ಕ್ರಿಶ್ಚಿಯನ್ ಧರ್ಮ
ಹಿಂದೆ

ಅರಣ್ಯಕಾಂಡ 20

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಮೊದಲನೆಯ ತಿಂಗಳಿನಲ್ಲಿ ಇಸ್ರಾಯೇಲರ ಸರ್ವಸಮೂಹದವರು “ಚಿನ್” ಎಂಬ ಮರುಭೂಮಿಗೆ ಬಂದು, ಕಾದೇಶಿನಲ್ಲಿ ಇಳಿದುಕೊಂಡರು. ಅಲ್ಲಿ ಮಿರ್ಯಾಮಳು ತೀರಿಹೋದಳು. ಆಕೆಯ ಶವವನ್ನು ಅಲ್ಲಿಯೇ ಸಮಾಧಿಮಾಡಿದರು.

2ಸಮೂಹದವರಿಗೆ ನೀರು ಇಲ್ಲದ ಕಾರಣ ಅವರು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಕೂಡಿಕೊಂಡರು.

3ಜನರು ಮೋಶೆಯ ಸಂಗಡ ವ್ಯಾಜ್ಯವಾಡಿ, “ನಮ್ಮ ಜನರು ಯೆಹೋವನ ಸನ್ನಿಧಿಯಲ್ಲಿ ಸತ್ತುಹೋದಾಗಲೇ ನಾವೂ ಸಹ ಸತ್ತುಹೋಗಿದ್ದರೆ ಎಷ್ಟೋ ಒಳ್ಳೆಯದಾಗಿತ್ತು.

4ನೀವು ಯೆಹೋವನ ಸಮೂಹದವರಾದ ನಮ್ಮನ್ನೂ, ನಮ್ಮ ಪಶುಗಳನ್ನೂ ಈ ಮರಳುಗಾಡಿಗೆ ಕರೆದುಕೊಂಡು ಬಂದು ಯಾಕೆ ಸಾಯಿಸುತ್ತೀರಿ?

5ನಮ್ಮನ್ನು ಐಗುಪ್ತ ದೇಶದಿಂದ ಬರಮಾಡಿ ಈ ಕೆಟ್ಟ ಸ್ಥಳಕ್ಕೆ ಯಾಕೆ ಕರೆದುಕೊಂಡು ಬಂದಿದ್ದೀರಿ? ಈ ನೆಲದಲ್ಲಿ ಧಾನ್ಯವೂ, ಅಂಜೂರವೂ, ದ್ರಾಕ್ಷಿಯೂ, ದಾಳಿಂಬೆಯೂ ಮತ್ತು ಕುಡಿಯುವುದಕ್ಕೆ ನೀರೂ ಸಹ ಸಿಕ್ಕುವುದಿಲ್ಲ” ಎಂದು ಹೇಳುತ್ತಿದ್ದರು.

6ಮೋಶೆ ಮತ್ತು ಆರೋನರು ಜನಸಮೂಹದ ಎದುರಿನಿಂದ ದೇವದರ್ಶನದ ಗುಡಾರದ ಬಾಗಿಲಿಗೆ ಹೋಗಿ ಬೋರಲುಬಿದ್ದಾಗ ಯೆಹೋವನ ತೇಜಸ್ಸು ಅವರಿಗೆ ಕಾಣಿಸಿತು.

7ಆಗ ಯೆಹೋವನು ಮೋಶೆ ಸಂಗಡ ಮಾತನಾಡಿ,

8“ನೀನು ಕೋಲನ್ನು ಕೈಯಲ್ಲಿ ಹಿಡಿದು ನಿನ್ನ ಅಣ್ಣನಾದ ಆರೋನನ ಜೊತೆಯಲ್ಲಿ ಸಮೂಹದವರನ್ನು ಕೂಡಿಸಿಕೊಂಡು ಅವರ ಎದುರಿನಲ್ಲೇ ಆ ಕಡಿದಾದ ಬಂಡೆಗೆ ನೀರುಕೊಡಬೇಕೆಂದು ಆಜ್ಞಾಪಿಸು. ಅದರೊಳಗಿಂದ ನೀರು ಹೊರಟುಬರುವುದು, ನೀನು ಸಮೂಹದವರಿಗೂ, ಅವರ ಪಶುಗಳಿಗೂ ನೀರನ್ನು ಕುಡಿಯುವುದಕ್ಕೆ ಕೊಡಬಹುದು” ಎಂದು ಹೇಳಿದನು.

9ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆಯು ಆ ಕೋಲನ್ನು ಆತನ ಸನ್ನಿಧಿಯಿಂದ ತೆಗೆದುಕೊಂಡನು.

10ಮೋಶೆ ಮತ್ತು ಆರೋನರು ಸಮೂಹದವರನ್ನು ಆ ಕಡಿದಾದ ಬಂಡೆಗೆ ಎದುರಾಗಿ ಕೂಡಿಸಿದರು. ಮೋಶೆ ಅವರಿಗೆ, “ದ್ರೋಹಿಗಳೇ, ಕೇಳಿರಿ, ನಾವು ಈ ಬಂಡೆಯೊಳಗಿಂದಲೇ ನಿಮಗೋಸ್ಕರ ನೀರನ್ನು ಬರಮಾಡಬೇಕೋ?”

11ಆಗ ಮೋಶೆ ತನ್ನ ಕೈಯನ್ನು ಮೇಲಕ್ಕೆ ಎತ್ತಿ ಕೋಲಿನಿಂದ ಬಂಡೆಯನ್ನು ಎರಡು ಸಾರಿ ಹೊಡೆದನು. ಆಗ ನೀರು ಪ್ರವಾಹವಾಗಿ ಹೊರಟಿತು. ಸಮೂಹದವರೂ ಮತ್ತು ಅವರ ಪಶುಗಳೂ ನೀರು ಕುಡಿದರು.

12ಆಗ ಯೆಹೋವನು ಮೋಶೆ ಮತ್ತು ಆರೋನರಿಗೆ, “ನೀವು ನನ್ನನ್ನು ನಂಬದವರಾಗಿ ಇಸ್ರಾಯೇಲರ ಎದುರಿನಲ್ಲಿ ನನ್ನ ಗೌರವವನ್ನು ಕಾಪಾಡದೆ ಹೋದುದರಿಂದ ಈ ಸಮೂಹದವರಿಗೆ ವಾಗ್ದಾನಮಾಡಿದ ದೇಶಕ್ಕೆ ನೀವು ಅವರನ್ನು ಕರೆದುಕೊಂಡು ಹೋಗಬಾರದು” ಎಂದು ಹೇಳಿದನು.

13ಇಸ್ರಾಯೇಲರು ಅಲ್ಲಿ ಯೆಹೋವನ ಸಂಗಡ ವಾದಮಾಡಿದ್ದರಿಂದ ಆ ನೀರು ಬಂದ ಸ್ಥಳಕ್ಕೆ “ ಮೆರೀಬಾ” ಎಂದು ಹೆಸರಾಯಿತು. ಅದಲ್ಲದೆ ಅಲ್ಲಿ ಯೆಹೋವನು ತನ್ನ ಪರಿಶುದ್ಧತೆಯನ್ನು ತೋರಿಸಿದನು.

14ಮೋಶೆ ಕಾದೇಶಿನಿಂದ ಎದೋಮ್ಯರ ಅರಸನ ಬಳಿಗೆ ದೂತರನ್ನು ಕಳುಹಿಸಿ, “ನಮ್ಮ ಸಂಬಂಧಿಕರಾದ ಇಸ್ರಾಯೇಲರು ಕೇಳಿಕೊಳ್ಳುವುದೇನೆಂದರೆ, ನಮಗೆ ಸಂಭವಿಸಿದ ಎಲ್ಲಾ ಕಷ್ಟವನ್ನು ತಾವು ಕೇಳಿದ್ದೀರಿ.

15ನಮ್ಮ ಪೂರ್ವಿಕರು ಐಗುಪ್ತ ದೇಶಕ್ಕೆ ಇಳಿದು ಹೋದರು. ಅವರು ಅಲ್ಲಿ ಬಹುದಿನ ವಾಸವಾಗಿದ್ದರು. ಐಗುಪ್ತ್ಯರು ನಮ್ಮನ್ನೂ ಮತ್ತು ನಮ್ಮ ಪೂರ್ವಿಕರನ್ನೂ ಉಪದ್ರವಪಡಿಸಿದ್ದರು.

16ನಾವು ಯೆಹೋವನಿಗೆ ಮೊರೆಯಿಡಲಾಗಿ, ಆತನು ನಮ್ಮ ಪ್ರಾರ್ಥನೆಯನ್ನು ಕೇಳಿ ದೂತನನ್ನು ಕಳುಹಿಸಿ, ನಮ್ಮನ್ನು ಐಗುಪ್ತ ದೇಶದಿಂದ ಬಿಡುಗಡೆಮಾಡಿದನು. ಈಗ ನಾವು ನಮ್ಮ ರಾಜ್ಯದ ಗಡಿಯಲ್ಲಿರುವ ಕಾದೇಶ್ ಎಂಬ ಊರಿನಲ್ಲಿದ್ದೇವೆ.

17ತಮ್ಮ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕೆಂದು ಬೇಡಿಕೊಳ್ಳುತ್ತೇವೆ. ನಾವು ಹೊಲವನ್ನಾದರೂ, ದ್ರಾಕ್ಷಿತೋಟವನ್ನಾದರೂ ದಾಟಿ ಹೋಗುವುದಿಲ್ಲ. ಬಾವಿಗಳ ನೀರನ್ನು ಕುಡಿಯುವುದಿಲ್ಲ. ರಾಜಮಾರ್ಗದಲ್ಲಿಯೇ ನಡೆದು ನಮ್ಮ ದೇಶದ ಗಡಿಯನ್ನು ದಾಟುವ ತನಕ ಬಲಕ್ಕಾಗಲಿ, ಎಡಕ್ಕಾಗಲಿ ತಿರುಗುವುದಿಲ್ಲ” ಎಂದು ಹೇಳಿಸಿದನು.

18ಆದರೆ ಎದೋಮ್ಯರು, “ನಮ್ಮ ದೇಶವನ್ನು ನೀವು ದಾಟಿ ಹೋಗಬಾರದು. ದಾಟುವುದಾದರೆ ನಾವು ನಿಮ್ಮ ಮೇಲೆ ಯುದ್ಧಕ್ಕೆ ಬರುತ್ತೇವೆ” ಎಂದು ಉತ್ತರಕೊಟ್ಟರು.

19ಅದಕ್ಕೆ ಇಸ್ರಾಯೇಲರು, “ನಾವು ರಾಜಮಾರ್ಗದಲ್ಲಿಯೇ ಹೋಗುವೆವು. ನಾವೂ ಮತ್ತು ನಮ್ಮ ಪಶುಗಳೂ ನಿಮ್ಮ ನೀರನ್ನು ಕುಡಿದರೆ ಅದರ ಬೆಲೆ ಕೊಡುವೆವು. ಬೇರೆ ಏನನ್ನು ಮಾಡದೆ, ಕಾಲ್ನಡೆಯಾಗಿ ದಾಟಿಹೋಗುವುದಕಷ್ಟೇ ನಮಗೆ ಅಪ್ಪಣೆಯಾಗಬೇಕು” ಎಂದು ಹೇಳಿದರು.

20ಆದರೆ ಎದೋಮ್ಯರು, “ನೀವು ದಾಟಲೇ ಬಾರದು” ಎಂದು ಉತ್ತರಕೊಟ್ಟು ಬಹುಜನರನ್ನು ಕೂಡಿಸಿಕೊಂಡು ಇಸ್ರಾಯೇಲರಿಗೆ ಎದುರಾಗಿ ಯುದ್ಧಕ್ಕೆ ಬಂದರು.

21ಎದೋಮ್ಯರು ಇಸ್ರಾಯೇಲರಿಗೆ ತಮ್ಮ ಪ್ರದೇಶದೊಳಗೆ ದಾಟಿಹೋಗುವುದಕ್ಕೆ ಅಪ್ಪಣೆಕೊಡದೆ ಹೋದುದರಿಂದ ಇಸ್ರಾಯೇಲರು ಅವರ ಕಡೆಯಿಂದ ತಿರುಗಿಕೊಂಡು ಬೇರೊಂದು ಮಾರ್ಗವಾಗಿ ಹೊರಟರು.

22ಆಗ ಇಸ್ರಾಯೇಲರ ಸರ್ವಸಮೂಹದವರು ಕಾದೇಶಿನಿಂದ ಹೊರಟು ಹೋರ್ ಎಂಬ ಬೆಟ್ಟಕ್ಕೆ ಬಂದರು.

23ಯೆಹೋವನು ಎದೋಮ್ಯರ ದೇಶದ ಗಡಿಯ ಹತ್ತಿರವಿರುವ ಹೋರ್ ಎಂಬ ಬೆಟ್ಟದ ಬಳಿಯಲ್ಲಿ ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,

24“ಆರೋನನು ತನ್ನ ಪೂರ್ವಿಕರ ಬಳಿಗೆ ಸೇರುವನು. ನೀವಿಬ್ಬರೂ ಮೆರೀಬಾ ಪ್ರವಾಹದ ಹತ್ತಿರ ನನ್ನ ಮಾತಿಗೆ ವಿರುದ್ಧವಾಗಿ ತಿರುಗಿಬಿದ್ದುದರಿಂದ ನಾನು ಇಸ್ರಾಯೇಲರಿಗೆ ವಾಗ್ದಾನಮಾಡಿದ ದೇಶದೊಳಗೆ ಆರೋನನು ಸೇರಬಾರದು.

25ನೀನು ಆರೋನನನ್ನೂ, ಅವನ ಮಗನಾದ ಎಲ್ಲಾಜಾರನನ್ನೂ ಕರೆದುಕೊಂಡು ಹೋರ್ ಬೆಟ್ಟಕ್ಕೆ ಬಾ.

26ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಬೇಕು. ಆರೋನನು ಅಲ್ಲಿ ತನ್ನ ಪೂರ್ವಿಕರ ಬಳಿಗೆ ಸೇರಬೇಕು” ಎಂದು ಆಜ್ಞಾಪಿಸಿದನು.

27ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಹೀಗೆ ಮಾಡಿದನು. ಸರ್ವಸಮೂಹದವರು ನೋಡುತ್ತಿರಲಾಗಿ ಅವರು ಹೋರ್ ಬೆಟ್ಟವನ್ನು ಹತ್ತಿದರು.

28ಮೋಶೆ ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು. ಆರೋನನು ಅಲ್ಲೇ ಬೆಟ್ಟದ ತುದಿಯಲ್ಲಿ ಸತ್ತುಹೋದನು. ತರುವಾಯ ಮೋಶೆಯೂ ಮತ್ತು ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.

29ಆರೋನನು ಸತ್ತುಹೋದ ಸಂಗತಿಯನ್ನು ಇಸ್ರಾಯೇಲ್ ಸಮೂಹದವರು ಕೇಳಿ ಮೂವತ್ತು ದಿನಗಳು ಅವನಿಗಾಗಿ ಶೋಕಿಸಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath