ಕ್ರಿಶ್ಚಿಯನ್ ಧರ್ಮ
ಹಿಂದೆ

ಯೆರೆಮೀಯನು 36

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ನಾಲ್ಕನೆಯ ವರ್ಷದಲ್ಲಿ ಯೆಹೋವನು ಯೆರೆಮೀಯನಿಗೆ,

2“ನೀನು ಗ್ರಂಥ ಬರೆಯತಕ್ಕ ಸುರುಳಿಯನ್ನು ತೆಗೆದುಕೊಂಡು, ನಾನು ಯೋಷೀಯನ ಕಾಲದಲ್ಲಿ ನಿನ್ನ ಸಂಗಡ ಮಾತನಾಡಿದ ದಿನದಿಂದ ಇಂದಿನವರೆಗೂ ಇಸ್ರಾಯೇಲು, ಯೆಹೂದ, ಸಕಲ ಜನಾಂಗಗಳು ಇವುಗಳ ವಿಷಯವಾಗಿ ನಿನಗೆ ನುಡಿಯುತ್ತಾ ಬಂದಿರುವ ಮಾತುಗಳನ್ನೆಲ್ಲಾ ಬರೆ.

3ಒಂದು ವೇಳೆ ಯೆಹೂದ ವಂಶದವರು ನಾನು ಅವರಿಗೆ ಮಾಡಬೇಕೆಂದಿರುವ ಕೇಡನ್ನು ಕೇಳಿ ತಮ್ಮ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಬಹುದು; ಹಿಂದಿರುಗಿದರೆ ಅವರ ಪಾಪ ಮತ್ತು ಅಪರಾಧಗಳನ್ನು ಕ್ಷಮಿಸಿಬಿಡುವೆನು” ಎಂಬ ಮಾತನ್ನು ತಿಳಿಸಿದನು.

4ಆಗ ಯೆರೆಮೀಯನು ನೇರೀಯನ ಮಗನಾದ ಬಾರೂಕನನ್ನು ಕರೆಯಿಸಿ ಯೆಹೋವನ ಮಾತುಗಳನ್ನೆಲ್ಲಾ ಹೇಳಲು ಅವನು ಯೆರೆಮೀಯನ ಬಾಯಿಂದ ಬಂದ ಹಾಗೆಯೇ ಅವುಗಳನ್ನು ಗ್ರಂಥದ ಸುರುಳಿಯಲ್ಲಿ ಬರೆದನು.

5ಮತ್ತು ಯೆರೆಮೀಯನು ಬಾರೂಕನಿಗೆ, “ಯೆಹೋವನ ಆಲಯದೊಳಗೆ ಪ್ರವೇಶಿಸಲು ನನಗೆ ತಡೆಯಾಗಿದೆ;

6ನೀನೇ ಹೋಗಿ ನನ್ನ ಬಾಯಿಂದ ಬಂದ ಹಾಗೆ ನೀನು ಬರೆದ ಈ ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಉಪವಾಸದ ದಿನದಲ್ಲಿ ಯೆಹೋವನ ಆಲಯದೊಳಗೆ ಯೆರೂಸಲೇಮಿನ ಜನರಿಗೂ, ತಮ್ಮ ತಮ್ಮ ಊರುಗಳಿಂದ ಬಂದಿರುವ ಎಲ್ಲಾ ಯೆಹೂದ್ಯರಿಗೂ ಕೇಳಿಸುವಂತೆ ಓದು.

7ಅವರು ಒಂದು ವೇಳೆ ಯೆಹೋವನಿಗೆ ಶರಣಾಗತರಾಗಿ ತಮ್ಮ ದುರ್ಮಾರ್ಗಗಳಿಂದ ಹಿಂದಿರುಗಿಯಾರು; ಯೆಹೋವನು ಈ ಜನರ ಮೇಲೆ ತೀರಿಸಬೇಕೆಂದು ಪ್ರಕಟಿಸಿರುವ ಕೋಪ ಮತ್ತು ರೋಷಗಳು ಅಪಾರವಾಗಿವೆ” ಎಂದು ಅಪ್ಪಣೆಕೊಟ್ಟನು.

8ನೇರೀಯನ ಮಗನಾದ ಬಾರೂಕನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನು ಯೆಹೋವನ ಆಲಯದೊಳಗೆ ಓದಿ ಪ್ರವಾದಿಯಾದ ಯೆರೆಮೀಯನು ಆಜ್ಞಾಪಿಸಿದಂತೆ ಮಾಡಿದನು.

9ಯೋಷೀಯನ ಮಗನೂ ಯೆಹೂದದ ಅರಸನೂ ಆದ ಯೆಹೋಯಾಕೀಮನ ಆಳ್ವಿಕೆಯ ಐದನೆಯ ವರ್ಷದ ಒಂಭತ್ತನೆಯ ತಿಂಗಳಿನಲ್ಲಿ ಯೆರೂಸಲೇಮಿನವರೆಲ್ಲರೂ, ಯೆಹೂದದ ಊರುಗಳಿಂದ ಯೆರೂಸಲೇಮಿಗೆ ಬಂದವರೆಲ್ಲರೂ ಯೆಹೋವನ ಆರಾಧನೆಯ ಉಪವಾಸವನ್ನು ಗೊತ್ತುಮಾಡಿ ಪ್ರಕಟಿಸಿದರು.

10ಆಗ ಬಾರೂಕನು ಯೆಹೋವನ ಆಲಯದೊಳಗೆ ಮೇಲಣ ಪ್ರಾಕಾರದಲ್ಲಿ ಹೊಸ ಬಾಗಿಲ ಹತ್ತಿರ ಲೇಖಕನಾದ ಶಾಫಾನನ ಮಗನಾಗಿರುವ ಗೆಮರ್ಯನ ಕೋಣೆಯಲ್ಲಿ ಸುರುಳಿಯಲ್ಲಿನ ಯೆರೆಮೀಯನ ಮಾತುಗಳನ್ನು ಎಲ್ಲಾ ಜನರಿಗೂ ಕೇಳಿಸುವಂತೆ ಓದಿದನು.

11ಶಾಫಾನನ ಮೊಮ್ಮಗನೂ ಗೆಮರ್ಯನ ಮಗನೂ ಆದ ಮೀಕಾಯನು ಸುರುಳಿಯಲ್ಲಿನ ಯೆಹೋವನ ಮಾತುಗಳನ್ನೆಲ್ಲಾ ಕೇಳಿ, ಅರಮನೆಯಲ್ಲಿ ಲೇಖಕನ ಕೋಣೆಗೆ ಇಳಿದುಹೋದನು.

12ಅಲ್ಲಿ ಲೇಖಕನಾದ ಎಲೀಷಾಮನು, ಶೆಮಾಯನ ಮಗನಾದ ದೆಲಾಯನು, ಅಕ್ಬೋರನ ಮಗನಾದ ಎಲ್ನಾಥಾನನು, ಶಾಫಾನನ ಮಗನಾದ ಗೆಮರ್ಯನು, ಹನನೀಯನ ಮಗನಾದ ಚಿದ್ಕೀಯನು ಅಂತು ಪ್ರಧಾನರೆಲ್ಲರೂ ಕುಳಿತುಕೊಂಡಿದ್ದರು.

13ಮೀಕಾಯನು ಜನರ ಮುಂದೆ ಗ್ರಂಥವನ್ನು ಓದುತ್ತಿರುವ ಬಾರೂಕನ ಬಾಯಿಂದ ತಾನು ಕೇಳಿದ್ದ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಲು,

14ಸಕಲ ಪ್ರಧಾನರು ಬಾರೂಕನಿಗೆ, “ನೀನು ಜನರ ಮುಂದೆ ಓದಿದ ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಬಾ” ಎಂದು ನೆಥನ್ಯನ ಮಗನೂ ಶೆಲೆಮ್ಯನ ಮೊಮ್ಮಗನೂ ಕೂಷಿಯ ಮರಿಮಗನೂ ಆದ ಯೆಹೂದಿಯ ಮೂಲಕ ಹೇಳಿ ಕಳುಹಿಸಿದರು. ಕೂಡಲೆ ನೇರೀಯನ ಮಗನಾದ ಬಾರೂಕನು ಸುರುಳಿಯನ್ನು ಕೈಯಲ್ಲಿ ತೆಗೆದುಕೊಂಡು ಅವರ ಬಳಿಗೆ ಬಂದನು.

15ಅವರು ಅವನಿಗೆ, “ದಯಮಾಡಿ ಕುಳಿತುಕೊಂಡು ನಮ್ಮ ಮುಂದೆ ಓದು” ಎಂದು ಹೇಳಲು ಬಾರೂಕನು ಅದನ್ನು ಅವರ ಮುಂದೆ ಓದಿದನು.

16ಅವರು ಆ ಮಾತುಗಳನ್ನೆಲ್ಲಾ ಕೇಳಿ ಬೆಚ್ಚಿಬಿದ್ದು ಒಬ್ಬರನ್ನೊಬ್ಬರು ನೋಡುತ್ತಾ, “ನಾವು ಈ ಮಾತುಗಳನ್ನೆಲ್ಲಾ ಅರಸನಿಗೆ ತಿಳಿಸಲೇಬೇಕು” ಎಂದು ಬಾರೂಕನಿಗೆ ಹೇಳಿದರು.

17ಮತ್ತು, “ನೀನು ಈ ಮಾತುಗಳನ್ನೆಲ್ಲಾ ಹೇಗೆ ಬರೆದಿ? ಅವನ ಬಾಯಿಂದ ಬಂದ ಹಾಗೆತಾನೇ? ದಯಮಾಡಿ ನಮಗೆ ತಿಳಿಸು” ಎಂದು ಅವನನ್ನು ಕೇಳಿದರು.

18ಬಾರೂಕನು ಅವರಿಗೆ, “ಅವನು ಈ ಮಾತುಗಳನ್ನೆಲ್ಲಾ ತನ್ನ ಬಾಯಿಂದಲೇ ನನಗೆ ನುಡಿದನು, ನಾನು ಅವುಗಳನ್ನು ಮಸಿಯಿಂದ ಈ ಪುಸ್ತಕದಲ್ಲಿ ಬರೆದೆನು” ಎಂದು ಉತ್ತರಕೊಟ್ಟನು.

19ಆಗ ಪ್ರಧಾನರು ಬಾರೂಕನಿಗೆ, “ಹೊರಡು, ನೀನೂ ಮತ್ತು ಯೆರೆಮೀಯನೂ ಅಡಗಿಕೊಳ್ಳಿರಿ, ನೀವೆಲ್ಲಿದ್ದೀರೆಂಬುದು ಯಾರಿಗೂ ಗೊತ್ತಾಗಬಾರದು” ಎಂದು ಹೇಳಿದನು.

20ಅನಂತರ ಅವರು ಸುರುಳಿಯನ್ನು ಲೇಖಕನಾದ ಎಲೀಷಾಮನ ಕೋಣೆಯಲ್ಲಿ ಇಟ್ಟುಬಿಟ್ಟು ಪ್ರಾಕಾರದಲ್ಲಿನ ಅರಸನ ಬಳಿಗೆ ಹೋಗಿ ಆ ಮಾತುಗಳನ್ನೆಲ್ಲಾ ಅವನಿಗೆ ಅರಿಕೆ ಮಾಡಿದರು.

21ಕೂಡಲೆ ಅರಸನು ಸುರುಳಿಯನ್ನು ತರುವುದಕ್ಕೆ ಯೆಹೂದಿಯನ್ನು ಕಳುಹಿಸಿದನು; ಅವನು ಲೇಖಕನಾದ ಎಲೀಷಾಮನ ಕೋಣೆಯೊಳಗಿಂದ ಅದನ್ನು ತೆಗೆದುಕೊಂಡು ಬಂದು ಅರಸನ ಮತ್ತು ಅವನ ಪಕ್ಕದಲ್ಲಿ ನಿಂತಿದ್ದ ಸಕಲ ಪ್ರಧಾನರ ಮುಂದೆ ಓದಿದನು.

22ಆಗ ಪುಷ್ಯಮಾಸ; ಅರಸನು ಚಳಿಗಾಲದ ಮನೆಯಲ್ಲಿ ಕುಳಿತಿದ್ದನು; ಅವನ ಮುಂದೆ ಅಗ್ಗಿಷ್ಟಿಕೆಯು ಉರಿಯುತ್ತಿತ್ತು.

23ಯೆಹೂದಿಯು ಬರವಣಿಗೆಯ ಮೂರು ನಾಲ್ಕು ಪುಟಗಳನ್ನು ಓದಿದ ಹಾಗೆಲ್ಲಾ ಅರಸನು ಆಯಾ ಭಾಗಗಳನ್ನು ಕತ್ತರಿಯಿಂದ ಕತ್ತರಿಸಿ ಸುರುಳಿಯು ಸಂಪೂರ್ಣವಾಗಿ ಸುಟ್ಟುಹೋಗುವ ತನಕ ಅದನ್ನು ಅಗ್ಗಿಷ್ಟಿಕೆಯ ಬೆಂಕಿಯಲ್ಲಿ ಹಾಕುತ್ತಾ ಬಂದನು.

24ಅರಸನಾಗಲಿ ಅಥವಾ ಸುರುಳಿಯ ಮಾತುಗಳನ್ನೆಲ್ಲಾ ಕೇಳಿದ ಅವನ ಸೇವಕರಲ್ಲಿ ಯಾರೇ ಆಗಲಿ ಭಯಪಡಲಿಲ್ಲ, ಬಟ್ಟೆಗಳನ್ನು ಹರಿದುಕೊಳ್ಳಲಿಲ್ಲ.

25ಎಲ್ನಾಥಾನನೂ, ದೆಲಾಯನೂ ಮತ್ತು ಗೆಮರ್ಯನೂ, “ದಯಮಾಡಿ ಸುರುಳಿಯನ್ನು ಸುಡಬಾರದು” ಎಂದು ಅರಸನಿಗೆ ವಿಜ್ಞಾಪನೆಮಾಡಿದರೂ ಅವನು ಅವರ ಮಾತನ್ನು ಕೇಳಲಿಲ್ಲ.

26ಮತ್ತು ಅರಸನು ರಾಜವಂಶೀಯನಾದ ಎರಖ್ಮೆಯೇಲ, ಅಜ್ರಿಯೇಲನ ಮಗನಾದ ಸೆರಾಯ, ಅಬ್ದೆಯೇಲನ ಮಗನಾದ ಶಲೆಮ್ಯ ಇವರಿಗೆ ಲೇಖಕನಾದ ಬಾರೂಕನನ್ನೂ ಮತ್ತು ಪ್ರವಾದಿಯಾದ ಯೆರೆಮೀಯನನ್ನೂ ಹಿಡಿಯಬೇಕೆಂದು ಅಪ್ಪಣೆಕೊಟ್ಟನು; ಆದರೆ ಯೆಹೋವನು ಅವರನ್ನು ಮರೆಯಲ್ಲಿಟ್ಟನು.

27ಯೆರೆಮೀಯನ ಬಾಯಿಂದ ಬಂದ ಹಾಗೆ ಬಾರೂಕನು ಬರೆದಿದ್ದ ಮಾತುಗಳ ಸುರುಳಿಯನ್ನು ಅರಸನು ಸುಟ್ಟುಬಿಟ್ಟ ಮೇಲೆ ಯೆಹೋವನು ಯೆರೆಮೀಯನಿಗೆ,

28“ನೀನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ಯೆಹೂದದ ಅರಸನಾದ ಯೆಹೋಯಾಕೀಮನು ಸುಟ್ಟ ಮೊದಲನೆಯ ಸುರುಳಿಯಲ್ಲಿದ್ದ ಹಿಂದಿನ ಆ ಮಾತುಗಳನ್ನೆಲ್ಲಾ ಪುನಃ ಬರೆಯಿಸು.

29ಅಲ್ಲದೆ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಹೀಗೆ ಬರೆಯಿಸು, ‘ಯೆಹೋವನು ಇಂತೆನ್ನುತ್ತಾನೆ, ಬಾಬೆಲಿನ ಅರಸನು ಬಂದು ಈ ದೇಶವನ್ನು ಜನ, ಪಶುಗಳಿಲ್ಲದಂತೆ ಹಾಳುಮಾಡುವುದು ಖಂಡಿತ ಎಂದು ಸುರುಳಿಯನ್ನು ಬರೆಯಿಸಿದ್ದೇಕೆ ಎಂಬುದಾಗಿ ನೀನು ಆಕ್ಷೇಪಿಸಿ ಅದನ್ನು ಸುಟ್ಟುಬಿಟ್ಟಿಯಲ್ಲ.

30ಆದಕಾರಣ ಯೆಹೂದದ ಅರಸನಾದ ಯೆಹೋಯಾಕೀಮನ ವಿಷಯದಲ್ಲಿ ಯೆಹೋವನು ಇಂತೆನ್ನುತ್ತಾನೆ, ಇವನ ಸಂತಾನದಲ್ಲಿ ಯಾರೂ ದಾವೀದನ ಸಿಂಹಾಸನಾರೂಢನಾಗನು; ಇವನ ಹೆಣವು ಬಿಸಾಡಲ್ಪಟ್ಟು ಹಗಲಿನ ತಾಪಕ್ಕೂ, ರಾತ್ರಿಯ ಚಳಿಗೂ ಈಡಾಗುವುದು.

31ಇವನೂ, ಇವನ ಸಂತತಿಯವರೂ ಮತ್ತು ಸೇವಕರೂ ನಡೆಸಿದ ಅಧರ್ಮಕ್ಕಾಗಿ ಇವರನ್ನು ದಂಡಿಸುವೆನು. ನಾನು ಇವರನ್ನೂ, ಯೆರೂಸಲೇಮಿನವರನ್ನೂ ಮತ್ತು ಯೆಹೂದ್ಯರನ್ನೂ ನಿಮಗೆ ಬಹು ಕೇಡಾಗುವುದೆಂದು ಎಚ್ಚರಿಸಿದರೂ ಇವರುಗಳು ಕೇಳಲಿಲ್ಲವಾದುದರಿಂದ ಆ ಕೇಡನ್ನೆಲ್ಲಾ ಇವರೆಲ್ಲರ ಮೇಲೆ ಬರಮಾಡುವೆನು’” ಎಂದು ಹೇಳಿದನು.

32ಆಗ ಯೆರೆಮೀಯನು ಇನ್ನೊಂದು ಸುರುಳಿಯನ್ನು ತೆಗೆದುಕೊಂಡು ನೇರೀಯನ ಮಗನಾಗಿರುವ ಲೇಖಕನಾದ ಬಾರೂಕನಿಗೆ ಕೊಡಲು ಅವನು ಅದರಲ್ಲಿ ಯೆಹೂದದ ಅರಸನಾದ ಯೆಹೋಯಾಕೀಮನು ಬೆಂಕಿಯಲ್ಲಿ ಸುಟ್ಟ ಗ್ರಂಥದ ಎಲ್ಲಾ ಮಾತುಗಳನ್ನಲ್ಲದೆ ಇನ್ನು ಇಂತಹ ಅನೇಕ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ ಬರೆದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath