ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಬನು 34

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಎಲೀಹು ಮತ್ತೆ ಇಂತೆಂದನು,

2“ವಿವೇಕಿಗಳೇ, ನನ್ನ ಮಾತುಗಳನ್ನು ಕೇಳಿರಿ, ಜ್ಞಾನಿಗಳೇ, ನನಗೆ ಕಿವಿಗೊಡಿರಿ!

3ನಾಲಿಗೆಯು ಆಹಾರವನ್ನು ರುಚಿನೋಡುವಂತೆ, ಕಿವಿಯು ಮಾತುಗಳನ್ನು ವಿವೇಚಿಸುತ್ತದಲ್ಲಾ.

4ನ್ಯಾಯವನ್ನೇ ಆರಿಸಿಕೊಳ್ಳೋಣ, ಒಳ್ಳೆಯದು ಇಂಥದೆಂದು ನಮ್ಮನಮ್ಮೊಳಗೆ ನಿಶ್ಚಯಿಸಿಕೊಳ್ಳೋಣ.

5ಯೋಬನು, ‘ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ.

6ನನ್ನಲ್ಲಿ ನ್ಯಾಯವಿದ್ದರೂ ಸುಳ್ಳುಗಾರ ಎಂದು ಎನ್ನಿಸಿಕೊಂಡಿದ್ದೇನೆ. ನಾನು ನಿರ್ದೋಷಿಯಾಗಿದ್ದರೂ ಆತನ ಬಾಣದ ಪೆಟ್ಟು ವಿಪರೀತವಾಗಿದೆ’ ಎಂದು ಹೇಳಿಕೊಂಡಿದ್ದಾನೆ.

7ಯೋಬನಿಗೆ ಸಮಾನನು ಯಾರು? ದೇವದೂಷಣೆಯನ್ನು ನೀರಿನಂತೆ ಕುಡಿಯುತ್ತಾನಲ್ಲಾ.

8ಅವನು ಅಧರ್ಮಿಗಳ ಜೊತೆಯಲ್ಲಿ ಸಂಚರಿಸುತ್ತಾನೆ, ಕೆಟ್ಟವರ ಸಂಗಡ ನಡೆದಾಡುತ್ತಾನೆ.

9‘ಒಬ್ಬನು ದೇವರ ಅನ್ಯೋನ್ಯತೆಯಲ್ಲಿ ಸಂತೋಷಪಟ್ಟರೂ, ಅವನಿಗೆ ಯಾವ ಪ್ರಯೋಜನವೂ ಇಲ್ಲ’ ಎಂದು ಹೇಳಿದ್ದಾನಷ್ಟೆ.

10ಹೀಗಿರಲು, ಬುದ್ಧಿವಂತರೇ, ನನ್ನ ಮಾತುಗಳನ್ನು ಕೇಳಿರಿ, ದೇವರು ಕೆಟ್ಟದ್ದನ್ನು ಮಾಡುತ್ತಾನೆಂಬ ಯೋಚನೆಯೂ, ಸರ್ವಶಕ್ತನಾದ ದೇವರು ಅನ್ಯಾಯವನ್ನು ನಡೆಸುತ್ತಾನೆಂಬ ಭಾವನೆಯೂ ದೂರವಾಗಿರಲಿ!

11ಆತನು ಮನುಷ್ಯನಿಗೆ ಅವನ ಕೃತ್ಯದ ಫಲವನ್ನು ತೀರಿಸಿಬಿಡುವನು, ಪ್ರತಿಯೊಬ್ಬನು ತನ್ನ ನಡತೆಗೆ ತಕ್ಕಂತೆ ಅನುಭವಿಸುವಂತೆ ಮಾಡುವನು.

12ಹೌದು, ದೇವರು ಕೆಟ್ಟದ್ದನ್ನು ನಡೆಸುವುದೇ ಇಲ್ಲ, ಸರ್ವಶಕ್ತನಾದ ದೇವರು ನೀತಿಯನ್ನು ಡೊಂಕುಮಾಡುವುದೇ ಇಲ್ಲ.

13ಭೂಲೋಕವನ್ನು ಆತನ ವಶಕ್ಕೆ ಕೊಟ್ಟವನು ಯಾರು? ಯಾರು ಭೂಮಂಡಲವನ್ನೆಲ್ಲಾ ಕ್ರಮಪಡಿಸಿದನು?

14ಆತನು ಸ್ವಾರ್ಥದಲ್ಲಿ ಮನಸ್ಸಿಟ್ಟು ತನ್ನ ಆತ್ಮವನ್ನೂ, ಶ್ವಾಸವನ್ನೂ ಹಿಂದಕ್ಕೆ ತೆಗೆದುಕೊಳ್ಳುವುದಾದರೆ,

15ಸಮಸ್ತ ಜನರು ಒಟ್ಟಾಗಿ ಅಳಿದುಹೋಗುವರು, ಪುನಃ ಮನುಷ್ಯರು ಧೂಳೇ ಆಗುವರು.

16ನಿನಗೆ ವಿವೇಕವಿದ್ದರೆ ಇದನ್ನು ಕೇಳು, ನನ್ನ ಮಾತುಗಳ ಧ್ವನಿಗೆ ಕಿವಿಗೊಡು!

17ನ್ಯಾಯವನ್ನು ದ್ವೇಷಿಸುವವನು ಆಳ್ವಿಕೆ ಮಾಡಾನೇ? ಧರ್ಮಸ್ವರೂಪನೂ, ಮಹಾಶಕ್ತನೂ ಆಗಿರುವಾತನನ್ನು ಕೆಟ್ಟವನೆಂದು ನಿರ್ಣಯಿಸುವೆಯಾ?

18ಆತನು ರಾಜನಿಗೆ, ‘ನೀನು ಮೂರ್ಖ’ ಪ್ರಭುಗಳಿಗೆ, ‘ನೀವು ಕೆಟ್ಟವರು’ ಎಂದು ಹೇಳಬಲ್ಲನೇ?

19ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ, ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ.

20ಕ್ಷಣ ಮಾತ್ರದೊಳಗೆ ಸಾಯುವರು; ಮಧ್ಯರಾತ್ರಿಯಲ್ಲೇ ಪ್ರಜೆಗಳು ಕದಲಿ ಇಲ್ಲವಾಗುವರು, ಮನುಷ್ಯನ ಕೈ ಸೋಕದೆ ಬಲಿಷ್ಠರೂ ಅಪಹರಿಸಲ್ಪಡುವರು.

21ಆತನು ಮನುಷ್ಯನ ಮಾರ್ಗಗಳ ಮೇಲೆ ಕಣ್ಣಿಟ್ಟು, ಅವನ ಹೆಜ್ಜೆಗಳನ್ನೆಲ್ಲಾ ನೋಡುವನು.

22ಅಧರ್ಮಿಗಳು ಅಡಗಿಕೊಳ್ಳುವುದಕ್ಕೆ, ಅನುಕೂಲವಾದ ಯಾವ ಕತ್ತಲೂ, ಯಾವ ಗಾಢಾಂಧಕಾರವೂ ಇರುವುದಿಲ್ಲ.

23ದೇವರು ಮನುಷ್ಯನ ಮೇಲೆ ಹೆಚ್ಚು ಗಮನವಿಡುವುದೂ, ಮನುಷ್ಯನೂ ಆತನ ನ್ಯಾಯವಿಚಾರಣೆಗೆ ಬರುವುದೂ, ಅವಶ್ಯವಿಲ್ಲ.

24ಯಾವ ವಿಮರ್ಶಕರೂ ಇಲ್ಲದೆ ತೀರ್ಮಾನಿಸಿ ಬಲಿಷ್ಠರನ್ನು ಮುರಿದು, ಅವರ ಸ್ಥಾನದಲ್ಲಿ ಇತರರನ್ನು ನಿಲ್ಲಿಸುವನು.

25ಈ ಪ್ರಕಾರ ಆತನು ಅವರ ಕಾರ್ಯಗಳನ್ನು ಲಕ್ಷಿಸಿ, ರಾತ್ರಿಯಲ್ಲಿ ಅವರನ್ನು ಕೆಡವಿ ನಾಶಕ್ಕೆ ಗುರಿಮಾಡುವನು.

26ಅಪರಾಧಿಗಳಿಗೋ ಎಂಬಂತೆ ಬಹಿರಂಗವಾಗಿ ಅವರಿಗೆ ಪೆಟ್ಟುಹಾಕುವನು.

27ಅವರು ಆತನನ್ನು ಹಿಂಬಾಲಿಸದೆ, ತಿರುಗಿಕೊಂಡು ಆತನ ಮಾರ್ಗಗಳನ್ನೆಲ್ಲಾ ಅಲಕ್ಷ್ಯಮಾಡಿದ್ದರಷ್ಟೆ.

28ಹೀಗೆ ಬಡವರ ಗೋಳಾಟವು ದೇವರಿಗೆ ಮುಟ್ಟುವಂತೆ ಮಾಡಿದ್ದರು, ಆತನು ದಿಕ್ಕಿಲ್ಲದವರ ಮೊರೆಯನ್ನು ಆಲಿಸಿದನು.

29ಆತನು ನೆಮ್ಮದಿಯನ್ನು ದಯಪಾಲಿಸಿದರೆ ತಪ್ಪುಹೊರಿಸುವವರು ಯಾರು? ವಿಮುಖನಾದರೆ ಆತನ ದರ್ಶನ ಮಾಡುವವರಾರು? ಆತನು ಜನಾಂಗಕ್ಕಾಗಲಿ, ಮನುಷ್ಯನಿಗಾಗಲಿ ಮಾಡುವುದೆಲ್ಲಾ ಹೀಗೆಯೇ.

30ಭ್ರಷ್ಟನು ಆಳಬಾರದು, ಯಾರೂ ಜನರಿಗೆ ಉರುಲಾಗಕೂಡದು ಎಂಬುದೇ ಆತನ ಉದ್ದೇಶ.

31ಮನುಷ್ಯನು ದೇವರನ್ನು ಕುರಿತು, ‘ನಾನು ಕೆಟ್ಟದ್ದನ್ನು ಮಾಡದಿದ್ದರೂ ದಂಡನೆಯನ್ನು ಸಹಿಸಿಕೊಂಡಿದ್ದೇನೆ,

32ನಾನು ಕಾಣದಿರುವುದನ್ನು ನೀನೇ ಸೂಚಿಸು; ನಾನು ಒಂದು ವೇಳೆ ಅನ್ಯಾಯವನ್ನು ಮಾಡಿದ್ದರೂ ಇನ್ನು ಮೇಲೆ ಮಾಡುವುದಿಲ್ಲ’ ಎಂದು ಹೇಳುವುದಕ್ಕಾದೀತೇ?

33ಆತನು ಕೊಡುವ ಪ್ರತಿಫಲವನ್ನು ಬೇಡವೆನ್ನುವುದೇಕೆ? ಅದು ನಿನ್ನ ಮನಸ್ಸಿಗೆ ಒಪ್ಪಿತವಾಗಿರಬೇಕೋ? ನೀನೇ ಆರಿಸಿಕೋ, ನಾನು ಆರಿಸಿಕೊಳ್ಳಲಾರೆನು. ನಿನಗೆ ತಿಳಿದದ್ದನ್ನು ತಿಳಿಸು.

34ಬುದ್ಧಿವಂತರೂ, ನನ್ನ ಕಡೆಗೆ ಕಿವಿಗೊಡುವ ಪ್ರತಿಯೊಬ್ಬ ಜ್ಞಾನಿಯೂ ನಿನ್ನ ವಿಷಯವಾಗಿ,

35‘ಯೋಬನು ತಿಳಿವಳಿಕೆಯಿಲ್ಲದೆ ನುಡಿಯುತ್ತಾನೆ, ಅವನ ಮಾತುಗಳಲ್ಲಿ ಬುದ್ಧಿಯಿಲ್ಲ.’

36ಯೋಬನ ಪರಿಶೋಧನೆಯು ನಿರಂತರವಾಗಿದ್ದರೆ ಸಂತೋಷ! ದುಷ್ಟರ ಹಾಗೆ ಉತ್ತರಕೊಡುತ್ತಾನಲ್ಲವೆ.

37ಅವನು ಅಪರಾಧವನ್ನಲ್ಲದೆ ದೈವದ್ರೋಹವನ್ನೂ ಮಾಡಿದ್ದಾನೆ; ನಮ್ಮ ಮಧ್ಯದಲ್ಲಿ ಚಪ್ಪಾಳೆಹೊಡೆದು, ದೇವರಿಗೆ ವಿರುದ್ಧವಾಗಿ ಅಧಿಕ ಮಾತುಗಳನ್ನು ಆಡುತ್ತಾನೆ” ಎಂದು ನನಗೆ ಹೇಳುವರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath