ಯಾಜಕಕಾಂಡ 17
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಮೋಶೆಯೊಂದಿಗೆ ಮಾತನಾಡಿ,
2“ನೀನು ಆರೋನನಿಗೂ ಅವನ ಮಕ್ಕಳಿಗೂ ಮತ್ತು ಇಸ್ರಾಯೇಲರಿಗೂ ಹೀಗೆ ಹೇಳಬೇಕು,
3ಯೆಹೋವನು ಆಜ್ಞಾಪಿಸುವುದೇನೆಂದರೆ, ‘ಇಸ್ರಾಯೇಲರಲ್ಲಿ ಯಾವನಾದರೂ ಹೋರಿಯನ್ನಾಗಲಿ, ಕುರಿಯನ್ನಾಗಲಿ ಅಥವಾ ಆಡನ್ನಾಗಲಿ ಕೊಯ್ಯುವಾಗ,
4ಅದನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ಆತನ ಗುಡಾರದ ಬಾಗಿಲಿಗೆ ತಾರದೆ, ಪಾಳೆಯದ ಒಳಗಾಗಲಿ ಅಥವಾ ಹೊರಗಾಗಲಿ ವಧಿಸಿದರೆ ಅವನನ್ನು ಕೊಲೆಪಾತಕನೆಂದು ನೀವು ನಿರ್ಣಯಿಸಬೇಕು. ಅವನು ರಕ್ತವನ್ನು ಸುರಿಸಿದವನಾದುದರಿಂದ ಕುಲದಿಂದ ಹೊರಗೆ ಹಾಕಬೇಕು.
5ಏಕೆಂದರೆ ಯಜ್ಞಪಶುಗಳನ್ನು ಬಯಲಿನಲ್ಲಿ ವಧಿಸುತ್ತಿದ್ದ ಇಸ್ರಾಯೇಲರು ಇನ್ನು ಮೇಲೆ ಅವುಗಳನ್ನು ದೇವದರ್ಶನದ ಗುಡಾರದ ಬಾಗಿಲಿಗೆ ಯಾಜಕನ ಬಳಿಗೆ ತಂದು, ಯೆಹೋವನ ಮುಂದೆ ಸಮಾಧಾನಯಜ್ಞವಾಗಿ ಯೆಹೋವನಿಗೆ ಸಮರ್ಪಿಸಬೇಕು.
6ಯಾಜಕನು ಅವುಗಳ ರಕ್ತವನ್ನು ದೇವದರ್ಶನದ ಗುಡಾರದ ಬಾಗಿಲಿನ ಮುಂದಿರುವ ಯಜ್ಞವೇದಿಗೆ ಎರಚಿ, ಅವುಗಳ ಕೊಬ್ಬನ್ನು ಹೋಮಮಾಡಿ ಯೆಹೋವನಿಗೆ ಪರಿಮಳವನ್ನು ಉಂಟುಮಾಡಬೇಕು.
7ಅವರು ಇದುವರೆಗೆ ಪೂಜಿಸುತ್ತಿದ್ದ ಅಜದೇವತೆಗಳಿಗೆ ಇನ್ನು ಮುಂದೆ ಬಲಿಕೊಟ್ಟು ದೇವದ್ರೋಹಿಗಳಾಗಬಾರದು. ಅವರಿಗೂ ಮತ್ತು ಅವರ ಸಂತತಿಯವರಿಗೂ ಇದು ಶಾಶ್ವತನಿಯಮ.’
8“ಇದಲ್ಲದೆ ನೀನು ಅವರಿಗೆ ಹೀಗೆ ಆಜ್ಞಾಪಿಸು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸಮಾಡುತ್ತಿರುವ ಅನ್ಯದೇಶದವರಲ್ಲಿಯಾಗಲಿ ಯಾರಾದರೂ ಸರ್ವಾಂಗಹೋಮವನ್ನು ಅಥವಾ,
9ಬೇರೆ ವಿಧವಾದ ಯಜ್ಞವನ್ನು ಮಾಡುವಾಗ ಅದರ ಪಶುವನ್ನು ಯೆಹೋವನಿಗೆ ಸಮರ್ಪಿಸುವುದಕ್ಕಾಗಿ ದೇವದರ್ಶನದ ಗುಡಾರದ ಬಾಗಿಲಿಗೆ ತೆಗೆದುಕೊಂಡು ಬಾರದಿದ್ದರೆ ಅವನು ಕುಲದಿಂದ ಹೊರಗೆ ಹಾಕಬೇಕು.
10“‘ಇದಲ್ಲದೆ ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾವನಾದರೂ ರಕ್ತಭೋಜನಮಾಡಿದರೆ ನಾನು ಆತನ ಮೇಲೆ ಉಗ್ರವಾದ ಕೋಪವನ್ನು ಮಾಡಿ ಅವನನ್ನು ಕುಲದಿಂದ ತೆಗೆದುಹಾಕುವೆನು.
11ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರ. ಅಂತಹ ರಕ್ತವನ್ನು ನೀವು ಯಜ್ಞವೇದಿಗೆ ಎರಚಿ ನಿಮಗೋಸ್ಕರ ದೋಷಪರಿಹಾರ ಮಾಡಿಕೊಳ್ಳಬೇಕೆಂದು ನಿಮಗೆ ಅನುಗ್ರಹ ಮಾಡಿದ್ದೇನೆ. ರಕ್ತವು ಪ್ರಾಣಾಧಾರವಾಗಿರುವ ಕಾರಣ ಅದರಿಂದ ದೋಷಪರಿಹಾರ ಆಗುತ್ತದಷ್ಟೆ.
12ಆದುದರಿಂದ ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಾಗಲಿ ಯಾರೂ ರಕ್ತಭೋಜನ ಮಾಡಬಾರದೆಂದು ಇಸ್ರಾಯೇಲರಿಗೆ ಆಜ್ಞಾಪಿಸಿದ್ದೇನೆ.
13“‘ಇಸ್ರಾಯೇಲರಲ್ಲಾಗಲಿ ಅವರ ನಡುವೆ ವಾಸವಾಗಿರುವ ಅನ್ಯದೇಶದವರಲ್ಲಿಯಾಗಲಿ ಯಾವನಾದರೂ ಬೇಟೆಯಾಡಿ ತಿನ್ನತಕ್ಕ ಮೃಗವನ್ನು ಇಲ್ಲವೆ ಪಕ್ಷಿಯನ್ನು ಹಿಡಿದರೆ ಅವನು ಅದರ ರಕ್ತವನ್ನು ಸುರಿಸಿ ಮಣ್ಣಿನಿಂದ ಮುಚ್ಚಿಬಿಡಬೇಕು.
14ಏಕೆಂದರೆ ಪ್ರತಿದೇಹಿಗೂ ರಕ್ತವೇ ಪ್ರಾಣಾಧಾರವು. ಆದಕಾರಣ ನಾನು ಇಸ್ರಾಯೇಲರಿಗೆ, ಪ್ರತಿಪ್ರಾಣಿಗೂ ರಕ್ತವೇ ಪ್ರಾಣಾಧಾರವಾದುದರಿಂದ ನೀವು ಯಾವ ವಿಧವಾದ ಪ್ರಾಣಿಯ ರಕ್ತವನ್ನು ಉಣ್ಣಬಾರದು; ರಕ್ತಭೋಜನ ಮಾಡಿದವನಿಗೆ ಬಹಿಷ್ಕಾರವಾಗಬೇಕೆಂದು ಆಜ್ಞಾಪಿಸಿದ್ದೇನೆ.
15“‘ತಾನಾಗಿ ಸತ್ತುಬಿದ್ದದ್ದನ್ನಾಗಲಿ ಅಥವಾ ಕಾಡುಮೃಗ ಕೊಂದದ್ದನ್ನು ತಿಂದವನಾಗಲಿ ಸ್ವದೇಶದವನಾದರೂ ಇಲ್ಲವೇ ಅನ್ಯದೇಶದವನಾದರೂ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಆ ಸಾಯಂಕಾಲದ ವರೆಗೆ ಅಶುದ್ಧನಾಗಿದ್ದು ಬಳಿಕ ಶುದ್ಧನಾಗುವನು.
16ಅವನು ತನ್ನ ಬಟ್ಟೆಗಳನ್ನು ಒಗೆದುಕೊಳ್ಳದೆ ಅಥವಾ ಸ್ನಾನ ಮಾಡದೆ ಹೋದರೆ ತನ್ನ ಪಾಪದ ಫಲವನ್ನು ಅನುಭವಿಸಬೇಕು’” ಎಂದು ಹೇಳಿದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath