ಕ್ರಿಶ್ಚಿಯನ್ ಧರ್ಮ
ಹಿಂದೆ

ಅರಣ್ಯಕಾಂಡ 10

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋವನು ಮೋಶೆಯ ಸಂಗಡ ಮಾತನಾಡಿ, ಆಜ್ಞಾಪಿಸಿದ್ದೇನೆಂದರೆ,

2“ನೀನು ಬೆಳ್ಳಿಯ ತಗಡಿನಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಕೂಡಿಸುವುದಕ್ಕೂ ಮತ್ತು ದಂಡುಗಳನ್ನು ಹೊರಡಿಸುವುದಕ್ಕೂ ಅವುಗಳನ್ನು ಉಪಯೋಗಿಸಬೇಕು.

3ನೀನು ತುತ್ತೂರಿಗಳನ್ನು ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನದ ಗುಡಾರದ ಬಾಗಿಲಿಗೆ ಕೂಡಿಬರಬೇಕು.

4ನೀನು ಒಂದನ್ನು ಮಾತ್ರ ಊದಿಸುವಾಗ ಇಸ್ರಾಯೇಲರ ಕುಲಾಧಿಪತಿಗಳಾದ ಪ್ರಧಾನರು ನಿನ್ನ ಬಳಿಗೆ ಕೂಡಿಬರಬೇಕು.

5ನೀನು ಆರ್ಭಟವಾಗಿ ಊದಿಸುವಾಗ ಪೂರ್ವದಿಕ್ಕಿನ ದಂಡುಗಳು ಹೊರಡಬೇಕು.

6ಎರಡನೆಯ ಸಾರಿ ಆರ್ಭಟವಾಗಿ ಊದಿಸುವಾಗ ದಕ್ಷಿಣ ದಿಕ್ಕಿನ ದಂಡುಗಳು ಹೊರಡಬೇಕು. ಹೀಗೆ ಪ್ರಯಾಣಕ್ಕೆ ಹೊರಡಬೇಕಾದಾಗ ಆರ್ಭಟವಾಗಿಯೇ ಊದಿಸಬೇಕು.

7ಜನಸಮೂಹದವರು ಕೂಡಿಬರಬೇಕಾದಾಗ ಸಾಧಾರಣವಾಗಿ ಊದಿಸಬೇಕೇ ಹೊರತು ಆರ್ಭಟವಾಗಿ ಊದಿಸಬಾರದು.

8“ಆರೋನನ ವಂಶಸ್ಥರಾದ ಯಾಜಕರೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮವಾಗಿರಲಿ.

9ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮನ್ನು ಉಪದ್ರವಪಡಿಸುವ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ಆ ತುತ್ತೂರಿಗಳನ್ನು ಆರ್ಭಟವಾಗಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಕ್ಕೆ ತಂದುಕೊಂಡು ಶತ್ರುಗಳ ಕೈಯಿಂದ ರಕ್ಷಿಸುವನು.

10ಇದಲ್ಲದೆ ನೀವು ಉತ್ಸವ ಕಾಲಗಳಲ್ಲಿಯು, ಹಬ್ಬಗಳಲ್ಲಿಯು, ಅಮಾವಾಸ್ಯೆಗಳಲ್ಲಿಯು ಸರ್ವಾಂಗಹೋಮಗಳನ್ನೂ, ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ಆ ತುತ್ತೂರಿಯ ಧ್ವನಿಯು ನಿಮ್ಮನ್ನು ನಿಮ್ಮ ದೇವರ ಜ್ಞಾಪಕಕ್ಕೆ ತರುವುದು, ನಾನೇ ನಿಮ್ಮ ದೇವರಾದ ಯೆಹೋವನು.”

11ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ದೇವದರ್ಶನದ ಗುಡಾರದ ಮೇಲಿದ್ದ ಮೇಘವು ಮೇಲಕ್ಕೆ ಎದ್ದಿತು.

12ಆದುದರಿಂದ ಇಸ್ರಾಯೇಲರು ಸೀನಾಯಿ ಅರಣ್ಯವನ್ನು ಬಿಟ್ಟು ಮುಂದೆ ಮುಂದೆ ಪ್ರಯಾಣಮಾಡಿದರು. ತರುವಾಯ ಆ ಮೇಘವು ಪಾರಾನ್ ಅರಣ್ಯದಲ್ಲಿ ನಿಂತಿತು.

13ಯೆಹೋವನು ಮೋಶೆಯ ಮೂಲಕ ಆಜ್ಞಾಪಿಸಿದ ರೀತಿಯಲ್ಲಿ ಅವರು ಪ್ರಯಾಣಮಾಡಿದ್ದು ಇದೇ ಮೊದಲನೆಯ ಸಾರಿ.

14ಮುಂಭಾಗದಲ್ಲಿ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀನಾದಾಬನ ಮಗನಾದ ನಹಶೋನನು.

15ಇಸ್ಸಾಕಾರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂವಾರನ ಮಗನಾದ ನೆತನೇಲನು.

16ಜೆಬುಲೂನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಹೇಲೋನನ ಮಗನಾದ ಎಲೀಯಾಬನು.

17ತರುವಾಯ ದೇವದರ್ಶನದ ಗುಡಾರವನ್ನು ಇಳಿಸಿದಾಗ ಗೇರ್ಷೋನ್ಯರು ಮತ್ತು ಮೆರಾರೀಯರೂ ಅದನ್ನು ಹೊತ್ತುಕೊಂಡು ಹೊರಟರು.

18ಆಮೇಲೆ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಶೆದೇಯೂರನ ಮಗನಾದ ಎಲೀಚೂರನು.

19ಸಿಮೆಯೋನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಚೂರೀಷದ್ದೈಯ ಮಗನಾದ ಶೆಲುಮೀಯೇಲನು.

20ಗಾದ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ದೆಗೂವೇಲನ ಮಗನಾದ ಎಲ್ಯಾಸಾಫನು.

21ಅವರ ಹಿಂದೆ ಕೆಹಾತ್ಯರು ದೇವಾಲಯದ ಸಾಮಾನುಗಳನ್ನು ಹೊತ್ತುಕೊಂಡು ಹೊರಟರು. ಅವರು ಬರುವಷ್ಟರೊಳಗೆ ಉಳಿದ ಲೇವಿಯರು ದೇವದರ್ಶನದ ಗುಡಾರವನ್ನು ನಿಲ್ಲಿಸಿದರು.

22ಆ ಮೇಲೆ ಎಫ್ರಾಯೀಮ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರಿಗೆ ಸೇನಾನಾಯಕನಾಗಿ ಇದ್ದವನು ಅಮ್ಮೀಹೂದನ ಮಗನಾದ ಎಲೀಷಾಮನು.

23ಮನಸ್ಸೆ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಪೆದಾಚೂರನ ಮಗನಾದ ಗಮ್ಲೀಯೇಲನು.

24ಬೆನ್ಯಾಮೀನ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಗಿದ್ಯೋನಿಯ ಮಗನಾದ ಅಬೀದಾನನು.

25ಆ ಮೇಲೆ ಎಲ್ಲಾ ದಂಡುಗಳ ಹಿಂಭಾಗದಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ಹೊರಟರು. ಅವರ ಸೇನಾನಾಯಕನಾಗಿ ಇದ್ದವನು ಅಮ್ಮೀಷದ್ದೈಯ ಮಗನಾದ ಅಹೀಗೆಜೆರನು.

26ಆಶೇರ್ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಒಕ್ರಾನನ ಮಗನಾದ ಪಗೀಯೇಲನು.

27ನಫ್ತಾಲಿ ಕುಲದವರಿಗೆ ಸೇನಾನಾಯಕನಾಗಿ ಇದ್ದವನು ಏನಾನನ ಮಗನಾದ ಅಹೀರನು.

28ಈ ರೀತಿಯಲ್ಲಿ ಇಸ್ರಾಯೇಲರು ಸೈನ್ಯಸೈನ್ಯವಾಗಿ ಹೊರಟು ಪ್ರಯಾಣಮಾಡಿದರು.

29ಮೋಶೆಯು ತನ್ನ ಮಾವನಾಗಿದ್ದ ಮಿದ್ಯಾನ್ಯನಾದ ರೆಗೂವೇಲನ ಮಗನಾದ ಹೋಬಾಬನಿಗೆ, “ಯೆಹೋವನು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣಮಾಡುತ್ತಾ ಇದ್ದೇವೆ. ಇಸ್ರಾಯೇಲರಿಗೆ ಒಳಿತನ್ನು ಉಂಟುಮಾಡುತ್ತೇನೆಂದು ಯೆಹೋವನು ತಾನೇ ಹೇಳಿದ್ದಾನೆ. ಆದುದರಿಂದ ನೀನೂ ನಮ್ಮ ಜೊತೆಯಲ್ಲಿ ಬಾ; ನಮ್ಮಿಂದ ನಿನಗೂ ಒಳ್ಳೆಯದಾಗುವುದು” ಎಂದು ಹೇಳಿದನು.

30ಆದರೆ ಹೋಬಾಬನು ಮೋಶೆಗೆ, “ನಾನು ಬರುವುದಿಲ್ಲ; ನನ್ನ ಸ್ವದೇಶಕ್ಕೆ, ನನ್ನ ಸ್ವಜನರ ಬಳಿಗೆ ಹೋಗುತ್ತೇನೆ” ಎಂದು ಹೇಳಿದನು.

31ಅದಕ್ಕೆ ಮೋಶೆಯು ಉತ್ತರವಾಗಿ, “ನಮ್ಮನ್ನು ಬಿಟ್ಟು ಹೋಗಬೇಡವೆಂದು ನಿನ್ನನ್ನು ಬೇಡಿಕೊಳ್ಳುತ್ತೇನೆ. ಈ ಮರುಭೂಮಿಯಲ್ಲಿ ಡೇರೆಗಳನ್ನು ಹಾಕುವ ಸ್ಥಳಗಳು ನಿನಗೆ ಮಾತ್ರ ಗೊತ್ತಿದೆ. ಆದುದರಿಂದ ನೀನು ನಮಗೆ ಕಣ್ಣಾಗಿರಬೇಕು.

32ನೀನು ನಮ್ಮ ಸಂಗಡ ಬಂದರೆ ಯೆಹೋವನು ನಮಗೆ ಮಾಡುವ ಒಳ್ಳೆಯದನ್ನೆಲ್ಲಾ ನಾವು ನಿನಗೂ ಉಂಟಾಗುವಂತೆ ಮಾಡುವೆವು” ಎಂದು ಹೇಳಿದನು.

33ಅವರು ಯೆಹೋವನ ಬೆಟ್ಟವನ್ನು ಬಿಟ್ಟು ಮೂರು ದಿನದ ಪ್ರಯಾಣದಷ್ಟು ದೂರ ಹೋದರು. ಇಳಿದುಕೊಳ್ಳಲು ಸೂಕ್ತವಾದ ಸ್ಥಳವನ್ನು ನೋಡುವುದಕ್ಕಾಗಿ ಯೆಹೋವನ ಒಡಂಬಡಿಕೆಯ ಮಂಜೂಷವು ಆ ಮೂರು ದಿನಗಳು ಅವರ ಮುಂದಾಗಿ ಹೋಗುತ್ತಿತ್ತು.

34ಅವರು ಪಾಳೆಯದಿಂದ ಹೊರಡುವಾಗ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಅವರ ಮೇಲೆ ಇರುತ್ತಿತ್ತು.

35ಯೆಹೋವನ ಮಂಜೂಷ ಪೆಟ್ಟಿಗೆಯು ಹೊರಡುವಾಗ ಮೋಶೆ, “ಯೆಹೋವನೇ, ಎದ್ದು ಹೊರಡೋಣವಾಗಲಿ; ನಿನ್ನ ವೈರಿಗಳು ಚದರಿಹೋಗಲಿ; ನಿನ್ನ ಶತ್ರುಗಳು ಬೆನ್ನು ತೋರಿಸಿ ಓಡಿಹೋಗಲಿ” ಎಂದು ಹೇಳುವನು.

36ಅದು ನಿಂತಾಗ ಅವನು, “ಯೆಹೋವನೇ, ಇಸ್ರಾಯೇಲರ ಲಕ್ಷಾಂತರ ಕುಟುಂಬಗಳ ಮಧ್ಯದಲ್ಲಿ ಮರಳಿ ಆಗಮಿಸು” ಎಂದು ಹೇಳುವನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath