ಅರಣ್ಯಕಾಂಡ 14
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆಗ ಜನಸಮೂಹದವರೆಲ್ಲರೂ ತಮ್ಮ ಸ್ವರ ಎತ್ತಿ ಆ ರಾತ್ರಿಯೆಲ್ಲಾ ಗೋಳಾಡಿದರು.
2ಇಸ್ರಾಯೇಲರೆಲ್ಲರೂ ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ಗುಣುಗುಟ್ಟಿ, “ನಾವು ಈ ಮರುಭೂಮಿಯಲ್ಲಿ ಸಾಯುವುದಕ್ಕಿಂತ ಐಗುಪ್ತ ದೇಶದಲ್ಲಿಯೇ ಸತ್ತಿದ್ದರೆ ಎಷ್ಟೋ ಒಳ್ಳೆಯದಾಗಿತ್ತು
3ಯೆಹೋವನು ನಮ್ಮನ್ನು ಯಾಕೆ ಕತ್ತಿಯ ಬಾಯಿಂದ ಸಾಯಿಸುವುದಕ್ಕೆ ಈ ದೇಶಕ್ಕೆ ಕರೆದುಕೊಂಡು ಬಂದನು. ನಮ್ಮ ಹೆಂಡತಿಯರು ಮತ್ತು ಮಕ್ಕಳು ಬೇರೆಯವರ ಪಾಲಾಗುವರು. ನಾವು ಐಗುಪ್ತ ದೇಶಕ್ಕೆ ತಿರುಗಿ ಹೋಗುವುದು ಒಳ್ಳೆಯದಲ್ಲವೇ” ಎಂದು ಮಾತನಾಡಿಕೊಂಡರು.
4ಹೀಗೆ ಅವರು ಒಬ್ಬರ ಸಂಗಡಲೊಬ್ಬರು, “ನಾವು ಬೇರೆ ನಾಯಕನನ್ನು ನೇಮಿಸಿಕೊಂಡು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗೋಣ” ಎಂದು ಮಾತನಾಡಿಕೊಂಡರು.
5ಆಗ ಮೋಶೆ ಮತ್ತು ಆರೋನರು ಇಸ್ರಾಯೇಲರ ಸರ್ವಸಮೂಹದವರ ಮುಂದೆ ಅಡ್ಡಬಿದ್ದರು.
6ಕಾನಾನ್ ದೇಶವನ್ನು ಸಂಚರಿಸಿ ನೋಡಿದವರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡರು.
7ಅವರು ಇಸ್ರಾಯೇಲರ ಸರ್ವಸಮೂಹದವರಿಗೆ ಹೀಗೆ ಹೇಳಿದರು, “ನಾವು ಸಂಚರಿಸಿ ನೋಡಿದ ದೇಶವು ಅತ್ಯುತ್ತಮವಾದದ್ದು.
8ಯೆಹೋವನು ನಮ್ಮನ್ನು ಮೆಚ್ಚಿಕೊಂಡರೆ ಹಾಲೂ, ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಸೇರಿಸಿ ಅದನ್ನು ನಮ್ಮ ಸ್ವಾಧೀನಕ್ಕೆ ಕೊಡುವನು.
9ಹೀಗಿರುವುದರಿಂದ ಯೆಹೋವನಿಗೆ ತಿರುಗಿಬೀಳಬೇಡಿರಿ. ಇದಲ್ಲದೆ ಆ ದೇಶದ ಜನರಿಗೆ ಭಯಪಡಬೇಡಿರಿ. ಏಕೆಂದರೆ ನಾವು ಅವರನ್ನು ಸುಲಭವಾಗಿ ಜಯಿಸಿಬಿಡುವೆವು. ಅವರಿಗೆ ನೆರಳಾಗಿದ್ದ ದೇವರು ಅವರನ್ನು ಕೈಬಿಟ್ಟಿದ್ದಾನೆ, ಯೆಹೋವನು ನಮ್ಮ ಸಂಗಡ ಇದ್ದಾನೆ. ಅವರಿಗೆ ಭಯಪಡಬೇಡಿರಿ” ಎಂದರು.
10ಆದರೆ ಜನಸಮೂಹದವರೆಲ್ಲರೂ ಅವರ ಮಾತುಗಳನ್ನು ಕೇಳದೆ, ಅವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಹೇಳಿಕೊಳ್ಳುತ್ತಿರುವಾಗ, ಯೆಹೋವನ ತೇಜಸ್ಸು ದೇವದರ್ಶನದ ಗುಡಾರದಲ್ಲಿ ಪ್ರಕಾಶಿಸಿ ಇಸ್ರಾಯೇಲರೆಲ್ಲರಿಗೂ ಕಾಣಿಸಿಕೊಂಡಿತು.
11ಯೆಹೋವನು ಮೋಶೆಗೆ, “ಈ ಜನರು ಇನ್ನು ಎಷ್ಟರವರೆಗೆ ನನ್ನನ್ನು ಅಲಕ್ಷ್ಯಮಾಡುವರು? ನಾನು ನಡೆಸಿದ ಎಲ್ಲಾ ಮಹತ್ಕಾರ್ಯಗಳನ್ನು ಇವರು ಪ್ರತ್ಯಕ್ಷವಾಗಿ ನೋಡಿದಾಗ್ಯೂ ಇನ್ನು ಎಷ್ಟು ದಿನ ನನ್ನನ್ನು ನಂಬದೆ ಇರುವರು?
12ನಾನು ಇವರಿಗೆ ವ್ಯಾಧಿಯನ್ನು ಉಂಟುಮಾಡಿ ಇವರನ್ನು ನಿರ್ಮೂಲಮಾಡುವೆನು. ಈ ಜನರಿಗಿಂತ ನಿನ್ನನ್ನು ದೊಡ್ಡದಾಗಿಯೂ, ಬಲಿಷ್ಠವಾಗಿಯೂ ಇರುವ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.
13ಅದಕ್ಕೆ ಮೋಶೆಯು ಯೆಹೋವನಿಗೆ, “ನೀನು ಹೀಗೆ ಮಾಡುವುದಾದರೆ ಐಗುಪ್ತ್ಯರು ಈ ಸುದ್ದಿಯನ್ನು ಕೇಳುವರು. ಅವರ ಕೈಯಿಂದ ನೀನು ಈ ಜನರನ್ನು ಭುಜಪರಾಕ್ರಮದಿಂದ ಬಿಡಿಸಿದ ಈ ಸಂಗತಿಯನ್ನು ಈ ಕಾನಾನ್ ದೇಶದ ನಿವಾಸಿಗಳಿಗೆ ತಿಳಿಸುವರು.
14ಅಲ್ಲದೆ ಯೆಹೋವನಾದ ನೀನು ಇಸ್ರಾಯೇಲರ ಮಧ್ಯದಲ್ಲಿ ಇರುವ ಸಂಗತಿಯನ್ನು, ನೀನು ಇಸ್ರಾಯೇಲರಿಗೆ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳುವುದನ್ನು, ಹಗಲಿನಲ್ಲಿ ಮೇಘಸ್ತಂಭದಲ್ಲಿಯೂ, ರಾತ್ರಿಯಲ್ಲಿ ಅಗ್ನಿಸ್ತಂಭದಲ್ಲಿಯೂ ಇದ್ದು ಇವರ ಮುಂದೆ ನಡೆದುಹೋಗುವುದಾಗಿ ಹಾಗೂ ನೀನಿರುವ ಮೇಘವು ಇಸ್ರಾಯೇಲರ ಮೇಲೆ ಇರುವುದಾಗಿಯೂ ಈ ದೇಶದವರು ಕೇಳಿದ್ದಾರೆ.
15ಹೀಗಿರಲಾಗಿ ನೀನು ಒಂದೇ ಪೆಟ್ಟಿನಿಂದ ಈ ಜನರನ್ನೆಲ್ಲಾ ಸಾಯಿಸಿದರೆ ನಿನ್ನ ಪ್ರಖ್ಯಾತಿಯನ್ನು ಕೇಳಿದ ಜನಾಂಗದವರು ನಿನ್ನ ವಿಷಯದಲ್ಲಿ,
16“‘ಯೆಹೋವನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶದಲ್ಲಿ ಆ ಜನರನ್ನು ಸೇರಿಸುವುದಕ್ಕೆ ಶಕ್ತಿಸಾಲದೆ, ಅವರನ್ನು ಅರಣ್ಯದಲ್ಲಿ ಕೊಂದುಹಾಕಿಬಿಟ್ಟನು’ ಎಂದು ಮಾತನಾಡಿಕೊಳ್ಳುವರು.
17ಈಗ ನೀನು ಹೇಳಿದ ಪ್ರಕಾರ ಯೆಹೋವನ ಬಲವು ದೊಡ್ಡದಾಗಿರಲಿ ಎಂದು ಬೇಡಿಕೊಳ್ಳುತ್ತೇನೆ. ನಿನ್ನ ವಿಷಯದಲ್ಲಿ,
18‘ಯೆಹೋವನು ದೀರ್ಘಶಾಂತನು, ದಯೆಯುಳ್ಳವನು, ಅಪರಾಧ ಪಾಪಗಳನ್ನು ಕ್ಷಮಿಸುವವನು, ಆದರೂ ಅಪರಾಧಿಗಳನ್ನು ಶಿಕ್ಷಿಸದೆ ಬಿಡದವನು, ತಂದೆಗಳ ಪಾಪಫಲವನ್ನು ಮಕ್ಕಳ ಮೇಲೆ ಮೂರು ನಾಲ್ಕು ತಲೆಗಳವರೆಗೆ ಬರಮಾಡುವವನು’ ಎಂದು ಹೇಳಿದ್ದಿ.
19ನಾವು ಐಗುಪ್ತ ದೇಶದಿಂದ ಬಂದ ದಿನದಿಂದ ಮೊದಲುಗೊಂಡು ಇದುವರೆಗೆ ನೀನು ಈ ಜನರ ಪಾಪಗಳನ್ನು ಕ್ಷಮಿಸಿದ ಪ್ರಕಾರವೇ ಈಗಲೂ ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ” ಎಂದು ಪ್ರಾರ್ಥಿಸಿದನು.
20ಅದಕ್ಕೆ ಯೆಹೋವನು, “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಅವರನ್ನು ಕ್ಷಮಿಸಿದ್ದೇನೆ.
21ಆದರೆ ನನ್ನ ಜೀವದಾಣೆ, ಯೆಹೋವನ ಮಹಿಮೆಯು ಭೂಲೋಕದಲ್ಲೆಲ್ಲಾ ತುಂಬಿರುವುದು.
22ಈ ಮನುಷ್ಯರೆಲ್ಲರು ಐಗುಪ್ತ ದೇಶದಲ್ಲಿಯೂ, ಮರುಭೂಮಿಯಲ್ಲಿಯೂ, ನಾನು ನಡೆಸಿರುವ ಮಹತ್ಕಾರ್ಯಗಳನ್ನೂ, ನನ್ನ ಮಹಿಮೆಯನ್ನೂ ನೋಡಿದರೂ ನನ್ನ ಮಾತಿಗೆ ಕಿವಿಗೊಡದೆ, ಪದೇ ಪದೇ ನನ್ನನ್ನು ಪರೀಕ್ಷಿಸಿದ್ದರಿಂದ
23ನಾನು ಅವರ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವುದಿಲ್ಲ; ನನ್ನನ್ನು ಅಲಕ್ಷ್ಯಮಾಡಿದ ಇವರಲ್ಲಿ ಯಾರೂ ಅದನ್ನು ನೋಡುವುದಿಲ್ಲ.
24ನನ್ನ ದಾಸನಾದ ಕಾಲೇಬನಿಗೆ ಅವರಂಥ ಮನಸ್ಸುಳ್ಳವನಾಗಿರದೆ ಮನಃಪೂರ್ವಕವಾಗಿ ನನ್ನ ಮಾತನ್ನು ಅನುಸರಿಸಿ ನಡೆದುದ್ದರಿಂದ ಅವನು ಸಂಚರಿಸಿದ ಆ ದೇಶದಲ್ಲಿ ಅವನನ್ನು ಸೇರಿಸುವೆನು, ಅವನ ಸಂತತಿಯವರು ಅದನ್ನು ಸ್ವಾಧೀನಪಡಿಸಿಕೊಳ್ಳುವರು.
25ಅಮಾಲೇಕ್ಯರೂ, ಕಾನಾನ್ಯರೂ ಆ ತಗ್ಗಿನಲ್ಲಿ ವಾಸವಾಗಿದ್ದಾರೆ. ನೀವು ನಾಳೆ ಹಿಂದಿರುಗಿ ಕೆಂಪು ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಅರಣ್ಯಕ್ಕೆ ಪ್ರಯಾಣಮಾಡಬೇಕು” ಎಂದು ಹೇಳಿದನು.
26ಯೆಹೋವನು ಮೋಶೆ ಮತ್ತು ಆರೋನರ ಸಂಗಡ ಮಾತನಾಡಿ,
27“ನನಗೆ ವಿರುದ್ಧವಾಗಿ ಗುಣುಗುಟ್ಟುವ ಈ ದುಷ್ಟ ಸಮೂಹದವರನ್ನು ನಾನು ಎಷ್ಟು ದಿನ ಸಹಿಸಿಕೊಳ್ಳಲಿ? ಇಸ್ರಾಯೇಲರು ನನಗೆ ವಿರುದ್ಧವಾಗಿ ಗುಣುಗುಟ್ಟುವ ಮಾತುಗಳು ನನಗೆ ಕೇಳಿಸಿದವು.
28ನೀನು ಅವರಿಗೆ ಹೀಗೆ ಹೇಳಬೇಕು, ‘ಯೆಹೋವನು ಹೇಳುವುದೇನೆಂದರೆ, ನನ್ನ ಜೀವದಾಣೆ, ನೀವು ನನಗೆ ಕೇಳಿಸುವಂತೆ ಅಂದುಕೊಂಡ ಪ್ರಕಾರವೇ ನಾನು ಮಾಡುತ್ತೇನೆ; ನಿಮ್ಮ ಶವಗಳು ಈ ಅರಣ್ಯದಲ್ಲಿಯೇ ಬೀಳುವವು.
29ನೀವು ನನಗೆ ವಿರುದ್ಧವಾಗಿ ಗುಣುಗುಟ್ಟಿದ್ದರಿಂದ ನಿಮ್ಮಲ್ಲಿ ಎಣಿಕೆಯಾದವರೆಲ್ಲರು ಅಂದರೆ ಇಪ್ಪತ್ತು ವರ್ಷಕ್ಕಿಂತ ಹೆಚ್ಚು ವಯಸ್ಸುಳ್ಳವರೆಲ್ಲರೂ ಅರಣ್ಯದಲ್ಲಿಯೇ ಸಾಯುವರು.
30ಯೆಫುನ್ನೆಯ ಮಗನಾದ ಕಾಲೇಬನು ಮತ್ತು ನೂನನ ಮಗನಾದ ಯೆಹೋಶುವನು ಇವರಿಬ್ಬರೇ ಹೊರತು ನಿಮ್ಮಲ್ಲಿ ಯಾರೂ ನಿಮ್ಮ ವಾಸಕ್ಕಾಗಿ ನಾನು ಪ್ರಮಾಣಪೂರ್ವಕವಾಗಿ ವಾಗ್ದಾನಮಾಡಿದ ದೇಶವನ್ನು ಸೇರುವುದಿಲ್ಲ.
31ಆದರೆ ಇತರರ ಪಾಲಾಗುವರೆಂದು ನೀವು ಹೇಳಿದ ನಿಮ್ಮ ಚಿಕ್ಕ ಮಕ್ಕಳನ್ನು ಅಲ್ಲಿಗೆ ಸೇರಿಸುವೆನು. ನೀವು ಬೇಡವೆಂದು ಹೇಳಿದ ದೇಶವನ್ನು ಅವರು ಅನುಭವಿಸುವರು.
32ನೀವಂತೂ ಈ ಅರಣ್ಯದಲ್ಲಿ ಸಾಯುವಿರಿ.
33ನಿಮ್ಮೆಲ್ಲರ ಶವಗಳು ಈ ಮರುಭೂಮಿಯಲ್ಲಿ ಬೀಳುವವರೆಗೂ ನೀವು ಮಾಡಿದ ದ್ರೋಹದ ಫಲವನ್ನು ನಿಮ್ಮ ಮಕ್ಕಳು ಅನುಭವಿಸುವವರಾಗಿ ನಲ್ವತ್ತು ವರ್ಷ ಮರುಭೂಮಿಯಲ್ಲಿ ವಾಸಿಸಬೇಕು.
34ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
35ಇದು ಯೆಹೋವನೆಂಬ ನಾನೇ ಹೇಳಿದ ಮಾತು. ನನಗೆ ವಿರುದ್ಧವಾಗಿ ಸೇರಿರುವ ಈ ದುಷ್ಟ ಸಮೂಹದವರೆಲ್ಲರಿಗೆ ಈ ಮಾತಿನ ಪ್ರಕಾರವೇ ಮಾಡುತ್ತೇನೆ. ಈ ಅರಣ್ಯದಲ್ಲಿಯೇ ಇವರೆಲ್ಲರೂ ಸಾಯಬೇಕು’” ಎಂದು ಹೇಳಿದನು.
36ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಮೋಶೆಯಿಂದ ಕಳುಹಿಸಲ್ಪಟ್ಟ ಮನುಷ್ಯರು ಹಿಂದಿರುಗಿ ಬಂದು ಆ ದೇಶದ ವಿಷಯದಲ್ಲಿ ಅಶುಭ ಸಮಾಚಾರವನ್ನು ಹೇಳಿ ಸರ್ವಸಮೂಹದವರನ್ನು ಮೋಶೆಗೆ ವಿರುದ್ಧವಾಗಿ ಗುಣುಗುಟ್ಟುವಂತೆ ಮಾಡಿದರು.
37ಅಶುಭ ಸಮಾಚಾರವನ್ನು ತಂದ ಆ ಮನುಷ್ಯರು ಯೆಹೋವನ ಸನ್ನಿಧಿಯಲ್ಲಿ ವ್ಯಾಧಿಯಿಂದ ಸತ್ತರು.
38ಆ ದೇಶವನ್ನು ಸಂಚರಿಸಿ ನೋಡುವುದಕ್ಕೆ ಹೋಗಿದ್ದ ಮನುಷ್ಯರಲ್ಲಿ ನೂನನ ಮಗನಾದ ಯೆಹೋಶುವನು ಮತ್ತು ಯೆಫುನ್ನೆಯ ಮಗನಾದ ಕಾಲೇಬನು ಮಾತ್ರ ಉಳಿದರು.
39ಮೋಶೆ ಯೆಹೋವನ ಮಾತುಗಳನ್ನೆಲ್ಲಾ ಇಸ್ರಾಯೇಲರಿಗೆ ತಿಳಿಸಲಾಗಿ ಅವರು ಬಹಳ ದುಃಖಪಟ್ಟರು.
40ಮರುದಿನ ಬೆಳಿಗ್ಗೆ ಜನರು ಎದ್ದು, “ನಾವು ಪಾಪ ಮಾಡಿರುವುದು ನಿಜ; ಯೆಹೋವನು ವಾಗ್ದಾನ ಮಾಡಿದ ಸ್ಥಳಕ್ಕೆ ಹತ್ತೋಣ ಬನ್ನಿ” ಎಂದು ಹೇಳಿಕೊಳ್ಳುತ್ತಾ ಆ ಬೆಟ್ಟದ ಮೇಲಕ್ಕೆ ಹತ್ತಿಹೋದರು.
41ಆದರೆ ಮೋಶೆ ಅವರಿಗೆ, “ನೀವು ಯಾಕೆ ಹೀಗೆ ಮಾಡಿ ಯೆಹೋವನ ಆಜ್ಞೆಯನ್ನು ಮೀರುತ್ತೀರಿ? ಇದು ಸಫಲವಾಗುವುದಿಲ್ಲ.
42ಯೆಹೋವನು ನಿಮ್ಮ ಸಂಗಡ ಇರುವುದಿಲ್ಲ, ಹತ್ತಬೇಡಿರಿ. ನೀವು ಶತ್ರುಗಳ ಮುಂದೆ ನಿಲ್ಲಲಾರದೆ ಬಿದ್ದು ಸತ್ತುಹೋಗುವಿರಿ.
43ಅಲ್ಲಿ ಅಮಾಲೇಕ್ಯರೂ, ಕಾನಾನ್ಯರೂ ನಿಮ್ಮ ಎದುರಿನಲ್ಲಿ ಇರುವುದರಿಂದ ನೀವು ಅವರ ಕತ್ತಿಯಿಂದ ಸತ್ತುಹೋಗುವಿರಿ. ನೀವು ಯೆಹೋವನ ಮಾತನ್ನು ಅನುಸರಿಸದೆ ತಿರುಗಿಬಿದ್ದ ಕಾರಣ ಆತನು ನಿಮ್ಮೊಂದಿಗೆ ಇರುವುದಿಲ್ಲ” ಎಂದು ಹೇಳಿದನು.
44ಆದರೂ ಅವರು ಹಟಮಾಡಿ ಆ ಬೆಟ್ಟವನ್ನು ಹತ್ತಿದರು. ಯೆಹೋವನ ಒಡಂಬಡಿಕೆಯ ಮಂಜೂಷವಾಗಲಿ ಮೋಶೆಯಾಗಲಿ ಪಾಳೆಯವನ್ನು ಬಿಟ್ಟು ಹೊರಡಲಿಲ್ಲ.
45ಆಗ ಆ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಮತ್ತು ಕಾನಾನ್ಯರೂ ಇಳಿದು ಬಂದು ಇಸ್ರಾಯೇಲರನ್ನು ಹೊಡೆದು ಹೊರ್ಮಾ ಪಟ್ಟಣದವರೆಗೂ ಬೆನ್ನಟ್ಟಿ ಸಂಹರಿಸಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath