ಯೋಬನು 33
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅದಿರಲಿ, ಯೋಬನೇ, ನನ್ನ ಮಾತನ್ನು ಕೇಳು, ನನ್ನ ಮಾತುಗಳಿಗೆಲ್ಲಾ ಕಿವಿಗೊಡು.
2ಇಗೋ, ನನ್ನ ಬಾಯನ್ನು ತೆರೆದಿದ್ದೇನೆ, ನನ್ನ ನಾಲಿಗೆಯು ಬಾಯಿಯೊಳಗಿಂದ ಮಾತನಾಡುತ್ತಿದೆ.
3ನನ್ನ ಹೃದಯದ ಯಥಾರ್ಥತ್ವವನ್ನು ನನ್ನ ಮಾತುಗಳೇ ತಿಳಿಸುವವು, ನನ್ನ ತುಟಿಗಳು ತಿಳಿದುಕೊಂಡದ್ದನ್ನೇ ಸತ್ಯವಾಗಿ ಹೇಳುವವು.
4ನಾನು ದೇವರಾತ್ಮನಿಂದಲೇ ನಿರ್ಮಿತನಾಗಿದ್ದೇನೆ, ನನ್ನ ಜೀವವು ಸರ್ವಶಕ್ತನಾದ ದೇವರ ಶ್ವಾಸದಿಂದುಂಟಾಗಿದೆ.
5ನಿನಗೆ ಸಾಮರ್ಥ್ಯವಿದ್ದರೆ ನನಗೆ ಉತ್ತರಕೊಡು, ನನ್ನೆದುರಿನಲ್ಲಿಯೇ ವಾದವನ್ನು ಹೂಡಿ ನಿಂತುಕೋ.
6ನೋಡು, ನಾನು ದೇವರ ದೃಷ್ಟಿಯಲ್ಲಿ ನಿನ್ನ ಹಾಗೆಯೇ ಇದ್ದೇನೆ. ನಾನೂ ಜೇಡಿಮಣ್ಣಿನಿಂದ ರೂಪಿಸಲ್ಪಟ್ಟಿದ್ದೇನೆ.
7ಇಗೋ, ನನ್ನ ಭೀತಿಯು ನಿನ್ನನ್ನು ಹೆದರಿಸಲಾರದು, ನನ್ನ ಒತ್ತಾಯವು ನಿನಗೆ ಹೊರೆಯಾಗಿರದು.
8ನಿನ್ನ ನುಡಿಯ ಧ್ವನಿಯನ್ನು ಕೇಳಿದ್ದೇನೆ, ನನ್ನ ಕಿವಿಗೆ ಬಿದ್ದ ಈ ಮಾತುಗಳನ್ನು ಆಡಿದ್ದಿ,
9‘ನಾನು ಪರಿಶುದ್ಧನು, ನನ್ನೊಳಗೆ ದೋಷವಿಲ್ಲ, ನಾನು ನಿರ್ಮಲನು, ನನ್ನಲ್ಲಿ ಏನು ಪಾಪವಿಲ್ಲ.
10ಆಹಾ, ಆತನು ನನ್ನಲ್ಲಿ ವಿರೋಧಕ್ಕೆ ಕಾರಣಗಳನ್ನು, ನನ್ನನ್ನು ಶತ್ರುವೆಂದು ಎಣಿಸಿಕೊಂಡಿದ್ದಾನೆ.
11ನನ್ನ ಕಾಲುಗಳನ್ನು ಕೋಳಕ್ಕೆ ಹಾಕಿ, ನನ್ನ ಮಾರ್ಗಗಳನ್ನೆಲ್ಲಾ ಕಂಡುಕೊಂಡಿದ್ದಾನೆ’ ಎಂದು ಹೇಳಿದೆಯಲ್ಲಾ.
12ಇಗೋ, ನೀನು ಹೀಗೆ ಹೇಳಿದ್ದು ನ್ಯಾಯವಲ್ಲವೆಂಬುದೇ ನನ್ನ ಉತ್ತರ, ದೇವರು ಮನುಷ್ಯನಿಗಿಂತ ದೊಡ್ಡವನಾಗಿದ್ದಾನಷ್ಟೆ.
13ಆತನು ನಿನ್ನ ಮಾತುಗಳಲ್ಲಿ ಒಂದಕ್ಕಾದರೂ ಉತ್ತರ ದಯಪಾಲಿಸನೆಂಬುದಾಗಿ, ನೀನು ಆತನೊಂದಿಗೆ ವ್ಯಾಜ್ಯವಾಡುವುದೇಕೆ?
14ದೇವರು ಮಾತನಾಡುವ ರೀತಿ ಒಂದುಂಟು ಹೌದು, ಎರಡೂ ಉಂಟು, ಮನುಷ್ಯನಾದರೋ ಲಕ್ಷಿಸುವುದಿಲ್ಲ.
15ಮನುಷ್ಯರಿಗೆ ಗಾಢನಿದ್ರೆಯು ಉಂಟಾದಾಗಲೂ, ಹಾಸಿಗೆಯ ಮೇಲೆ ಮಲಗಿದಾಗ ಜೊಂಪುಹತ್ತಿದಾಗಲೂ ಆತನು ಸ್ವಪ್ನದಲ್ಲಿ ರಾತ್ರಿಯ ಕನಸಿನಲ್ಲಿ,
16ಅವರ ಕಿವಿಗಳನ್ನು ತೆರೆದು, ಅವರಿಗೆ ಶಿಕ್ಷಾವಚನವನ್ನು ಉಪದೇಶಿಸಿ ಅದಕ್ಕೆ ಮುದ್ರೆ ಹಾಕುವನು.
17ಹೀಗೆ ಮನುಷ್ಯನನ್ನು ಅವನ ದುಷ್ಕಾರ್ಯದಿಂದ ತಪ್ಪಿಸುವನು, ಮಾನವನಿಗೆ ಗರ್ವವನ್ನು ಮರೆಮಾಡುವನು.
18ಅವನ ಆತ್ಮವನ್ನು ಅಧೋಲೋಕಕ್ಕೆ ಬೀಳದಂತೆ ತಡೆದು, ಅವನ ಜೀವವನ್ನು ದೈವಾಸ್ತ್ರದಿಂದ ಅಳಿದು ಹೋಗದ ಹಾಗೆ ನಿಲ್ಲಿಸುವನು.
19ಇದಲ್ಲದೆ ಸಂಕಟದಿಂದಲೂ, ನಿತ್ಯವಾದ ಎಲುಬುಗಳ ನೋವಿನಿಂದಲೂ, ಮನುಷ್ಯನು ಹಾಸಿಗೆಯ ಮೇಲೆ ಶಿಕ್ಷಿಸಲ್ಪಡುವನು.
20ಅವನ ಜೀವವು ಆಹಾರಕ್ಕೆ ಬೇಸರಗೊಳ್ಳುವುದು, ಅವನ ಆತ್ಮವು ಮೃಷ್ಟಾನ್ನಕ್ಕೂ ಅಸಹ್ಯಪಡುವುದು.
21ಅವನ ಮಾಂಸವು ಕ್ಷಯಿಸಿ ಕಾಣದೆ ಹೋಗುವುದು, ಕಾಣದಿದ್ದ ಅವನ ಎಲುಬುಗಳು ಬಯಲಾಗುವವು.
22ಅವನ ಆತ್ಮವು ಅಧೋಲೋಕವನ್ನು ಸಮೀಪಿಸುವುದು, ಅವನ ಪ್ರಾಣವು ಸಂಹಾರದೂತರಿಗೆ ಹತ್ತಿರವಾಗುವುದು.
23ಮನುಷ್ಯನ ಕರ್ತವ್ಯವನ್ನು ತೋರಿಸತಕ್ಕ ಸಹಸ್ರ ದೇವದೂತರಲ್ಲಿ ಒಬ್ಬನು ಅವನಿಗೆ ಮಧ್ಯಸ್ಥನಾಗಿ ಬೇಡುವುದರಿಂದ,
24ದೇವರು ಒಂದು ವೇಳೆ ಆ ಮನುಷ್ಯನನ್ನು ಮೆಚ್ಚಿ ಈಡು ದೊರಕುವಂತೆ ಮಾಡಿ, ‘ಅಧೋಲೋಕಕ್ಕೆ ಇಳಿಯದಂತೆ ಇವನನ್ನು ರಕ್ಷಿಸು’ ಎಂದು ಅಪ್ಪಣೆಕೊಟ್ಟರೆ,
25ಅವನ ದೇಹವು ಬಾಲ್ಯಕ್ಕಿಂತಲೂ ಕೋಮಲವಾಗುವುದು. ಅವನು ಪುನಃ ಎಳೆತನದ ಚೈತನ್ಯವನ್ನು ಅನುಭವಿಸುವನು.
26ಅವನು ದೇವರನ್ನು ಪ್ರಾರ್ಥಿಸಿ ಆತನ ಒಲುಮೆಗೆ ಪಾತ್ರನಾಗಿ, ಆತನ ದರ್ಶನ ಮಾಡಿ ಉತ್ಸಾಹದಿಂದ ಧ್ವನಿಗೈದು, ತಿರುಗಿ ಆತನಿಂದ ನೀತಿವಂತನೆಂದು ಎನ್ನಿಸಿಕೊಳ್ಳುವನು.
27ಅವನು ಮನುಷ್ಯರ ಮುಂದೆ ನಿಂತು, ‘ನಾನು ಪಾಪ ಮಾಡಿ ನ್ಯಾಯವನ್ನು ಕೆಡಿಸಿದ್ದರೂ, ಆತನು ಮುಯ್ಯಿತೀರಿಸಲಿಲ್ಲ.
28ನನ್ನ ಆತ್ಮವನ್ನು ಅಧೋಲೋಕಕ್ಕೆ ಹೋಗದಂತೆ ವಿಮೋಚಿಸಿದ್ದಾನೆ, ನನ್ನ ಜೀವವು ಬೆಳಕನ್ನು ಕಾಣುತ್ತಿರುವುದು’ ಎಂದು ಕೀರ್ತನೆ ಹಾಡುವನು.
29ದೇವರು ಎರಡು ಸಾರಿ, ಹೌದು ಮೂರು ಸಾರಿ ಈ ಕಾರ್ಯಗಳನ್ನೆಲ್ಲಾ ಮಾಡುವನು.
30ನೋಡು, ಮನುಷ್ಯನ ಆತ್ಮವು ಅಧೋಲೋಕದಿಂದ ಹಿಂದಿರುಗಿ, ಜೀವಲೋಕದ ಬೆಳಕನ್ನು ಅನುಭವಿಸುವಂತೆ ಮಾಡುವನು
31ಯೋಬನೇ, ನನ್ನ ಕಡೆಗೆ ಗಮನವಿಟ್ಟು ಕೇಳು, ಮೌನವಾಗಿರು, ನಾನೇ ಮಾತನಾಡುವೆನು.
32ನೀನು ಏನಾದರೂ ಹೇಳಬೇಕೆಂದಿದ್ದರೆ ನನಗೆ ಉತ್ತರವಾಗಿ ಹೇಳು, ಮಾತನಾಡು, ನಿನ್ನನ್ನು ನೀತಿವಂತನೆಂದು ಸ್ಥಾಪಿಸಬೇಕೆಂಬುದೇ ನನ್ನ ಆಶೆ.
33ಇಲ್ಲವಾದರೆ ನೀನೇ ನನಗೆ ಕಿವಿಗೊಟ್ಟು ಮೌನವಾಗಿರು, ನಾನು ನಿನಗೆ ಜ್ಞಾನವನ್ನು ಬೋಧಿಸುವೆನು.”
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath