ಯೆರೆಮೀಯನು 49
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅಮ್ಮೋನ್ಯರನ್ನು ಕುರಿತು ಯೆಹೋವನು ಇಂತೆನ್ನುತ್ತಾನೆ, “ಇಸ್ರಾಯೇಲಿಗೆ ಮಕ್ಕಳಿಲ್ಲವೋ? ಬಾಧ್ಯನು ಇಲ್ಲವೋ? ಮಲ್ಕಾಮ್ ದೇವತೆಯು ಗಾದಿನ ಸೀಮೆಯನ್ನು ಸ್ವಾಧೀನ ಮಾಡಿಕೊಂಡಿರುವುದೇಕೆ? ಮಲ್ಕಾಮನ ಪ್ರಜೆಗಳು ಗಾದಿನ ಪಟ್ಟಣಗಳಲ್ಲಿ ಏಕೆ ವಾಸಿಸುತ್ತಾರೆ?
2ಆದುದರಿಂದ ಇಗೋ, ಶತ್ರುಗಳು ನನ್ನ ಅಪ್ಪಣೆಯ ಮೇರೆಗೆ ರಬ್ಬಾ ಎಂಬ ಅಮ್ಮೋನ್ಯರ ಪಟ್ಟಣದ ಮೇಲೆ ಬಿದ್ದು, ಯುದ್ಧ ಘೋಷಿಸುವ ದಿನಗಳು ಬರುವವು; ಆ ಪಟ್ಟಣವು ಹಾಳುದಿಬ್ಬವಾಗುವುದು; ಅದಕ್ಕೆ ಸೇರಿದ ಗ್ರಾಮಗಳು ಬೆಂಕಿಯಿಂದ ಸುಟ್ಟುಹೋಗುವವು; ಆಗ ಇಸ್ರಾಯೇಲು ತನ್ನನ್ನು ವಶಮಾಡಿಕೊಂಡವರನ್ನು ತಾನು ವಶಮಾಡಿಕೊಳ್ಳುವುದು. ಇದು ಯೆಹೋವನ ನುಡಿ.”
3“ಹೆಷ್ಬೋನಿನವರೇ, ಗೋಳಾಡಿರಿ; ‘ಆಯಿ’ ಎಂಬ ಊರು ಹಾಳಾಯಿತು, ರಬ್ಬಾ ಪಟ್ಟಣಕ್ಕೆ ಸೇರಿದ ಗ್ರಾಮಗಳವರೇ, ಕಿರಿಚಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ, ಪ್ರಲಾಪಿಸಿರಿ, ಹಟ್ಟಿಗಳಲ್ಲಿ ಅತ್ತಿತ್ತ ಓಡಾಡಿರಿ; ಏಕೆಂದರೆ ಮಲ್ಕಾಮ್ ದೇವತೆಯು, ಅದರ ಯಾಜಕರೂ ಮತ್ತು ಪ್ರಧಾನರೂ ಒಟ್ಟಾಗಿ ಸೆರೆಗೆ ಹೋಗುವರು.
4‘ನನ್ನ ಮೇಲೆ ಯಾರು ತಾನೆ ಬಿದ್ದಾರು?’ ಎಂದು ಸ್ವಂತ ಆಸ್ತಿಪಾಸ್ತಿಯಲ್ಲಿ ಭರವಸೆ ಇಟ್ಟಿರುವ ಭ್ರಷ್ಟದೇಶವೇ, ‘ನನ್ನ ತಗ್ಗುಗಳಲ್ಲಿ ತುಂಬಾ ನೀರು ಹರಿಯುತ್ತದೆಂದು’ ಏಕೆ ಕೊಚ್ಚಿಕೊಳ್ಳುತ್ತೀ?
5ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ಹೇಳುತ್ತಾನೆ, ಇಗೋ, ನಿನ್ನ ನೆರೆಹೊರೆಯವರೆಲ್ಲರೂ ನಿನಗೆ ಭಯಾಸ್ಪದರಾಗುವಂತೆ ಮಾಡುವೆನು, ನಿನ್ನವರಲ್ಲಿ ಪ್ರತಿಯೊಬ್ಬನು ನಿಂತಮುಖವಾಗಿಯೇ ಅಟ್ಟಲ್ಪಡುವನು; ಚದುರಿದವರನ್ನು ಒಟ್ಟು ಸೇರಿಸುವುದಕ್ಕೆ ಯಾರೂ ಇಲ್ಲದಂತಾಗುವುದು.
6ಆದರೂ ಕಾಲಾಂತರದಲ್ಲಿ ಅಮ್ಮೋನ್ಯರ ದುರವಸ್ಥೆಯನ್ನು ತಪ್ಪಿಸುವೆನು. ಇದು ಯೆಹೋವನ ನುಡಿ.”
7ಎದೋಮನ್ನು ಕುರಿತು ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ತೇಮಾನ್ ಸೀಮೆಗೆ ಬುದ್ಧಿಯು ಇನ್ನಿಲ್ಲವೋ? ವಿವೇಕಿಗಳ ಆಲೋಚನಾಶಕ್ತಿಯು ಅಳಿಯಿತೋ? ಅವರ ಜ್ಞಾನವು ಮಾಯವಾಯಿತೋ?
8ದೆದಾನಿನವರೇ, ಹಿಂದಿರುಗಿರಿ, ಓಡಿಹೋಗಿರಿ; ಒಳಪ್ರಾಂತ್ಯದಲ್ಲಿ ವಾಸಿಸಿರಿ; ಏಕೆಂದರೆ ನಾನು ಎದೋಮನ್ನು ದಂಡಿಸುವ ಕಾಲದಲ್ಲಿ ಏಸಾವನಿಗೆ ವಿಧಿಸಿದ ಆಪತ್ತನ್ನು ಅದರ ಮೇಲೆ ಬರಮಾಡುವೆನು.
9ದ್ರಾಕ್ಷಿಯ ಹಣ್ಣನ್ನು ಕೀಳುವವರು ನಿನ್ನ ಕಡೆಗೆ ಬಂದರೆ ಹಕ್ಕಲನ್ನೂ ಉಳಿಸುವುದಿಲ್ಲ; ಕಳ್ಳರು ರಾತ್ರಿವೇಳೆಯಲ್ಲಿ ನುಗ್ಗಿದರೆ ತಮಗೆ ಸಾಕಾಗುವವರೆಗೂ ಹಾಳುಮಾಡುವರು.
10ನಾನೇ ಏಸಾವನ ಆಸರೆಯನ್ನು ಕಿತ್ತಿದ್ದೇನೆ, ಅವನ ಗುಪ್ತಸ್ಥಳಗಳನ್ನು ಬಟ್ಟಬಯಲುಮಾಡಿದ್ದೇನೆ, ಅಡಗಿಕೊಳ್ಳಲಾರನು; ಅವನ ಸಂತಾನದವರೂ, ಸಹೋದರರೂ ಮತ್ತು ನೆರೆಹೊರೆಯವರೂ ಹಾಳಾದರು, ಅವನೂ ಇಲ್ಲವಾದನು.
11ನೀನು ನಿನ್ನ ಅನಾಥರನ್ನು ಬಿಡು, ನಾನೇ ಅವರನ್ನು ಉಳಿಸುವೆನು; ನಿನ್ನ ವಿಧವೆಯರು ನನ್ನಲ್ಲಿ ಭರವಸೆಯಿಡಲಿ.
12ಯೆಹೋವನು ಇಂತೆನ್ನುತ್ತಾನೆ, ಪಾತ್ರೆಯಲ್ಲಿ ಕುಡಿಯುವುದು ಯಾರ ಪಾಲಿಗೆ ಬರಲಿಲ್ಲವೋ, ಅವರೇ ಖಂಡಿತ ಕುಡಿಯಬೇಕಾಗಿರುವಲ್ಲಿ ನೀನು ಅದಕ್ಕೆ ತಪ್ಪಿಸಿಕೊಂಡೀಯಾ? ಆಗುವುದೇ ಇಲ್ಲ, ನೀನು ಕುಡಿದೇ ಕುಡಿಯುವಿ.
13ಬೊಚ್ರವು ಹಾಳುಬಿದ್ದು ಪರಿಹಾಸ್ಯಕ್ಕೂ, ನಿಂದೆಗೂ ಶಾಪಕ್ಕೂ ಗುರಿಯಾಗಿದೆ. ಅದಕ್ಕೆ ಸೇರಿದ ಊರುಗಳೆಲ್ಲಾ ನಿತ್ಯನಾಶವನ್ನು ಹೊಂದುವವು ಎಂದು ನನ್ನ ಮೇಲೆ ಆಣೆಯಿಟ್ಟಿದ್ದೇನೆ. ಇದು ಯೆಹೋವನ ನುಡಿ.”
14ಯೆಹೋವನಿಂದ ಬಂದ ಸಮಾಚಾರವನ್ನು ಕೇಳಿದ್ದೇನೆ; ದೂತನ ಮೂಲಕ ಜನಾಂಗಗಳಿಗೆ ಹೀಗೆ ಹೇಳಿ ಕಳುಹಿಸಿದ್ದಾನೆ, “ನೀವು ಕೂಡಿಕೊಂಡು ಯುದ್ಧಕ್ಕೆ ಹೊರಟು ಎದೋಮಿನ ಮೇಲೆ ಬೀಳಿರಿ.
15ಇಗೋ ಎದೋಮೇ, ನೀನು ಜನಾಂಗಗಳಲ್ಲಿ ಹೀನವಾಗಿ ಜನರ ತಾತ್ಸಾರಕ್ಕೆ ಈಡಾಗುವಂತೆ ಮಾಡಿದ್ದೇನೆ.
16ಆಹಾ, ನಿನ್ನ ಭೀಕರತ್ವವೆಲ್ಲಿ! ಪರ್ವತಾಗ್ರದಲ್ಲಿ ನೆಲೆಗೊಂಡು ಬಂಡೆಯ ಬಿರುಕುಗಳಲ್ಲಿ ವಾಸಿಸುವ ಜನವೇ, ನಿನ್ನೆದೆಯ ಹೆಮ್ಮೆಯು ನಿನ್ನನ್ನು ಮೋಸಗೊಳಿಸಿದೆ; ನೀನು ಹದ್ದಿನಂತೆ ನಿನ್ನ ಗೂಡನ್ನು ಉನ್ನತಸ್ಥಾನದಲ್ಲಿ ಕಟ್ಟಿಕೊಂಡರೂ, ನಿನ್ನನ್ನು ಅಲ್ಲಿಂದ ಇಳಿಸಿಬಿಡುವೆನು. ಇದು ಯೆಹೋವನ ನುಡಿ.”
17ಎದೋಮು ಪರಿಹಾಸ್ಯಕ್ಕೆ ಗುರಿಯಾಗುವುದು; ಹಾದುಹೋಗುವವರೆಲ್ಲರೂ ಅದಕ್ಕೆ ಸಂಭವಿಸಿದ ವಿಪತ್ತುಗಳಿಗೆ ಬೆರಗಾಗಿ ಸಿಳ್ಳುಹಾಕುವರು.
18ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂ, ಸುತ್ತಣ ಊರುಗಳಲ್ಲಿಯೂ ಹೇಗೋ ಹಾಗೆಯೇ ಎದೋಮಿನಲ್ಲಿಯೂ ಯಾರೂ ವಾಸಿಸುವುದಿಲ್ಲ, ಯಾವ ನರಪ್ರಾಣಿಯೂ ಇಳಿದುಕೊಳ್ಳುವುದಿಲ್ಲ.
19ಆಹಾ, ಒಬ್ಬನು ಸಿಂಹದೋಪಾದಿಯಲ್ಲಿ ಯೊರ್ದನಿನ ದಟ್ಟ ಅಡವಿಯಿಂದ ಎದೋಮ್ಯರಿಗೆ ನಿತ್ಯನೆಲೆಯಾದ ಗೋಮಾಳಕ್ಕೆ ಏರಿಬರುವನು; ಕ್ಷಣಮಾತ್ರದಲ್ಲಿ ನಾನು ಅವರನ್ನು ಅಲ್ಲಿಂದ ಓಡಿಸಿಬಿಡುವೆನು; ನಾನು ಆರಿಸಿಕೊಂಡವನನ್ನೇ ಅದನ್ನು ಕಾಯುವುದಕ್ಕೆ ನೇಮಿಸುವೆನು; ನನ್ನ ಸಮಾನನು ಯಾರು? ನನ್ನನ್ನು ನ್ಯಾಯವಿಚಾರಣೆಗೆ ಯಾರು ಕರೆದಾರು? ಮಂದೆಯನ್ನು ಕಾಯುವ ಯಾರು ನನ್ನೆದುರಿಗೆ ನಿಲ್ಲಬಲ್ಲರು?
20ಹೀಗಿರಲು ಯೆಹೋವನು ಎದೋಮಿನ ವಿಷಯವಾಗಿ ಮಾಡಿಕೊಂಡಿರುವ ಆಲೋಚನೆಯನ್ನೂ, ಆತನು ತೇಮಾನ್ಯರನ್ನು ಕುರಿತು ಸಂಕಲ್ಪಿಸಿರುವ ಉದ್ದೇಶವನ್ನೂ ಆಲಿಸಿರಿ; ಮೃಗಗಳು ಖಂಡಿತವಾಗಿ ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವವು; ನಿಶ್ಚಯವಾಗಿ ಅವುಗಳ ಹುಲ್ಗಾವಲು ಅವುಗಳ ನಾಶನಕ್ಕಾಗಿ ಬೆದರುವುದು.
21ಎದೋಮ್ಯರು ಧಡಮ್ಮನೆ ಬೀಳಲು ಭೂಮಿಯು ಕಂಪಿಸುವುದು; ಅದರ ಗೋಳು ಕೆಂಪು ಸಮುದ್ರದವರೆಗೂ ಕೇಳಿಸುವುದು!
22ಇಗೋ, ಬೊಚ್ರದ ಮೇಲೆ ಎರಗಬೇಕೆಂದು ಶತ್ರುವು ರಣಹದ್ದಿನಂತೆ ತನ್ನ ರೆಕ್ಕೆಗಳನ್ನು ಹರಡಿ ಹಾರಿ ಏರುವನು; ಆ ದಿನದಲ್ಲಿ ಎದೋಮಿನ ಶೂರರ ಎದೆಯು ಹೆರುವ ಹೆಂಗಸಿನ ಎದೆಯಂತೆ ಅದರುವುದು.
23ದಮಸ್ಕವನ್ನು ಕುರಿತದ್ದು, “ಹಮಾತಿಗೂ ಮತ್ತು ಅರ್ಪಾದಿಗೂ ಆಶಾಭಂಗವಾಯಿತು; ಅವು ಅಶುಭ ಸಮಾಚಾರವನ್ನು ಕೇಳಿ ಕರಗಿ ಹೋಗಿವೆ; ಸಮುದ್ರಕ್ಕೆ ತಲ್ಲಣ ಹತ್ತಿದೆ, ಸುಮ್ಮನಿರಲಾರದು.
24ದಮಸ್ಕವು ಕುಂದಿದೆ, ಓಡಿಹೋಗಲು ಹಿಂದಿರುಗಿದೆ; ಅದಕ್ಕೆ ನಡುಕ ಹಿಡಿದಿದೆ, ಪ್ರಸವವೇದನೆಯಂತಿರುವ ಯಾತನೆ ಮತ್ತು ವ್ಯಥೆಗಳಿಗೆ ಒಳಗಾಗಿದೆ.
25ಅಯ್ಯೋ, ಹೆಸರುವಾಸಿ ಪಟ್ಟಣವು, ನನ್ನ ಇಷ್ಟದ ಪುರವು ಏಕೆ ವಲಸೆಹೋಗಲಿಲ್ಲ!
26ಅದರ ದುರ್ಗತಿಯಿಂದ ಆ ದಿನದಲ್ಲಿ ಅಲ್ಲಿನ ಯೌವನಸ್ಥರು ಚೌಕಗಳಲ್ಲಿ ಬಿದ್ದುಬಿಡುವರು, ಯುದ್ಧವೀರರೆಲ್ಲಾ ಸುಮ್ಮನಾಗುವರು.
27ಆಗ ನಾನು ದಮಸ್ಕದ ಕೋಟೆಯಲ್ಲಿ ಬೆಂಕಿಯನ್ನು ಹೊತ್ತಿಸುವೆನು, ಅದು ಬೆನ್ ಹದದನ ಅರಮನೆಗಳನ್ನು ದಹಿಸಿಬಿಡುವುದು” ಎಂದು ಸೇನಾಧೀಶ್ವರನಾದ ಯೆಹೋವನು ಅನ್ನುತ್ತಾನೆ.
28ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಹೊಡೆದ ಕೇದಾರನ್ನೂ ಹಾಚೋರಿನ ರಾಷ್ಟ್ರಗಳನ್ನೂ ಕುರಿತದ್ದು. “ಏಳಿರಿ, ಕೇದಾರಿಗೆ ಹೋಗಿ ಪೂರ್ವ ದಿಕ್ಕಿನ ದೇಶದವರನ್ನು ಹಾಳುಮಾಡಿರಿ” ಎಂದು ಯೆಹೋವನು ಶತ್ರುಗಳಿಗೆ ಅಪ್ಪಣೆಮಾಡಿದ್ದಾನೆ.
29“ಶತ್ರುಗಳು ಅವರ ಗುಡಾರಗಳನ್ನೂ ಮತ್ತು ಹಿಂಡುಗಳನ್ನೂ ಅಪಹರಿಸಿಕೊಳ್ಳುವರು. ಅವರ ಪರದೆಗಳನ್ನೂ ಸಮಸ್ತ ಸಾಮಗ್ರಿಗಳನ್ನೂ, ಒಂಟೆಗಳನ್ನೂ ತೆಗೆದುಕೊಂಡು ಹೋಗುವರು, ‘ಸುತ್ತಮುತ್ತಲು ದಿಗಿಲು’ ಎಂಬುದಾಗಿ ಅವರ ಕಡೆಗೆ ಕೂಗುವರು.”
30ಯೆಹೋವನು ಇಂತೆನ್ನುತ್ತಾನೆ, “ಹಾಚೋರಿನವರೇ, ಓಡಿಹೋಗಿರಿ, ದೂರ ಅಲೆದಾಡಿರಿ, ಒಳಪ್ರಾಂತ್ಯದಲ್ಲಿ ವಾಸಿಸಿರಿ, ಏಕೆಂದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನಿಮಗೆ ಕೇಡನ್ನು ಬಗೆದು ನಿಮ್ಮ ನಾಶಕ್ಕೆ ಉಪಾಯವನ್ನು ಕಲ್ಪಿಸಿಕೊಂಡಿದ್ದಾನೆ.
31ಬಾಬೆಲಿನವರೇ, ಏಳಿರಿ. ಅಗುಳಿಯೂ, ಬಾಗಿಲೂ ಬೇಕೆನ್ನದೆ ನೆಮ್ಮದಿಯಿಂದ ನಿರ್ಭಯವಾಗಿ ಪ್ರತ್ಯೇಕವಾಗಿ ವಾಸಿಸುವ ಜನಾಂಗದ ಮೇಲೆ ಬೀಳಿರಿ!
32ಅವರ ಒಂಟೆಗಳು ಕೊಳ್ಳೆಯಾಗುವವು, ಅವರ ಲೆಕ್ಕವಿಲ್ಲದ ದನಕುರಿಗಳು ಸೂರೆಹೋಗುವವು; ಚಂಡಿಕೆಬಿಟ್ಟುಕೊಂಡಿರುವ ಜನರನ್ನು ಎಲ್ಲಾ ಕಡೆಯ ಗಾಳಿಗೂ ತೂರುವೆನು; ಎಲ್ಲಾ ಕಡೆಯಿಂದಲೂ ವಿಪತ್ತನ್ನು ಅವರ ಮೇಲೆ ಬರಮಾಡುವೆನು.
33ಆಗ ಹಾಚೋರು ಸದಾ ಹಾಳುಬಿದ್ದು ನರಿಗಳಿಗೆ ಹಕ್ಕೆಯಾಗುವುದು; ಅಲ್ಲಿ ಯಾರೂ ವಾಸಿಸರು, ಯಾವ ನರಮನುಷ್ಯನೂ ಇಳುಕೊಳ್ಳನು, ಇದು ಯೆಹೋವನ ನುಡಿ.”
34ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಪ್ರಾರಂಭದಲ್ಲಿ ಯೆಹೋವನು ಏಲಾಮಿನ ವಿಷಯವಾದ ಈ ವಾಕ್ಯವನ್ನು ಪ್ರವಾದಿಯಾದ ಯೆರೆಮೀಯನಿಗೆ ದಯಪಾಲಿಸಿದನು.
35“ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, ಇಗೋ, ನಾನು ಏಲಾಮಿನ ಬಲವಾದ ಮುಖ್ಯ ಬಿಲ್ಲನ್ನು ಮುರಿದುಬಿಡುವೆನು.
36ನಾನು ನಾಲ್ಕು ದಿಕ್ಕುಗಳಿಂದಲೂ ನಾಲ್ಕು ಗಾಳಿಗಳನ್ನು ಏಲಾಮ್ಯರ ಮೇಲೆ ಬರಮಾಡಿ, ಅವರನ್ನು ಆಯಾ ಗಾಳಿಗಳಿಗೆ ತೂರಿಬಿಡುವೆನು; ಏಲಾಮು ದೇಶಭ್ರಷ್ಟರಾದವರನ್ನು ಸೇರದೆ ಇರುವ ರಾಜ್ಯವೇ ಇರುವುದಿಲ್ಲ.
37ಏಲಾಮ್ಯರು ತಮ್ಮ ಪ್ರಾಣಹುಡುಕುವ ಶತ್ರುಗಳಿಂದ ಕಂಗೆಡುವಂತೆ ಮಾಡುವೆನು; ನನ್ನ ರೋಷಾಗ್ನಿಯ ವಿಪತ್ತನ್ನು ಅವರ ಮೇಲೆ ಬರಮಾಡುವೆನು; ಇದು ಯೆಹೋವನ ನುಡಿ; ಅವರು ನಿರ್ಮೂಲವಾಗುವ ತನಕ ಅವರ ಹಿಂದೆ ಖಡ್ಗವನ್ನು ಅಟ್ಟುವೆನು;
38ನನ್ನ ಸಿಂಹಾಸನವನ್ನು ಏಲಾಮಿನಲ್ಲಿ ಸ್ಥಾಪಿಸಿ ಆ ದೇಶದ ಅರಸನನ್ನೂ, ಪ್ರಧಾನರನ್ನೂ ಅಳಿಸಿಬಿಡುವೆನು.
39ಇದು ಯೆಹೋವನ ನುಡಿ. ಆದರೂ ಕಟ್ಟಕಡೆಯಲ್ಲಿ ಏಲಾಮಿನ ದುರವಸ್ಥೆಯನ್ನು ತಪ್ಪಿಸುವೆನು. ಇದು ಯೆಹೋವನ ನುಡಿ.”
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath