ಯೆರೆಮೀಯನು 52
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದನು; ಇವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಲಿಬ್ನದ ಯೆರೆಮೀಯನ ಮಗಳು ಆದ ಹಮೂಟಲ್ ಎಂಬಾಕೆಯು ಅವನ ತಾಯಿ.
2ಇವನು ಯೆಹೋಯಾಕೀಮನಂತೆ ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ನಡೆದನು.
3ಯೆಹೋವನು ಯೆರೂಸಲೇಮಿನವರ ಮೇಲೆಯೂ ಮತ್ತು ಬೇರೆ ಎಲ್ಲಾ ಯೆಹೂದ್ಯರ ಮೇಲೆಯೂ ಇದನ್ನೆಲ್ಲಾ ಬರಮಾಡಿ, ಕಡೆಯಲ್ಲಿ ಅವರನ್ನು ತನ್ನ ಸನ್ನಿಧಿಯಿಂದ ತಳ್ಳಿಬಿಡುವಷ್ಟು ರೋಷವುಳ್ಳವನಾದನು. ಚಿದ್ಕೀಯನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನಿಗೆ ವಿರುದ್ಧವಾಗಿ ತಿರುಗಿಬಿದ್ದನು.
4ಚಿದ್ಕೀಯನ ಆಳ್ವಿಕೆಯ ಒಂಭತ್ತನೆಯ ವರ್ಷ ಹತ್ತನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಸರ್ವಸೈನ್ಯ ಸಹಿತನಾಗಿ ಯೆರೂಸಲೇಮಿಗೆ ಬಂದು, ಅಲ್ಲಿ ಪಾಳೆಯ ಮಾಡಿಕೊಂಡು ಅದರ ಸುತ್ತಲು ಮಣ್ಣಿನ ದಿಬ್ಬವನ್ನು ಮಾಡಿ,
5ಅರಸನಾದ ಚಿದ್ಕೀಯನ ಆಳ್ವಿಕೆಯ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆ ಹಾಕಿದನು.
6ಘೋರಕ್ಷಾಮದ ದೆಸೆಯಿಂದ ಪಟ್ಟಣದಲ್ಲಿರುವವರಿಗೆ ಆಹಾರ ಸಿಕ್ಕದೆಹೋಯಿತು. ಪಟ್ಟಣಕ್ಕೆ ಮುತ್ತಿಗೆ ಹಾಕಿದ್ದ ಕಸ್ದೀಯರು ಹನ್ನೊಂದನೆಯ ವರ್ಷದ ನಾಲ್ಕನೆಯ ತಿಂಗಳಿನ ಒಂಭತ್ತನೆಯ ದಿನದಲ್ಲಿ,
7ಪೌಳಿಗೋಡೆಯಲ್ಲಿ ಒಂದು ದ್ವಾರವನ್ನು ಮಾಡಿದ್ದರಿಂದ ಒಳಗಿದ್ದ ಎಲ್ಲಾ ಸೈನಿಕರು ಅದೇ ರಾತ್ರಿ ಅರಸನ ತೋಟದ ಬಳಿಯಲ್ಲಿರುವ ಬಾಗಿಲಿನ ಮೂಲಕ ಪಟ್ಟಣದೊಳಗಿಂದ ಹೊರಟು ಓಡಿ ಹೋದರು; ಆ ಬಾಗಿಲು ಎರಡು ಗೋಡೆಗಳ ಮಧ್ಯದಲ್ಲಿತ್ತು; ಅವರು ಅರಾಬಾ ಎಂಬ ತಗ್ಗಾದ ಪ್ರದೇಶದ ಮಾರ್ಗವಾಗಿ ಪಲಾಯನ ಮಾಡಿದರು.
8ಕಸ್ದೀಯರ ಸೈನ್ಯದವರು ಅರಸನಾದ ಚಿದ್ಕೀಯನನ್ನು ಹಿಂದಟ್ಟಿ ಅವನನ್ನು ಯೆರಿಕೋವಿನ ಬಯಲಿನಲ್ಲಿ ಹಿಡಿದರು. ಅಷ್ಟರಲ್ಲಿ ಅವನ ಎಲ್ಲಾ ಸೈನಿಕರು ಅವನನ್ನು ಬಿಟ್ಟು ಚದುರಿ ಹೋಗಿದ್ದರು.
9ಅನಂತರ ಕಸ್ದೀಯರು ಅವನನ್ನು ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬೆಲಿನ ಅರಸನ ಬಳಿಗೆ ತೆಗೆದುಕೊಂಡು ಬಂದರು.
10ಬಾಬೆಲಿನ ಅರಸನು ಅವನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಎದುರಿನಲ್ಲಿಯೇ ವಧಿಸಿ, ಯೆಹೂದದ ಸಕಲ ಸರದಾರರನ್ನು ರಿಬ್ಲದಲ್ಲಿ ಕೊಲ್ಲಿಸಿದನು.
11ಇದಲ್ಲದೆ ಬಾಬೆಲಿನ ಅರಸನು ಚಿದ್ಕೀಯನ ಎರಡು ಕಣ್ಣುಗಳನ್ನೂ ಕಿತ್ತು, ಅವನಿಗೆ ಬೇಡಿ ಹಾಕಿ ಬಾಬಿಲೋನಿಗೆ ತೆಗೆದುಕೊಂಡು ಹೋಗಿ, ಅವನು ಜೀವದಿಂದ ಇರುವವರೆಗೆ ಸೆರೆಯಲ್ಲಿ ಇಟ್ಟನು.
12ಐದನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಅಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದಲ್ಲಿ ಬಾಬೆಲಿನ ಅರಸನ ಸೇವಕನೂ, ಕಾವಲುದಂಡಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದನು.
13ಅವನು ಯೆಹೋವನ ಆಲಯವನ್ನೂ, ಅರಮನೆಯನ್ನೂ ಮತ್ತು ಯೆರೂಸಲೇಮಿನ ಎಲ್ಲಾ ದೊಡ್ಡ ಮನೆಗಳನ್ನೂ ಸುಟ್ಟುಬಿಟ್ಟನು.
14ಅವನ ಜೊತೆಯಲ್ಲಿ ಬಂದಿದ್ದ ಕಸ್ದೀಯ ಸೈನ್ಯದವರು ಯೆರೂಸಲೇಮಿನ ಸುತ್ತು ಗೋಡೆಗಳನ್ನೆಲ್ಲಾ ಕೆಡವಿದರು.
15ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಕೇವಲ ದಿಕ್ಕಿಲ್ಲದವರಲ್ಲಿ ಅನೇಕರನ್ನೂ, ಪಟ್ಟಣದಲ್ಲಿ ಉಳಿದವರನ್ನೂ, ಮೊದಲೇ ಬಾಬೆಲಿನ ಅರಸನ ಮೊರೆಹೊಕ್ಕವರನ್ನೂ ಮತ್ತು ಬೇರೆ ಎಲ್ಲಾ ಜನರನ್ನೂ ಸೆರೆಯೊಯ್ದನು.
16ಆದರೆ ನೆಬೂಜರದಾನನು ಹೊಲಗಳನ್ನೂ ಹಾಗು ದ್ರಾಕ್ಷಿಯ ತೋಟಗಳನ್ನೂ ವ್ಯವಸಾಯ ಮಾಡುವುದಕ್ಕಾಗಿ ದೇಶದ ಜನರಲ್ಲಿ ಕೆಲವು ಬಡ, ದಿಕ್ಕಿಲ್ಲದವರನ್ನು ಮಾತ್ರ ಬಿಟ್ಟುಹೋದನು.
17ಕಸ್ದೀಯರು ಯೆಹೋವನ ಆಲಯದ ಬಳಿಯಲ್ಲಿದ್ದ ತಾಮ್ರದ ಕಂಬಗಳನ್ನೂ, ಪೀಠಗಳನ್ನೂ, ಸಮುದ್ರವೆನಿಸಿಕೊಂಡ ಪಾತ್ರೆಯನ್ನೂ ಒಡೆದು,
18ಅವುಗಳ ಎಲ್ಲಾ ತಾಮ್ರವನ್ನೂ ಯೆಹೋವನ ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಬಟ್ಟಲು, ಧೂಪಾರತಿ ಮೊದಲಾದ ತಾಮ್ರದ ಸಾಮಾನುಗಳನ್ನೂ ಬಾಬಿಲೋನಿಗೆ ತೆಗೆದುಕೊಂಡು ಹೋದರು.
19ಕಾವಲು ದಂಡಿನ ಅಧಿಪತಿಯು ಬೆಳ್ಳಿಬಂಗಾರದ ಪಂಚಪಾತ್ರೆ, ಅಗ್ಗಿಷ್ಟಿಕೆ, ಬಟ್ಟಲು, ಬೋಗುಣಿ, ದೀಪಸ್ತಂಭ, ಧೂಪಾರತಿ, ತಾಂಬಾಣ ಮೊದಲಾದವುಗಳನ್ನು ತೆಗೆದುಕೊಂಡನು.
20ಅರಸನಾದ ಸೊಲೊಮೋನನು ಯೆಹೋವನ ಆಲಯಕ್ಕೋಸ್ಕರ ಮಾಡಿಸಿದ ಎರಡು ಕಂಬಗಳು, ಸಮುದ್ರವೆನಿಸಿಕೊಂಡ ಪಾತ್ರೆಯು, ಪೀಠಗಳನ್ನು ಹೊರುವ ಹನ್ನೆರಡು ತಾಮ್ರದ ಹೋರಿಗಳು, ಇವುಗಳಿಗೆ ಲೆಕ್ಕವಿಲ್ಲದಷ್ಟು ತಾಮ್ರ ಹಿಡಿದಿತ್ತು.
21ಕಂಬಗಳು ಎಂಥವುಗಳೆಂದರೆ ಮೊದಲನೆಯ ಕಂಬವು ಹದಿನೆಂಟು ಮೊಳ ಎತ್ತರವಿತ್ತು; ಅದರ ಸುತ್ತಳತೆಯು ಹನ್ನೆರಡು ಮೊಳ; ಅದು ನಾಲ್ಕು ಬೆರಳಷ್ಟು ದಪ್ಪವಾಗಿಯೂ, ಪೊಳ್ಳಾಗಿಯೂ ಇತ್ತು.
22ಕಂಬದ ಮೇಲೆ ಐದು ಮೊಳ ಎತ್ತರವಾದ ಒಂದು ತಾಮ್ರದ ಕುಂಭವಿತ್ತು; ಕುಂಭದ ಮೇಲೆ ಸುತ್ತಲೂ ತಾಮ್ರದ ಜಾಲರಿಯೂ ಅಲಂಕಾರವಾಗಿ ಹಾಗೆಯೇ ಇತ್ತು.
23ನಾಲ್ಕು ಪಕ್ಕಗಳಲ್ಲಿ ತೊಂಭತ್ತಾರು ದಾಳಿಂಬ ಹಣ್ಣುಗಳಿದ್ದವು; ಜಾಲರಿಯ ಮೇಲೆ ಸುತ್ತಲೂ ಒಟ್ಟಾಗಿ ನೂರು ದಾಳಿಂಬ ಹಣ್ಣುಗಳಿದ್ದವು.
24ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋದ ಜನರಲ್ಲಿ ಮಹಾಯಾಜಕನಾದ ಸೆರಾಯನು, ಎರಡನೆಯ ತರಗತಿಯ ಯಾಜಕನಾದ ಚೆಫನ್ಯನು, ಮೂರು ಜನ ದ್ವಾರಪಾಲಕರು,
25ಸೈನ್ಯಸಂಬಂಧವಾದ ಎಲ್ಲಾ ವ್ಯವಸ್ಥೆಯನ್ನು ಮಾಡುವ ಕಂಚುಕಿ, ಪಟ್ಟಣದಲ್ಲಿ ಉಳಿದು ಅರಸನಿಗೆ ಆಪ್ತರಾಗಿದ್ದ ಏಳು ಮಂತ್ರಿಗಳು, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಯನ್ನು ಮಾಡುವ ಸೇನಾಧಿಪತಿಯ ಲೇಖಕನು, ಪಟ್ಟಣದಲ್ಲಿದ್ದ ಅರುವತ್ತು ರೈತರು ಇದ್ದರು.
26ಅವನು ಇವರನ್ನೆಲ್ಲಾ ತೆಗೆದುಕೊಂಡುಹೋಗಿ ಹಮಾತ್ ಪ್ರದೇಶದ ರಿಬ್ಲದಲ್ಲಿದ್ದ ಬಾಬೆಲಿನ ಅರಸನಿಗೆ ಒಪ್ಪಿಸಿದರು.
27ಬಾಬೆಲಿನ ಅರಸನು ಇವರನ್ನು ಅಲ್ಲಿಯೇ ಕೊಲ್ಲಿಸಿದನು. ಹೀಗೆ ಯೆಹೂದ್ಯರು ಸೆರೆಯವರಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು.
28ನೆಬೂಕದ್ನೆಚ್ಚರನು ಸೆರೆಯೊಯ್ದವರ ಲೆಕ್ಕವು ಹೀಗಿದೆ, ಅವನು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಮೂರು ಸಾವಿರದ ಇಪ್ಪತ್ತ ಮೂರು ಜನ ಯೆಹೂದ್ಯರನ್ನು ಸೆರೆಯೊಯ್ದನು.
29ನೆಬೂಕದ್ನೆಚ್ಚರನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಎಂಟುನೂರ ಮೂವತ್ತೆರಡು ಜನರನ್ನು ಯೆರೂಸಲೇಮಿನಿಂದ ಸೆರೆಯೊಯ್ದನು.
30ನೆಬೂಕದ್ನೆಚ್ಚರನ ಆಳ್ವಿಕೆಯ ಇಪ್ಪತ್ತ ಮೂರನೆಯ ವರ್ಷದಲ್ಲಿ ಕಾವಲುದಂಡಿನ ಅಧಿಪತಿಯಾದ ನೆಬೂಜರದಾನನು ಏಳು ನೂರ ನಲ್ವತ್ತೈದು ಯೆಹೂದ್ಯರನ್ನು ಸೆರೆಯೊಯ್ದನು; ಸೆರೆಯಾದವರು ಒಟ್ಟಾಗಿ ನಾಲ್ಕು ಸಾವಿರದ ಆರುನೂರು ಜನ.
31ಎವೀಲ್ಮೆರೋದಕನು ತಾನು ಪಟ್ಟಕ್ಕೆ ಬಂದ ಮೊದಲನೆಯ ವರ್ಷದಲ್ಲಿ ಅಂದರೆ ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿನದಲ್ಲಿ ಬಾಬೆಲಿನ ಅರಸನು ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿ ಅವನನ್ನು ಮೇಲಕ್ಕೆ ಎತ್ತಿದನು.
32ಅವನೊಡನೆ ಪ್ರೀತಿಯಿಂದ ಮಾತನಾಡಿ ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸುಗಳಲ್ಲಿ ಅವನಿಗೆ ಉನ್ನತ ಸ್ಥಾನವನ್ನು ಕೊಟ್ಟನು.
33ಯೆಹೋಯಾಖೀನನು ಸೆರೆಯ ಬಟ್ಟೆಗಳನ್ನು ತೆಗೆದುಹಾಕಿ, ಜೀವದಿಂದಿರುವವರೆಗೂ ಅರಸನ ಪಂಕ್ತಿಯಲ್ಲಿ ಊಟಮಾಡುತ್ತಿದ್ದನು.
34ಅವನು ಸಾಯುವ ತನಕ ಅವನಿಗೆ ಬೇಕಾಗುವ ಎಲ್ಲಾ ಪದಾರ್ಥಗಳು ಪ್ರತಿನಿತ್ಯವೂ ಬಾಬೆಲಿನ ಅರಸನಿಂದಲೇ ದೊರಕುತ್ತಿದ್ದವು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath