ಲೂಕನು 18
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥನೆ ಮಾಡುತ್ತಿರಬೇಕೆಂಬುದಕ್ಕೆ ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು.
2ಅದೇನೆಂದರೆ, “ಒಂದು ಊರಿನಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಹೆದರದೆ ಮನುಷ್ಯರನ್ನು ಲಕ್ಷ್ಯಮಾಡದೆ ಇದ್ದವನು.
3ಅದೇ ಊರಿನಲ್ಲಿ ಒಬ್ಬ ವಿಧವೆ ಇದ್ದಳು. ಆಕೆಯು ಅವನ ಬಳಿಗೆ ಬಂದು, ‘ನ್ಯಾಯವಿಚಾರಣೆಮಾಡಿ ನನ್ನ ವಿರೋಧಿಯಿಂದ ನನ್ನನ್ನು ಬಿಡಿಸು’ ಎಂದು ಕೇಳಿಕೊಳ್ಳುತ್ತಿದ್ದಳು.
4ಅವನು ಸ್ವಲ್ಪ ಕಾಲ ಮನಸ್ಸುಕೊಡಲಿಲ್ಲ. ಆ ಮೇಲೆ ಅವನು, ‘ನಾನು ದೇವರಿಗೆ ಹೆದರುವವನಲ್ಲ, ಮನುಷ್ಯರನ್ನು ಲಕ್ಷ್ಯ ಮಾಡುವವನಲ್ಲ,
5ಆದರೂ ಈ ವಿಧವೆ ನನ್ನನ್ನು ಕಾಡುತ್ತಾ ಬರುತ್ತಿರುವುದರಿಂದ ಈಕೆಯ ನ್ಯಾಯವನ್ನು ವಿಚಾರಿಸಿ ತೀರ್ಪುಮಾಡುವೆನು. ಇಲ್ಲವಾದರೆ ಈಕೆ ಪದೇಪದೇ ಬಂದು ನನ್ನನ್ನು ದಣಿಸಾಳು’ ಎಂದು ತನ್ನೊಳಗೆ ಅಂದುಕೊಂಡನು.”
6ಕರ್ತನು ಈ ಸಾಮ್ಯವನ್ನು ಹೇಳಿದ ಮೇಲೆ, “ಅನ್ಯಾಯಗಾರನಾದ ಈ ನ್ಯಾಯಾಧಿಪತಿ ಅಂದುಕೊಂಡದ್ದನ್ನು ಆಲೋಚಿಸಿಕೊಳ್ಳಿರಿ.
7ದೇವರು ಆರಿಸಿಕೊಂಡವರು ಆತನಿಗೆ ಹಗಲುರಾತ್ರಿ ಮೊರೆಯಿಡುವಲ್ಲಿ, ಆತನು ಅವರ ವಿಷಯದಲ್ಲಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ? ಅವರಿಗೆ ಬೇಗ ನ್ಯಾಯವನ್ನು ತೀರಿಸದೆ ಇರುವನೇ?
8ಅವರಿಗೆ ಬೇಗ ನ್ಯಾಯತೀರಿಸುವನೆಂದು ನಿಮಗೆ ಹೇಳುತ್ತೇನೆ. ಹೀಗಿದ್ದರೂ ಮನುಷ್ಯಕುಮಾರನು ಬರುವಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣಲು ಸಾಧ್ಯವೋ?” ಅಂದನು.
9ಇದಲ್ಲದೆ ತಾವೇ ನೀತಿವಂತರೆಂದು ತಮ್ಮಲ್ಲಿ ಭರವಸವಿಟ್ಟುಕೊಂಡು ಉಳಿದವರನ್ನು ತಿರಸ್ಕಾರ ಮಾಡುವಂತಹ ಕೆಲವರಿಗೆ ಒಂದು ಸಾಮ್ಯವನ್ನು ಯೇಸು ಹೇಳಿದನು.
10ಅದೇನೆಂದರೆ, “ಪ್ರಾರ್ಥನೆಮಾಡಬೇಕೆಂದು ಇಬ್ಬರು ಮನುಷ್ಯರು ದೇವಾಲಯಕ್ಕೆ ಹೋದರು. ಒಬ್ಬನು ಫರಿಸಾಯನು, ಇನ್ನೊಬ್ಬನು ಸುಂಕದವನು.
11ಫರಿಸಾಯನು ನಿಂತುಕೊಂಡು ಪ್ರಾರ್ಥಿಸುವಾಗ ತನ್ನೊಳಗೆ, ‘ದೇವರೇ, ದರೋಡೆಕೋರರೂ, ಅನ್ಯಾಯಗಾರರೂ, ಹಾದರಮಾಡುವವರೂ ಆಗಿರುವ ಉಳಿದ ಜನರಂತೆ ನಾನಲ್ಲ, ಈ ಸುಂಕದವನಂತೆಯೂ ಅಲ್ಲ, ಆದುದರಿಂದ ನಿನಗೆ ಸ್ತೋತ್ರಮಾಡುತ್ತೇನೆ.
12ವಾರಕ್ಕೆ ಎರಡಾವರ್ತಿ ಉಪವಾಸಮಾಡುತ್ತೇನೆ; ನಾನು ಸಂಪಾದಿಸಿದ ಎಲ್ಲಾದರಲ್ಲಿಯೂ ಹತ್ತರಲ್ಲೊಂದು ಪಾಲು ಕೊಡುತ್ತೇನೆ’ ಎಂದು ಪ್ರಾರ್ಥಿಸಿದನು.
13ಆದರೆ ಆ ಸುಂಕದವನು ದೂರದಲ್ಲಿ ನಿಂತು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವುದಕ್ಕೂ ಆಗದೇ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು’ ಅಂದನು.
14ಇವನು ನೀತಿವಂತನೆಂದು ನಿರ್ಣಯಿಸಲ್ಪಟ್ಟವನಾಗಿ ತನ್ನ ಮನೆಗೆ ಹೋದನು. ಆ ಫರಿಸಾಯನು ಅಂಥವನಾಗಿ ಹೋಗಲಿಲ್ಲ ಎಂದು ನಿಮಗೆ ಹೇಳುತ್ತೇನೆ. ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು, ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು” ಅಂದನು.
15ಕೆಲವರು ತಮ್ಮ ಕೂಸುಗಳನ್ನು ಯೇಸುವಿನಿಂದ ಮುಟ್ಟಿಸಬೇಕೆಂದು ಆತನ ಬಳಿಗೆ ತರಲು, ಶಿಷ್ಯರು ಕಂಡು ಅವರನ್ನು ಗದರಿಸಿದರು.
16ಆದರೆ ಯೇಸು ಆ ಕೂಸುಗಳನ್ನು ತನ್ನ ಬಳಿಗೆ ಕರೆತರಿಸಿ, “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ದೇವರ ರಾಜ್ಯವು ಇಂಥವರದೇ.
17ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರುವುದೇ ಇಲ್ಲ” ಅಂದನು.
18ಒಬ್ಬ ಅಧಿಕಾರಿಯು ಬಂದು, “ಒಳ್ಳೆಯ ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು?” ಎಂದು ಆತನನ್ನು ಕೇಳಲಾಗಿ,
19ಯೇಸು ಅವನಿಗೆ, “ನನ್ನನ್ನು ಒಳ್ಳೆಯವನೆಂದು ಯಾಕೆ ಹೇಳುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಲ್ಲ.
20‘ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು, ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು’ ಎಂಬ ದೇವರಾಜ್ಞೆಗಳು ನಿನಗೆ ಗೊತ್ತಿವೆಯಷ್ಟೆ” ಎಂದು ಹೇಳಿದನು.
21ಅದಕ್ಕವನು, “ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಪಾಲಿಸುತ್ತಾ ಬಂದಿದ್ದೇನೆ” ಎಂದು ಹೇಳಿದನು.
22ಯೇಸು ಅದನ್ನು ಕೇಳಿ ಅವನಿಗೆ, “ಇನ್ನೂ ನಿನಗೆ ಒಂದು ಕೊರತೆಯಿದೆ. ನಿನಗಿರುವುದನ್ನೆಲ್ಲಾ ಮಾರಿ ಬಡವರಿಗೆ ಹಂಚಿಕೊಡು, ಪರಲೋಕದಲ್ಲಿ ನಿನಗೆ ಸಂಪತ್ತುಂಟಾಗುವುದು. ತರುವಾಯ ನೀನು ಬಂದು ನನ್ನನ್ನು ಹಿಂಬಾಲಿಸು” ಎಂದು ಹೇಳಿದನು.
23ಅವನು ಬಹಳ ಐಶ್ವರ್ಯವಂತನಾಗಿದ್ದದರಿಂದ ಇದನ್ನು ಕೇಳಿ ಬಹಳ ದುಃಖಪಟ್ಟನು.
24ಆಗ ಯೇಸು ಅವನನ್ನು ನೋಡಿ, “ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ.
25ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ” ಅಂದನು.
26ಈ ಮಾತನ್ನು ಕೇಳಿದವರು, “ಹಾಗಾದರೆ ಯಾರಿಗೆ ರಕ್ಷಣೆಯಾದೀತು?” ಎಂದು ಕೇಳಲು,
27ಆತನು, “ಮನುಷ್ಯರಿಗೆ ಅಸಾಧ್ಯವಾದ ಕಾರ್ಯಗಳು ದೇವರಿಗೆ ಸಾಧ್ಯವಾಗಿವೆ” ಅಂದನು.
28ಆಗ ಪೇತ್ರನು, “ಇಗೋ, ನಾವು ನಮ್ಮ ನಮ್ಮ ಮನೆ ಮಾರುಗಳನ್ನು ಬಿಟ್ಟು ನಿನ್ನ ಹಿಂಬಾಲಿಸಿದೆವು” ಎಂದು ಹೇಳಲು,
29ಆತನು ಅವರಿಗೆ, “ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾವನು ದೇವರ ರಾಜ್ಯಕ್ಕಾಗಿ ಮನೆಯನ್ನಾಗಲಿ, ಹೆಂಡತಿಯನ್ನಾಗಲಿ, ಅಣ್ಣತಮ್ಮಂದಿರನ್ನಾಗಲಿ, ತಂದೆತಾಯಿಗಳನ್ನಾಗಲಿ, ಮಕ್ಕಳನ್ನಾಗಲಿ ತ್ಯಜಿಸುತ್ತಾನೋ,
30ಅವನಿಗೆ ಈ ಲೋಕದಲ್ಲಿ ಅನೇಕ ಪಾಲು ಹೆಚ್ಚಾಗಿ ಸಿಕ್ಕೇ ಸಿಕ್ಕುತ್ತವೇ. ಮತ್ತು ಮುಂದಣ ಲೋಕದಲ್ಲಿ ನಿತ್ಯಜೀವವು ದೊರೆಯುವುದು” ಎಂದು ಹೇಳಿದನು.
31ಆತನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಅವರಿಗೆ, “ನೋಡಿರಿ, ನಾವು ಯೆರೂಸಲೇಮಿಗೆ ಹೋಗುತ್ತಾ ಇದ್ದೇವೆ ಮತ್ತು ಮನುಷ್ಯಕುಮಾರನ ವಿಷಯದಲ್ಲಿ ಪ್ರವಾದಿಗಳು ಬರೆದದ್ದೆಲ್ಲಾ ಅವನಲ್ಲಿ ನೆರವೇರುವುದು.
32ಹೇಗೆಂದರೆ, ಅವನನ್ನು ಅನ್ಯಜನರ ಕೈಗೆ ಒಪ್ಪಿಸುವರು, ಅವರು ಅವನನ್ನು ಅಪಹಾಸ್ಯ ಮಾಡುವರು, ಬೈಯುವರು, ಉಗುಳುವರು,
33ಕೊರಡೆಗಳಿಂದ ಹೊಡೆಯುವರು, ಕೊಲ್ಲುವರು ಮತ್ತು ಮೂರನೆಯ ದಿನದಲ್ಲಿ ಅವನು ಜೀವಿತನಾಗಿ ಎದ್ದು ಬರುವನು” ಎಂದು ಹೇಳಿದನು.
34ಅವರು ಈ ಸಂಗತಿಗಳಲ್ಲಿ ಒಂದನ್ನಾದರೂ ಗ್ರಹಿಸಲಿಲ್ಲ, ಈ ಮಾತುಗಳು ಅವರಿಗೆ ಮರೆಯಾಗಿದ್ದವು, ಆತನು ಏನು ಹೇಳುತ್ತಿದ್ದಾನೆಂದು ಅವರಿಗೆ ತಿಳಿಯಲಿಲ್ಲ.
35ಆತನು ಯೆರಿಕೋವಿನ ಸಮೀಪಕ್ಕೆ ಬಂದಾಗ ದಾರಿಯ ಬಳಿಯಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದ ಒಬ್ಬ ಕುರುಡನು,
36ಗುಂಪಾಗಿ ಹೋಗುತ್ತಿದ್ದ ಜನರ ಶಬ್ದವನ್ನು ಕೇಳಿ ಇದೇನು ಎಂದು ವಿಚಾರಿಸಿದನು.
37ಅವರು ಅವನಿಗೆ, ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾನೆಂದು ತಿಳಿಸಿದಾಗ,
38ಅವನು, “ಯೇಸುವೇ, ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಕೂಗಿಕೊಂಡನು.
39ಮುಂದೆ ಹೋಗುತ್ತಿದ್ದವರು ಸುಮ್ಮನಿರು ಎಂದು ಅವನನ್ನು ಗದರಿಸಲು ಅವನು, “ದಾವೀದನ ಕುಮಾರನೇ, ನನ್ನನ್ನು ಕರುಣಿಸು” ಎಂದು ಮತ್ತಷ್ಟು ಬೇಡಿಕೊಂಡನು.
40ಆಗ ಯೇಸು ನಿಂತು, ಅವನನ್ನು ತನ್ನ ಬಳಿಗೆ ಕರೆತರುವುದಕ್ಕೆ ಅಪ್ಪಣೆಕೊಟ್ಟನು. ಅವನು ಹತ್ತಿರಕ್ಕೆ ಬಂದಾಗ,
41ಆತನು ಅವನಿಗೆ, “ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ?” ಎಂದು ಕೇಳಲು, ಅವನು, “ನನಗೆ ಕಣ್ಣುಕಾಣುವಂತೆ ಮಾಡು ಕರ್ತನೇ” ಅಂದನು.
42ಯೇಸು ಅವನಿಗೆ, “ನಿನಗೆ ಕಣ್ಣುಕಾಣುವಂತಾಗಲಿ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿದೆ” ಎಂದು ಹೇಳಿದನು.
43ತಕ್ಷಣವೇ ಅವನಿಗೆ ಕಣ್ಣು ಕಾಣಿಸಿದವು, ಅವನು ದೇವರನ್ನು ಕೊಂಡಾಡುತ್ತಾ ಯೇಸುವಿನ ಹಿಂದೆ ಹೋದನು. ಜನರೆಲ್ಲರು ನಡೆದ ಸಂಗತಿಯನ್ನು ನೋಡಿ ದೇವರನ್ನು ಸ್ತುತಿಸಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath