ಕ್ರಿಶ್ಚಿಯನ್ ಧರ್ಮ
ಹಿಂದೆ

ಮಾರ್ಕನು 8

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆ ದಿನಗಳಲ್ಲಿ ಜನರು ಪುನಃ ದೊಡ್ಡಗುಂಪಾಗಿ ಬಂದು ನೆರೆದಿದ್ದರು. ಊಟಮಾಡಲು ಅವರಲ್ಲಿ ಆಹಾರವಿರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು,

2“ಈ ಜನರನ್ನು ನೋಡಿ ಕನಿಕರಪಡುತ್ತೇನೆ, ಏಕೆಂದರೆ ಮೂರು ದಿನಗಳಿಂದ ಇವರು ನನ್ನ ಬಳಿಯಲ್ಲಿದ್ದಾರೆ; ಇವರಿಗೆ ಊಟಕ್ಕೆ ಏನೂ ಇಲ್ಲ.

3ಇವರನ್ನು ಹಸಿವೆಯಿಂದ ಮನೆಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಬಿದ್ದಾರು. ಇವರಲ್ಲಿ ಕೆಲವರು ದೂರದಿಂದ ಬಂದಿದ್ದಾರಲ್ಲಾ” ಎಂದು ಅವರಿಗೆ ಹೇಳಿದನು.

4ಅದಕ್ಕೆ ಶಿಷ್ಯರು, “ಈ ಅಡವಿಯಲ್ಲಿ ಸಾಕಷ್ಟು ರೊಟ್ಟಿಯನ್ನು ಎಲ್ಲಿಂದ ತಂದು ಈ ಜನರನ್ನು ತೃಪ್ತಿಪಡಿಸುವುದಕ್ಕಾದೀತು?” ಅಂದರು.

5ಆತನು, “ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ?” ಎಂದು ಅವರನ್ನು ಕೇಳಿದ್ದಕ್ಕೆ ಅವರು, “ಏಳು ರೊಟ್ಟಿಗಳು ಇವೆ” ಅಂದರು.

6ಆಗ ಯೇಸು ಜನರ ಗುಂಪಿಗೆ, ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟು, ಆ ಏಳು ರೊಟ್ಟಿಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ ಅವುಗಳನ್ನು ಮುರಿದು ಜನರಿಗೆ ಹಂಚಲು ತನ್ನ ಶಿಷ್ಯರ ಕೈಗೆ ಕೊಟ್ಟನು; ಅವರು ಗುಂಪಿನವರಿಗೆ ಹಂಚಿಕೊಟ್ಟರು.

7ಇದಲ್ಲದೆ ಅವರಲ್ಲಿ ಕೆಲವು ಸಣ್ಣ ಮೀನುಗಳಿದ್ದವು; ಆತನು ಅವುಗಳಿಗಾಗಿ ದೇವರಿಗೆ ಸ್ತೋತ್ರಮಾಡಿ, ಇವುಗಳನ್ನೂ ಹಂಚಿಕೊಡಿರಿ ಎಂದು ಶಿಷ್ಯರಿಗೆ ಅಪ್ಪಣೆ ಕೊಟ್ಟನು.

8ಜನರು ತಿಂದು ತೃಪ್ತರಾದರು. ಉಳಿದ ತುಂಡುಗಳನ್ನು ಒಟ್ಟುಗೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.

9ಊಟಮಾಡಿದವರು ಹೆಚ್ಚುಕಡಿಮೆ ನಾಲ್ಕು ಸಾವಿರ ಗಂಡಸರಿದ್ದರು.

10ಆತನು ಅವರನ್ನು ಕಳುಹಿಸಿದ ನಂತರ ಕೂಡಲೆ ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿ ದಲ್ಮನೂಥ ಸೀಮೆಗೆ ಬಂದನು.

11ತರುವಾಯ ಫರಿಸಾಯರು ಯೇಸುವಿನ ಬಳಿಗೆ ಬಂದು, ಆತನ ಕೂಡ ತರ್ಕಮಾಡಿ, ಆತನನ್ನು ಪರೀಕ್ಷಿಸುವ ಉದ್ದೇಶದಿಂದ, “ನೀನು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡಿ ತೋರಿಸು” ಎಂದು ಕೇಳಿದರು.

12ಯೇಸು ಅದನ್ನು ಕೇಳಿ ತನ್ನ ಆತ್ಮದಲ್ಲಿ ನಿಟ್ಟುಸಿರುಬಿಟ್ಟು, “ಈ ಸಂತತಿಯು ಸೂಚಕಕಾರ್ಯವನ್ನು ಅಪೇಕ್ಷಿಸುವುದು ಏಕೆ? ನಿಮಗೆ ನಾನು ಸತ್ಯವಾಗಿ ಹೇಳುತ್ತೇನೆ, ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡುವುದಿಲ್ಲ, ಇದು ಖಂಡಿತ” ಎಂದು ಹೇಳಿದನು.

13ಅವರನ್ನು ಬಿಟ್ಟು ತಿರುಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೋದನು.

14ಆದರೆ ಶಿಷ್ಯರು ರೊಟ್ಟಿಯನ್ನು ತೆಗೆದುಕೊಳ್ಳಲು ಮರೆತಿದ್ದರು. ದೋಣಿಯಲ್ಲಿ ಅವರ ಹತ್ತಿರ ಒಂದು ರೊಟ್ಟಿ ಮಾತ್ರ ಇತ್ತು; ಬೇರೆ ಏನೂ ಇರಲಿಲ್ಲ.

15ಯೇಸು ಅವರಿಗೆ, “ಫರಿಸಾಯರ ಮತ್ತು ಹೆರೋದನ ಹುಳಿಹಿಟ್ಟಿನ ವಿಷಯದಲ್ಲಿ ನೀವು ಜಾಗರೂಕತೆಯಿಂದಿರಿ” ಎಂದು ಎಚ್ಚರಿಸಿದನು.

16ಅವರು, “ನಮ್ಮಲ್ಲಿ ರೊಟ್ಟಿ ಇಲ್ಲದಿರುವುದರಿಂದಲೇ ಹೀಗೆ ಹೇಳುತ್ತಿರಬೇಕು” ಎಂದು ತಮ್ಮೊಳಗೆ ಚರ್ಚಿಸಿಕೊಂಡರು.

17ಆತನು ಅದನ್ನು ತಿಳಿದು, “ರೊಟ್ಟಿಯಿಲ್ಲವಲ್ಲಾ ಎಂದು ನಿಮ್ಮೊಳಗೆ ಚರ್ಚಿಸಿಕೊಳ್ಳುವುದೇಕೆ? ನೀವು ಇನ್ನೂ ಗ್ರಹಿಸಲಿಲ್ಲವೋ? ನಿಮಗೆ ತಿಳಿವಳಿಕೆ ಬರಲಿಲ್ಲವೋ? ನಿಮ್ಮ ಮನಸ್ಸು ಅಷ್ಟು ಕಠಿಣವಾಗಿದೆಯೋ?

18ಕಣ್ಣಿದ್ದು ಕಾಣುವುದಿಲ್ಲವೋ? ಕಿವಿಯಿದ್ದು ಕೇಳುವುದಿಲ್ಲವೋ? ನಿಮಗೆ ನೆನಪಿಲ್ಲವೋ?

19ನಾನು ಆ ಐದು ರೊಟ್ಟಿಗಳನ್ನು ಮುರಿದು ಐದು ಸಾವಿರ ಜನರಿಗೆ ಹಂಚಿಸಿದಾಗ ಉಳಿದ ರೊಟ್ಟಿಯ ತುಂಡುಗಳನ್ನು ಎಷ್ಟು ಬುಟ್ಟಿ ತುಂಬಾ ತೆಗೆದುಕೊಂಡು ಹೋದಿರಿ?” ಎಂದು ಕೇಳಿದನು. ಅವರು, “ಹನ್ನೆರಡು ಬುಟ್ಟಿಗಳು” ಅಂದರು.

20“ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದು ಹಂಚಿಸಿದ ನಂತರ ಎಷ್ಟು ಪುಟ್ಟಿಗಳನ್ನು ತೆಗೆದುಕೊಂಡು ಹೋದಿರಿ” ಎಂದು ಕೇಳಿದನು. ಅವರು, “ಏಳು ಪುಟ್ಟಿಗಳು” ಅಂದರು.

21ಆಗ ಆತನು ಅವರಿಗೆ, “ನೀವು ಇನ್ನೂ ಗ್ರಹಿಸಲಿಲ್ಲವೋ?” ಎಂದು ಕೇಳಿದನು.

22ಮತ್ತು ಅವರು ಬೇತ್ಸಾಯಿದ ಊರಿಗೆ ಬಂದರು. ಅಲ್ಲಿ ಜನರು ಒಬ್ಬ ಕುರುಡನನ್ನು ಯೇಸುವಿನ ಬಳಿಗೆ ಕರೆದುಕೊಂಡು ಬಂದು, ಇವನನ್ನು ಮುಟ್ಟಬೇಕು ಎಂದು ಆತನನ್ನು ಬೇಡಿಕೊಂಡರು.

23ಆತನು ಕುರುಡನ ಕೈ ಹಿಡಿದು ಊರ ಹೊರಗೆ ಕರೆದುಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳು ಹಚ್ಚಿ, ಅವನ ಮೇಲೆ ತನ್ನ ಕೈಗಳನ್ನಿಟ್ಟು, “ನಿನಗೆ ಏನಾದರೂ ಕಾಣುತ್ತದೆಯೋ?” ಎಂದು ಅವನನ್ನು ಕೇಳಿದನು.

24ಅವನು ತಲೆಯೆತ್ತಿ ನೋಡಿ, “ನನಗೆ ಜನರು ಕಾಣುತ್ತಾರೆ; ಆದರೆ ಅವರು ನಡೆದಾಡುವ ಮರಗಳಂತೆ ಕಾಣಿಸುತ್ತಿದ್ದಾರೆ” ಎಂದನು.

25ತನ್ನ ಕೈಗಳನ್ನು ಪುನಃ ಅವನ ಕಣ್ಣುಗಳ ಮೇಲಿಟ್ಟನು; ಆಗ ಅವನು ಕಣ್ಣರಳಿಸಿ ನೋಡಿ ಪೂರ್ಣ ದೃಷ್ಟಿಯನ್ನು ಹೊಂದಿದನು. ಅವನು ನೋಡಲು ಎಲ್ಲವೂ ಸ್ಪಷ್ಟವಾಗಿ ಕಾಣಿಸಿತು.

26ತರುವಾಯ ಆತನು, “ನೀನು ಊರೊಳಗೆ ಹೋಗಬೇಡ” ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿಬಿಟ್ಟನು.

27ಯೇಸುವೂ ಆತನ ಶಿಷ್ಯರೂ ಫಿಲಿಪ್ಪನ ಕೈಸರೈಯ ಎಂಬ ಪಟ್ಟಣಕ್ಕೆ ಸೇರಿದ ಗ್ರಾಮಗಳಿಗೆ ಹೊರಟರು. ದಾರಿಯಲ್ಲಿ ಆತನು, “ಜನರು ನನ್ನನ್ನು ಯಾರೆಂದು ಹೇಳುತ್ತಾರೆ?” ಎಂದು ತನ್ನ ಶಿಷ್ಯರನ್ನು ಕೇಳಿದನು.

28ಅದಕ್ಕೆ ಅವರು, “ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ; ಇನ್ನು ಕೆಲವರು ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ” ಎಂದು ಹೇಳಿದರು.

29ಆತನು ಅವರನ್ನು, ಕುರಿತು “ನೀವು ನನ್ನನ್ನು ಯಾರನ್ನುತ್ತೀರಿ?” ಎಂದು ಕೇಳಲಾಗಿ ಪೇತ್ರನು, “ನೀನು ಕ್ರಿಸ್ತನು” ಎಂದು ಉತ್ತರಕೊಟ್ಟನು.

30ಅದಕ್ಕೆ ಆತನು, “ನನ್ನ ವಿಷಯವಾಗಿ ಯಾರಿಗೂ ಹೇಳಬೇಡಿರಿ” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದನು.

31ಇದಲ್ಲದೆ ಆತನು, ಮನುಷ್ಯಕುಮಾರನು ಬಹು ಕಷ್ಟಗಳನ್ನು ಅನುಭವಿಸಿ ಹಿರಿಯರಿಂದಲೂ, ಮುಖ್ಯಯಾಜಕರಿಂದಲೂ, ಶಾಸ್ತ್ರಿಗಳಿಂದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿನಗಳ ನಂತರ ಜೀವಿತನಾಗಿ ಎದ್ದು ಬರಬೇಕಾಗಿದೆ ಎಂದು ಉಪದೇಶಮಾಡುವುದಕ್ಕೆ ಪ್ರಾರಂಭಿಸಿದನು.

32ಆತನು ಈ ಮಾತನ್ನು ಸ್ಪಷ್ಟವಾಗಿ ಹೇಳಿದನು. ಆಗ ಪೇತ್ರನು ಆತನನ್ನು ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ “ನೀನು ಹೀಗೆ ಹೇಳುವುದು ಸರಿಯಲ್ಲ” ಎಂದು ಗದರಿಸಿದನು.

33ಆದರೆ ಯೇಸು ಹಿಂತಿರುಗಿ ತನ್ನ ಶಿಷ್ಯರನ್ನು ನೋಡಿ ಪೇತ್ರನನ್ನು ಗದರಿಸಿ, “ಸೈತಾನನೇ, ನನ್ನನ್ನು ಬಿಟ್ಟು ತೊಲಗಿ ಹೋಗು! ನಿನ್ನ ಯೋಚನೆ ಮನುಷ್ಯರದಾಗಿದೆಯೇ ಹೊರತು ದೇವರದಲ್ಲ” ಎಂದು ಹೇಳಿದನು.

34ಆ ಮೇಲೆ ಆತನು ತನ್ನ ಶಿಷ್ಯರ ಜೊತೆಗೆ ಜನರ ಗುಂಪನ್ನೂ ಹತ್ತಿರ ಕರೆದು ಅವರಿಗೆ ಹೇಳಿದ್ದೇನಂದರೆ, “ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

35ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ, ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.

36ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತನ್ನ ಸ್ವಂತ ಪ್ರಾಣವನ್ನೇ ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು?

37ಒಬ್ಬನು ತನ್ನ ಪ್ರಾಣಕ್ಕೆ ಬದಲಾಗಿ ಏನು ಈಡು ಕೊಡಲಾದೀತು?

38ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಪೀಳಿಗೆಯವರಲ್ಲಿ ಯಾರು ನನ್ನನ್ನೂ, ನನ್ನ ಮಾತುಗಳನ್ನೂ ಕುರಿತು ನಾಚಿಕೆಪಡುವರೋ, ಅಂಥವರನ್ನು ಕುರಿತು ಮನುಷ್ಯಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರ ಸಮೇತವಾಗಿ ಬರುವಾಗ, ನಾಚಿಕೆಪಡುವನು” ಎಂದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath