ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಬನು 1

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಊಚ್ ದೇಶದಲ್ಲಿ ಯೋಬನೆಂಬ ಒಬ್ಬ ಮನುಷ್ಯನಿದ್ದನು. ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ, ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದನು.

2ಅವನಿಗೆ ಏಳು ಮಂದಿ ಗಂಡುಮಕ್ಕಳೂ, ಮೂರು ಮಂದಿ ಹೆಣ್ಣುಮಕ್ಕಳೂ ಇದ್ದರು.

3ಅವನಿಗೆ ಏಳು ಸಾವಿರ ಕುರಿಗಳೂ, ಮೂರು ಸಾವಿರ ಒಂಟೆಗಳೂ, ಐನೂರು ಜೋಡಿ ಎತ್ತುಗಳೂ, ಐನೂರು ಹೆಣ್ಣು ಕತ್ತೆಗಳೂ, ಬಹುಮಂದಿ ಸೇವಕರೂ ಇದ್ದುದರಿಂದ ಅವನು ಮೂಡಣ ದೇಶದವರಲ್ಲೆಲ್ಲಾ ಹೆಚ್ಚು ಸ್ವತ್ತುಳ್ಳವನಾಗಿದ್ದನು.

4ಅವನ ಗಂಡು ಮಕ್ಕಳು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ನಡೆಸುತ್ತಾ ಆ ಭೋಜನಕ್ಕೆ ತಮ್ಮ ಮೂವರು ಅಕ್ಕತಂಗಿಯರನ್ನೂ ಕರೆಕಳುಹಿಸುತ್ತಿದ್ದರು.

5ಔತಣದ ಸರದಿ ತೀರಿದ ನಂತರ ಯೋಬನು, “ನನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪ ಮಾಡಿರಬಹುದು” ಎಂದು ಅವರನ್ನು ಕರೆಯಿಸಿ ಶುದ್ಧಿಪಡಿಸಿ, ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು. ಹೀಗೆ ಯೋಬನು ಕ್ರಮವಾಗಿ ಮಾಡುವುದು ದೈನಂದಿನ ಕ್ರಮವಾಗಿತ್ತು.

6ಒಂದು ದಿನ ದೇವದೂತರು ಯೆಹೋವನ ಸನ್ನಿಧಿಗೆ ಬರುವಾಗ ಸೈತಾನನು (ಆಪಾದಕ ದೂತನು) ಅವರ ಜೊತೆಯಲ್ಲಿ ಬಂದನು.

7ಯೆಹೋವನು ಸೈತಾನನನ್ನು, “ಎಲ್ಲಿಂದ ಬಂದೆ?” ಎಂದು ಕೇಳಲು ಸೈತಾನನು ಯೆಹೋವನಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗುತ್ತಾ ಇದ್ದು ಬಂದೆನು” ಎಂದು ಹೇಳಿದನು.

8ಆಗ ಯೆಹೋವನು, “ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟೆಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ, ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ, ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ” ಎಂದು ಸೈತಾನನಿಗೆ ಹೇಳಿದನು.

9ಅದಕ್ಕೆ ಸೈತಾನನು, “ಯೋಬನು ನಿನ್ನಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ?

10ನೀನು ಅವನಿಗೂ, ಅವನ ಮನೆಗೂ, ಅವನ ಎಲ್ಲಾ ಸ್ವತ್ತಿಗೂ ಸುತ್ತು ಮುತ್ತಲು ನಿನ್ನ ಕೃಪೆಯ ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವುದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ.

11ಆದರೆ ನಿನ್ನ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸದೇ ಬಿಡುವನೇ?” ಎಂದನು.

12ಯೆಹೋವನು ಸೈತಾನನಿಗೆ, “ನೋಡು, ಅವನ ಸ್ವಾಸ್ತ್ಯವೆಲ್ಲಾ ನಿನ್ನ ಕೈಯಲ್ಲಿದೆ. ಆದರೆ ಅವನ ಮೈಮೇಲೆ ಮಾತ್ರ ಕೈಹಾಕಬೇಡ” ಎಂದು ಅಪ್ಪಣೆಕೊಟ್ಟನು. ಆಗ ಸೈತಾನನು ಯೆಹೋವನ ಸನ್ನಿಧಾನದಿಂದ ಹೊರಟುಹೋದನು.

13ಇದಾದ ಬಳಿಕ ಒಂದು ದಿನ ಯೋಬನ ಗಂಡು ಹೆಣ್ಣು ಮಕ್ಕಳು ಹಿರಿಯವನ ಮನೆಯಲ್ಲಿ ಔತಣದಲ್ಲಿ ಊಟಮಾಡಿ ಕುಡಿಯುತ್ತಿರುವಾಗ,

14ಒಬ್ಬ ದೂತನು ಯೋಬನ ಬಳಿಗೆ ಬಂದು, “ನಿನ್ನ ಎತ್ತುಗಳು ಉಳುತ್ತಾ ಇರುವಾಗ ಅವುಗಳ ಹತ್ತಿರ ಕತ್ತೆಗಳು ಮೇಯುತ್ತಾ ಇದ್ದವು.

15ಶೆಬದವರು ಅವುಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಸಂಹರಿಸಿದರು. ಈ ಸುದ್ದಿಯನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದು ಹೇಳಿದನು.

16ಅವನು ಮಾತನಾಡುತ್ತಿರುವಾಗಲೇ ಮತ್ತೊಬ್ಬನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ, ಆಳುಗಳನ್ನೂ ದಹಿಸಿ ನುಂಗಿಬಿಟ್ಟಿದೆ. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.

17ಅಷ್ಟರಲ್ಲಿ ಇನ್ನೊಬ್ಬನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು ಒಂಟೆಗಳ ಮೇಲೆ ಬಿದ್ದು ಹೊಡೆದುಕೊಂಡು ಹೋದರು. ಇದಲ್ಲದೆ ಆಳುಗಳನ್ನು ಕತ್ತಿಯಿಂದ ಹತ್ಯೆ ಮಾಡಿದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.

18ಅವನು ಇನ್ನು ಮಾತನಾಡುತ್ತಿರುವಾಗಲೆ ಬೇರೊಬ್ಬನು ಬಂದು, “ನಿನ್ನ ಗಂಡು, ಹೆಣ್ಣು ಮಕ್ಕಳು ತಮ್ಮ ಅಣ್ಣನ ಮನೆಯಲ್ಲಿ ತಿಂದು ಕುಡಿಯುತ್ತಿರುವಾಗ,

19ಅರಣ್ಯದ ಕಡೆಯಿಂದ ಬಿರುಗಾಳಿಯು ಬೀಸಿ ಮನೆಯ ನಾಲ್ಕು ಮೂಲೆಗಳಿಗೆ ಬಡಿದು, ಮನೆಯು ಯೌವನಸ್ಥರ ಮೇಲೆ ಬಿದ್ದಿತು. ಅವರೆಲ್ಲರು ಸತ್ತು ಹೋದರು. ಇದನ್ನು ತಿಳಿಸುತ್ತಿರುವ ನಾನೊಬ್ಬನೇ ತಪ್ಪಿಸಿಕೊಂಡು ಉಳಿದಿದ್ದೇನೆ” ಎಂದನು.

20ಆಗ ಯೋಬನು ಎದ್ದು ಮೇಲಂಗಿಯನ್ನು ಹರಿದುಕೊಂಡು, ತಲೆ ಬೋಳಿಸಿಕೊಂಡು ನೆಲದ ಮೇಲೆ ಅಡ್ಡಬಿದ್ದು ದೇವರನ್ನು ಆರಾಧಿಸಿ,

21“ಏನೂ ಇಲ್ಲದವನಾಗಿ ತಾಯಿಯ ಗರ್ಭದಿಂದ ಬಂದೆನು; ಏನೂ ಇಲ್ಲದವನಾಗಿಯೇ ಗತಿಸಿಹೋಗುವೆನು; ನನಗಿರುವುದನ್ನೆಲ್ಲ ಯೆಹೋವನೇ ಕೊಟ್ಟನು, ಅವುಗಳನ್ನು ಯೆಹೋವನೇ ತೆಗೆದುಕೊಂಡನು; ಯೆಹೋವನ ನಾಮಕ್ಕೆ ಸ್ತೋತ್ರವಾಗಲಿ” ಎಂದು ಹೇಳಿದನು.

22ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪುಹೊರಿಸಲೂ ಇಲ್ಲ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath