ಮಾರ್ಕನು 1
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ದೇವಕುಮಾರನಾದ ಯೇಸು ಕ್ರಿಸ್ತನ ಕುರಿತಾದ ಸುವಾರ್ತೆಯ ಪ್ರಾರಂಭವು.
2ಪ್ರವಾದಿಯಾದ ಯೆಶಾಯನ ಗ್ರಂಥದಲ್ಲಿ ಬರೆದಿರುವ ಪ್ರಕಾರ, “ಇಗೋ, ನಾನು ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ; ಅವನು ನಿನ್ನ ದಾರಿಯನ್ನು ಸಿದ್ಧಮಾಡುವನು.”
3“‘ಕರ್ತನ ದಾರಿಯನ್ನು ಸಿದ್ಧಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ’ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ” ಎಂಬುದೇ.
4ಯೋಹಾನನು ಬಂದು ಜನರಿಗೆ, ನೀವು ಪಾಪಗಳ ಕ್ಷಮಾಪಣೆಗಾಗಿ ಪಶ್ಚಾತ್ತಾಪದ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಉಪದೇಶಿಸುತ್ತಾ ಅಡವಿಯಲ್ಲಿ ದೀಕ್ಷಾಸ್ನಾನಮಾಡಿಸುತ್ತಾ ಇದ್ದನು.
5ಆಗ ಯೂದಾಯ ಸೀಮೆಯೆಲ್ಲವೂ ಯೆರೂಸಲೇಮಿನವರೆಲ್ಲರೂ ಅವನ ಬಳಿಗೆ ಹೊರಟುಹೋಗಿ ತಮ್ಮ ತಮ್ಮ ಪಾಪಗಳನ್ನು ಒಪ್ಪಿಕೊಂಡು ಯೊರ್ದನ್ ಹೊಳೆಯಲ್ಲಿ ಅವನಿಂದ ದೀಕ್ಷಾಸ್ನಾನಮಾಡಿಸಿಕೊಳ್ಳುತ್ತಿದ್ದರು.
6ಈ ಯೋಹಾನನು ಒಂಟೆಯ ರೋಮದ ಹೊದಿಕೆಯನ್ನು ಧರಿಸಿಕೊಂಡು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಂಡಿದ್ದನು; ಅವನು ಮಿಡತೆಯನ್ನೂ ಕಾಡುಜೇನನ್ನೂ ಆಹಾರವನ್ನಾಗಿ ಸೇವಿಸುತ್ತಿದ್ದನು.
7ಅವನು “ನನಗಿಂತ ಶಕ್ತನು ನನ್ನ ಹಿಂದೆ ಬರುತ್ತಾನೆ; ಆತನ ಕೆರಗಳ ಪಟ್ಟಿಗಳನ್ನು ಬಗ್ಗಿ ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ.
8ನಾನು ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ; ಆತನಾದರೋ ನಿಮಗೆ ಪವಿತ್ರಾತ್ಮನಿಂದ ದೀಕ್ಷಾಸ್ನಾನ ಕೊಡುತ್ತಾನೆ” ಎಂದು ಸಾರಿ ಹೇಳಿದನು.
9ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡನು.
10ಯೇಸುವು ನೀರಿನೊಳಗಿನಿಂದ ಮೇಲಕ್ಕೆ ಬಂದ ಕೂಡಲೇ ಪರಲೋಕವು ತೆರೆಯಲ್ಪಟ್ಟು ದೇವರಾತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿಯುವುದನ್ನು ಕಂಡನು.
11ಆಗ “ನೀನು ಪ್ರಿಯನಾಗಿರುವ ನನ್ನ ಮಗನು, ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂಬ ದೈವ ವಾಣಿ ಪರಲೋಕದಿಂದ ಕೇಳಿಸಿತು.
12ಕೂಡಲೇ ಪವಿತ್ರಾತ್ಮ ಪ್ರೇರಿತನಾಗಿ ಯೇಸು ಅಡವಿಗೆ ಹೋದನು.
13ಆತನು ನಲವತ್ತು ದಿನ ಅಡವಿಯಲ್ಲಿ ಕಾಡುಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಟ್ಟನು ಮತ್ತು ದೇವದೂತರು ಯೇಸುವಿಗೆ ಉಪಚಾರ ಮಾಡಿದರು.
14ಯೋಹಾನನು ಬಂಧಿತನಾದ ತರುವಾಯ ಯೇಸು ಗಲಿಲಾಯಕ್ಕೆ ಬಂದು ದೇವರ ಸುವಾರ್ತೆಯನ್ನು ಹೀಗೆ ಸಾರಿ ಹೇಳಿದನು,
15“ಕಾಲವು ಪರಿಪೂರ್ಣವಾಯಿತು, ದೇವರ ರಾಜ್ಯವು ಸಮೀಪಿಸಿತು; ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ.”
16ಯೇಸು ಗಲಿಲಾಯ ಸಮುದ್ರದ ಬಳಿಯಲ್ಲಿ ಹೋಗುತ್ತಿರುವಾಗ ಸೀಮೋನನು ಮತ್ತು ಅವನ ತಮ್ಮನಾದ ಅಂದ್ರೆಯನು ಸಮುದ್ರದಲ್ಲಿ ಬಲೆ ಬೀಸುವುದನ್ನು ಕಂಡನು. ಅವರು ಬೆಸ್ತರಾಗಿದ್ದರು.
17ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ; ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಿಮ್ಮನ್ನು ಮಾಡುವೆನು” ಎಂದು ಹೇಳಿದನು.
18ಕೂಡಲೆ ಅವರು ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು.
19ಯೇಸು ಇನ್ನು ಸ್ವಲ್ಪ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬನನ್ನೂ ಅವನ ತಮ್ಮನಾದ ಯೋಹಾನನನ್ನೂ ಕಂಡನು; ಅವರು ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದರು.
20ಅವನು ಕೂಡಲೇ ಅವರನ್ನೂ ಕರೆದನು. ಅವರು ತಮ್ಮ ತಂದೆಯಾದ ಜೆಬೆದಾಯನನ್ನು ಕೂಲಿಯಾಳುಗಳ ಸಂಗಡ ದೋಣಿಯಲ್ಲಿ ಬಿಟ್ಟು ಆತನನ್ನು ಹಿಂಬಾಲಿಸಿದರು.
21ಬಳಿಕ ಅವರು ಕಪೆರ್ನೌಮೆಂಬ ಊರಿಗೆ ಹೋದರು. ಸಬ್ಬತ್ ದಿನವಾದಾಗ ಯೇಸು ಸಭಾಮಂದಿರಕ್ಕೆ ಹೋಗಿ ಉಪದೇಶ ಮಾಡತೊಡಗಿದನು.
22ಜನರು ಆತನ ಬೋಧನೆಯನ್ನು ಕೇಳಿ ಆತ್ಯಾಶ್ಚರ್ಯಪಟ್ಟರು; ಏಕೆಂದರೆ ಆತನು ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದವನಂತೆ ಅವರಿಗೆ ಬೋಧಿಸುತ್ತಿದ್ದನು.
23ಆಗ ಅವರ ಸಭಾಮಂದಿರದಲ್ಲಿ ದೆವ್ವಹಿಡಿದ ಒಬ್ಬ ಮನುಷ್ಯನಿದ್ದನು.
24ಆ ದೆವ್ವವು, “ನಜರೇತಿನ ಯೇಸುವೇ, ನಮ್ಮ ಗೊಡವೆ ನಿನಗೇಕೆ? ನೀನು ನಮ್ಮನ್ನು ನಾಶಮಾಡುವುದಕ್ಕೆ ಬಂದೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಬಂದ ಪರಿಶುದ್ಧನು” ಎಂದು ಕೂಗಿ ಹೇಳಿತು.
25ಯೇಸು ಅದನ್ನು ಗದರಿಸಿ, “ಸುಮ್ಮನಿರು, ಅವನನ್ನು ಬಿಟ್ಟು ಹೊರಗೆ ಬಾ” ಎಂದನು.
26ಆ ದೆವ್ವವು ಅವನನ್ನು ಒದ್ದಾಡಿಸಿ ಗಟ್ಟಿಯಾಗಿ ಕೂಗುತ್ತಾ, ಅವನೊಳಗಿಂದ ಹೊರಗೆ ಬಂದಿತು.
27ಜನರೆಲ್ಲರೂ ಬೆರಗಾಗಿ, “ಇದೇನು? ಅಧಿಕಾರಸಹಿತವಾದ ಹೊಸ ಬೋಧನೆ! ಈತನು ದೆವ್ವಗಳಿಗೂ ಸಹ ಆಜ್ಞಾಪಿಸುತ್ತಾನೆ, ಅವು ಈತನಿಗೆ ವಿಧೇಯವಾಗುತ್ತವೆ!” ಎಂದು ತಮ್ಮತಮ್ಮೊಳಗೆ ವಿಚಾರಮಾಡಿಕೊಂಡರು.
28ಕೂಡಲೆ ಆತನ ಸುದ್ದಿಯು ಗಲಿಲಾಯ ಸೀಮೆಯಲ್ಲೆಲ್ಲಾ ಹಬ್ಬಿತು.
29ಆ ಮೇಲೆ ಅವರು ಸಭಾಮಂದಿರದಿಂದ ಹೊರಟು ಯಾಕೋಬ ಯೋಹಾನರ ಸಂಗಡ ಸೀಮೋನ ಅಂದ್ರೆಯರ ಮನೆಗೆ ಹೋದರು.
30ಅಲ್ಲಿ ಸೀಮೋನನ ಅತ್ತೆ ಜ್ವರದಿಂದ ಮಲಗಿರಲಾಗಿ ಅವರು ಆಕೆಯ ಸಂಗತಿಯನ್ನು ಆತನಿಗೆ ತಿಳಿಸಿದರು.
31ಆತನು ಹತ್ತಿರಕ್ಕೆ ಬಂದು ಆಕೆಯ ಕೈಯನ್ನು ಹಿಡಿದು ಎಬ್ಬಿಸಲು ಜ್ವರವು ಆಕೆಯನ್ನು ಬಿಟ್ಟುಹೋಯಿತು; ಆಕೆಯು ಅವರಿಗೆ ಉಪಚಾರಮಾಡಿದಳು.
32ಸಂಜೆಯಾಗಿ ಹೊತ್ತು ಮುಳುಗಿದ ಮೇಲೆ ಜನರು ಅಸ್ವಸ್ಥರಾದವರನ್ನೂ, ದೆವ್ವಹಿಡಿದವರನ್ನೂ ಆತನ ಬಳಿಗೆ ಕರತಂದರು.
33ಊರಿನವರೆಲ್ಲಾ ಬಾಗಿಲಿನ ಮುಂದೆ ಒಟ್ಟುಗೂಡಿದ್ದರು.
34ಆಗ ಆತನು ನಾನಾ ರೀತಿಯ ರೋಗಗಳಿಂದ ಅಸ್ವಸ್ಥರಾಗಿದ್ದ ಬಹು ಜನರನ್ನು ಸ್ವಸ್ಥಮಾಡಿ ಅನೇಕ ದೆವ್ವಗಳನ್ನು ಬಿಡಿಸಿದನು. ಆದರೆ ಅವುಗಳಿಗೆ ತಾನು ಇಂಥವನೆಂದು ತಿಳಿದಿದ್ದರಿಂದ ಆತನು ಅವುಗಳನ್ನು ಮಾತನಾಡಗೊಡಿಸಲಿಲ್ಲ.
35ಮುಂಜಾನೆ ಇನ್ನೂ ಮೊಬ್ಬಿರುವಾಗ ಆತನು ಎದ್ದು ನಿರ್ಜನ ಸ್ಥಳಕ್ಕೆ ಹೋಗಿ ಪ್ರಾರ್ಥನೆಮಾಡುತ್ತಿದ್ದನು.
36ಸೀಮೋನನೂ ಅವನ ಸಂಗಡ ಇದ್ದವರೂ ಆತನನ್ನು ಹುಡುಕಿಕೊಂಡು ಆತನಿದ್ದಲ್ಲಿಗೆ ಬಂದು,
37ಆತನನ್ನು ಕಂಡಾಗ “ಎಲ್ಲರೂ ನಿನ್ನನ್ನು ಎದುರುನೋಡುತ್ತಿದ್ದಾರೆ” ಎಂದರು.
38ಆತನು ಅವರಿಗೆ, “ನಾವು ಸಮೀಪದಲ್ಲಿರುವ ಬೇರೆ ಊರುಗಳಿಗೆ ಹೋಗೋಣ; ಅಲ್ಲಿಯೂ ನಾನು ಸುವಾರ್ತೆಯನ್ನು ಸಾರಬೇಕು; ಇದಕ್ಕಾಗಿಯೇ ನಾನು ಇಲ್ಲಿಗೆ ಹೊರಟು ಬಂದಿದ್ದೇನೆ” ಎಂದು ಹೇಳಿದನು.
39ಬಳಿಕ ಆತನು ಗಲಿಲಾಯದಲ್ಲೆಲ್ಲಾ ಹೋಗಿ ಅವರ ಸಭಾಮಂದಿರಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ದೆವ್ವಗಳನ್ನು ಬಿಡಿಸುತ್ತಾ ಇದ್ದನು.
40ಒಬ್ಬ ಕುಷ್ಠರೋಗಿಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಮೊಣಕಾಲೂರಿಕೊಂಡು, “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ” ಎಂದು ಬೇಡಿಕೊಂಡನು.
41ಯೇಸು ಕನಿಕರಪಟ್ಟು ತನ್ನ ಕೈ ಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸುಂಟು; ಶುದ್ಧನಾಗು” ಅಂದನು.
42ಕೂಡಲೆ ಅವನ ಕುಷ್ಠವು ಹೋಗಿ, ಅವನು ಶುದ್ಧನಾದನು.
43ಆಗ ಯೇಸು ಅವನಿಗೆ, “ಯಾರಿಗೂ ಏನೂ ಹೇಳಬೇಡ ನೋಡು;
44ಹೋಗಿ ಯಾಜಕನಿಗೆ ನಿನ್ನ ಮೈ ತೋರಿಸಿ ನಿನ್ನ ಶುದ್ಧಿಗಾಗಿ ಮೋಶೆಯು ಆಜ್ಞಾಪಿಸಿರುವಂಥವುಗಳನ್ನು ಅರ್ಪಿಸು. ಅದು ಜನರಿಗೆ ಸಾಕ್ಷಿಯಾಗಿರಲಿ ಎಂದು ಖಂಡಿತವಾಗಿ” ಹೇಳಿ ಅವನನ್ನು ಕೂಡಲೆ ಕಳುಹಿಸಿ ಬಿಟ್ಟನು.
45ಆದರೆ ಅವನು ಹೊರಟುಹೋಗಿ ಎಲ್ಲಾ ಕಡೆಗೂ ಈ ಸಂಗತಿಯನ್ನು ಬಹಳವಾಗಿ ಸಾರಿ ಹಬ್ಬಿಸುವುದಕ್ಕೆ ಪ್ರಾರಂಭಿಸಿದ್ದರಿಂದ ಯೇಸು ಬಹಿರಂಗವಾಗಿ ಬೇರೆ ಊರುಗಳಿಗೆ ಹೋಗಲಾರದೆ ನಿರ್ಜನ ಸ್ಥಳಗಳಲ್ಲಿ ಇದ್ದನು. ಆದರೂ ಜನರು ಎಲ್ಲಾ ಕಡೆಯಿಂದಲೂ ಆತನ ಬಳಿಗೆ ಬರುತ್ತಿದ್ದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath