ಯೆಹೋಶುವನು 24
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ತರುವಾಯ ಯೆಹೋಶುವನು ಇಸ್ರಾಯೇಲ್ಯರ ಎಲ್ಲಾ ಕುಲದವರನ್ನು ಶೆಕೆಮಿನಲ್ಲಿ ಸಭೆ ಸೇರಿಸಿದನು. ಹಿರಿಯರು, ಪ್ರಧಾನರು, ನ್ಯಾಯಾಧಿಪತಿಗಳು, ಅಧಿಕಾರಿಗಳು ಬಂದು ದೇವರ ಸನ್ನಿಧಿಯಲ್ಲಿ ಕಾಣಿಸಿಕೊಂಡರು.
2ಯೆಹೋಶುವನು ಅವರಿಗೆ, “ನಿಮ್ಮ ದೇವರಾದ ಯೆಹೋವನು ಹೇಳುವುದೇನೆಂದರೆ, ಅಬ್ರಹಾಮ, ನಾಹೋರ ಎಂಬುವವರ ತಂದೆಯಾದ ತೆರಹ, ಮೊದಲಾದ ನಿಮ್ಮ ಮೂಲ ಪುರುಷರು ಪೂರ್ವದಲ್ಲಿ ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅನ್ಯದೇವತೆಗಳನ್ನು ಪೂಜಿಸುತ್ತಿದ್ದರು.
3ನಾನು ನಿಮ್ಮ ಪಿತೃವಾದ ಅಬ್ರಹಾಮನನ್ನು ಅಲ್ಲಿಂದ ಕರೆತಂದು ಕಾನಾನ್ ದೇಶದಲ್ಲೆಲ್ಲಾ ಸಂಚಾರ ಮಾಡಿ, ಇಸಾಕನೆಂಬ ಮಗನನ್ನು ಕೊಟ್ಟು ಅವನ ಸಂತಾನವನ್ನು ಹೆಚ್ಚಿಸಿದೆನು.
4ಇಸಾಕನಿಗೆ ಯಾಕೋಬ, ಏಸಾವ ಎಂಬ ಇಬ್ಬರು ಮಕ್ಕಳನ್ನು ಅನುಗ್ರಹಿಸಿ, ಏಸಾವನಿಗೆ ಸೇಯೀರ್ ಪರ್ವತವನ್ನೂ ಸ್ವತ್ತಾಗಿ ದಯಪಾಲಿಸಿದೆನು. ಯಾಕೋಬನಾದರೋ ತನ್ನ ಮಕ್ಕಳ ಸಹಿತವಾಗಿ ಐಗುಪ್ತ ದೇಶಕ್ಕೆ ಹೋದನು.
5ತರುವಾಯ ನಾನು ಮೋಶೆ, ಆರೋನರನ್ನೂ ಕಳುಹಿಸಿ, ಆ ಐಗುಪ್ತದಲ್ಲಿ ಅನೇಕ ಮಹತ್ಕಾರ್ಯಗಳನ್ನು ನಡಿಸಿ, ಅವರನ್ನು ಬಾಧಿಸಿ, ನಿಮ್ಮನ್ನು ಹೊರಗೆ ಕರೆತಂದೆನು.
6ನಿಮ್ಮ ಪೂರ್ವಿಕರು ಐಗುಪ್ತದಿಂದ ಬಿಡುಗಡೆಯಾಗಿ ಕೆಂಪು ಸಮುದ್ರಕ್ಕೆ ಬರುತ್ತಿರುವಾಗ ಐಗುಪ್ತರು ರಥಾಶ್ವಬಲಗಳ ಸಹಿತವಾಗಿ ಅವರನ್ನು ಆ ಸಮುದ್ರದವರೆಗೂ ಹಿಂದಟ್ಟಿದರು.
7ಅವರು ಯೆಹೋವನಾದ ನನಗೆ ಮೊರೆಯಿಡಲು ನಾನು ಅವರಿಗೂ, ಐಗುಪ್ತರಿಗೂ ಮಧ್ಯದಲ್ಲಿ ಕಾರ್ಗತ್ತಲೆಯನ್ನು ಉಂಟುಮಾಡಿದೆನು. ಇದಲ್ಲದೆ ನಾನು ಐಗುಪ್ತರ ಮೇಲೆ ಸಮುದ್ರವನ್ನು ಬರಮಾಡಿ ಅವರನ್ನು ಮುಳುಗಿಸಿಬಿಟ್ಟೆನು. ನಾನು ಐಗುಪ್ತದಲ್ಲಿ ಏನೇನು ಮಾಡಿದೆನೆಂಬುದಕ್ಕೆ ನೀವು ಸಾಕ್ಷಿಗಳಾಗಿದ್ದಿರಿ.
8ನೀವು ಬಹು ಕಾಲದವರೆಗೆ ಅರಣ್ಯದಲ್ಲಿದ್ದ ನಂತರ ನಿಮ್ಮನ್ನು ಯೊರ್ದನಿನ ಆಚೆಯಲ್ಲಿ ಅಮೋರಿಯರ ದೇಶಕ್ಕೆ ಕರೆತಂದೆನು. ನಿಮ್ಮೊಡನೆ ಯುದ್ಧಕ್ಕೆ ಬಂದ ಅವರನ್ನು ನಿಮ್ಮ ಕೈಗೆ ಕೊಟ್ಟುಬಿಟ್ಟೆನು. ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಂಡಿರಿ. ಅವರನ್ನು ನಿಮ್ಮೆದುರಿನಲ್ಲೇ ಸಂಹರಿಸಿದೆನು.
9ಅನಂತರ ಮೋವಾಬ್ಯರ ಅರಸನೂ ಚಿಪ್ಪೋರನ ಮಗನೂ ಆದ ಬಾಲಾಕನು ಇಸ್ರಾಯೇಲರಾದ ನಿಮಗೆ ವಿರೋಧವಾಗಿ ಯುದ್ಧ ಮಾಡುವುದಕ್ಕೆ ಎದ್ದು ನಿಮ್ಮನ್ನು ಶಪಿಸುವುದಕ್ಕೋಸ್ಕರ ಬೆಯೋರನ ಮಗನಾದ ಬಿಳಾಮನನ್ನು ಕರೆಕಳುಹಿಸಿದನು.
10ಆದರೆ ನಾನು ಬಿಳಾಮನಿಗೆ ಸಮ್ಮತಿಕೊಡಲಿಲ್ಲವಾದುದರಿಂದ ಅವನು ನಿಮ್ಮನ್ನು ಆಶೀರ್ವದಿಸುತ್ತಲೇ ಇರಬೇಕಾಯಿತು. ಹೀಗೆ ನಿಮ್ಮನ್ನು ಅವನ ಕೈಗೆ ಬೀಳದಂತೆ ತಪ್ಪಿಸಿದೆನು.
11ನೀವು ಯೊರ್ದನನ್ನು ದಾಟಿ ಯೆರಿಕೋವಿಗೆ ಬಂದಿರಿ. ಆಗ ಯೆರಿಕೋವಿನವರು ಅಮೋರಿಯರು, ಪೆರಿಜ್ಜೀಯರು, ಕಾನಾನ್ಯರು, ಹಿತ್ತಿಯರು, ಗಿರ್ಗಾಷಿಯರು, ಹಿವ್ವಿಯರು, ಯೆಬೂಸಿಯರು ಇವರೆಲ್ಲಾ ನಿಮಗೆ ವಿರೋಧವಾಗಿ ಯುದ್ಧಕ್ಕೆ ಬರಲು ನಾನು ಅವರೆಲ್ಲರನ್ನು ನಿಮ್ಮ ಕೈಗೆ ಒಪ್ಪಿಸಿದೆನು.
12ಇದಲ್ಲದೆ ನಾನು ಕಡಜದ ಹುಳಗಳನ್ನು ನಿಮ್ಮ ಮುಂದಾಗಿ ಕಳುಹಿಸಿದೆನು. ಅವು ಅಮೋರಿಯರ ಅರಸರಿಬ್ಬರನ್ನು ಓಡಿಸಿಬಿಟ್ಟವು. ಇದು ನಿಮ್ಮ ಕತ್ತಿ ಬಿಲ್ಲುಗಳಿಂದಲ್ಲ.
13ನೀವು ವ್ಯವಸಾಯ ಮಾಡದೆ ಬೆಳೆದಿರುವ ಭೂಮಿಯನ್ನು ನಿಮಗೆ ಕೊಟ್ಟೆನು. ನೀವು ಕಟ್ಟದೆ ಇರುವ ಪಟ್ಟಣಗಳಲ್ಲಿ ವಾಸಿಸುತ್ತಿದ್ದೀರಿ. ನೀವು ನೆಟ್ಟು ಬೆಳೆಸದೆ ಇರುವ ದ್ರಾಕ್ಷಿ, ಎಣ್ಣೆಮರ ಇವುಗಳ ಫಲಗಳನ್ನು ಅನುಭವಿಸುತ್ತೀದ್ದೀರಿ”
14ಹೀಗಿರುವುದರಿಂದ, “ನೀವು ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರಿ ಆತನನ್ನು ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ಸೇವಿಸಿರಿ. ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿಯೂ ಐಗುಪ್ತದಲ್ಲಿಯೂ ಪೂಜಿಸುತ್ತಿದ್ದ ದೇವತೆಗಳನ್ನು ನಿಮ್ಮಲ್ಲಿಂದ ತೆಗೆದುಹಾಕಿರಿ. ಯೆಹೋವನನ್ನೇ ಸೇವಿಸಿರಿ.
15ಯೆಹೋವನನ್ನು ಆರಾಧಿಸುವುದು ನಿಮಗೆ ಸರಿಕಾಣದಿದ್ದರೆ ಯಾರನ್ನು ಸೇವಿಸಬೇಕೆಂದಿದ್ದೀರೆಂಬುದನ್ನು? ಈ ಹೊತ್ತೇ ಆರಿಸಿಕೊಳ್ಳಿರಿ: ನಿಮ್ಮ ಪೂರ್ವಿಕರು ಯೂಫ್ರೆಟಿಸ್ ನದಿಯ ಆಚೆಯಲ್ಲಿ ಸೇವಿಸುತ್ತಿದ್ದ ದೇವತೆಗಳೋ ಈ ದೇಶದ ಮೂಲ ನಿವಾಸಿಗಳಾದ ಅಮೋರಿಯರ ದೇವತೆಗಳೋ ಹೇಳಿರಿ. ನಾನೂ, ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದನು.
16ಅದಕ್ಕೆ ಜನರು, “ಯೆಹೋವನ ಸೇವೆಯನ್ನು ಬಿಟ್ಟು ಅನ್ಯದೇವತೆಗಳನ್ನು ಸೇವಿಸುವುದು ನಮಗೆ ದೂರವಾಗಿರಲಿ.
17ನಾವು ದಾಸತ್ವದಲ್ಲಿದ್ದ ಐಗುಪ್ತದಿಂದ ನಮ್ಮನ್ನು ನಮ್ಮ ಪೂರ್ವಿಕರನ್ನೂ ಹೊರತಂದು ನಮ್ಮೆದುರಿನಲ್ಲಿಯೇ ಮಹತ್ಕಾರ್ಯಗಳನ್ನು ನಡಿಸಿ ನಮ್ಮ ಎಲ್ಲಾ ಪ್ರಯಾಣಗಳಲ್ಲಿಯೂ, ನಾವೂ ದಾಟಿ ಬಂದ ಅನ್ಯಜನಾಂಗಗಳ ಮಧ್ಯದಲ್ಲಿಯೂ ನಮ್ಮನ್ನು ಕಾಪಾಡಿದವನು ನಮ್ಮ ದೇವರಾದ ಯೆಹೋವನಲ್ಲವೇ.
18ಈ ದೇಶದ ನಿವಾಸಿಗಳಾಗಿದ್ದ ಅಮೋರಿಯರು ಮೊದಲಾದ ಸರ್ವ ಜನಾಂಗಗಳನ್ನು ನಮ್ಮ ಎದುರಿನಿಂದ ಹೊರಡಿಸಿ ಬಿಟ್ಟವನು ಆತನೇ. ಆದುದರಿಂದ ನಾವು ಯೆಹೋವನನ್ನೇ ಸೇವಿಸುವೆವು. ಆತನೇ ನಮ್ಮ ದೇವರು” ಎಂದು ಉತ್ತರ ಕೊಟ್ಟರು.
19ಆಗ ಯೆಹೋಶುವನು ಅವರಿಗೆ, “ನೀವು ಯೆಹೋವನನ್ನು ಸೇವಿಸಲು ಶಕ್ತರಲ್ಲ. ಯೆಹೋವನು ಪರಿಶುದ್ಧನು; ತನಗೆ ಸಲ್ಲಿಸಬೇಕಾದ ಗೌರವವನ್ನು ಮತ್ತೊಬ್ಬರಿಗೆ ಸಲ್ಲಗೊಡಿಸದ ದೇವರು; ಆತನು ನಿಮ್ಮ ಪಾಪ, ಅಪರಾಧಗಳನ್ನೂ, ಕ್ಷಮಿಸುವುದಿಲ್ಲ.
20ನೀವು ಆತನನ್ನು ಬಿಟ್ಟು, ಅನ್ಯದೇವತೆಗಳನ್ನು ಸೇವಿಸಿದರೆ ಆತನು ನಿಮಗೆ ವಿಮುಖನಾಗಿ ಮೇಲಿಗೆ ಬದಲಾಗಿ ಕೇಡನ್ನು ಬರಮಾಡಿ ನಿಮ್ಮನ್ನು ನಾಶಮಾಡಿ ಬಿಡುವನು” ಎಂದನು.
21ಜನರು ಯೆಹೋಶುವನಿಗೆ, “ಇಲ್ಲ, ನಾವು ಯೆಹೋವನನ್ನೇ ಸೇವಿಸುವೆವು” ಎಂದರು.
22ಯೆಹೋಶುವನು ಅವರಿಗೆ, “ನೀವು ಯೆಹೋವನ ಸೇವೆಯನ್ನು ಆರಿಸಿಕೊಂಡಿರುವುದಕ್ಕೆ ನೀವೇ ಸಾಕ್ಷಿಗಳು ಅನ್ನಲು ಅವರು ಹೌದು ನಾವೇ ಸಾಕ್ಷಿಗಳು” ಎಂದರು
23ಆಗ ಯೆಹೋಶುವನು ಅವರಿಗೆ, “ಹಾಗಾದರೆ ನಿಮ್ಮಲ್ಲಿರುವ ಅನ್ಯದೇವತೆಗಳನ್ನು ತೆಗೆದುಹಾಕಿ ಇಸ್ರಾಯೇಲಿನ ದೇವರಾದ ಯೆಹೋವನ ಕಡೆಗೆ ಮನಸ್ಸನ್ನು ತಿರುಗಿಸಿಕೊಳ್ಳಿರಿ” ಎಂದನು.
24ಅದಕ್ಕೆ ಜನರು, “ನಮ್ಮ ದೇವರಾದ ಯೆಹೋವನನ್ನೇ ಸೇವಿಸುತ್ತೇವೆ. ಆತನ ಮಾತನ್ನೇ ಕೇಳುತ್ತೇವೆ” ಎಂದರು.
25ಹೀಗೆ ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲರೊಡನೆ ಒಡಂಬಡಿಕೆಯನ್ನು ಮಾಡಿಕೊಂಡು ಅವರಿಗೆ ಕೆಲವು ನಿಬಂಧನೆಗಳನ್ನು ವಿಧಿಸಿದನು.
26ಇದಲ್ಲದೆ, ಅವನು ಈ ಎಲ್ಲಾ ಮಾತುಗಳನ್ನು ದೇವರ ಧರ್ಮಶಾಸ್ತ್ರದ ಗ್ರಂಥದಲ್ಲಿ ಬರೆದು, ಒಂದು ದೊಡ್ಡ ಕಲ್ಲನ್ನು ತಂದು ಯೆಹೋವನ ಆಲಯದ ಬಳಿಯಲ್ಲಿ ಇದ್ದ ಅಲ್ಲಾವೃಕ್ಷದ ಅಡಿಯಲ್ಲಿ ನಿಲ್ಲಿಸಿ,
27ಎಲ್ಲಾ ಜನರಿಗೆ, “ಇಗೋ, ಈ ಕಲ್ಲು ನಿಮ್ಮ ವಿಷಯದಲ್ಲಿ ಸಾಕ್ಷಿ ಹೇಳುವುದು. ಯೆಹೋವನು ಹೇಳಿದ ಎಲ್ಲಾ ಮಾತುಗಳನ್ನು ಇದು ಕೇಳಿದೆ. ಆದುದರಿಂದ ನೀವು ನಿಮ್ಮ ದೇವರನ್ನು ಅಲ್ಲಗಳೆದರೆ ಇದೇ ನಿಮಗೆ ವಿರೋಧವಾಗಿ ಸಾಕ್ಷಿಯಾಗಿರುವುದು” ಎಂದು ಹೇಳಿ
28ಅವರನ್ನು ಅವರವರ ಸ್ವತ್ತಿನ ಸ್ಥಳಗಳಿಗೆ ಕಳುಹಿಸಿದನು.
29ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗನಾದ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.
30ಅವನ ಶವವನ್ನು ಎಫ್ರಾಯೀಮ್ ಪರ್ವತಪ್ರದೇಶದಲ್ಲಿ ಗಾಷ್ ಬೆಟ್ಟದ ಉತ್ತರದಿಕ್ಕಿನಲ್ಲಿರುವ ತಿಮ್ನತ್ಸೆರಹ ಎಂಬ ಅವನ ಸ್ವತ್ತಿನಭೂಮಿಯಲ್ಲಿ ಸಮಾಧಿಮಾಡಿದರು.
31ಯೆಹೋಶುವನ ದಿನಗಳಲ್ಲಿಯೂ ಅವನ ಕಾಲದಿಂದ ಇನ್ನೂ ಜೀವಿಸುತ್ತಾ ಯೆಹೋವನು ಇಸ್ರಾಯೇಲರಿಗೋಸ್ಕರ ನಡೆಸಿದ ಮಹತ್ಕಾರ್ಯಗಳಿಗೆ ಸಾಕ್ಷಿಗಳಾಗಿದ್ದ ಹಿರಿಯರ ದಿನಗಳಲ್ಲಿಯೂ ಇಸ್ರಾಯೇಲ್ಯರು ಯೆಹೋವನನ್ನು ಆರಾಧಿಸುತ್ತಿದ್ದರು.
32ಇಸ್ರಾಯೇಲ್ಯರು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು, ಯಾಕೋಬನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳಿಂದ ನೂರು ವರಹಾ ಕೊಟ್ಟು ಕೊಂಡು ಕೊಂಡ ಶೆಕೆಮ್ ಊರಿನ ಹೊಲದಲ್ಲಿ ಹೂಣಿಟ್ಟರು. ಆ ಹೊಲವು ಯೋಸೇಫ್ಯರ ಸ್ವತ್ತಾಗಿತ್ತು.
33ಆರೋನನ ಮಗನಾದ ಎಲಿಯಾಜರನು ಮರಣ ಹೊಂದಿದನು. ಅವನ ಶವವನ್ನು ಎಫ್ರಾಯೀಮ್ ಪರ್ವತ ಪ್ರಾಂತ್ಯದಲ್ಲಿ ಅವನ ಮಗನಾದ ಫೀನೆಹಾಸನ ಪಾಲಿಗೆ ಬಂದ ಗುಡ್ಡದಲ್ಲಿ ಸಮಾಧಿಮಾಡಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath