ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಬನು 22

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆ ಮೇಲೆ ತೇಮಾನ್ಯನಾದ ಎಲೀಫಜನು ಮತ್ತೆ ಹೀಗೆಂದನು,

2“ಮನುಷ್ಯ ಮಾತ್ರದವನಿಂದ ದೇವರಿಗೆ ಏನು ಪ್ರಯೋಜನವಾದೀತು? ಒಬ್ಬನು ವಿವೇಕಿಯಾಗಿ ನಡೆದುಕೊಂಡರೆ ಅವನಿಗೆ ಪ್ರಯೋಜನವಷ್ಟೆ.

3ನೀನು ನೀತಿವಂತನಾಗಿರುವುದು ಸರ್ವಶಕ್ತನಾದ ದೇವರಿಗೆ ಸುಖವೋ? ನಿನ್ನ ನಡತೆಯನ್ನು ಸರಿಪಡಿಸಿಕೊಂಡರೆ ಆತನಿಗೇನು ಲಾಭ?

4ನಿನ್ನ ಭಯಭಕ್ತಿಗಾಗಿಯೇ ಆತನು ನಿನ್ನನ್ನು ಶಿಕ್ಷಿಸಿ ನ್ಯಾಯತೀರ್ಪಿಗೆ ಗುರಿಮಾಡುತ್ತಾನೋ?

5ನಿನ್ನ ಕೆಟ್ಟತನವು ಬಹಳವಲ್ಲವೇ? ನಿನ್ನ ಪಾಪಗಳಿಗೆ ಮಿತಿಯೇ ಇಲ್ಲವಲ್ಲಾ?

6ನೋಡು, ನಿನ್ನ ಸಹೋದರನಿಂದ ಸುಮ್ಮನೆ ಒತ್ತೆಯಾಳುಗಳನ್ನು ತೆಗೆದುಕೊಂಡಿದ್ದಿ, ಬೆತ್ತಲೆಯವರ ಬಟ್ಟೆಯನ್ನೂ ಸೆಳಕೊಂಡಿದ್ದಿ.

7ಬಳಲಿದವನಿಗೆ ನೀರು ಕೊಡದೆ, ಹಸಿದವನಿಗೆ ಅನ್ನಕೊಡದೆ ಹೋಗಿದ್ದಿ.

8ಬಲಿಷ್ಠನಾದರೆ ದೇಶವೇ ಅವನದು, ಅಲ್ಲಿ ಸನ್ಮಾನ ಯೋಗ್ಯನಾಗಿ ವಾಸಿಸತಕ್ಕವನು ಅವನೇ.

9ನೀನು ವಿಧವೆಯರನ್ನು ಬರಿಗೈಯಾಗಿ ಕಳುಹಿಸಬಿಟ್ಟು, ಅನಾಥರ ಕೈಗಳನ್ನು ಮುರಿದಿದ್ದಿ.

10ಆದಕಾರಣ ಬೋನುಗಳು ನಿನ್ನ ಸುತ್ತಲು ಕಾದಿವೆ, ಫಕ್ಕನೆ ಉಂಟಾದ ಭಯವು ನಿನ್ನನ್ನು ತಲ್ಲಣಗೊಳಿಸುತ್ತದೆ.

11ಇದಲ್ಲದೆ ದಾರಿಕಾಣದಂತೆ ಕತ್ತಲೂ, ಮುಸುಕಿ ಜಲಪ್ರವಾಹವೂ ನಿನ್ನನ್ನು ಆವರಿಸುತ್ತವೆ.

12ದೇವರು ಉನ್ನತ ಆಕಾಶದಲ್ಲಿಲ್ಲವೋ? ನಕ್ಷತ್ರಮಂಡಲದ ತುದಿಯು ಎಷ್ಟೋ ಎತ್ತರ, ನೋಡು!

13ನೀನಾದರೋ, ‘ದೇವರಿಗೆ ಏನು ಗೊತ್ತು? ಕಾರ್ಗತ್ತಲಿನ ಆಚೆಯಿಂದ ನ್ಯಾಯತೀರಿಸಬಲ್ಲನೋ?

14ದಟ್ಟವಾದ ಮೋಡಗಳು ಆತನಿಗೆ ಪರದೆಯ ಹಾಗಿರುವುದರಿಂದ ನೋಡಲಾರನು; ಆಕಾಶಮಂಡಲದ ಮೇಲೆ ನಡೆದಾಡುತ್ತಾನೆ’ ಎಂದು ಹೇಳಿಕೊಂಡೆಯಲ್ಲವೇ.

15ಕೆಟ್ಟವರು ಮೊದಲಿನಿಂದಲೂ, ನಡೆದ ದಾರಿಯನ್ನು ನೀನು ಹಿಡಿಯುವಿಯಾ?

16ಅಕಾಲ ಮರಣವು ಅವರನ್ನು ಅಪಹರಿಸಿತು, ಅವರಿಗೆ ಆಧಾರವಾಗಿದ್ದ ನೆಲವು ನೀರಾಗಿ ಹರಿಯಿತು.

17ಅವರು ಆತನನ್ನು ಕುರಿತು, ‘ನಮ್ಮಿಂದ ತೊಲಗಿ ಹೋಗು, ಸರ್ವಶಕ್ತನಾದ ದೇವರು ನಮಗೇನು ಮಾಡಾನು’ ಎಂದು ಹೇಳಿಕೊಳ್ಳುತ್ತಿದ್ದರು.

18ಆದರೂ ದೇವರು ಅವರ ಮನೆಗಳನ್ನು ಸಂಪತ್ತಿನಿಂದ ತುಂಬಿಸಿದನು. ದುಷ್ಟರ ಆಲೋಚನೆಯು ನನಗೆ ದೂರವಾಗಿರಲಿ!

19ನೀತಿವಂತರು ಇದನ್ನು ನೋಡಿ ಹಿಗ್ಗುವರು, ನಮ್ಮ ವಿರುದ್ಧವಾಗಿ ಎದ್ದವರು ಹಾಳಾಗಿಯೇ ಹೋದರು.

20‘ಅವರ ಉಳಿದ ಸೊತ್ತನ್ನು ಬೆಂಕಿಯು ನಾಶಮಾಡಿತು’ ಎಂದು, ನಿರ್ದೋಷಿಗಳು ದುಷ್ಟರನ್ನು ಅಣಕಿಸುವರು.

21ದೇವರ ಚಿತ್ತಕ್ಕೆ ಒಳಪಟ್ಟು ಸಮಾಧಾನ ಹೊಂದು, ಇದರಿಂದ ನಿನಗೆ ಶುಭವಾಗುವುದು.

22ಆತನ ಬಾಯಿಂದಲೇ ಬೋಧನೆಯನ್ನು ಸ್ವೀಕರಿಸಿ, ಆತನ ಮಾತುಗಳನ್ನು ಹೃದಯದಲ್ಲಿ ಇಟ್ಟುಕೋ.

23ನೀನು ಸರ್ವಶಕ್ತನಾದ ದೇವರ ಕಡೆಗೆ ತಿರುಗಿಕೊಂಡು, ನಿನ್ನ ಗುಡಾರಗಳಿಂದ ಅನ್ಯಾಯವನ್ನು ದೂರಮಾಡಿದರೆ ಉದ್ಧಾರವಾಗುವಿ.

24ನಿನ್ನ ಚಿನ್ನವನ್ನು ಧೂಳಿನಲ್ಲಿ ಹಾಕು, ಓಫೀರ್ ದೇಶದ ಅಪರಂಜಿಯನ್ನು ಹೊಳೆಗಳ ಬಂಡೆಗಳಿಗೆ ಎಸೆದುಬಿಡು.

25ಸರ್ವಶಕ್ತನಾದ ದೇವರು ನಿನಗೆ ಚಿನ್ನವಾಗಿಯೂ, ಬೆಳ್ಳಿಯ ರಾಶಿಗಳಾಗಿಯೂ ಇರುವನು.

26ಆಗ ನೀನು ಸರ್ವಶಕ್ತನಾದ ದೇವರಲ್ಲಿ ಆನಂದಪಟ್ಟು, ದೇವರ ಅಭಿಮುಖನಾಗಿರುವೆ.

27ನೀನು ಪ್ರಾರ್ಥಿಸುವಿ, ಆತನು ಲಾಲಿಸುವನು, ಆತನಿಗೆ ಹರಕೆಗಳನ್ನು ಒಪ್ಪಿಸುವಿ.

28ಯಾವುದನ್ನು ಸಂಕಲ್ಪಿಸಿಕೊಳ್ಳುವಿಯೋ ಅದು ನಿನಗೆ ನೆರವೇರುವುದು, ಬೆಳಕು ನಿನ್ನ ಮಾರ್ಗಗಳಲ್ಲಿ ಪ್ರಕಾಶಿಸುವುದು.

29ಜನರು ನಿನ್ನನ್ನು ಕೆಳಕ್ಕೆ ಬೀಳಿಸುವಾಗ, ಮೇಲಕ್ಕೆ ಎತ್ತಲ್ಪಡುವೆನು ಅಂದುಕೊಳ್ಳುವಿ, ಆಗ ದೀನದೃಷ್ಟಿಯುಳ್ಳ ನಿನ್ನನ್ನು ಆತನು ರಕ್ಷಿಸುವನು.

30ನಿರ್ದೋಷಿಯನ್ನು ಆತನು ತಪ್ಪಿಸುವನು, ಹೌದು, ಆತನು ಇಂಥವನನ್ನು ತಪ್ಪಿಸುವುದಕ್ಕೆ ನಿನ್ನ ಕೈಗಳ ಪರಿಶುದ್ಧತೆಯೇ ಕಾರಣವಾಗಿರುವುದು.”

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath