ಮತ್ತಾಯನು 10
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲಾ ಬಗೆಯ ರೋಗಗಳನ್ನೂ ಎಲ್ಲಾ ರೀತಿಯ ಬೇನೆಗಳನ್ನೂ ವಾಸಿಮಾಡುವುದಕ್ಕೂ ಅಧಿಕಾರ ಕೊಟ್ಟನು.
2ಈ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಯಾವುವೆಂದರೆ, ಮೊದಲನೆಯವನು ಪೇತ್ರನೆನಿಸಿಕೊಳ್ಳುವ ಸೀಮೋನನು, ಅವನ ತಮ್ಮ ಅಂದ್ರೆಯ, ಜೆಬೆದಾಯನ ಮಗ ಯಾಕೋಬ, ಅವನ ತಮ್ಮನಾದ ಯೋಹಾನ,
3ಫಿಲಿಪ್ಪ, ಬಾರ್ತೊಲೊಮಾಯ, ತೋಮ, ಸುಂಕ ವಸೂಲಿಗಾರನಾದ ಮತ್ತಾಯ, ಅಲ್ಫಾಯನ ಮಗ ಯಾಕೋಬ, ತದ್ದಾಯ,
4ಮತಾಭಿಮಾನಿ ಎಂದು ಹೆಸರುಗೊಂಡ ಸೀಮೋನ ಹಾಗೂ ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ, ಎಂಬಿವರುಗಳೇ.
5ಈ ಹನ್ನೆರಡು ಮಂದಿಯನ್ನು ಯೇಸು ಕಳುಹಿಸಿದನು; ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟದ್ದೇನಂದರೆ, “ಅನ್ಯಜನಗಳಿರುವಲ್ಲಿಗೆ ಹೋಗಬೇಡಿರಿ, ಸಮಾರ್ಯದವರ ಊರೊಳಗೆ ಕಾಲಿಡಬೇಡಿರಿ;
6ಇವರನ್ನು ಬಿಟ್ಟು ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.
7‘ಪರಲೋಕ ರಾಜ್ಯವು ಸಮೀಪವಾಯಿತೆಂದು’ ಸಾರಿಹೇಳುತ್ತಾ ಹೋಗಿರಿ.
8ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ; ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ.
9ನಿಮ್ಮ ಕೈ ಚೀಲಗಳಲ್ಲಿ ಚಿನ್ನ, ಹಣ ದುಡ್ಡುಗಳನ್ನೂ, ದಾರಿಗೆ ಪ್ರಯಾಣದ ಚೀಲಗಳನ್ನೂ,
10ಎರಡು ಅಂಗಿ, ಚಪ್ಪಲಿ, ಕೋಲು ಮೊದಲಾದವುಗಳನ್ನೂ ತೆಗೆದುಕೊಳ್ಳಬೇಡಿರಿ. ಆಳು ತನ್ನ ಆಹಾರಕ್ಕೆ ಯೋಗ್ಯನಾಗಿದ್ದಾನೆ.
11ನೀವು ಯಾವುದೇ ಊರಿಗೆ ಅಥವಾ ಹಳ್ಳಿಗೆ ಪ್ರವೇಶಿಸಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ ಮುಂದಕ್ಕೆ ಹೊರಡುವ ತನಕ ಅ ಊರಲ್ಲೇ ಇರಿ.
12ಆ ಮನೆಯೊಳಗೆ ಹೋಗುವಾಗ ಶುಭವಾಗಲಿ ಅನ್ನಿರಿ.
13ಆ ಮನೆಯವರು ಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ಅವರಿಗೆ ಬರಲಿ; ಅಯೋಗ್ಯರಾಗಿದ್ದರೆ ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಿ ಬರಲಿ.
14ಯಾರಾದರೂ ನಿಮ್ಮನ್ನು ಸೇರಿಸಿಕೊಳ್ಳದೆಯೂ ನಿಮ್ಮ ವಾಕ್ಯಗಳನ್ನೂ ಕೇಳದೆಯೂ ಹೋದರೆ ನೀವು ಆ ಮನೆಯನ್ನಾಗಲಿ ಆ ಊರನ್ನಾಗಲಿ ಬಿಟ್ಟು ಹೊರಡುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.
15ನ್ಯಾಯವಿಚಾರಣೆಯ ದಿನದಲ್ಲಿ ಅಂಥ ಊರಿನ ಗತಿಯು ಸೊದೋಮ್ ಗೊಮೋರಗಳ ಸೀಮೆಯ ಗತಿಗಿಂತಲೂ ಕಠಿಣವಾಗಿರುವುದು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
16“ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತಿದ್ದೇನೆ. ಆದುದರಿಂದ ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.
17ಇದಲ್ಲದೆ ಜನರ ವಿಷಯದಲ್ಲಿ ಎಚ್ಚರವಾಗಿರಿ; ಅವರು ನಿಮ್ಮನ್ನು ನ್ಯಾಯವಿಚಾರಣೆಯ ಸಭೆಗಳಿಗೆ ಎಳೆದುಕೊಂಡು ಹೋಗುವರು; ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಚಾವಟಿಗಳಿಂದ ಹೊಡೆಯುವರು.
18ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಕರೆದುಕೊಂಡು ಹೋಗುವರು. ಹೀಗೆ ಅವರಿಗೂ ಅನ್ಯಜನಗಳಿಗೂ ಸಾಕ್ಷಿಯಾಗುವಿರಿ.
19ಆದರೆ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ಏನು ಮಾತನಾಡಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಸಮಯದಲ್ಲಿ ನಿಮಗೆ ಗೋಚರವಾಗುವುದು.
20ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.
21ಇದಲ್ಲದೆ ಸಹೋದರನು ಸಹೋದರನನ್ನು, ತಂದೆಯು ಮಗನನ್ನು, ಮರಣಕ್ಕೆ ಒಪ್ಪಿಸುವರು; ಮಕ್ಕಳು ತಂದೆತಾಯಿಗಳ ಮೇಲೆ ತಿರುಗಿಬಿದ್ದು ಅವರನ್ನು ಕೊಲ್ಲಿಸುವರು.
22ಮತ್ತು ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ದ್ವೇಷಿಸುವರು. ಆದರೆ ಕಡೆಯವರೆಗೂ ತಾಳಿಕೊಳ್ಳುವವನು ರಕ್ಷಣೆಹೊಂದುವನು.
23ಒಂದು ಊರಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಮತ್ತೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವಷ್ಟರಲ್ಲಿ ನೀವು ಇಸ್ರಾಯೇಲ್ ಜನರ ಊರುಗಳನ್ನು ಸಂಚರಿಸಿ ಮುಗಿಸಿರುವುದಿಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.
24“ಗುರುವಿಗಿಂತ ಶಿಷ್ಯನು ದೊಡ್ಡವನಲ್ಲ, ಒಡೆಯನಿಗಿಂತ ಆಳು ದೊಡ್ಡವನಲ್ಲ.
25ಗುರುವಿನಂತೆ ಆಗುವುದು ಶಿಷ್ಯನಿಗೆ ಸಾಕು, ಒಡೆಯನಂತೆ ಆಗುವುದು ಆಳಿಗೆ ಸಾಕು. ಅವರು ಮನೆಯ ಯಜಮಾನನಿಗೆ ಬೆಲ್ಜೆಬೂಲನೆಂದು ಹೆಸರಿಟ್ಟು ಕರೆದ ಮೇಲೆ ಆತನ ಮನೆಯವರನ್ನು ಇನ್ನೆಷ್ಟು ಅವಹೇಳನವಾಗಿ ಕರೆದಾರು?
26ಆದರೂ ಅವರಿಗೆ ಹೆದರಬೇಡಿರಿ. ಮರೆಯಾಗಿರುವ ಯಾವುದೂ ವ್ಯಕ್ತವಾಗದೆ ಇರುವುದಿಲ್ಲ; ಬೆಳಕಿಗೆ ಬಾರದ ರಹಸ್ಯವು ಇಲ್ಲ.
27ನಾನು ಕತ್ತಲಲ್ಲಿ ನಿಮಗೆ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ, ಮತ್ತು ಕಿವಿಯಲ್ಲಿ ಕೇಳಿದ್ದನ್ನು ಮಾಳಿಗೆಗಳ ಮೇಲೆ ನಿಂತು ಸಾರಿರಿ.
28ಇದಲ್ಲದೆ ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾರದವರಿಗೆ ಹೆದರಬೇಡಿರಿ, ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ಹಾಕಿ ನಾಶಮಾಡಬಲ್ಲಾತನಿಗೇ ಹೆದರಿರಿ.
29ಕಾಸಿಗೆ ಎರಡು ಗುಬ್ಬಿಗಳನ್ನು ಮಾರುವುದುಂಟಲ್ಲಾ; ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳದು.
30ನಿಮ್ಮ ತಲೆಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
31ಆದುದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚು ಬೆಲೆಬಾಳುವವರಾಗಿದ್ದೀರಿ.
32“ಹಾಗಾದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನೆಂದು ಒಪ್ಪಿಕೊಳ್ಳುವನೋ, ನಾನು ಸಹ ಅವನನ್ನು ನನ್ನವನೆಂದು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.
33ಆದರೆ ಯಾವನು ಮನುಷ್ಯರ ಮುಂದೆ ತಾನು ನನ್ನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.
34“ಭೂಲೋಕದ ಮೇಲೆ ಸಮಾಧಾನ ತರುವುದಕ್ಕೆ ಬಂದೆನೆಂದು ನೆನಸಬೇಡಿರಿ; ಸಮಾಧಾನವನ್ನು ಹುಟ್ಟಿಸುವುದಕ್ಕೆ ನಾನು ಬಂದಿಲ್ಲ, ಖಡ್ಗವನ್ನು ಹಾಕುವುದಕ್ಕೆ ಬಂದೆನು.
35ಹೇಗೆಂದರೆ ಮಗನಿಗೂ ತಂದೆಗೂ, ಮಗಳಿಗೂ ತಾಯಿಗೂ, ಸೊಸೆಗೂ ಅತ್ತೆಗೂ ಭೇದಹುಟ್ಟಿಸುವುದಕ್ಕೆ ಬಂದೆನು.
36ಹೀಗೆ ಒಬ್ಬ ಮನುಷ್ಯನಿಗೆ ಅವನ ಮನೆಯವರೇ ಶತ್ರುಗಳಾಗಿರುವರು.
37ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವುದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.
38ಮತ್ತು ಯಾವನಾದರೂ ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದಿದ್ದರೆ ನನ್ನ ಶಿಷ್ಯನಾಗಲು ಯೋಗ್ಯನಲ್ಲ.
39ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳೆದುಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಂಡವನು ಅದನ್ನು ಕಂಡುಕೊಳ್ಳುವನು.
40“ನಿಮ್ಮನ್ನು ಸ್ವೀಕರಿಸುವವನು ನನ್ನನ್ನು ಸ್ವೀಕರಿಸುವವನಾಗಿದ್ದಾನೆ; ನನ್ನನ್ನು ಸ್ವೀಕರಿಸುವವನು ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸ್ವೀಕರಿಸುವವನಾಗಿದ್ದಾನೆ.
41ಪ್ರವಾದಿಯನ್ನು ಪ್ರವಾದಿಯೆಂದು ಸ್ವೀಕರಿಸಿಕೊಳ್ಳುವವನು ಪ್ರವಾದಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು; ನೀತಿವಂತನನ್ನು ನೀತಿವಂತನೆಂದು ಸ್ವೀಕರಿಸಿಕೊಳ್ಳುವವನು ನೀತಿವಂತನಿಗೆ ಬರತಕ್ಕ ಪ್ರತಿಫಲವನ್ನು ಹೊಂದುವನು.
42ಮತ್ತು ಈ ಕನಿಷ್ಠರಾದವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಯಾರಾದರೂ ಒಂದು ತಂಬಿಗೆ ತಣ್ಣೀರನ್ನು ಕುಡಿಯುವುದಕ್ಕೆ ಕೊಟ್ಟರೆ ತಕ್ಕ ಪ್ರತಿಫಲವು ಅವನಿಗೆ ಬರುವುದು ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ” ಅಂದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath