ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಬನು 18

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಶೂಹ್ಯನಾದ ಬಿಲ್ದದನು ಪ್ರತ್ಯುತ್ತರವಾಗಿ ಹೀಗೆಂದನು,

2“ಇನ್ನೆಷ್ಟರವರೆಗೆ ಮಾತುಗಳನ್ನು ಹಿಡಿಯುವುದಕ್ಕೆ ಹೊಂಚು ಹಾಕುತ್ತಿರುವೆ? ಮೊದಲು ನೀನು ಆಲೋಚಿಸು, ಆ ಮೇಲೆ ಮಾತನಾಡೋಣ.

3ಏಕೆ ನಮ್ಮನ್ನು ಮೃಗಗಳೆಂದು ಎಣಿಸಿದ್ದೀ? ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ?

4ಸಿಟ್ಟಿನಿಂದ ನಿನ್ನನ್ನು ಸೀಳಿಕೊಳ್ಳುವವನೇ, ನಿನಗಾಗಿ ಲೋಕವೇ ಹಾಳಾಗಬೇಕೋ, ಬಂಡೆಯು ತನ್ನ ಸ್ಥಳದಿಂದ ಜರುಗಬೇಕೋ?

5ಹೇಗಾದರೂ ದುಷ್ಟನ ದೀಪವು ಆರುವುದು, ಅವನ ಒಲೆಯು ಉರಿಯುವುದಿಲ್ಲ.

6ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು, ಅವನ ಮೇಲಣ ತೂಗು ದೀವಿಗೆಯು ನಂದಿಹೋಗುವುದು.

7ಅವನ ಬಲವುಳ್ಳ ಹೆಜ್ಜೆಗಳು ಇಕ್ಕಟ್ಟಾಗುವುದು, ಅವನ ಆಲೋಚನೆಯೇ ಅವನನ್ನು ಕೆಡವಿಹಾಕುವುದು.

8ತನ್ನ ಹೆಜ್ಜೆಗಳಿಂದಲೇ ಬಲೆಗೆ ಬೀಳುವನು, ಹಾಳು ಗುಂಡಿಯ ಮೇಲೆ ನಡೆಯುವನು.

9ಬಲೆ ಅವನ ಹಿಮ್ಮಡಿಯನ್ನು ಸಿಕ್ಕಿಸಿ ಕಚ್ಚುವುದು, ಉರುಲು ಅವನನ್ನು ಹಿಡಿಯುವುದು .

10ನೆಲದ ಮೇಲೆ ಪಾಶವೂ, ದಾರಿಯಲ್ಲಿ ಜಾಲವೂ ಅವನಿಗಾಗಿ ಹೊಂಚಿಕೊಂಡಿರುವವು.

11ಎಲ್ಲಾ ಕಡೆಯಲ್ಲಿಯೂ ಅಪಾಯಗಳು ಅವನನ್ನು ಹೆದರಿಸಿ; ಅವನ ಹಿಮ್ಮಡಿ ತುಳಿಯುತ್ತಾ ಬೆನ್ನು ಹತ್ತುವವು.

12ಅವನ ಬಲವು ಕುಂದಿಹೋಗುವುದು. ಅವನು ಎಡವಿ ಬಿದ್ದಾನೇ ಎಂದು ವಿಪತ್ತು ಕಾದಿರುವುದು.

13ಮೃತ್ಯುವಿನ ಹಿರಿಯ ಮಗನು ಅವನ ಚರ್ಮವನ್ನು ಚೂರು ಚೂರಾಗಿ ತಿಂದು, ಅವನ ಅಂಗಗಳನ್ನು ನುಂಗಿಬಿಡುವನು.

14ಅವನ ನಿರ್ಭಯದ ಗುಡಾರದಿಂದ ಅವನನ್ನು ಎಳೆದು, ಮಹಾಭೀತಿಗಳ ರಾಜನ ಸನ್ನಿಧಿಗೆ ಸಾಗಿಸಿಕೊಂಡು ಹೋಗುವನು.

15ಅವನ ಸಂಬಂಧಿಕರಲ್ಲದವರು ಅವನ ಗುಡಾರದಲ್ಲಿ ವಾಸಿಸುವರು, ಅವನ ಮನೆಯ ಮೇಲೆ ಗಂಧಕವು ಎರಚಲ್ಪಡುವುದು.

16ಅವನ ವಂಶವೃಕ್ಷದ ಬೇರುಗಳು ಒಣಗುವುದು, ಅದರ ರೆಂಬೆಯು ಮೇಲೆ ಬಾಡುವುದು.

17ಅವನ ಸ್ಮರಣೆಯು ಭೂಮಿಯಲ್ಲಿ ಅಳಿದುಹೋಗುವುದು, ಅವನ ಹೆಸರು ಹೊರಗಣ ಪ್ರಾಂತ್ಯಗಳಲ್ಲಿಯೂ ಇರುವುದಿಲ್ಲ.

18ಅವನನ್ನು ಬೆಳಕಿನಿಂದ ಕತ್ತಲೆಗೆ ನೂಕಿ, ಲೋಕದಿಂದಲೇ ಅಟ್ಟಿಬಿಡುವರು.

19ಅವನಿಗೆ ಸ್ವಜನರಲ್ಲಿ ಮಗನಾಗಲಿ, ಮೊಮ್ಮಗನಾಗಲಿ ಇರುವುದಿಲ್ಲ. ಅವನು ವಾಸಿಸುವ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ.

20ಪಡುವಣದವರು ಅವನ ನಾಶದ ದಿನವನ್ನು ನೋಡಿ ಹೆದರುವರು, ಹಾಗೆಯೇ ಮೂಡಣದವರು ಭಯಭ್ರಾಂತರಾಗುವರು.

21ಕೆಡುಕರ ನಿವಾಸಗಳ ಸ್ಥಿತಿಯು ಇಂಥದೇ. ದೇವರನ್ನು ಲಕ್ಷಿಸದವನ ಸ್ಥಿತಿಯು ಹೀಗೆಯೇ ಇರುತ್ತದೆ.”

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath