ಯೋಬನು 38
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು,
2“ಅಜ್ಞಾನದ ಮಾತುಗಳಿಂದ ಸತ್ಯಾಲೋಚನೆಯನ್ನು ಮಂಕುಮಾಡುವ ಇವನು ಯಾರು?
3ಶೂರನಂತೆ ನಡುಕಟ್ಟಿಕೋ; ನಾನು ಪ್ರಶ್ನೆಮಾಡುವೆನು, ನೀನೇ ನನಗೆ ಉಪದೇಶಿಸು.
4ನಾನು ಲೋಕಕ್ಕೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.
5ಅದರ ಅಳತೆಗಳನ್ನು ಯಾರು ಗೊತ್ತುಮಾಡಿದರು? ನೀನೇ ಬಲ್ಲೆ. ಅದರ ಮೇಲೆ ನೂಲುಹಿಡಿದವರು ಯಾರು?
6ಭೂಲೋಕದ ಅಸ್ತಿವಾರವು ಯಾವುದರ ಮೇಲೆ ನೆಲೆಗೊಂಡವು? ಅದರ ಮೂಲೆಗಲ್ಲನ್ನು ಹಾಕಿದವರು ಯಾರು?
7ಮುಂಜಾನೆ ನಕ್ಷತ್ರಗಳು ಒಟ್ಟಾಗಿ ಉತ್ಸಾಹ ಧ್ವನಿಯೆತ್ತುತ್ತಾ ದೇವಕುಮಾರರೆಲ್ಲರೂ ಆನಂದ ಘೋಷಮಾಡುತ್ತಾ ಇರಲು,
8ಸಮುದ್ರವು ಭೂಗರ್ಭವನ್ನು ಭೇದಿಸಿಕೊಂಡು ಬರಲು, ಅದರ ದ್ವಾರಗಳನ್ನು ಮುಚ್ಚಿದವರು ಯಾರು?
9ಆ ಕಾಲದಲ್ಲಿ ನಾನು ಮೋಡಗಳನ್ನು ಅದಕ್ಕೆ ವಸ್ತ್ರವನ್ನಾಗಿಯೂ, ಕಾರ್ಗತ್ತಲನ್ನು ಸುತ್ತುಬಟ್ಟೆಯನ್ನಾಗಿಯೂ ಮಾಡಿದೆನಲ್ಲವೆ?
10ಇದಲ್ಲದೆ ಸಮುದ್ರಕ್ಕೆ ನನ್ನ ಇಷ್ಟದ ಮೇರೆಯನ್ನು ಕಟ್ಟಿ, ಅದಕ್ಕೆ ಅಗುಳಿ, ಕದಗಳನ್ನು ಹಾಕಿದೆನು
11‘ಇಲ್ಲಿಯ ತನಕ ಬರಬಹುದು; ಮೀರಿ ಬರಬೇಡ, ನಿನ್ನ ತೆರೆಗಳ ಹೆಮ್ಮೆಗೆ ಇಲ್ಲೇ ತಡೆಯಾಗುವುದು’ ಎಂದು ಅಪ್ಪಣೆಕೊಟ್ಟೆನು.
12ನಿನ್ನ ಜೀವಮಾನದಲ್ಲಿ ಎಂದಾದರೂ ‘ಅರುಣೋದಯವಾಗಲಿ’ ಎಂದು ಆಜ್ಞಾಪಿಸಿರುವೆಯೋ? ಮುಂಜಾನೆಯ ಬೆಳಗಿಗೆ ಇರತಕ್ಕ ಸ್ಥಳವನ್ನು ಗೊತ್ತುಮಾಡಿದೆಯಾ?
13ಭೂಮಿಯ ಅಂಚುಗಳನ್ನು ಹಿಡಿದು ದುಷ್ಟರನ್ನು ಅದರೊಳಗಿಂದ ಒದರಿಬಿಡು ಎಂದು ಉದಯಕ್ಕೆ ಅಪ್ಪಣೆಕೊಟ್ಟೆಯಾ?
14ಮುದ್ರೆ ಒತ್ತಿದ ಜೇಡಿಮಣ್ಣಿನಂತೆ ಬೆಳಗಾಗುವಾಗ ಭೂಮಿಯು ರೂಪ ತಾಳುತ್ತದೆ. ಎಲ್ಲಾ ವಸ್ತುಗಳು ನೆರಿಗೆ ಕಟ್ಟಿದ ಉಡಿಗೆಯಂತೆ ಕಾಣಿಸುವವು.
15ಮತ್ತು ದುಷ್ಟರಿಗೆ ಬೆಳಕಿಲ್ಲವಾಗುವುದು, ಎತ್ತಿದ ಕೈ ಮುರಿಯುವುದು.
16ಎಂದಾದರೂ ಸಮುದ್ರದ ಬುಗ್ಗೆಗಳೊಳಗೆ ಸೇರಿದ್ದೆಯೋ? ಭೂಮಿಯ ಕೆಳಗಣ ಸಾಗರದ ಗುಪ್ತ ಪ್ರದೇಶಗಳಲ್ಲಿ ತಿರುಗಾಡಿದ್ದೀಯೋ?
17ಮರಣದ ಬಾಗಿಲುಗಳು ನಿನಗೆ ಗೋಚರವಾದವೋ? ಘೋರಾಂಧಕಾರದ ಕದಗಳನ್ನು ಕಂಡೆಯಾ?
18ಭೂಮಿಯ ವಿಸ್ತಾರವನ್ನು ಗ್ರಹಿಸಿದ್ದೀಯೋ? ಇದೆಲ್ಲಾ ನಿನಗೆ ಗೊತ್ತಿದ್ದರೆ ತಿಳಿಸು.
19ಬೆಳಕಿನ ನಿವಾಸಕ್ಕೆ ಹೋಗುವ ದಾರಿ ಎಲ್ಲಿ? ಕತ್ತಲಿನ ಸ್ವಸ್ಥಳವು ಎಲ್ಲಿ?
20ನೀನು ಆ ಒಂದೊಂದನ್ನೂ ಅದರದರ ಪ್ರಾಂತ್ಯಕ್ಕೆ ಕರೆದುಕೊಂಡು ಹೋಗಿ, ಅವುಗಳ ಮನೆಯ ಹಾದಿಗಳನ್ನು ಕಂಡುಕೊಳ್ಳಬಲ್ಲೆಯಾ?
21ನಿನಗೆ ತಿಳಿದಿರಬೇಕು; ಆಗಲೂ ಹುಟ್ಟಿದ್ದಿಯಲ್ಲವೆ; ನಿನ್ನ ದಿನಗಳ ಸಂಖ್ಯೆ ಬಹಳ ದೊಡ್ಡದು!
22ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ, ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ,
23ಹಿಮದ ಭಂಡಾರಗಳನ್ನು ಪ್ರವೇಶಿಸಿದ್ದೀಯಾ? ಕಲ್ಮಳೆಯ ಬೊಕ್ಕಸಗಳನ್ನು ನೋಡಿದ್ದೀಯಾ?
24ಬೆಳಕನ್ನು ಭಾಗಿಸುವುದಕ್ಕೆ, ಬಿಸಿಗಾಳಿಯನ್ನು ಭೂಮಿಯ ಮೇಲೆ ವಿಸ್ತರಿಸುವುದಕ್ಕೂ ಮಾರ್ಗವೆಲ್ಲಿ?
25ನಿರ್ಜನ ಪ್ರದೇಶದಲ್ಲಿಯೂ, ಮನುಷ್ಯರೇ ಇಲ್ಲದ ಕಾಡಿನಲ್ಲಿಯೂ ಮಳೆಯನ್ನು ಸುರಿಸಿ,
26ಹಾಳುಬೀಳಾದ ಭೂಮಿಯನ್ನು ತೃಪ್ತಿಪಡಿಸಿ, ಹಸಿ ಹುಲ್ಲನ್ನು ಬೆಳೆಯಿಸಬೇಕೆಂದು,
27ಅತಿವೃಷ್ಟಿಯ ಪ್ರವಾಹಕ್ಕೆ ಕಾಲುವೆಯನ್ನೂ, ಗರ್ಜಿಸುವ ಸಿಡಿಲಿಗೆ ದಾರಿಯನ್ನೂ ಯಾರು ಕಡಿದರು?
28ಮಳೆಗೆ ತಂದೆಯುಂಟೋ? ಮಂಜಿನ ಹನಿಗಳನ್ನು ಪಡೆದವನು ಯಾರು?
29ಹಿಮದ ಗಡ್ಡೆಯು ಯಾರ ಗರ್ಭದಿಂದ ಹೊರಟಿತು? ಆಕಾಶದ ಇಬ್ಬನಿಯನ್ನು ಯಾರು ಹೆತ್ತರು?
30ನೀರು ಕಲ್ಲಿನಂತೆ ಗಟ್ಟಿಯಾಗುವುದು; ಸಾಗರದ ಮೇಲ್ಭಾಗವೂ ಹೆಪ್ಪುಗೊಳ್ಳುವುದು.
31ನೀನು ಕೃತ್ತಿಕೆಯ ಸರಪಣಿಯನ್ನು ಬಿಗಿದು, ಮೃಗಶಿರದ ಸಂಕೋಲೆಯನ್ನು ಬಿಚ್ಚುವೆಯಾ?
32ಆಯಾ ಸಮಯದಲ್ಲಿ ನಕ್ಷತ್ರ ರಾಶಿಗಳನ್ನು ಬರಮಾಡುವೆಯೋ? ನಕ್ಷತ್ರ ಮಂಡಲ ಪರಿವಾರದೊಡನೆ ನಡೆಸುವೆಯಾ?
33ಖಗೋಳದ ಕಟ್ಟಳೆಗಳನ್ನು ತಿಳಿದುಕೊಂಡಿದ್ದೀಯೋ? ಅದರ ಆಳ್ವಿಕೆಯನ್ನು ಭೂಮಿಯಲ್ಲಿ ಸ್ಥಾಪಿಸಿದ್ದೀಯಾ?
34ಮೋಡಗಳನ್ನು ಮುಟ್ಟುವಂತೆ ನೀನು ಧ್ವನಿಯೆತ್ತಿದ ಮಾತ್ರಕ್ಕೆ, ಹೇರಳವಾದ ನೀರು ನಿನ್ನನ್ನು ಆವರಿಸುವುದೋ?
35ಸಿಡಿಲುಗಳು ನಿನ್ನ ಅಪ್ಪಣೆಯಂತೆ ಹೋಗಿ ಬಂದು, ‘ಇಗೋ, ಬಂದಿದ್ದೇವೆ’ ಎನ್ನುವವೋ?
36ಯಾರು ಕಾರ್ಮುಗಿಲಿಗೆ ಜ್ಞಾನವನ್ನು ದಯಪಾಲಿಸಿದರು? ಉತ್ಪಾತಗಳಿಗೆ ವಿವೇಕವನ್ನು ಅನುಗ್ರಹಿಸಿದವರು ಯಾರು?
37ಜ್ಞಾನದಿಂದ ಯಾರು ಮೇಘಗಳನ್ನು ಲೆಕ್ಕಿಸುವರು? ಆಕಾಶದಲ್ಲಿನ ಬುದ್ದಲಿಗಳನ್ನು ಮೊಗಚಿಹಾಕಿ,
38ಧೂಳು ಹರಿದು ಒತ್ತಟ್ಟಿಗೆ ಸೇರುವಂತೆಯೂ, ಹೆಂಟೆಗಳು ಒಂದಕ್ಕೊಂದು ಅಂಟಿಕೊಳ್ಳುವಂತೆಯೂ ಯಾರು ಮಾಡುವರು?
39ಗವಿಯಲ್ಲಿ ಮಲಗಿರುವ ಸಿಂಹಕ್ಕೆ ಆಹಾರ ಒದಗಿಸಲು ಬೇಟೆಯಾಡುವೆಯಾ?
40ಅವುಗಳು ಗುಹೆಯಲ್ಲಿ ಕುಳಿತುಕೊಳ್ಳುವಾಗ, ಪೊದೆಯಲ್ಲಿ ಹೊಂಚುಹಾಕಿರುವ ಪ್ರಾಯದ ಸಿಂಹಗಳ ಆಶೆಯನ್ನು ತೀರಿಸುವೆಯೋ?
41ತಮ್ಮ ಮರಿಗಳು, ಗುಟುಕಿಲ್ಲದೆ ಅಲೆಯುತ್ತಾ ದೇವರಿಗೆ ಮೊರೆಯಿಡುವಾಗ, ಕಾಗೆಗಳಿಗೆ ಆಹಾರವನ್ನು ಯಾರು ಒದಗಿಸುವರು?”
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath