ಕ್ರಿಶ್ಚಿಯನ್ ಧರ್ಮ
ಹಿಂದೆ

ಯೆಹೋಶುವನು 13

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋಶುವನು ದಿನತುಂಬಿದ ಮುದುಕನಾಗಲು ಯೆಹೋವನು ಅವನಿಗೆ, “ನೀನು ಈಗ ಮುದುಕನಾದಿ, ಸ್ವಾಧೀನಮಾಡಿಕೊಳ್ಳತಕ್ಕ ದೇಶಗಳು ಇನ್ನೂ ಬಹಳ ಇವೆ.

2ಅವುಗಳು ಯಾವುವೆಂದರೆ: ಐಗುಪ್ತದ ಈಚೆಯಲ್ಲಿರುವ ಶೀಹೋರ್ ಹಳ್ಳ ಮೊದಲುಗೊಂಡು ಕಾನಾನ್ಯರಿಗೆ ಸೇರಿರುವ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ

3ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರು, ಎಕ್ರೋನ್ ಎಂಬ ಪಟ್ಟಣಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದ ಫಿಲಿಷ್ಟಿಯ ಪ್ರಾಂತ್ಯ; ಗೆಷೂರ್ಯರ ಸೀಮೆಯು,

4ದಕ್ಷಿಣದಲ್ಲಿದ್ದ ಅವ್ವೀಯರ ದೇಶ ಚೀದೋನ್ಯರಿಗೆ ಸೇರಿದ ಮೆಯಾರಾ ಮೊದಲುಗೊಂಡು ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ದೇಶವು

5ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ದಾರಿಯ ವರೆಗಿರುವ ಲೆಬನೋನಿನ ಪೂರ್ವ ಪ್ರದೇಶ;

6ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗೂ, ಚೀದೋನ್ಯರ ಎಲ್ಲಾ ಪರ್ವತ ಪ್ರಾಂತ್ಯಗಳು. ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಾಯೇಲ್ಯರ ಸಮ್ಮುಖದಿಂದ ಹೊರಡಿಸಿಬಿಡುವೆನು. ನೀನಾದರೂ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಾಯೇಲ್ಯರಿಗೆ ದೇಶವನ್ನು ಹಂಚಿಕೊಡುವಾಗ ಇವುಗಳನ್ನು ಸೇರಿಸಿ ದೇಶವನ್ನೆಲ್ಲಾ

7ಒಂಭತ್ತು ಕುಲಗಳಿಗೂ, ಮನಸ್ಸೆ ಕುಲದ ಅರ್ಧ ಜನರಿಗೂ ಪಾಲು ಮಾಡಿ ಕೊಡು” ಎಂದನು.

8ಮನಸ್ಸೆ ಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಮೋಶೆಯಿಂದ ಯೊರ್ದನಿನ ಆಚೆಕಡೆಯಲ್ಲಿರುವ ಸ್ವತ್ತು ದೊರಕಿತು. ಯೆಹೋವನ ಸೇವಕನಾದ ಮೋಶೆಯು ಅವರಿಗೆ ಕೊಟ್ಟ ಪ್ರಾಂತ್ಯಗಳು ಯಾವುವೆಂದರೆ:

9ಅರ್ನೋನಿನ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ ಮತ್ತು ಅದೇ ಕಣಿವೆಯಲ್ಲಿ ಇದ್ದ ಪಟ್ಟಣ, ಇವು ಮೊದಲುಗೊಂಡು ದೀಬೋನಿನವರೆಗೆ ವಿಸ್ತರಿಸಿಕೊಂಡಿರುವ ಮೇದೆಬದ ತಪ್ಪಲ ಸೀಮೆ;

10ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನನ ವಶದಲ್ಲಿದ್ದ ಅಮ್ಮೋನಿಯರ ಮೇರೆಯ ಈಚೆಗೆ ಇದ್ದಂಥ ಎಲ್ಲಾ ಪಟ್ಟಣಗಳು; ಗಿಲ್ಯಾದ್ ಸೀಮೆ

11ಗೆಷೂರ‍್ಯರ ಮತ್ತು ಮಾಕತೀಯರ ಪ್ರಾಂತ್ಯಗಳು ಹೆರ್ಮೋನ್ ಬೆಟ್ಟದ ಮೇಲಿನ ಎಲ್ಲಾ ಪ್ರದೇಶ,

12ಅಷ್ಟರೋತ್ ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದ ಸಲ್ಕಾ ಪಟ್ಟಣದ ವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳೂ. ಮೋಶೆ ಅವರನ್ನು ಗೆದ್ದು ಅವರ ದೇಶಗಳನ್ನು ಸ್ವಾಧೀನಮಾಡಿಕೊಂಡಿದ್ದನು.

13ಇಸ್ರಾಯೇಲ್ಯರು ಗೆಷೂರ‍್ಯರನ್ನೂ, ಮಾಕತೀಯರನ್ನೂ ದೇಶದೊಳಗಿಂದ ಹೊರಡಿಸಲಿಲ್ಲ. ಏಕೆಂದರೆ ಆದ್ದರಿಂದ ಗೆಷೂರ‍್ಯರೂ ಮಾಕತೀಯರೂ ಅವರು ಇಂದಿನವರೆಗೂ ಇಸ್ರಾಯೇಲ್ಯರ ಮಧ್ಯದಲ್ಲಿ ಇರುತ್ತಾರೆ.

14ಲೇವಿ ಕುಲದವರಿಗೆ ಮಾತ್ರ ಯಾವ ಪಾಲು ಸಿಕ್ಕಲಿಲ್ಲ. ಏಕೆಂದರೆ ಇಸ್ರಾಯೇಲಿನ ದೇವರಾದ ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಆತನ ಯಜ್ಞಶೇಷವೇ ಅವರ ಸ್ವಾಸ್ತ್ಯವಾಗಿತ್ತು.

15ಮೋಶೆಯು ರೂಬೇನ್ಯರ ಮಕ್ಕಳ ಗೋತ್ರಗಳಿಗೆ ಸ್ವತ್ತಾಗಿ ಕೊಟ್ಟ ಪ್ರದೇಶಗಳು ಯಾವುವೆಂದರೆ:

16ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ಪಟ್ಟಣ;

17ಮೇದೆಬದ ತಪ್ಪಲ ಸೀಮೆಗೆ ಸೇರಿದ ಹೆಷ್ಬೋನ್ ಪಟ್ಟಣ, ಅಲ್ಲೇ ಎತ್ತರವಾದ ಬೈಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್ ಬೇತ್ಬಾಳ್ಮೆಯೋನ್,

18ಯಹಚಾ ಕೆದೇಮೋತ್, ಮೇಫಾಯತ್,

19ಕಿರ್ಯಾತಯಿಮ್ ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿರುವ ಬೆಟ್ಟದ ಮೇಲಿನ ಚೆರೆತ್ ಶಹರ್,

20ಬೇತ್‍ಪೆಗೋರ್, ಎಂಬ ಪಟ್ಟಣಗಳೂ ಪಿಸ್ಗಾದ ಬುಡದಲ್ಲಿರುವ ಸೀಮೆ, ಬೇತ್‌ಯೆಷಿಮೋತ್ ಪಟ್ಟಣ,

21ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲಾ ಪಟ್ಟಣಗಳೂ ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸನಾದ ಸೀಹೋನಿನ ಸಮಸ್ತ ರಾಜ್ಯಗಳು. ಮೋಶೆಯು ಆ ದೇಶದಲ್ಲಿ ವಾಸವಾಗಿದ್ದ ಸೀಹೋನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿರುವ ಅವನ ಸರದಾರರನ್ನೂ ಕೊಂದುಹಾಕಿದನು.

22ಇಸ್ರಾಯೇಲ್ಯರು ಕತ್ತಿಯಿಂದ ಸಂಹರಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನಾಗಿದ್ದ ಬಿಳಾಮನೂ ಇದ್ದನು.

23ಯೊರ್ದನ್ ನದಿಯು, ರೂಬೇನ್ಯರ ಪಡುವಣ ಮೇರೆಯಾಗಿತ್ತು. ರೂಬೇನ್ಯರ ಗೋತ್ರಗಳಿಗೆ ಸ್ವತ್ತಾಗಿ ಸಿಕ್ಕಿದ ಗ್ರಾಮನಗರಗಳು ಇವುಗಳೇ.

24ಮೋಶೆಯು ಗಾದ್ ಕುಲದ ಗೋತ್ರಗಳಿಗೆ ಸ್ವತ್ತಾಗಿ ಕೊಟ್ಟ ಪ್ರದೇಶಗಳು ಯಾವುವೆಂದರೆ:

25ಹೆಷ್ಬೋನಿನ ಅರಸನಾದ ಸೀಹೋನಿನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಮೊದಲಾದ ಗಿಲ್ಯಾದಿನ ಎಲ್ಲಾ ಪಟ್ಟಣಗಳು, ರಬ್ಬಾ ಊರಿನ ಪೂರ್ವದಲ್ಲಿರುವ ಅರೋಯೇರ್ ಪಟ್ಟಣದ ವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧ ರಾಜ್ಯ,

26ಹೆಷ್ಬೋನಿನಿಂದ ರಾಮತ್ ಮಿಚ್ಪೆ, ಬೆಟೋನೀಮ್ ಎಂಬ ಊರುಗಳ ವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೆಬೀರ್ ಪ್ರಾಂತ್ಯದವರೆಗೂ ಇರುವ ಸೀಮೆ,

27ಯೊರ್ದನ್ ಕಣಿವೆಯಲ್ಲಿರುವ ಬೇತ್‌ಹಾರಾಮ್; ಬೇತ್‌ನಿಮ್ರಾ, ಸುಕ್ಕೋತ್, ಚಾಫೋನ ಎಂಬ ಪಟ್ಟಣಗಳು. ಕಿನ್ನೆರೆತ್ ಸಮುದ್ರದ ದಕ್ಷಿಣದಿಕ್ಕಿನ ಮೂಲೆಯ ವರೆಗೆ ವಿಸ್ತರಿಸಿಕೊಂಡಿರುವ ಯೊರ್ದನಿನ ಪೂರ್ವ ಪ್ರದೇಶಗಳು.

28ಈ ಎಲ್ಲಾ ಗ್ರಾಮನಗರಗಳು ಗಾದ್ ಕುಲದ ಸ್ವತ್ತಾದವು.

29ಮಹನಯಿಮಿನ ಉತ್ತರದಲ್ಲಿದ್ದ ಹಾಗೂ ಮೊದಲು ಬಾಷಾನಿನ ಅರಸನಾಗಿದ್ದ ಓಗನ ರಾಜ್ಯವಾಗಿದ್ದ ಎಲ್ಲಾ ಬಾಷಾನ್ ಸೀಮೆಯನ್ನು,

30ಮೋಶೆಯು ಮನಸ್ಸೆ ಕುಲದ ಅರ್ಧ ಗೋತ್ರಗಳಿಗೆ ಕೊಟ್ಟನು. ಯಾಯೀರನ ಗ್ರಾಮಗಳೆನ್ನಿಸಿಕೊಳ್ಳುವ ಅರವತ್ತು ಊರುಗಳು ಇದರೊಂದಿಗೆ ಇರುತ್ತವೆ.

31ಗಿಲ್ಯಾದಿನಲ್ಲಿ ಅರ್ಧ ಭಾಗವು ಓಗನ ರಾಜಧಾನಿಯಾಗಿದ್ದ, ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ಪಟ್ಟಣಗಳೂ ಮನಸ್ಸೆಯ ಮಗನಾದ ಮಾಕೀರನ ಗೋತ್ರದ ಅರ್ಧ ಜನರಿಗೆ ಸಿಕ್ಕಿದವು.

32ಮೋಶೆಯು ಯೊರ್ದನಿನ ಆಚೆ ಯೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲಿನಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವತ್ತಾಗಿ ಕೊಟ್ಟನು.

33ಆದರೆ ಲೇವಿಯ ಕುಲಕ್ಕೆ ಮೋಶೆಯು ಯಾವ ಸ್ವತ್ತನ್ನು ಕೊಡಲಿಲ್ಲ. ಯಾಕೆಂದರೆ ಇಸ್ರಾಯೇಲ್ಯರ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ಆತನೇ ಅವರ ಸ್ವತ್ತಾಗಿದ್ದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath