ಕ್ರಿಶ್ಚಿಯನ್ ಧರ್ಮ
ಹಿಂದೆ

ಮತ್ತಾಯನು 11

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರಿಗೆ ಅಪ್ಪಣೆಕೊಡುವುದನ್ನು ಮುಗಿಸಿದ ಬಳಿಕ ಅವರ ಪಟ್ಟಣಗಳಲ್ಲಿ ಉಪದೇಶಮಾಡುವುದಕ್ಕೂ ಬೋಧಿಸುವುದಕ್ಕೂ ಅಲ್ಲಿಂದ ಹೊರಟು ಹೋದನು.

2ಕ್ರಿಸ್ತನ ಕಾರ್ಯಗಳ ಸುದ್ದಿಯನ್ನು ಸೆರೆಮನೆಯಲ್ಲಿದ್ದ ಯೋಹಾನನು ಕೇಳಿದಾಗ, ಆತನ ಬಳಿಗೆ ತನ್ನ ಶಿಷ್ಯರನ್ನು ಕಳುಹಿಸಿ,

3“ಬರಬೇಕಾದವನು ನೀನೋ ಇಲ್ಲವೇ ನಾವು ಬೇರೊಬ್ಬನಿಗಾಗಿ ಕಾದು ನೋಡಬೇಕೋ” ಎಂದು ಅವರ ಮೂಲಕ ಹೇಳಿ ಕೇಳಿಸಿದನು.

4ಯೇಸು ಅವರಿಗೆ ಪ್ರತ್ಯುತ್ತರವಾಗಿ, “ನೀವು ಹೋಗಿ ಕಾಣುವವುಗಳನ್ನು ಕೇಳುವವುಗಳನ್ನು ಯೋಹಾನನಿಗೆ ತಿಳಿಸಿರಿ;

5ಕುರುಡರು ನೋಡುತ್ತಿದ್ದಾರೆ, ಕುಂಟರು ನಡೆಯುತ್ತಿದ್ದಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಿದ್ದಾರೆ, ಕಿವುಡರು ಕೇಳುತ್ತಿದ್ದಾರೆ, ಸತ್ತವರು ಜೀವದಿಂದ ಎಬ್ಬಿಸಲ್ಪಡುತ್ತಿದ್ದಾರೆ, ಮತ್ತು ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತಿದ್ದೆ.

6ನನ್ನ ವಿಷಯದಲ್ಲಿ ಆಪಾದಿಸದವನೇ ಧನ್ಯನು” ಎಂದು ಹೇಳಿದನು.

7ಅವರು ಹೊರಟು ಹೋಗುತ್ತಿರಲು ಯೇಸು ಯೋಹಾನನ ವಿಷಯವಾಗಿ ಆ ಜನರ ಗುಂಪುಗಳಿಗೆ ಹೇಳತೊಡಗಿದ್ದೇನಂದರೆ, “ನೀವು ಏನು ನೋಡಬೇಕೆಂದು ಅಡವಿಗೆ ಹೋಗಿದ್ದಿರಿ? ಗಾಳಿಯಿಂದ ಅಲ್ಲಾಡುವ ದಂಟನ್ನೋ?

8ಹಾಗಾದರೆ ಏನು ನೋಡಬೇಕೆಂದು ಹೋಗಿದ್ದಿರಿ? ನಯವಾದ ಉಡುಪನ್ನು ಧರಿಸಿಕೊಂಡ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸಿಕೊಂಡವರು ರಾಜನ ಅರಮನೆಗಳಲ್ಲಿ ಇರುತ್ತಾರಷ್ಟೆ.

9ಹಾಗಾದರೆ ಯಾತಕ್ಕೆ ಹೋಗಿದ್ದಿರಿ? ಪ್ರವಾದಿಯನ್ನು ನೋಡುವುದಕ್ಕೋ? ಹೌದು ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದ್ದೀರಿ ಎಂದು ನಿಮಗೆ ಹೇಳುತ್ತೇನೆ.

10‘ಇಗೋ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುವೆನು. ನೀನು ಹೋಗುವ ದಾರಿಯನ್ನು ಅವನು ನಿನ್ನ ಮುಂದೆ ಸಿದ್ಧಪಡಿಸುವನು’ ಎಂದು ಯಾರ ವಿಷಯವಾಗಿ ಬರೆದದೆಯೋ ಆತನು ಇವನೇ.

11ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಯಾರೂ ಇಲ್ಲ ಆದರೂ ಪರಲೋಕ ರಾಜ್ಯದಲ್ಲಿರುವ ಚಿಕ್ಕವನು ಅವನಿಗಿಂತಲೂ ದೊಡ್ಡವನೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

12ಸ್ನಾನಿಕ ಯೋಹಾನನ ಕಾಲದಿಂದ ಈ ವರೆಗೂ ಪರಲೋಕ ರಾಜ್ಯವು ಬಲವಂತಕ್ಕೆ ಗುರಿಯಾಗುತ್ತಿದೆ. ಬಲಾತ್ಕಾರಿಗಳು ಒತ್ತಾಯದಿಂದ ಅದನ್ನು ಸ್ವಾಧೀನಮಾಡಿಕೊಳ್ಳುತ್ತಿದ್ದಾರೆ.

13ಎಲ್ಲಾ ಪ್ರವಾದಿಗಳೂ, ಧರ್ಮಶಾಸ್ತ್ರವು ಯೋಹಾನನ ತನಕ ಪ್ರವಾದಿಸಿದರು.

14ನಿಮಗೆ ತಿಳಿದುಕೊಳ್ಳುವುದಕ್ಕೆ ಮನಸ್ಸಿದ್ದರೆ ಗಮನಿಸಿ ಬರತಕ್ಕ ಎಲೀಯನು ಇವನೇ.

15ಕೇಳುವುದ್ದಕ್ಕೆ ಕಿವಿಯುಳ್ಳವನು ಕೇಳಲಿ.

16ಆದರೆ ಈ ಸಂತತಿಯನ್ನು ಯಾರಿಗೆ ಹೋಲಿಸಲಿ? ಪೇಟೆಗಳಲ್ಲಿ ಕುಳಿತುಕೊಂಡು ತಮ್ಮ ಗೆಳೆಯರಿಗೆ,

17‘ನಿಮಗೋಸ್ಕರ ಕೊಳಲೂದಿದೆವು ನೀವು ಕುಣಿಯಲಿಲ್ಲ. ಶೋಕಿಸಿದೆವು ನೀವು ಗೋಳಾಡಲಿಲ್ಲ’ ಎಂದು ಕೂಗಿ ಹೇಳುವಂಥ ಮಕ್ಕಳಿಗೆ ಸಮಾನವಾಗಿದೆ.

18ಯೋಹಾನನು ಬಂದನು, ಅವನು ಅನ್ನ ಪಾನಗಳನ್ನು ತೆಗೆದುಕೊಳ್ಳದವನಾಗಿದುದರಿಂದ, ಅವರು ಅವನಿಗೆ, ‘ದೆವ್ವ ಹಿಡಿದಿದೆ’ ಅನ್ನುತ್ತಾರೆ.

19ಮನುಷ್ಯಕುಮಾರನು ಬಂದನು, ಅವನು ಅನ್ನ ಪಾನಗಳನ್ನು ಸೇವಿಸುವವನಾಗಿದ್ದನು. ಅವರು ‘ಇಗೋ ಇವನು ಹೊಟ್ಟೆಬಾಕನು ಕುಡುಕನು ತೆರಿಗೆಯವರ ಮತ್ತು ಪಾಪಿಗಳ ಗೆಳೆಯನು’ ಅನ್ನುತ್ತಾರೆ. ಆದರೆ ಜ್ಞಾನವು ಅದರ ಕಾರ್ಯಗಳಿಂದಲೇ ಜ್ಞಾನವೆಂದು ಸಮರ್ಥಿಸಲ್ಪಡುತ್ತದೆ” ಅಂದನು.

20ಅನಂತರ ಆತನು ತನ್ನ ಮಹತ್ಕಾರ್ಯಗಳು ಬಹಳವಾಗಿ ನಡೆದ ಊರುಗಳವರು ಮಾನಸಾಂತರಪಡಲಿಲ್ಲವೆಂದು ಅವುಗಳನ್ನು ಗದರಿಸತೊಡಗಿದನು.

21ಹೇಗೆಂದರೆ, “ಅಯ್ಯೋ ಖೊರಾಜಿನೇ, ಅಯ್ಯೋ ಬೇತ್ಸಾಯಿದವೇ, ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ತೂರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ ಅಲ್ಲಿನವರು ಎಂದೋ ಗೋಣಿತಟ್ಟು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ಮಾನಸಾಂತರಪಡುತ್ತಿದ್ದರು.

22ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ತೂರ್ ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ಸಹನೀಯವಾಗಿರುವುದು.

23ಎಲೈ ಕಪೆರ್ನೌಮೇ ನೀನು ಪರಲೋಕಕ್ಕೇರುವೇ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. ನಿನ್ನಲ್ಲಿ ನಡೆದ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ ಅದು ಇಂದಿನ ವರೆಗೆ ಉಳಿದಿರುತ್ತಿತ್ತು.

24ಆದರೆ ನ್ಯಾಯವಿಚಾರಣೆಯ ದಿನದಲ್ಲಿ ನಿಮ್ಮ ಗತಿಗಿಂತಲೂ ಸೊದೋಮ್ ಸೀಮೆಯ ಗತಿಯು ಸಹನೀಯವಾಗಿರುವುದು” ಎಂದು ನಿಮಗೆ ಹೇಳುತ್ತೇನೆ ಅಂದನು.

25ಅದೇ ಸಮಯದಲ್ಲಿ ಯೇಸು ಹೇಳಿದ್ದೇನೆಂದರೆ, “ತಂದೆಯೇ! ಪರಲೋಕದ ಭೂಲೋಕದ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ವಿಷಯಗಳನ್ನು ಮರೆಮಾಡಿ ಚಿಕ್ಕ ಮಕ್ಕಳಿಗೆ ಅದನ್ನು ಪ್ರಕಟಪಡಿಸಿರುವಿ ಎಂದು ನಿನ್ನನ್ನು ಕೊಂಡಾಡುತ್ತೇನೆ.

26ಹೌದು ತಂದೆಯೇ, ಹೀಗೆ ಮಾಡುವುದೇ ಒಳ್ಳೆಯದೆಂದು ನಿನ್ನ ದೃಷ್ಟಿಗೆ ತೋಚಿತು.

27ನನ್ನ ತಂದೆಯು ಎಲ್ಲವನ್ನು ನನಗೆ ಒಪ್ಪಿಸಿದ್ದಾನೆ. ತಂದೆಯ ಹೊರತು ಇನ್ನಾವನೂ ಮಗನನ್ನು ತಿಳಿದವನಲ್ಲ. ಮಗನ ಹೊರತು ಇನ್ನಾವನೂ ತಂದೆಯನ್ನು ತಿಳಿದವನಲ್ಲ. ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಪಡಿಸುವುದಕ್ಕೆ ಇಚ್ಛಿಸುತ್ತಾನೋ ಅವನು ಆತನನ್ನು ತಿಳಿದವನಾಗಿದ್ದಾನೆ.

28“ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ ನಾನು ನಿಮಗೆ ವಿಶ್ರಾಂತಿ ಕೊಡುವೆನು.

29ನಾನು ಸಾತ್ವಿಕನೂ ದೀನಹೃದಯನೂ ಆಗಿರುವುದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ, ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿ ಸಿಕ್ಕುವುದು.

30ಏಕೆಂದರೆ ನನ್ನ ನೊಗವು ಮೃದುವಾದದ್ದು, ನನ್ನ ಹೊರೆಯು ಹಗುರವಾದದ್ದು ಆಗಿದೆ” ಅಂದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath