ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಬನು 2

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ದೇವದೂತರು ಇನ್ನೊಂದು ದಿನ ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಂದಾಗ, ಸೈತಾನನೂ ಅವರ ಸಂಗಡ ಬಂದು ಯೆಹೋವನ ಸನ್ನಿಧಿಯಲ್ಲಿ ಕಾಣಿಸಿಕೊಂಡನು.

2ಯೆಹೋವನು, “ಎಲ್ಲಿಂದ ಬಂದೆ?” ಎಂದು ಸೈತಾನನನ್ನು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದನು.

3ಆಗ ಯೆಹೋವನು ಸೈತಾನನಿಗೆ, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನನ್ನು ಕಾರಣವಿಲ್ಲದೆ ನಾಶಮಾಡುವುದಕ್ಕೆ ನೀನು ನನ್ನನ್ನು ಪ್ರೇರೇಪಿಸಿದರೂ ಅವನು ತನ್ನ ಯಥಾರ್ಥತ್ವವನ್ನು ಬಿಡದೆ ಇದ್ದಾನೆ” ಎಂದನು.

4ಯೆಹೋವನ ಆ ಮಾತಿಗೆ ಸೈತಾನನು, “ಚರ್ಮಕ್ಕೆ ಚರ್ಮ ಎಂಬಂತೆ ಒಬ್ಬ ಮನುಷ್ಯನು ಪ್ರಾಣವನ್ನು ಉಳಿಸಿಕೊಳ್ಳುವುದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.

5ಆದರೆ ನಿನ್ನ ಕೈಚಾಚಿ ಅವನ ಅಸ್ತಿಮಾಂಸಗಳನ್ನು ಹೊಡೆ. ಆಗ ಅವನು ನಿನ್ನ ಮುಖದೆದುರಿಗೆ ನಿನ್ನನ್ನು ದೂಷಿಸದೆ ಬಿಡುವುದಿಲ್ಲ” ಎಂದನು.

6ಯೆಹೋವನು ಸೈತಾನನಿಗೆ, “ನೋಡು, ಅವನನ್ನು ನಿನ್ನ ಕೈಯಲ್ಲಿ ಒಪ್ಪಿಸಿದ್ದೇನೆ. ಅವನ ಪ್ರಾಣವನ್ನು ಉಳಿಸಬೇಕು” ಎಂದು ಅಪ್ಪಣೆ ಕೊಟ್ಟನು.

7ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟು ಯೋಬನ ಅಂಗಾಲು ಮೊದಲುಗೊಂಡು ನಡುನೆತ್ತಿಯವರೆಗೂ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಅವನನ್ನು ಬಾಧಿಸಿದನು.

8ಯೋಬನು ಒಂದು ಬೋಕಿಯನ್ನು ತೆಗೆದುಕೊಂಡು ತನ್ನ ಮೈಯನ್ನು ಕೆರೆದುಕೊಳ್ಳುತ್ತಾ ಬೂದಿಯಲ್ಲಿ ಕುಳಿತುಕೊಂಡಿದ್ದನು.

9ಹೀಗಿರುವಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ಇದೆಲ್ಲವನ್ನು ಕೊಟ್ಟ ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಳು.

10ಆಗ ಯೋಬನು ಆಕೆಗೆ, “ಮೂರ್ಖಳು ಮಾತನಾಡಿದಂತೆ ನೀನು ಮಾತನಾಡುತ್ತಿ. ದೇವರ ಹಸ್ತದಿಂದ ನಾವು ಒಳ್ಳೆಯದನ್ನು ಹೊಂದುವಾಗ ಕೆಟ್ಟದ್ದನ್ನು ಹೊಂದಬಾರದೋ?” ಎಂದು ಹೇಳಿದನು. ಈ ಸಂದರ್ಭದಲ್ಲಿಯೂ ಪಾಪದ ಮಾತು ಅವನ ತುಟಿಗಳಿಂದ ಹೊರಡಲಿಲ್ಲ.

11ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು ಎಂಬ ಯೋಬನ ಮೂವರು ಸ್ನೇಹಿತರು ಅವನಿಗೆ ಸಂಭವಿಸಿದ ಆಪತ್ತಿನ ಸುದ್ದಿಯನ್ನು ಕೇಳಿದೊಡನೆ, “ನಾವೆಲ್ಲರೂ ಕೂಡಿ ನಮ್ಮ ಸಂತಾಪವನ್ನು ತೋರ್ಪಡಿಸಿ, ಅವನನ್ನು ಸಂತೈಸೋಣ ಬನ್ನಿರಿ” ಎಂದು ತಮ್ಮ ತಮ್ಮ ಸ್ಥಳಗಳಿಂದ ಅವನ ಬಳಿಗೆ ಬಂದರು.

12ಅವರು ದೂರದಿಂದ ಕಣ್ಣೆತ್ತಿ ನೋಡಿ ಯೋಬನ ಗುರುತನ್ನು ಹಿಡಿಯಲಾರದೆ ಹೋದ ಕಾರಣ ಗಟ್ಟಿಯಾಗಿ ಅತ್ತು ತಮ್ಮ ತಮ್ಮ ಮೇಲಂಗಿಗಳನ್ನು ಹರಿದುಕೊಂಡು, ಮಣ್ಣನ್ನು ಮೇಲಕ್ಕೆ ತೂರಿ ತಮ್ಮ ತಲೆಯ ಮೇಲೆ ಸುರಿದುಕೊಂಡರು.

13ಬಳಿಕ ಅವನಿಗೆ ವಿಪರೀತ ಬಾಧೆ ಎಂದು ತಿಳಿದು ಏಳು ದಿನಗಳವರೆಗೆ ಹಗಲಿರುಳೂ ನೆಲದ ಮೇಲೆ ಅವನೊಂದಿಗೆ ಕುಳಿತುಕೊಂಡರು. ಅವನ ಸಂಗಡ ಒಬ್ಬರೂ ಮಾತನಾಡದೇ ಇದ್ದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath