ಮತ್ತಾಯನು 2
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅರಸನಾದ ಹೆರೋದನ ಕಾಲದಲ್ಲಿ; ಯೂದಾಯ ಸೀಮೆಯ ಬೇತ್ಲೆಹೇಮ್ ಎಂಬ ಊರಿನಲ್ಲಿ ಯೇಸು ಹುಟ್ಟಿದಾಗ ಪೂರ್ವದೇಶದ ಜ್ಞಾನಿಗಳು ಯೆರೂಸಲೇಮಿಗೆ ಬಂದು,
2“ಯೆಹೂದ್ಯರ ಅರಸನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಆತನನ್ನು ಸೂಚಿಸುವ ನಕ್ಷತ್ರವನ್ನು ನಾವು ಪೂರ್ವದಿಕ್ಕಿನಲ್ಲಿ ಕಂಡು ಆತನಿಗೆ ಅಡ್ಡಬಿದ್ದು ನಮಸ್ಕರಿಸುವುದಕ್ಕಾಗಿ ಬಂದೆವು” ಎಂದರು.
3ಇದನ್ನು ಕೇಳಿ ಅರಸನಾದ ಹೆರೋದನು ತಳಮಳಪಟ್ಟನು ಮತ್ತು ಅವನೊಂದಿಗೆ ಯೆರೂಸಲೇಮಿನವರೆಲ್ಲರೂ ಕಳವಳಪಟ್ಟರು.
4ಅವನು ಯೆಹೂದ್ಯರ ಎಲ್ಲಾ ಮುಖ್ಯಯಾಜಕರನ್ನೂ ಶಾಸ್ತ್ರಿಗಳನ್ನೂ ಕೂಡಿಸಿ, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ” ಎಂದು ಅವರನ್ನು ಕೇಳಿದನು.
5ಅವರು ಅವನಿಗೆ, “ಯೂದಾಯದ ಬೇತ್ಲೆಹೇಮಿನಲ್ಲಿಯೇ; ಏಕೆಂದರೆ,
6“‘ಯೆಹೂದ ಸೀಮೆಯ ಬೇತ್ಲೆಹೇಮೇ, ಯೆಹೂದದ ಮುಖ್ಯಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಸಣ್ಣದಲ್ಲ. ಏಕೆಂದರೆ ನನ್ನ ಪ್ರಜೆಯಾದ ಇಸ್ರಾಯೇಲನ್ನು ಆಳತಕ್ಕ ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಉದಯಿಸುವನು.’ ಎಂಬುದಾಗಿ ಪ್ರವಾದಿಯ ಮುಖಾಂತರ ಬರೆಯಲ್ಪಟಿದೆ” ಎಂದು ಹೇಳಿದರು.
7ಆಗ ಹೆರೋದನು ಯಾರಿಗೂ ತಿಳಿಯದಂತೆ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಕಾಣಿಸಿದ ಗಳಿಗೆಯನ್ನು ಅವರಿಂದ ನಿಖರವಾಗಿ ತಿಳಿದುಕೊಂಡು,
8“ನೀವು ಹೋಗಿ ಆ ಕೂಸಿನ ವಿಷಯದಲ್ಲಿ ಚೆನ್ನಾಗಿ ವಿಚಾರಣೆ ಮಾಡಿರಿ; ಅದು ಸಿಕ್ಕಿದ ಮೇಲೆ ನನಗೆ ತಿಳಿಸಿರಿ; ನಾನು ಸಹ ಬಂದು ಆ ಕೂಸಿಗೆ ಅಡ್ಡಬಿದ್ದು ನಮಸ್ಕರಿಸುವೆನು” ಎಂದು ಹೇಳಿ ಜ್ಞಾನಿಗಳನ್ನು ಬೇತ್ಲೆಹೇಮಿಗೆ ಕಳುಹಿಸಿಕೊಟ್ಟನು.
9ಅವರು ಅರಸನ ಮಾತನ್ನು ಕೇಳಿ ಹೊರಟಾಗ ಪೂರ್ವದಿಕ್ಕಿನಲ್ಲಿ ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು ಆ ಕೂಸು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದಾಗಿ ಹೋಗುತಿತ್ತು.
10ಅವರು ನಕ್ಷತ್ರವನ್ನು ಕಂಡು ಪರಮಾನಂದದಿಂದ ಸಂತೋಷಿಸಿದರು.
11ಅವರು ಆ ಮನೆಯೊಳಕ್ಕೆ ಹೋಗಿ ಆ ಕೂಸನ್ನು ಅದರ ತಾಯಿಯಾದ ಮರಿಯಳ ಬಳಿಯಲ್ಲಿ ಕಂಡು ಅದಕ್ಕೆ ಸಾಷ್ಟಾಂಗನಮಸ್ಕಾರ ಮಾಡಿ ತಮ್ಮ ನಿಕ್ಷೇಪದ ಗಂಟುಗಳನ್ನು ಬಿಚ್ಚಿ ಅದಕ್ಕೆ ಚಿನ್ನ, ಪರಿಮಳದ್ರವ್ಯ ಮತ್ತು ರಕ್ತಬೋಳಗಳನ್ನು ಮಗುವಿಗೆ ಕಾಣಿಕೆಯಾಗಿ ಅರ್ಪಿಸಿದರು.
12ದೇವರು ಕನಸಿನಲ್ಲಿ ಅವರಿಗೆ, ನೀವು ಹೆರೋದನ ಬಳಿಗೆ ಹಿಂದಿರುಗಿ ಹೋಗಬಾರದೆಂದು ಆಜ್ಞೆ ನೀಡಿದ್ದರಿಂದ ಅವರು ಮತ್ತೊಂದು ದಾರಿಯಿಂದ ತಮ್ಮ ದೇಶಕ್ಕೆ ಹೊರಟುಹೋದರು.
13ಜ್ಞಾನಿಗಳು ಹೋದ ಮೇಲೆ ದೇವದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ನೀನು ಎದ್ದು ಕೂಸನ್ನೂ, ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಓಡಿಹೋಗು, ನಾನು ನಿನಗೆ ಹೇಳುವ ತನಕ ಅಲ್ಲೇ ಇರು; ಹೆರೋದನು ಈ ಕೂಸನ್ನು ಕೊಲ್ಲಬೇಕೆಂದು ಅದನ್ನು ಹುಡುಕುತ್ತಿರುವನು” ಎಂದನು.
14ಅದೇ ರಾತ್ರಿ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಹೆರೋದನು ತೀರಿಹೋಗುವ ತನಕ ಅವರು ಅಲ್ಲೇ ಇದ್ದರು.
15ಹೀಗೆ, “ನನ್ನ ಮಗನನ್ನು ಐಗುಪ್ತದೇಶದೊಳಗಿಂದ ಕರೆದೆನೆಂದು” ಕರ್ತನು ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರಿತು.
16ಆಗ ಹೆರೋದನು ತಾನು ಜ್ಞಾನಿಗಳಿಂದ ವಂಚಿತನಾದೆ ಎಂದು ತಿಳಿದು ಬಹಳ ಕೋಪಗೊಂಡು ತನ್ನ ಆಳುಗಳನ್ನು ಕಳುಹಿಸಿ ತಾನು ಜ್ಞಾನಿಗಳಿಂದ ಕೂಸು ಹುಟ್ಟಿದ್ದ ಗಳಿಗೆಯನ್ನು ತಿಳಿದುಕೊಂಡಿದ್ದ ಕಾಲಕ್ಕೆ ಸರಿಯಾಗಿ, ಬೇತ್ಲೆಹೇಮಿನಲ್ಲಿಯೂ ಅದರ ಎಲ್ಲಾ ನೆರೆಹೊರೆ ಹಳ್ಳಿಗಳಲ್ಲಿಯೂ ಹುಟ್ಟಿದ ಎರಡು ವರ್ಷದೊಳಗಿನ ಗಂಡು ಕೂಸುಗಳನ್ನೆಲ್ಲಾ ಕೊಲ್ಲಿಸಿದನು.
17ಯೆರೆಮೀಯನೆಂಬ ಪ್ರವಾದಿಯು ಹೇಳಿದ ಮಾತು ಹೀಗೆ ನೆರವೇರಿತು; ಅದೇನೆಂದರೆ,
18“ರಾಮದಲ್ಲಿ ಬೊಬ್ಬೆಯು ಕೇಳಿಸಿತು; ಆಕ್ರಂದನವೂ ಬಹು ಗೋಳಾಟವೂ ಉಂಟಾದವು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಗೋಳಾಡಿ ಅವರು ಇಲ್ಲದೆ ಹೋದದ್ದಕ್ಕಾಗಿ ಸಮಾಧಾನ ಹೊಂದಲಾರದೆ ಇದ್ದಳು” ಎಂಬುದೇ.
19ಹೆರೋದನು ತೀರಿಹೋದ ಮೇಲೆ ಐಗುಪ್ತದೇಶದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿಕೊಂಡು,
20“ನೀನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹೋಗು; ಕೂಸಿನ ಪ್ರಾಣವನ್ನು ತೆಗೆಯಬೇಕೆಂದಿದ್ದವರು ಸತ್ತು ಹೋದರು” ಎಂದು ಹೇಳಿದನು.
21ಆಗ ಯೋಸೇಫನು ಎದ್ದು ಕೂಸನ್ನೂ ಅದರ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.
22ಆದರೆ ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯವನ್ನು ಆಳುತ್ತಿದ್ದಾನೆ ಎಂದು ಕೇಳಿ ಅಲ್ಲಿಗೆ ಹೋಗುವುದಕ್ಕೆ ಅಂಜಿದನು. ಆಗ ಅವನು ಕನಸಿನಲ್ಲಿ ದೇವರ ಅಪ್ಪಣೆಯನ್ನು ಹೊಂದಿ ಗಲಿಲಾಯ ಸೀಮೆಗೆ ಹೋದನು.
23ಅಲ್ಲಿರುವ ನಜರೇತೆಂಬ ಊರನ್ನು ಸೇರಿ ವಾಸಮಾಡಿದನು. ಹೀಗೆ, “ಆತನು ನಜರೇತಿನವನೆಂದು ಕರೆಯಲ್ಪಡುವನು” ಎಂಬುದಾಗಿ ಪ್ರವಾದಿಗಳು ಹೇಳಿರುವ ಮಾತು ನೆರವೇರಿತು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath