ಯೆರೆಮೀಯನು 30
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು,
2“ಇಸ್ರಾಯೇಲರ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ನಿನಗೆ ಹೇಳಿರುವ ಮಾತುಗಳನ್ನೆಲ್ಲಾ ನೀನು ಗ್ರಂಥವಾಗಿ ಬರೆ.
3ಇಗೋ, ನಾನು ನನ್ನ ಜನರಾದ ಇಸ್ರಾಯೇಲರನ್ನು ಮತ್ತು ಯೆಹೂದ್ಯರನ್ನು ಅವರ ದುರವಸ್ಥೆಯಿಂದ ತಪ್ಪಿಸುವ ದಿನಗಳು ಬರುವವು. ಆಗ ನಾನು ಅವರನ್ನು ಅವರ ಪೂರ್ವಿಕರಿಗೆ ಅನುಗ್ರಹಿಸಿದ ದೇಶಕ್ಕೆ ಪುನಃ ಬರಮಾಡುವೆನು. ಅವರು ಅದನ್ನು ಅನುಭವಿಸುವರು. ಇದು ಯೆಹೋವನ ನುಡಿ” ಎಂಬುದೇ.
4ಯೆಹೋವನು ಇಸ್ರಾಯೇಲಿನ ಮತ್ತು ಯೆಹೂದದ ವಿಷಯವಾಗಿ ಈ ಮಾತುಗಳನ್ನು ಹೇಳಿದನು,
5“ಯೆಹೋವನು ಇಂತೆನ್ನುತ್ತಾನೆ, ಭೀತಿಯಿಂದಾಗುವ ಶಬ್ದವು ಕೇಳಿಸಿದೆ; ಭಯವೇ ಹೊರತು ಸಮಾಧಾನವಿಲ್ಲ;
6ವಿಚಾರಿಸಿ ನೋಡಿರಿ, ಗಂಡಸು ಪ್ರಸವವೇದನೆ ಪಡುವುದುಂಟೆ? ಪ್ರತಿಯೊಬ್ಬನು ಹೆರುವವಳಂತೆ ಸೊಂಟವನ್ನು ಹಿಸಕಿಕೊಳ್ಳುವುದು, ಎಲ್ಲಾ ಮುಖಗಳು ಬಿಳಿಚಿಕೊಂಡಿರುವುದು, ಇವು ಏಕೆ ನನ್ನ ಕಣ್ಣಿಗೆ ಬೀಳುತ್ತವೆ?
7ಅಯ್ಯೋ, ಆ ದಿನವು ಘೋರವಾದದ್ದು, ಅಂಥ ದಿನ ಮತ್ತೊಂದಿಲ್ಲ, ಅದು ಯಾಕೋಬರಿಗೆ ಇಕ್ಕಟ್ಟಿನ ದಿನ; ಆದರೂ ಅವರು ಅದರಿಂದ ಪಾರಾಗುವರು.”
8ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಆ ದಿನದಲ್ಲಿ ಅವರ ಮೇಲೆ ಹೇರಿದ ನೊಗವನ್ನು ಅವರ ಹೆಗಲಿನಿಂದ ಮುರಿದುಬಿಟ್ಟು, ಕಣ್ಣಿಗಳನ್ನು ಕಿತ್ತುಹಾಕುವೆನು; ಇನ್ನು ಅನ್ಯರು ಅವರನ್ನು ಅಡಿಯಾಳಾಗಿ ಮಾಡಿಕೊಳ್ಳರು.
9ಅವರು ತಮ್ಮ ದೇವರಾದ ಯೆಹೋವನೆಂಬ ನನ್ನನ್ನೂ, ನಾನು ಅವರಿಗಾಗಿ ಏರ್ಪಡಿಸುವ ರಾಜನಾದ ದಾವೀದನನ್ನೂ ಸೇವಿಸುವರು.”
10ಯೆಹೋವನು ಇಂತೆನ್ನುತ್ತಾನೆ, “ನನ್ನ ಸೇವಕನಾದ ಯಾಕೋಬೇ, ಭಯಪಡಬೇಡ! ಇಸ್ರಾಯೇಲೇ, ಅಂಜಬೇಡ! ಇಗೋ ನಾನು ನಿನ್ನನ್ನು ದೂರದೇಶದಿಂದ ಉದ್ಧರಿಸುವೆನು, ನಿನ್ನ ಸಂತಾನವನ್ನು ಸೆರೆಹೋದ ಸೀಮೆಯಿಂದ ರಕ್ಷಿಸುವೆನು. ಯಾಕೋಬನು ಹಿಂದಿರುಗಿ ನೆಮ್ಮದಿಯಾಗಿಯೂ, ಹಾಯಾಗಿಯೂ ಇರುವುದು; ಯಾರೂ ಅದನ್ನು ಹೆದರಿಸರು.”
11ಯೆಹೋವನು ಇಂತೆನ್ನುತ್ತಾನೆ, “ನಾನು ನಿನ್ನನ್ನು ರಕ್ಷಿಸಲು ನಿನ್ನೊಂದಿಗಿದ್ದೇನೆ; ನಾನು ಯಾವ ಜನಾಂಗಗಳಲ್ಲಿಗೆ ನಿನ್ನನ್ನು ಓಡಿಸಿಬಿಟ್ಟು ಚದರಿಸಿದೆನೋ, ಆ ಜನಾಂಗಗಳನ್ನೆಲ್ಲಾ ನಿರ್ಮೂಲಮಾಡುವೆನು. ನಿನ್ನನ್ನೋ ನಿರ್ಮೂಲಮಾಡೆನು; ನಿನ್ನನ್ನು ಮಿತಿಮೀರಿ ಶಿಕ್ಷಿಸೆನು. ಆದರೆ ಶಿಕ್ಷಿಸದೆ ಬಿಡುವುದಿಲ್ಲ.”
12ಯೆಹೋವನು ಇಂತೆನ್ನುತ್ತಾನೆ, “ನಿನ್ನ ಗಾಯವು ಗುಣಹೊಂದುವುದಿಲ್ಲ, ನಿನ್ನ ಬಾಸುಂಡೆಯು ಘೋರವಾಗಿದೆ.
13ನಿನ್ನ ಪಾಲಿಗೆ ಯಾರೂ ಇಲ್ಲ, ನಿನ್ನ ಹುಣ್ಣಿಗೆ ಔಷಧವಿಲ್ಲ, ನಿನಗೆ ವಾಸಿಯಾಗುವುದಿಲ್ಲ.
14ನಿನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿದವರು ಯಾರೂ ನಿನ್ನನ್ನು ಹುಡುಕುವುದಿಲ್ಲ, ಮರೆತುಬಿಟ್ಟರು. ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಾನು ಶತ್ರುವಾಗಿ ನಿನ್ನನ್ನು ಹೊಡೆದೆನು, ಕ್ರೂರನಾಗಿ ದಂಡಿಸಿದೆನು.
15ಅಯ್ಯೋ, ನೋವು ನಿಲ್ಲದು ಎಂದು ನಿನ್ನ ಪೆಟ್ಟಿಗಾಗಿ ಏಕೆ ಅರಚಿಕೊಳ್ಳುತ್ತೀ? ನಿನ್ನ ಅಪರಾಧವು ಹೆಚ್ಚಿ ಪಾಪಗಳು ಬಹಳವಾದುದರಿಂದ ನಿನಗೆ ಇದನ್ನೆಲ್ಲಾ ಮಾಡಿದೆನು.
16ಹೀಗಿರಲು ನಿನ್ನನ್ನು ನುಂಗುವವರೆಲ್ಲರು ನುಂಗಲ್ಪಡುವರು; ನಿನ್ನ ಶತ್ರುಗಳಲ್ಲಿ ಒಬ್ಬನೂ ತಪ್ಪದೆ ಸೆರೆಗೆ ಹೋಗುವರು. ನಿನ್ನನ್ನು ಸೂರೆಮಾಡುವವರು ಸೂರೆಯಾಗುವರು, ನಿನ್ನನ್ನು ಕೊಳ್ಳೆ ಹೊಡೆಯುವವರನ್ನು ಕೊಳ್ಳೆಗೆ ಈಡುಮಾಡುವೆನು.”
17ಯೆಹೋವನು ಇಂತೆನ್ನುತ್ತಾನೆ, “ಇಗೋ, ‘ಇದು ಚೀಯೋನ್, ಯಾರಿಗೂ ಬೇಡವಾಗಿರುವ ನಗರ’ ಎಂದು ಜನರು ಹೇಳಿ, ನಿನ್ನನ್ನು ಭ್ರಷ್ಟಳೆಂದದ್ದನ್ನು ನಾನು ಸಹಿಸಲಾರದೆ, ನಿನ್ನನ್ನು ಗುಣಪಡಿಸಿ ನಿನ್ನ ಬಾಸುಂಡೆಗಳನ್ನು ವಾಸಿಮಾಡುವೆನು.”
18ಯೆಹೋವನು ಹೀಗೆನ್ನುತ್ತಾನೆ, “ಆಹಾ, ನಾನು ಯಾಕೋಬಿನ ಮನೆಗಳ ದುರವಸ್ಥೆಯನ್ನು ತಪ್ಪಿಸಿ, ಅದರ ನಿವಾಸಗಳನ್ನು ಕರುಣಿಸುವೆನು. ಪಟ್ಟಣವು ತನ್ನ ಹಾಳುದಿಬ್ಬದ ಮೇಲೆ ಪುನಃ ಕಟ್ಟಲ್ಪಡುವುದು, ಅರಮನೆಯು ತಾನಿದ್ದ ಸ್ಥಳದಲ್ಲೇ ನೆಲೆಯಾಗಿರುವುದು.
19ಅವುಗಳೊಳಗಿಂದ ಸ್ತೋತ್ರವೂ ಮತ್ತು ಸಂತೋಷದಿಂದ ನಲಿಯುವ ಧ್ವನಿಯೂ ಕೇಳಿಸುವವು. ನಾನು ಆ ಜನರನ್ನು ಹೆಚ್ಚಿಸುವೆನು, ಅವರು ಇನ್ನು ಅಲ್ಪರಾಗಿರರು, ಅವರನ್ನು ಘನಪಡಿಸುವೆನು, ಅವರು ಇನ್ನು ಹೀನರಾಗಿರರು.
20ಅವರ ಸಂತಾನವು ಪೂರ್ವದ ಸ್ಥಿತಿಯನ್ನು ಹೊಂದುವುದು, ಅವರ ಸಮಾಜವು ನನ್ನ ಮುಂದೆ ನೆಲೆಯಾಗಿರುವುದು, ಅವರನ್ನು ಬಾಧಿಸುವವರನ್ನೆಲ್ಲಾ ದಂಡಿಸುವೆನು.
21ಅವರಲ್ಲೇ ಒಬ್ಬನು ಅವರಿಗೆ ಪ್ರಭುವಾಗಿರುವನು, ಅವರ ವಂಶದವನೇ ಅವರನ್ನಾಳುವನು. ನಾನು ಅವನನ್ನು ನನ್ನ ಹತ್ತಿರಕ್ಕೆ ಬರಗೊಡಿಸಲಾಗಿ ಅವನು ನನ್ನ ಸನ್ನಿಧಾನಕ್ಕೆ ಸೇರುವನು. ನನ್ನನ್ನು ಸಮೀಪಿಸುವುದಕ್ಕೆ ಯಾರು ಧೈರ್ಯಗೊಂಡಾರು? ಇದು ಯೆಹೋವನ ನುಡಿ.”
22ನೀವು ನನ್ನ ಜನರಾಗಿರುವಿರಿ, ನಾನು ನಿಮಗೆ ದೇವರಾಗಿರುವೆನು.
23ಆಹಾ, ಯೆಹೋವನ ರೋಷವೆಂಬ ಬಿರುಗಾಳಿಯು, ಬಡಿದುಕೊಂಡು ಹೋಗುವ ಗಾಳಿಯು ಹೊರಟಿದೆ; ಅದು ದುಷ್ಟರ ತಲೆಯ ಮೇಲೆ ಹೊಡೆಯುವುದು.
24ಯೆಹೋವನು ತನ್ನ ಹೃದಯಾಲೋಚನೆಯನ್ನು ಕಾರ್ಯಗತಗೊಳಿಸಿ, ನೆರವೇರಿಸುವ ತನಕ ಆತನ ರೋಷವು ಹಿಂದಿರುಗದು, ಕಟ್ಟಕಡೆಯ ದಿನಗಳಲ್ಲಿ ನೀವು ಇದನ್ನು ಗ್ರಹಿಸುವಿರಿ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath