ಕ್ರಿಶ್ಚಿಯನ್ ಧರ್ಮ
ಹಿಂದೆ

ಮತ್ತಾಯನು 18

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆದೇ ವೇಳೆಯಲ್ಲಿ ಶಿಷ್ಯರು ಯೇಸುವಿನ ಬಳಿ ಬಂದು, “ಪರಲೋಕ ರಾಜ್ಯದಲ್ಲಿ ಯಾವನು ದೊಡ್ಡವನು?” ಎಂದು ಕೇಳಿದರು.

2ಆತನು ಚಿಕ್ಕ ಮಗುವನ್ನು ಹತ್ತಿರಕ್ಕೆ ಕರೆದು ಅವರ ನಡುವೆ ನಿಲ್ಲಿಸಿ,

3ಅವರಿಗೆ, “ನಿಮ್ಮ ಮನಸ್ಸು ಪರಿವರ್ತನೆಕೊಂಡು ಚಿಕ್ಕ ಮಕ್ಕಳಂತೆ ಆಗದೇ ಹೋದರೆ ನೀವು ಪರಲೋಕ ರಾಜ್ಯದಲ್ಲಿ ಪ್ರವೇಶಿಸುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

4ಹೀಗಿರುವುದರಿಂದ ಯಾವನು ಈ ಚಿಕ್ಕ ಮಗುವಿನಂತೆ ತನ್ನನ್ನು ತಾನೇ ತಗ್ಗಿಸಿಕೊಳ್ಳುತ್ತಾನೋ ಅವನೇ ಪರಲೋಕ ರಾಜ್ಯದಲ್ಲಿ ದೊಡ್ಡವನು.

5ಇದಲ್ಲದೆ ಯಾವನಾದರೂ ನನ್ನ ಹೆಸರಿನಲ್ಲಿ ಇಂಥ ಒಂದು ಚಿಕ್ಕ ಮಗುವನ್ನು ಸ್ವೀಕರಿಸುವನೋ ನನ್ನನ್ನೇ ಸ್ವೀಕರಿಸುವವನಾಗಿದ್ದಾನೆ.

6ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯನ್ನುಂಟುಮಾಡಿದರೆ ಅಂಥವನ ಕೊರಳಿಗೆ ದೊಡ್ಡ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಆಳವಾದ ಸಮುದ್ರದಲ್ಲಿ ಮುಳುಗಿಸಿಬಿಡುವುದು ಅವನಿಗೆ ಉತ್ತಮ.

7“ತೊಡಕುಗಳ ನಿಮಿತ್ತ ಲೋಕಕ್ಕೆ ಅಯ್ಯೋ, ತೊಡಕುಗಳು ಬರುವುದು ಅನಿವಾರ್ಯ, ಆದಾಗ್ಯೂ ಯಾವ ಮನುಷ್ಯನಿಂದ ತೊಡಕು ಬರುತ್ತದೋ ಅವನಿಗೆ ಅಯ್ಯೋ.

8ನಿನ್ನ ಕೈಯಾಗಲಿ, ನಿನ್ನ ಕಾಲಾಗಲಿ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದು ಬಿಸಾಡಿಬಿಡು, ಎರಡು ಕೈ, ಎರಡು ಕಾಲು ಉಳ್ಳವನಾಗಿ ನಿತ್ಯ ಬೆಂಕಿಯಲ್ಲಿ ಹಾಕಲ್ಪಡುವುದಕ್ಕಿಂತ ಅಂಗಹೀನನಾಗಿ ಅಥವಾ ಕುಂಟನಾಗಿ ಜೀವದಲ್ಲಿ ಸೇರುವುದು ನಿನಗೆ ಉತ್ತಮ.

9ನಿನ್ನ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತು ಬಿಸಾಡಿಬಿಡು, ಎರಡು ಕಣ್ಣುಳ್ಳವನಾಗಿ ಅಗ್ನಿನರಕದಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದೇ ಕಣ್ಣುಳ್ಳವನಾಗಿ ಜೀವದಲ್ಲಿ ಸೇರುವುದು ನಿನಗೆ ಉತ್ತಮ.

10ಈ ಚಿಕ್ಕವರಲ್ಲಿ ಒಬ್ಬನನ್ನಾದರೂ ತಾತ್ಸಾರಮಾಡದಂತೆ ನೋಡಿಕೊಳ್ಳಿರಿ. ಏಕೆಂದರೆ ಪರಲೋಕದಲ್ಲಿ ಇವರ ದೂತರು ನನ್ನ ಸ್ವರ್ಗೀಯ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿರುತ್ತಾರೆ ಎಂದು ನಿಮಗೆ ಹೇಳುತ್ತೇನೆ.

11ಮನುಷ್ಯಕುಮಾರನು ಕೆಟ್ಟು ಹೋಗಿರುವುದನ್ನು ಹುಡುಕಿ ರಕ್ಷಿಸುವುದಕ್ಕೆ ಬಂದನು.

12“ನಿಮ್ಮಲ್ಲಿ ಒಬ್ಬ ಮನುಷ್ಯನಿಗೆ ನೂರು ಕುರಿಗಳು ಇರಲಾಗಿ ಅವುಗಳಲ್ಲಿ ಒಂದು ಕುರಿಯು ತಪ್ಪಿಸಿಕೊಂಡು ಹೋಯಿತೆಂದು ಇಟ್ಟುಕೊಳ್ಳಿ. ಆಗ ನಿಮಗೇನು ಅನ್ನಿಸುತ್ತದೆ? ಅವನು ಉಳಿದ ತೊಂಬತ್ತೊಂಬತ್ತು ಕುರಿಗಳನ್ನು ಬೆಟ್ಟದಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದ ಆ ಒಂದು ಕುರಿಯನ್ನು ಹುಡುಕಿಕೊಂಡು ಹೋಗುವುದಿಲ್ಲವೇ?

13ಅದು ಅವನಿಗೆ ಸಿಕ್ಕಿದರೆ, ತಪ್ಪಿಸಿಕೊಳ್ಳದೆ ಇರುವ ತೊಂಬತ್ತೊಂಬತ್ತು ಕುರಿಗಳಿಗಿಂತ ಆ ಒಂದು ಕುರಿಗೋಸ್ಕರ ತುಂಬಾ ಸಂತೋಷಪಡುವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

14ಹಾಗೆಯೇ ಈ ಚಿಕ್ಕವರಲ್ಲಿ ಒಬ್ಬನಾದರೂ ನಾಶವಾಗಿಹೋಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.

15“ನಿನ್ನ ಸಹೋದರನು ನಿನ್ನ ವಿರುದ್ಧ ತಪ್ಪು ಮಾಡಿದರೆ, ನೀನು ಹೋಗಿ ಅವನು ಒಬ್ಬನೇ ಇರುವಾಗ ಅವನ ತಪ್ಪನ್ನು ಅವನಿಗೆ ಅರಿವಾಗುವಂತೆ ತಿಳಿಸು. ಅವನು ನಿನ್ನ ಮಾತನ್ನು ಕೇಳಿದರೆ ನಿನ್ನ ಸಹೋದರನನ್ನು ನೀನು ಸಂಪಾದಿಸಿಕೊಂಡಿರುವಿ.

16ಆದರೆ ಅವನು ನಿನ್ನ ಮಾತು ಕೇಳದೇ ಹೋದರೆ ಎರಡು ಮೂರು ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಿರಪಡುವ ಹಾಗೆ ಒಬ್ಬನನ್ನು ಅಥವಾ ಇಬ್ಬರನ್ನು ನಿನ್ನ ಸಂಗಡ ಕರೆದುಕೊಂಡು ಹೋಗು.

17ಅವನು ಅವರ ಮಾತನ್ನು ಕೇಳದೆ ಹೋದರೆ ಅದನ್ನು ಸಭೆಗೆ ಹೇಳು. ಅವನು ಸಭೆಯ ಮಾತನ್ನು ಕೇಳದೆ ಹೋದರೆ ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.

18“ಭೂಲೋಕದಲ್ಲಿ ನೀವು ಏನೇನು ಕಟ್ಟುತ್ತೀರೋ ಅದು ಪರಲೋಕದಲ್ಲಿಯೂ ಕಟ್ಟಲ್ಪಡುವುದು. ಮತ್ತು ಭೂಲೋಕದಲ್ಲಿ ಏನೇನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲ್ಪಡುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

19ಇದಲ್ಲದೆ ನಿಮ್ಮಲ್ಲಿ ಇಬ್ಬರು ಬೇಡಿಕೊಳ್ಳತಕ್ಕ ಯಾವುದಾದರು ಒಂದು ವಿಷಯವಾಗಿ ಭೂಲೋಕದಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದೆಂದು ನಿಮಗೆ ಹೇಳುತ್ತೇನೆ.

20ಏಕೆಂದರೆ ಇಬ್ಬರಾಗಲೀ ಮೂವರಾಗಲೀ ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬರುತ್ತಾರೋ ಅಲ್ಲಿ ಅವರ ಮಧ್ಯದಲ್ಲಿ ನಾನು ಇದ್ದೇನೆ” ಅಂದನು.

21ಆಗ ಪೇತ್ರನು ಆತನ ಬಳಿಗೆ ಬಂದು, “ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು.

22ಯೇಸು ಅವನಿಗೆ, “ಏಳು ಸಾರಿ ಎಂದಲ್ಲ ಏಳೆಪ್ಪತ್ತು ಸಾರಿ ಎಂದು ನಿನಗೆ ಹೇಳುತ್ತೇನೆ.

23ಆದುದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.

24ಅವನು ಲೆಕ್ಕ ತೆಗೆದುಕೊಳ್ಳುವುದಕ್ಕೆ ಪ್ರಾರಂಭಮಾಡಿದಾಗ ಹತ್ತು ಸಾವಿರ ಬಂಗಾರದ ನಾಣ್ಯ ನೀಡಬೇಕಿದ್ದ ಸೇವಕನನ್ನು ಅವನ ಬಳಿಗೆ ಕರತಂದರು.

25ಆ ಸಾಲ ತೀರಿಸುವುದಕ್ಕೆ ಅವನಲ್ಲಿ ಏನೂ ಇಲ್ಲದುದರಿಂದ ಅವನ ಒಡೆಯನು ಅವನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಅದನ್ನು ತೀರಿಸಬೇಕೆಂದು ಅಪ್ಪಣೆ ಮಾಡಿದನು.

26ಆ ಸೇವಕನು ಮೊಣಕಾಲೂರಿ ತನ್ನ ತಲೆಯನ್ನು ಬಾಗಿ ಅವನಿಗೆ, ‘ಒಡೆಯನೇ, ನನ್ನ ಮೇಲೆ ತಾಳ್ಮೆಯಿರಲಿ, ನಿನ್ನದೆಲ್ಲವನ್ನೂ ನಾನು ಕೊಟ್ಟು ತೀರಿಸುತ್ತೇನೆಂದು’ ಹೇಳಿದನು.

27ಆ ಸೇವಕನ ಒಡೆಯನು ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.

28ತರುವಾಯ ಆ ಸೇವಕನು ಹೊರಕ್ಕೆ ಬಂದು ತನಗೆ ನೂರು ಬೆಳ್ಳಿ ನಾಣ್ಯ ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲ ತೀರಿಸು’ ಎಂದು ಹೇಳಿದನು.

29ಆದರೆ ಅವನ ಜೊತೆ ಸೇವಕನು ಮೊಣಕಾಲೂರಿ, ‘ನನ್ನ ಮೇಲೆ ತಾಳ್ಮೆಯಿರಲಿ ನಾನು ತೀರಿಸುತ್ತೇನೆ’ ಎಂದು ಬೇಡಿಕೊಂಡನು.

30ಆದರೆ ಅವನು ಒಪ್ಪದೆ ಹೊರಟುಹೋಗಿ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.

31ಅವನ ಜೊತೆ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು ತಮ್ಮ ಒಡೆಯನ ಬಳಿಗೆ ಬಂದು ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು.

32ಆಗ ಅವನ ಒಡೆಯನು ಅವನನ್ನು ಕರಸಿ, ‘ಓ, ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನಲ್ಲವೇ?

33ನಾನು ನಿನ್ನನ್ನು ಕರುಣಿಸಿದ ಹಾಗೆ ನೀನು ಸಹ ನಿನ್ನ ಜೊತೆ ಸೇವಕನನ್ನು ಕರುಣಿಸಬಾರದಾಗಿತ್ತೇ?’ ಎಂದು ಹೇಳಿ,

34ಒಡೆಯನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಅವನನ್ನು ಪೀಡಿಸುವವರ ಕೈಗೆ ಒಪ್ಪಿಸಿದನು.

35ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಅಂದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath