ಕ್ರಿಶ್ಚಿಯನ್ ಧರ್ಮ
ಹಿಂದೆ

ಯೋಹಾನನು 11

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಮಾರ್ಥಳು ಮತ್ತು ಆಕೆಯ ಸಹೋದರಿಯಾದ, ಮರಿಯಳ ಊರಾದ, ಬೇಥಾನ್ಯದಲ್ಲಿ ಲಾಜರನೆಂಬುವನೊಬ್ಬನು ಅಸ್ವಸ್ಥನಾಗಿದ್ದನು.

2ಈ ಮರಿಯಳು ಕರ್ತನಿಗೆ ತೈಲವನ್ನು ಹಚ್ಚಿ ಆತನ ಪಾದಗಳನ್ನು ತನ್ನ ತಲೆ ಕೂದಲಿನಿಂದ ಒರಸಿದವಳು. ಈಕೆಯ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದನು.

3ಹೀಗಿರಲಾಗಿ ಅವನ ಸಹೋದರಿಯರು, “ಕರ್ತನೇ ಇಗೋ, ನೀನು ಪ್ರೀತಿಸುವವನು ಅಸ್ವಸ್ಥನಾಗಿದ್ದಾನೆ” ಎಂಬುದಾಗಿ ಯೇಸುವಿನ ಬಳಿಗೆ ಹೇಳಿ ಕಳುಹಿಸಿದರು.

4ಯೇಸು ಇದನ್ನು ಕೇಳಿ, “ಈ ರೋಗವು ಮರಣಕ್ಕಾಗಿ ಬಂದದ್ದಲ್ಲ; ಇದರಿಂದ ದೇವಕುಮಾರನಿಗೆ ಮಹಿಮೆ ಉಂಟಾಗುವಂತೆ ದೇವರ ಮಹಿಮೆಗೋಸ್ಕರ ಬಂದದ್ದು” ಎಂದು ಹೇಳಿದನು.

5ಮಾರ್ಥಳನ್ನು ಆಕೆಯ ತಂಗಿಯನ್ನು ಮತ್ತು ಲಾಜರನನ್ನು ಯೇಸು ಪ್ರೀತಿಸುತ್ತಿದ್ದನು.

6ಲಾಜರನು ಅಸ್ವಸ್ಥನಾಗಿದ್ದಾನೆಂದು ಆತನು ಕೇಳಿದ ಮೇಲೆಯೂ ಎರಡು ದಿನ ತಾನಿದ್ದ ಸ್ಥಳದಲ್ಲೇ ಉಳಿದುಕೊಂಡನು.

7ಬಳಿಕ ಆತನು ತನ್ನ ಶಿಷ್ಯರಿಗೆ, “ನಾವು ಪುನಃ ಯೂದಾಯಕ್ಕೆ ಹೋಗೋಣ” ಎಂದು ಹೇಳಿದನು.

8ಆತನ ಶಿಷ್ಯರು ಆತನಿಗೆ, “ಗುರುವೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿದ್ದಾರೆ, ಪುನಃ ನೀನು ಅಲ್ಲಿಗೆ ಹೋಗಬೇಕೆಂದಿರುವಿಯಾ?” ಎಂದರು.

9ಯೇಸು, “ಹಗಲಿಗೆ ಹನ್ನೆರಡು ತಾಸುಗಳು ಉಂಟಲ್ಲವೇ? ಒಬ್ಬನು ಹಗಲಿನಲ್ಲಿ ನಡೆದರೆ, ಈ ಲೋಕದ ಬೆಳಕು ಕಾಣಿಸುವುದರಿಂದ ಅವನು ಎಡವುದಿಲ್ಲ.

10ರಾತ್ರಿಯಲ್ಲಿ ನಡೆದರೆ ತನ್ನಲ್ಲಿ ಬೆಳಕಿಲ್ಲದ್ದರಿಂದ ಅವನು ಎಡವುತ್ತಾನೆ” ಎಂದು ಉತ್ತರಕೊಟ್ಟನು.

11ಇದನ್ನು ಹೇಳಿದ ಮೇಲೆ ಆತನು ಅವರಿಗೆ, “ನಮ್ಮ ಮಿತ್ರನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ಆದುದರಿಂದ ನಾನು ಹೋಗಿ ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ” ಎಂದು ಹೇಳಿದನು.

12ಅದಕ್ಕೆ ಶಿಷ್ಯರು, “ಅವನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು” ಎಂದರು.

13ಯೇಸು ಅವನ ಮರಣವನ್ನು ಕುರಿತು ಅದನ್ನು ಹೇಳಿದ್ದನು, ಆದರೆ ಅವರು ವಿಶ್ರಾಂತಿಗಾಗಿ ಮಲಗಿದ್ದಾನೆಂಬುದಾಗಿ ಹೇಳಿದನೆಂದು ಯೋಚಿಸಿದರು.

14ಆಗ ಯೇಸು ಸ್ಪಷ್ಟವಾಗಿ ಅವರಿಗೆ, “ಲಾಜರನು ಸತ್ತು ಹೋಗಿದ್ದಾನೆ.

15ನಾನು ಅಲ್ಲಿ ಇಲ್ಲದೆ ಹೋದದ್ದು ಒಳ್ಳೆಯದೇ, ನಿಮಗೆ ನನ್ನಲ್ಲಿ ನಂಬಿಕೆ ಬರುವಂತೆ ಇದೆಲ್ಲಾ ನಡೆದಿದೆ. ಬನ್ನಿ, ನಾವು ಅವನ ಬಳಿಗೆ ಹೋಗೋಣ” ಎಂದು ಹೇಳಿದನು

16ಆಗ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ, “ನಾವು ಸಹ ಯೇಸುವಿನೊಂದಿಗೆ ಸಾಯುವುದಕ್ಕೆ ಹೋಗೋಣ” ಎಂದು ಹೇಳಿದನು.

17ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿನಗಳಾಯಿತೆಂದು ಆತನಿಗೆ ತಿಳಿದು ಬಂದಿತು.

18ಬೇಥಾನ್ಯವು ಯೆರೂಸಲೇಮಿಗೆ ಸಮೀಪವಾಗಿತ್ತು. ಯೆರುಸಲೇಮಿನಿಂದ ಸುಮಾರು ಒಂದು ಹರಿದಾರಿಯಷ್ಟು ಅಂತರವಿತ್ತು.

19ಯೆಹೂದ್ಯರಲ್ಲಿ ಅನೇಕರು ಮಾರ್ಥಳನ್ನು ಮತ್ತು ಮರಿಯಳನ್ನು ಅವರ ಸಹೋದರನ ವಿಷಯದಲ್ಲಿ ಸಂತೈಸಬೇಕೆಂದು ಬಂದಿದ್ದರು.

20ಹೀಗಿರುವಲ್ಲಿ ಮಾರ್ಥಳು ಯೇಸು ಬರುತ್ತಾನೆಂದು ಕೇಳಿ ಆತನನ್ನು ಎದುರುಗೊಳ್ಳುವುದಕ್ಕೆ ಎದ್ದು ಹೋದಳು. ಆದರೆ ಮರಿಯಳು ಮನೆಯಲ್ಲೇ ಉಳಿದುಕೊಂಡಿದ್ದಳು.

21ಆಗ ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ.

22ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ಬಲ್ಲೆನು” ಎಂದು ಹೇಳಿದಳು.

23ಯೇಸು ಆಕೆಗೆ, “ನಿನ್ನ ತಮ್ಮನು ಪುನಃ ಎದ್ದು ಬರುವನು” ಎಂದು ಹೇಳಿದನು.

24ಮಾರ್ಥಳು ಆತನಿಗೆ, “ಸತ್ತವರಿಗೆ ಕಡೆಯ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ಎದ್ದು ಬರುವನೆಂದು ನಾನು ಬಲ್ಲೆನು” ಅಂದಳು.

25ಯೇಸು ಆಕೆಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು,

26ಮತ್ತು ಜೀವಿಸುವ ಪ್ರತಿಯೊಬ್ಬನು ನನ್ನಲ್ಲಿ ನಂಬಿಕೆಯಿಟ್ಟರೆ, ಅವನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದಕ್ಕೆ,

27ಆಕೆಯು ಆತನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಾನು ನಂಬಿದ್ದೇನೆ” ಅಂದಳು.

28ಇದನ್ನು ಹೇಳಿ ಆಕೆ ಹೋಗಿ ತನ್ನ ತಂಗಿಯಾದ ಮರಿಯಳನ್ನು ಗುಪ್ತವಾಗಿ ಕರೆದು, “ಗುರುವು ಬಂದಿದ್ದಾರೆ, ನಿನ್ನನ್ನು ಕರೆಯುತ್ತಿದ್ದಾರೆ” ಎಂದಳು.

29ಮರಿಯಳು ಇದನ್ನು ಕೇಳಿದಾಗ ತಟ್ಟನೆ ಎದ್ದು ಆತನ ಬಳಿಗೆ ಹೋದಳು.

30ಯೇಸು ಇನ್ನೂ ಊರೊಳಗೆ ಬಂದಿರಲಿಲ್ಲ. ಮಾರ್ಥಳು ಆತನನ್ನು ಸಂಧಿಸಿದ ಸ್ಥಳದಲ್ಲಿಯೇ ಇದ್ದನು.

31ಮರಿಯಳೊಂದಿಗೆ ಮನೆಯಲ್ಲಿ ಇದ್ದುಕೊಂಡು ಆಕೆಯನ್ನು ಸಂತೈಸುತ್ತಿದ್ದ ಯೆಹೂದ್ಯರು ಆಕೆಯು ತಟ್ಟನೆ ಎದ್ದು ಹೊರಗೆ ಹೋಗುವುದನ್ನು ಕಂಡು, ಆಕೆಯು ಅಳುವುದಕ್ಕಾಗಿ ಸಮಾಧಿಗೆ ಹೋಗುತ್ತಿದ್ದಾಳೆಂದು ಭಾವಿಸಿ ಆಕೆಯ ಹಿಂದೆ ಹೋದರು.

32ಮರಿಯಳು ಯೇಸು ಇದ್ದಲ್ಲಿಗೆ ಬಂದು ಆತನನ್ನು ಕಂಡು ಆತನ ಪಾದಗಳಿಗೆ ಅಡ್ಡಬಿದ್ದು ಆತನಿಗೆ, “ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು.

33ಆಕೆಯು ಅಳುವುದನ್ನು ಮತ್ತು ಆಕೆಯೊಂದಿಗೆ ಬಂದಿದ್ದ ಯೆಹೂದ್ಯರು ಅಳುವುದನ್ನು ಯೇಸು ನೋಡಿದಾಗ ಯೇಸುವು ಆತ್ಮದಲ್ಲಿ ವ್ಯಸನಪಟ್ಟು ನೊಂದುಕೊಂಡು,

34“ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದನು. ಅವರು ಆತನಿಗೆ, “ಕರ್ತನೇ, ಬಂದು ನೋಡು” ಎಂದರು.

35ಯೇಸು ಕಣ್ಣೀರಿಟ್ಟನು.

36ಅದಕ್ಕೆ ಯೆಹೂದ್ಯರು, “ಆಹಾ! ಈತನು ಅವನ ಮೇಲೆ ಎಷ್ಟೋ ಮಮತೆ ಇಟ್ಟಿದ್ದಾನೆ” ಎಂದರು.

37ಅವರಲ್ಲಿ ಕೆಲವರು, “ಈತನು ಆ ಕುರುಡನಿಗೆ ಕಣ್ಣು ಕೊಟ್ಟನಲ್ಲಾ, ಈ ಮನುಷ್ಯನನ್ನು ಸಾಯದ ಹಾಗೆ ಮಾಡಬಹುದಿತ್ತಲ್ಲಾ?” ಎಂದರು.

38ಯೇಸು ತಿರುಗಿ ತನ್ನ ಮನದಲ್ಲಿ ನೊಂದುಕೊಳ್ಳುತ್ತಾ ಸಮಾಧಿಯ ಬಳಿಗೆ ಬಂದನು. ಅದು ಒಂದು ಗವಿಯಾಗಿತ್ತು, ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಿಡಲಾಗಿತ್ತು.

39ಯೇಸು, “ಆ ಕಲ್ಲನ್ನು ತೆಗೆದು ಹಾಕಿರಿ” ಎನ್ನಲು, ತೀರಿಹೋದವನ ಸಹೋದರಿಯಾದ ಮಾರ್ಥಳು ಆತನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾದವು, ಈಗ ದುರ್ವಾಸನೆ ಬಂದಿರಬಹುದು” ಎಂದಳು.

40ಯೇಸು ಆಕೆಗೆ, “ನೀನು ನಂಬಿದರೆ ದೇವರ ಮಹಿಮೆಯನ್ನು ಕಾಣುವಿ ಎಂದು ನಾನು ನಿನಗೆ ಹೇಳಲಿಲ್ಲವೇ?” ಎಂದು ಉತ್ತರ ಕೊಟ್ಟನು

41ಆಗ ಅವರು ಕಲ್ಲನ್ನು ತೆಗೆದು ಹಾಕಿದರು. ಯೇಸು ಕಣ್ಣೆತ್ತಿ ಮೇಲಕ್ಕೆ ನೋಡಿ, “ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

42ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಸುತ್ತಲೂ ನಿಂತಿರುವ ಈ ಜನರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ” ಎಂದು ಹೇಳಿದನು.

43ಆತನು ಹೀಗೆ ಹೇಳಿದ ಮೇಲೆ, “ಲಾಜರನೇ, ಹೊರಗೆ ಬಾ!” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.

44ಸತ್ತಿದ್ದವನು ಹೊರಗೆ ಬಂದನು. ಅವನ ಕೈಕಾಲುಗಳು ಶವ ವಸ್ತ್ರಗಳಿಂದ ಸುತ್ತಿದ್ದವು. ಅವನ ಮುಖಕ್ಕೆ ವಸ್ತ್ರ ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಡಿಸಿರಿ, ಅವನು ಹೋಗಲಿ” ಎಂದು ಹೇಳಿದನು.

45ಆದುದರಿಂದ ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಯೇಸುವಿನ ಕಾರ್ಯವನ್ನು ನೋಡಿ ಆತನಲ್ಲಿ ನಂಬಿಕೆಯಿಟ್ಟರು.

46ಆದರೆ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಕಾರ್ಯಗಳನ್ನು ಅವರಿಗೆ ಹೇಳಿದರು.

47ಆಗ ಮುಖ್ಯಯಾಜಕರೂ ಫರಿಸಾಯರೂ ಹಿರೀಸಭೆಯನ್ನು ಕೂಡಿಸಿ, “ನಾವು ಈಗ ಏನುಮಾಡಬೇಕು? ಈ ಮನುಷ್ಯನು ಬಹು ಸೂಚಕಕಾರ್ಯಗಳನ್ನು ಮಾಡುತ್ತಾನಲ್ಲಾ.

48ನಾವು ಅವನನ್ನು ಹೀಗೆಯೇ ಬಿಟ್ಟರೆ ಎಲ್ಲರೂ ಆತನ್ನನ್ನೇ ನಂಬುವರು. ರೋಮನ್ನರು ಬಂದು ನಮ್ಮ ಸ್ಥಳವನ್ನೂ ಮತ್ತು ರಾಷ್ಟ್ರವನ್ನೂ ವಶ ಮಾಡಿಕೊಂಡಾರು” ಎಂದರು.

49ಆಗ ಅವರಲ್ಲಿ ಆ ವರ್ಷಕ್ಕೆ ಮಹಾಯಾಜಕನಾಗಿದ್ದ ಕಾಯಫನೆಂಬುವನು ಅವರಿಗೆ, “ನಿಮಗೇನೂ ತಿಳಿಯುತ್ತಿಲ್ಲ.

50ಇಡೀ ರಾಷ್ಟ್ರವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಹಿತವೆಂದು ನೀವು ಆಲೋಚಿಸುವುದೂ ಇಲ್ಲ” ಎಂಬುದಾಗಿ ಹೇಳಿದನು.

51ಇದನ್ನು ಅವನು ತನ್ನಷ್ಟಕ್ಕೆ ತಾನೇ ಹೇಳಲಿಲ್ಲ, ಆದರೆ ತಾನು ಆ ವರ್ಷದಲ್ಲಿ ಮಹಾಯಾಜಕನಾಗಿದ್ದುದರಿಂದ, ಯೇಸು ಆ ಜನರಿಗೋಸ್ಕರ ಹಾಗೂ

52ಆ ಜನತೆಗಾಗಿ ಮಾತ್ರವಲ್ಲದೆ ಚದರಿರುವ ದೇವರ ಮಕ್ಕಳನ್ನು ಸಹ ಒಟ್ಟುಗೂಡಿಸುವುದಕ್ಕಾಗಿಯೂ ಸಾಯುವುದಕ್ಕಿದ್ದನು, ಎಂಬುದಾಗಿ ಪ್ರವಾದಿಸಿದನು

53ಅವರು ಆ ದಿನದಿಂದ ಆತನನ್ನು ಕೊಲ್ಲುವುದಕ್ಕೆ ಆಲೋಚಿಸುತ್ತಿದ್ದರು.

54ಹೀಗಿರಲಾಗಿ ಯೇಸು ಇನ್ನೂ ಯೆಹೂದ್ಯರೊಳಗೆ ಬಹಿರಂಗವಾಗಿ ತಿರುಗಾಡದೆ, ಅಲ್ಲಿಂದ ಅಡವಿಯ ಹತ್ತಿರದ ಪ್ರದೇಶಕ್ಕೆ ಹೋಗಿ, ಎಫ್ರಾಯೀಮ್ ಎಂಬ ಊರಲ್ಲಿ ತನ್ನ ಶಿಷ್ಯರ ಜೊತೆ ಇದ್ದನು.

55ಆಗ ಯೆಹೂದ್ಯರ ಪಸ್ಕಹಬ್ಬ ಹತ್ತಿರವಾಗಿರಲಾಗಿ, ಬಹು ಜನರು ತಮ್ಮನ್ನು ಶುದ್ಧ ಮಾಡಿಕೊಳ್ಳುವುದಕ್ಕಾಗಿ ಹಬ್ಬಕ್ಕಿಂತ ಮೊದಲೇ ಹಳ್ಳಿಗಳಿಂದ ಯೆರೂಸಲೇಮಿಗೆ ಬಂದರು.

56ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ಅವನು ಹಬ್ಬಕ್ಕೆ ಬಾರದೇ ಇದ್ದಾನೋ? ನಿಮಗೆ ಹೇಗೆ ತೋರುತ್ತದೆ?” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಳ್ಳುತ್ತಾ ಇದ್ದರು.

57ಆಗ ಮುಖ್ಯಯಾಜಕರೂ ಮತ್ತು ಫರಿಸಾಯರೂ ಆತನನ್ನು ಹಿಡಿಯಬೇಕೆಂಬುದಾಗಿ ಯೋಚಿಸಿ, ಅವನಿರುವ ಸ್ಥಳವು ಯಾರಿಗಾದರೂ ಗೊತ್ತಾದರೆ ಅದನ್ನು ತಮಗೆ ತಿಳಿಸಬೇಕೆಂದು ಅಪ್ಪಣೆ ಕೊಟ್ಟಿದ್ದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath