮನ ವಿಷಯದಲ್ಲಿ ನಿನ್ನನ್ನು ಬೇಡಿಕೊಳ್ಳುತ್ತೇನೆ.

11ಅವನು ಮೊದಲು ನಿನಗೆ ಅಪ್ರಯೋಜಕನಾಗಿದ್ದನು. ಈಗ ನಿನಗೂ ನನಗೂ ಪ್ರಯೋಜಕನಾಗಿದ್ದಾನೆ.

12ನನಗೆ ಪ್ರಾಣ ಪ್ರಿಯನಂತಿರುವ ಅವನನ್ನು ನಿನ್ನ ಬಳಿಗೆ ಕಳುಹಿಸಿ ಕೊಡುತ್ತಿದ್ದೇನೆ.

13ನಾನು ಸುವಾರ್ತೆಯ ನಿಮಿತ್ತ ಸೆರೆಮನೆಯಲ್ಲಿರುವಾಗ ನನಗೆ ಉಪಚಾರಮಾಡುವಂತೆ ನಿನಗೆ ಬದಲಾಗಿ ಅವನನ್ನು ನನ್ನ ಬಳಿಯಲ್ಲೇ ಉಳಿಸಿಕೊಳ್ಳಬೇಕೆಂದು ಆಲೋಚಿಸಿದ್ದೆನು.

14ಆದರೆ ನಿನ್ನ ಉಪಕಾರವು ಮನಃಪೂರ್ವಕವಾಗಿಯೇ ಇರಬೇಕೆಂದು ಯೋಚಿಸಿ ನಿನ್ನ ಸಮ್ಮತಿಯಿಲ್ಲದೆ ಏನು ಮಾಡುವುದಕ್ಕೂ ನನಗೆ ಇಷ್ಟವಿಲ್ಲ.

15ಅವನು ಸ್ವಲ್ಪಕಾಲ ನಿನ್ನಿಂದ ದೂರವಾಗಿಹೋದದ್ದು ಬಹುಶಃ ನೀನು ಅವನನ್ನು ನಿರಂತರವಾಗಿ ಸೇರಿಸಿಕೊಳ್ಳುವುದಕ್ಕಾಗಿಯೇ ಇರಬಹುದು;

16ಇನ್ನು ಮೇಲೆ ಅವನು ದಾಸನಂತಾಗಿರದೆ ದಾಸನಿಗಿಂತ ಮಿಗಿಲಾಗಿ ಉತ್ತಮವಾದ ಪ್ರಿಯ ಸಹೋದರನಂತಾಗಬೇಕು. ಅವನು ನನಗೆ ಬಹಳ ಪ್ರಿಯನಾಗಿರುವಲ್ಲಿ ನಿನಗೆ ಲೋಕದ ಪ್ರಕಾರವಾಗಿಯೂ, ಕರ್ತನ ಸಂಬಂಧದಲ್ಲಿಯೂ ಇನ್ನೂ ಹೆಚ್ಚು ಪ್ರಿಯನಾಗಿರುವನಲ್ಲವೇ?

17ನೀನು ನನ್ನನ್ನು ಜೊತೆಗಾರನೆಂದು ಭಾವಿಸುವುದಾದರೆ ನನ್ನನ್ನು ಸೇರಿಸಿಕೊಳ್ಳುವ ಪ್ರಕಾರವೇ ಅವನನ್ನು ಸೇರಿಸಿಕೋ.

18ಆದರೆ ಅವನಿಂದ ನಿನಗೆ ಏನಾದರೂ ನಷ್ಟವಾಗಿದ್ದರೆ ಅಥವಾ ಅವನು ನಿನಗೆ ಸಾಲವೇನಾದರೂ ತೀರಿಸಬೇಕಾಗಿದ್ದರೆ ಅದನ್ನು ನನ್ನ ಲೆಕ್ಕಕ್ಕೆ ಹಾಕು.

19ನಾನೇ ಕೊಟ್ಟು ತೀರಿಸುತ್ತೇನೆಂದು ಪೌಲನೆಂಬ ನಾನು ಸ್ವಂತ ಕೈಯಿಂದ ಬರೆದಿದ್ದೇನೆ. ನಿನ್ನ ಆತ್ಮದ ವಿಷಯದಲ್ಲಿ ನೀನೇ ನನಗೆ ಹೊಣೆಗಾರನಾಗಿದ್ದೀ ಎಂದು ನಾನು ಬೇರೆ ಹೇಳಬೇಕೇ?

20ಹೌದು, ಸಹೋದರನೇ, ಕರ್ತನಲ್ಲಿ ನಿನ್ನಿಂದ ನನಗೆ ಪ್ರಯೋಜನವಾಗುವಂತೆ ಮಾಡು. ಕ್ರಿಸ್ತನಲ್ಲಿ ನನ್ನ ಹೃದಯವನ್ನು ಉಲ್ಲಾಸಗೊಳಿಸು.

21ನಿನ್ನ ವಿಧೇಯತೆಯಲ್ಲಿ ಭರವಸೆವುಳ್ಳವನಾಗಿ ಈ ಪತ್ರಿಕೆಯನ್ನು ನಿನಗೆ ಬರೆದಿದ್ದೇನೆ. ನಾನು ಹೇಳುವುದಕ್ಕಿಂತಲೂ ಹೆಚ್ಚಾಗಿಯೇ ನೀನು ಮಾಡುತ್ತಿ ಎಂದು ನನಗೆ ಗೊತ್ತಿದೆ.

22ಇದಲ್ಲದೆ ದೇವರು ನಿಮ್ಮ ಪ್ರಾರ್ಥನೆಗಳನ್ನು ಕೇಳಿ ನಾನು ನಿಮ್ಮ ಬಳಿಗೆ ಬರುವುದಕ್ಕೆ ಕೃಪೆ ಮಾಡುವನೆಂಬ ನಿರೀಕ್ಷೆ ನನಗುಂಟು. ಆದಕಾರಣ ನಾನು ಉಳಿದುಕೊಳ್ಳಲು ಒಂದು ಕೊಠಡಿಯನ್ನು ಸಿದ್ಧಪಡಿಸು.

23ಕ್ರಿಸ್ತಯೇಸುವಿನ ನಿಮಿತ್ತವಾಗಿ ನನ್ನ ಜೊತೆ ಸೆರೆಯವನಾದ ಎಪಫ್ರನೂ ನಿನಗೆ ವಂದನೆ ತಿಳಿಸುತ್ತಾನೆ.

24ನನ್ನ ಜೊತೆಗೆಲಸದವರಾದ ಮಾರ್ಕ, ಅರಿಸ್ತಾರ್ಕ, ದೇಮ, ಲೂಕ ಇವರೆಲ್ಲರೂ ನಿನಗೆ ವಂದನೆ ತಿಳಿಸಿದ್ದಾರೆ.

25ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ. ಆಮೆನ್.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath