ಕ್ರಿಶ್ಚಿಯನ್ ಧರ್ಮ
ಹಿಂದೆ

ಯೆರೆಮೀಯನು 15

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋವನು ನನಗೆ ಹೀಗೆ ಹೇಳಿದನು, “ಮೋಶೆಯು ಮತ್ತು ಸಮುವೇಲನು ನನಗೆ ವಿಜ್ಞಾಪಿಸಿದರೂ ನನ್ನ ಮನಸ್ಸು ಈ ಜನರ ಕಡೆಗೆ ತಿರುಗುವುದಿಲ್ಲ. ನನ್ನ ಕಣ್ಣೆದುರಿನಿಂದ ಇವರನ್ನು ನೂಕಿಬಿಡು, ತೊಲಗಿ ಹೋಗಲಿ!

2ಅವರು, ‘ನಾವು ಎಲ್ಲಿಗೆ ಹೋಗೋಣ?’ ಎಂದು ನಿನ್ನನ್ನು ಕೇಳಲು ನೀನು ಅವರಿಗೆ, ‘ಮರಣ ವ್ಯಾಧಿಗೆ ನೇಮಿತರಾದವರು ಮರಣವ್ಯಾಧಿಗೆ, ಖಡ್ಗಕ್ಕೆ ನೇಮಿತರಾದವರು ಖಡ್ಗಕ್ಕೆ ಬಲಿಯಾಗಲಿ. ಕ್ಷಾಮಕ್ಕೆ ನೇಮಿತರಾದವರು ಕ್ಷಾಮಕ್ಕೆ, ಸೆರೆಗೆ ನೇಮಿತರಾದವರು ಸೆರೆಗೆ ಗುರಿಯಾಗಿ ಹೋಗಲಿ; ಇದೇ ಯೆಹೋವನ ನುಡಿ’” ಎಂದು ಹೇಳು.

3“ನಾನು ಅವರಿಗೆ ನಾಲ್ಕು ವಿಧವಾದ ಬಾಧಕರನ್ನು, ಅಂದರೆ ಕಡಿಯುವುದಕ್ಕೆ ಖಡ್ಗವನ್ನು, ಸೀಳುವುದಕ್ಕೆ ನಾಯಿಗಳನ್ನು, ನುಂಗಿ ಹಾಳುಮಾಡುವುದಕ್ಕೆ ಆಕಾಶದ ಪಕ್ಷಿಗಳನ್ನೂ ಮತ್ತು ಭೂಜಂತುಗಳನ್ನೂ ನೇಮಿಸುವೆನು” ಎಂಬುದು ಯೆಹೋವನಾದ ನನ್ನ ಮಾತು.

4“ಹಿಜ್ಕೀಯನ ಮಗನೂ ಯೆಹೂದದ ಅರಸನೂ ಆದ ಮನಸ್ಸೆಯು ಯೆರೂಸಲೇಮಿನಲ್ಲಿ ನಡೆಸಿದ್ದಕ್ಕೆ ಪ್ರತಿಯಾಗಿ, ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಾಸ್ಪದವಾಗುವಂತೆ ಮಾಡುವೆನು.

5ಯೆರೂಸಲೇಮೇ, ಯಾರು ನಿನ್ನನ್ನು ಕರುಣಿಸುವರು? ನಿನಗಾಗಿ ಯಾರು ಪ್ರಲಾಪಿಸುವರು? ನಿನ್ನ ಕ್ಷೇಮವನ್ನು ವಿಚಾರಿಸಲು ಯಾರು ನಿನ್ನ ಕಡೆಗೆ ತಿರುಗುವರು?

6ಯೆಹೋವನ ಈ ಮಾತನ್ನು ಕೇಳು, ‘ನೀನು ನನ್ನನ್ನು ಅಲ್ಲಗಳೆದು ಹಿಂದಿರುಗಿದ್ದಿ. ಆದಕಾರಣ ನಾನು ನಿನ್ನ ಮೇಲೆ ಕೈಯೆತ್ತಿ ನಿನ್ನನ್ನು ನಾಶಮಾಡುವೆನು; ನಿನ್ನನ್ನು ಕ್ಷಮಿಸಿ ಕ್ಷಮಿಸಿ ಸಾಕಾಯಿತು.

7ನನ್ನ ಜನರನ್ನು ದೇಶದ ಬಾಗಿಲುಗಳಲ್ಲಿ ಕವೆಗೋಲಿನಿಂದ ಹಾರಿಸಿ ತೂರುವೆನು. ಅವರನ್ನು ಪುತ್ರಶೋಕಕ್ಕೆ ಈಡುಮಾಡಿ ನಾಶಪಡಿಸುವೆನು; ಅವರು ಹೋದ ದಾರಿಯಿಂದ ಹಿಂದಿರುಗರು.

8ಅವರ ವಿಧವೆಯರು ನನ್ನ ಭಾಗಕ್ಕೆ ಸಮುದ್ರದ ಉಸುಬಿಗಿಂತ ಹೆಚ್ಚಾಗಿರುವರು. ಯುವಕರ ಮತ್ತು ತಾಯಂದಿರ ಮೇಲೆ ಕೊಳ್ಳೆ ಹೊಡೆಯುವವನನ್ನು ಮಧ್ಯಾಹ್ನದಲ್ಲೇ ಬರಮಾಡುವೆನು. ಅವರ ಮೇಲೆ ಕಳವಳವನ್ನು ಮತ್ತು ದಿಗಿಲನ್ನು ತಟ್ಟನೆ ಬೀಳಿಸುವೆನು.

9ಏಳು ಮಂದಿ ಮಕ್ಕಳನ್ನು ಹೆತ್ತ ಭಾಗ್ಯವಂತಳೂ ಬಳಲಿ ಪ್ರಾಣಬಿಟ್ಟಂತಿದ್ದಾಳೆ, ಹಗಲಿನಲ್ಲಿಯೇ ಆಕೆಯ ಪಾಲಿಗೆ ಸೂರ್ಯನು ಮುಳುಗಿದ್ದಾನೆ, ಆಶಾಭಂಗಪಟ್ಟು ಅವಮಾನಕ್ಕೆ ಈಡಾಗಿದ್ದಾಳೆ. ಆಕೆಯ ಉಳಿದ ಸಂತಾನವನ್ನು ಶತ್ರುಗಳ ಕಣ್ಣೆದುರಿನಲ್ಲಿ ನಾನು ಖಡ್ಗಕ್ಕೆ ಗುರಿಮಾಡುವೆನು’” ಇದು ಯೆಹೋವನ ನುಡಿ.

10ನನ್ನ ತಾಯೀ, ನನ್ನ ಗತಿಯನ್ನು ಏನು ಹೇಳಲಿ! ನಿನ್ನ ಗರ್ಭದಿಂದ ಬಂದ ನಾನು ಲೋಕದವರೆಲ್ಲರಿಗೆ ಜಗಳಗಂಟಿಗನೂ, ವ್ಯಾಜ್ಯಗಾರನೂ ಆಗಿದ್ದೇನಲ್ಲಾ. ನಾನು ಹಣವನ್ನು ಬಡ್ಡಿಗೆ ಕೊಟ್ಟವನಲ್ಲ, ತೆಗೆದುಕೊಂಡವನಲ್ಲ, ಆದರೂ ನನ್ನನ್ನು ಎಲ್ಲರೂ ನಿಂದಿಸುತ್ತಾರೆ.

11ಇದಕ್ಕೆ ಯೆಹೋವನು, “ನಿನಗೆ ಮೇಲಾಗುವಂತೆ ನಿಶ್ಚಯವಾಗಿ ನಿನ್ನನ್ನು ಬಿಡುಗಡೆಮಾಡುವೆನು. ನಿಜನಿಜವಾಗಿ ನಿನ್ನ ಕೇಡಿನಲ್ಲಿಯೂ, ಇಕ್ಕಟ್ಟಿನಲ್ಲಿಯೂ ಶತ್ರುವನ್ನು ನಿನಗೆ ಶರಣಾಗತನನ್ನಾಗಿ ಮಾಡುವೆನು.

12ಕಬ್ಬಿಣವನ್ನು, ಬಡಗಣ ಕಬ್ಬಿಣವನ್ನು ಯಾರು ಮುರಿದಾರು? ತಾಮ್ರವನ್ನು ಮುರಿಯುವುದು ಯಾರಿಂದಾದೀತು?” ಎಂದು ಹೇಳಿದನು.

13“ನಿನ್ನ ಸಕಲ ಪ್ರಾಂತ್ಯಗಳಲ್ಲಿ ನೀನು ಮಾಡಿದ ಎಲ್ಲಾ ಪಾಪಗಳ ನಿಮಿತ್ತ ನಾನು ನಿನ್ನ ಸೊತ್ತು ಮತ್ತು ಸಂಪತ್ತುಗಳನ್ನು ಲಾಭವಿಲ್ಲದೆ ಸೂರೆಗೆ ಈಡುಮಾಡಿ,

14ಅವುಗಳನ್ನು ನಿನ್ನ ಶತ್ರುಗಳ ಕೈಗೆ ಕೊಟ್ಟು, ನೀನು ನೋಡದ ದೇಶಕ್ಕೆ ಸಾಗಿಸಿಬಿಡುವೆನು. ನನ್ನ ರೋಷದಿಂದ ಉರಿಯು ಹತ್ತಿಕೊಂಡಿದೆ, ಅದು ನಿಮ್ಮನ್ನು ಸುಟ್ಟುಬಿಡುವುದು.”

15ಅದಕ್ಕೆ ನಾನು, “ಯೆಹೋವನೇ, ನೀನೇ ಬಲ್ಲೆ, ನನ್ನನ್ನು ಜ್ಞಾಪಕಕ್ಕೆ ತಂದು ಕಟಾಕ್ಷಿಸು; ನನಗಾಗಿ ನನ್ನ ಹಿಂಸಕರಿಗೆ ಮುಯ್ಯಿತೀರಿಸು. ಅವರಿಗೆ ಹೆಚ್ಚು ತಾಳ್ಮೆಯನ್ನು ತೋರಿಸಬೇಡ, ನನ್ನನ್ನು ನಿರ್ಮೂಲ ಮಾಡಬೇಡ. ನಿನ್ನ ನಿಮಿತ್ತವೇ ನಾನು ನಿಂದೆಗೆ ಗುರಿಯಾದೆನೆಂದು ಜ್ಞಾಪಕಕ್ಕೆ ತಂದುಕೋ.

16ನನಗೆ ದೊರೆತ ನಿನ್ನ ಮಾತುಗಳನ್ನು ಆಹಾರಮಾಡಿಕೊಂಡೆನು, ನಿನ್ನ ನುಡಿಗಳು ನನಗೆ ಹರ್ಷವೂ, ಹೃದಯಾನಂದವೂ ಆದವು. ಸೇನಾಧೀಶ್ವರನಾದ ದೇವರೇ, ಯೆಹೋವನೇ, ನಾನು ನಿನ್ನ ಹೆಸರಿನವನಲ್ಲವೇ!

17ನಾನು ವಿನೋದಗಾರರ ಕೂಟದಲ್ಲಿ ಕುಳಿತುಕೊಳ್ಳಲಿಲ್ಲ, ಉಲ್ಲಾಸಪಡಲೂ ಇಲ್ಲ. ನೀನು ನನ್ನ ಮೇಲೆ ಕೈಯಿಟ್ಟಿದ್ದರಿಂದ ಒಂಟಿಗನಾಗಿ ಕುಳಿತೆನು; ನನ್ನನ್ನು ರೋಷದಿಂದ ತುಂಬಿಸಿದ್ದಿಯಷ್ಟೆ.

18ಏಕೆ ನನ್ನ ವ್ಯಥೆಯು ನಿರಂತರವಾಗಿದೆ? ನನ್ನ ಗಾಯವು ಗಡುಸಾಗಿ ಗುಣಹೊಂದದೆ ಇರುವುದು ಏಕೆ? ನೀನು ನನಗೆ ನೀರು ಬತ್ತುವ ಕಳ್ಳತೊರೆಯಂತಿರಬೇಕೋ?” ಎಂದು ಅರಿಕೆಮಾಡಿಕೊಂಡೆನು.

19ಇದರಿಂದ ಯೆಹೋವನು, “ನೀನು ನನ್ನ ಕಡೆಗೆ ಹಿಂದಿರುಗಿದರೆ ನನ್ನ ಸಮ್ಮುಖದಲ್ಲಿ ನಿಲ್ಲುವಂತೆ ನಾನು ನಿನ್ನನ್ನು ತಿರುಗಿ ಸೇರಿಸಿಕೊಳ್ಳುವೆನು. ನೀನು ತುಚ್ಛವಾದದ್ದನ್ನು ನಿರಾಕರಿಸಿ, ಅಮೂಲ್ಯವಾದದ್ದನ್ನು ಪ್ರಕಾಶಪಡಿಸಿದರೆ ನೀನು ನನ್ನ ಬಾಯಂತಿರುವಿ. ಜನರು ನಿನ್ನ ಕಡೆಗೆ ತಿರುಗಿಕೊಳ್ಳುವರು, ನೀನು ಅವರ ಕಡೆಗೆ ತಿರುಗದಿರುವಿ.

20ನಾನು ನಿನ್ನನ್ನು ಈ ಜನರಿಗೆ ದುರ್ಗಮವಾದ ತಾಮ್ರದ ಪೌಳಿಗೋಡೆಯನ್ನಾಗಿ ಮಾಡುವೆನು. ಅವರು ನಿನ್ನ ವಿರುದ್ಧವಾಗಿ ಯುದ್ಧಮಾಡುವರು. ಆದರೆ ನಿನ್ನನ್ನು ಸೋಲಿಸಲಾಗುವುದಿಲ್ಲ. ನಿನ್ನನ್ನು ಉದ್ಧರಿಸಿ ರಕ್ಷಿಸಲು ನಾನೇ ನಿನ್ನೊಂದಿಗಿರುವೆನು. ಇದು ಯೆಹೋವನಾದ ನನ್ನ ಮಾತು.

21ನಾನು ನಿನ್ನನ್ನು ದುಷ್ಟರ ಕೈಯಿಂದ ಉದ್ಧರಿಸುವೆನು, ಹೌದು, ಕ್ರೂರರ ಕೈಯಿಂದ ರಕ್ಷಿಸುವೆನು” ಎಂದಿದ್ದಾನೆ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath