ಕ್ರಿಶ್ಚಿಯನ್ ಧರ್ಮ
ಹಿಂದೆ

ನ್ಯಾಯಸ್ಥಾಪಕರು 9

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿಗೆ ಹೋಗಿ ತನ್ನ ಸೋದರಮಾವಂದಿರಿಗೂ, ತಾಯಿಯ ಬಂಧುಗಳೆಲ್ಲರಿಗೂ ಹೇಳಿದ್ದೇನೆಂದರೆ,

2“ನೀವು ದಯವಿಟ್ಟು ಶೆಕೆಮಿನ ಹಿರಿಯರನ್ನು ಮಾತನಾಡಿಸಿ, ‘ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳು ನಿಮ್ಮನ್ನು ಆಳ್ವಿಕೆ ಮಾಡುವುದು ಒಳ್ಳೆಯದೋ ಅಥವಾ ಒಬ್ಬನೇ ಆಳುವುದು ಮೇಲೋ?’ ಎಂದು ಅವರನ್ನು ಕೇಳಿ, ನಾನು ಅವರ ರಕ್ತಸಂಬಂಧಿಯಾಗಿದ್ದೇನೆ ಎಂಬುದನ್ನು ತಿಳಿಸಿರಿ” ಅಂದನು.

3ಅವರು ಶೆಕೆಮಿನ ಹಿರಿಯರ ಬಳಿಗೆ ಹೋಗಿ ಅಬೀಮೆಲೆಕನ ವಿಷಯದಲ್ಲಿ ಹಾಗೆಯೇ ಹೇಳಲು ಅವರು, “ಇವನು ನಮ್ಮ ಸಹೋದರನಾಗಿದ್ದಾನಲ್ಲಾ” ಅಂದುಕೊಂಡು ಅವನ ಪಕ್ಷವನ್ನು ಹಿಡಿಯುವುದಕ್ಕೆ ಒಪ್ಪಿಕೊಂಡರು.

4ಮತ್ತು ಅವರು ಬಾಳ್‍ಬೆರೀತಿನ ದೇವಸ್ಥಾನದಿಂದ ಎಪ್ಪತ್ತು ರೂಪಾಯಿಗಳನ್ನು ಅವನಿಗೆ ಕೊಟ್ಟರು. ಅವನು ಈ ಹಣದಿಂದ ಕೆಲವು ಕಾಕಪೋಕರನ್ನು ಕೂಡಿಸಿ,

5ಅವರ ನಾಯಕನಾಗಿ ಹೊರಟು, ಒಫ್ರದಲ್ಲಿದ್ದ ತನ್ನ ತಂದೆಯಾದ ಯೆರುಬ್ಬಾಳನ ಮನೆಗೆ ಹೋಗಿ, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಹಿಡಿದು, ಒಂದೇ ಬಂಡೆಯ ಮೇಲೆ ಕೊಲ್ಲಿಸಿದನು. ಆದರೆ ಕಿರಿಯವನಾದ ಯೋತಾಮನೆಂಬವನು ಅಡಗಿಕೊಂಡು ಉಳಿದನು.

6ತರುವಾಯ ಎಲ್ಲಾ ಶೆಕೆಮಿನವರೂ ಮಿಲ್ಲೋ ಕೋಟೆಯವರೂ ಶೆಕೆಮಿನ ಬಳಿಯಲ್ಲಿ ಜ್ಞಾಪಕಸ್ತಂಭವಿರುವ ಏಲೋನ್ ವೃಕ್ಷದ ಹತ್ತಿರ ಕೂಡಿಬಂದು ಅಬೀಮೆಲೆಕನನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು.

7ಯೋತಾಮನು ಇದನ್ನು ಕೇಳಿ ಗೆರಿಜ್ಜೀಮ್ ಬೆಟ್ಟದ ತುದಿಯಲ್ಲಿ ನಿಂತು ಗಟ್ಟಿಯಾದ ಧ್ವನಿಯಿಂದ, “ಶೆಕೆಮಿನ ಜನರೇ, ನನ್ನ ಮಾತನ್ನು ಕೇಳಿರಿ; ಆಗ ದೇವರು ನಿಮ್ಮ ಮೊರೆಗೆ ಕಿವಿಗೊಡುವನು” ಎಂದನು.

8“ಒಮ್ಮೆ, ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು ಹೊರಟು ಎಣ್ಣೆಯ ಮರದ ಬಳಿಗೆ ಬಂದು, ‘ನೀನು ಬಂದು ನಮಗೆ ಅರಸನಾಗು’ ಅಂದವು.

9ಆಗ ಅದು ಅವುಗಳಿಗೆ, ‘ನನ್ನಲ್ಲಿರುವ ಎಣ್ಣೆಗೋಸ್ಕರ ದೇವತೆಗಳೂ, ಮನುಷ್ಯರು ನನ್ನನ್ನು ಘನಪಡಿಸುತ್ತಾರೆ; ಇದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಅಂದಿತು.

10ತರುವಾಯ ಅವು ಅಂಜೂರ ಗಿಡದ ಬಳಿಗೆ ಹೋಗಿ ಅದಕ್ಕೆ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು

11ಅದು, ‘ನಾನು ನನ್ನ ಶ್ರೇಷ್ಠವಾದ ಮಧುರಫಲದಾನವನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು.

12ಅನಂತರ ಅವು ದ್ರಾಕ್ಷಾಲತೆಯ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಎನ್ನಲು

13ಅದು ಅವುಗಳಿಗೆ, ‘ನಾನು ನನ್ನ ರಸದಿಂದ ದೇವತೆಗಳಿಗೂ ಮನುಷ್ಯರಿಗೂ ಆನಂದಕೊಡುವುದನ್ನು ಬಿಟ್ಟು ಮರಗಳ ಮೇಲೆ ಓಲಾಡುವುದಕ್ಕೆ ಬರಬೇಕೋ?’ ಎಂದಿತು.

14ಕೊನೆಗೆ ಎಲ್ಲಾ ಮರಗಳು ಮುಳ್ಳುಗಿಡದ ಬಳಿಗೆ ಹೋಗಿ, ‘ನೀನು ಬಂದು ನಮಗೆ ಅರಸನಾಗು’ ಅನ್ನಲು

15ಅದು, ‘ನೀವು ಯಥಾರ್ಥಮನಸ್ಸಿನಿಂದ ನನಗೆ ರಾಜ್ಯಾಭಿಷೇಕ ಮಾಡಬೇಕೆಂದಿರುವುದಾದರೆ ಬಂದು ನನ್ನ ನೆರಳನ್ನು ಆಶ್ರಯಿಸಿಕೊಳ್ಳಿರಿ; ಇಲ್ಲವಾದರೆ ನನ್ನಿಂದ ಬೆಂಕಿಹೊರಟು ಲೆಬನೋನಿನ ದೇವದಾರು ವೃಕ್ಷಗಳನ್ನು ದಹಿಸಿಬಿಡುವುದು’ ಎಂದಿತು.

16“ನೀವು ಅಬೀಮೆಲೆಕನನ್ನು ಅರಸನನ್ನಾಗಿ ಮಾಡಿದ್ದು ನ್ಯಾಯವೋ? ಅದು ಧರ್ಮಕಾರ್ಯವೋ? ಯೆರುಬ್ಬಾಳನು ನಿಮಗೆ ಮಾಡಿದ ಉಪಕಾರಕ್ಕೋಸ್ಕರ ನೀವು ಅವನಿಗೂ ಅವನ ಮನೆಯವರಿಗೂ ಪ್ರತ್ಯುಪಕಾರಮಾಡಿದಿರೋ?

17ನನ್ನ ತಂದೆಯು ತನ್ನ ಜೀವದ ಆಶೆಯನ್ನು ತೊರೆದು, ಹೋರಾಡಿ, ನಿಮ್ಮನ್ನು ಮಿದ್ಯಾನ್ಯರ ಕೈಯಿಂದ ಬಿಡಿಸಿದನಲ್ಲಾ.

18ಆದರೆ ನೀವು ಈಗ ನನ್ನ ತಂದೆಯ ಮನೆಗೆ ವಿರೋಧವಾಗಿ ನಿಂತು, ಅವನ ಎಪ್ಪತ್ತು ಮಂದಿ ಮಕ್ಕಳನ್ನು ಒಂದೇ ಬಂಡೆಯ ಮೇಲೆ ವಧಿಸಿ, ಅವನ ದಾಸಿಯ ಮಗನಾದ ಅಬೀಮೆಲೆಕನನ್ನು ನಮ್ಮ ಬಂಧುವೆಂದು ಹೇಳಿ, ಶೆಕೆಮಿನ ಅರಸನನ್ನಾಗಿ ಮಾಡಿಕೊಂಡಿದ್ದೀರಿ.

19ನೀವು ಈಗ ಯೆರುಬ್ಬಾಳನಿಗೂ ಅವನ ಮನೆಯವರಿಗೂ ಮಾಡಿದ್ದು ನ್ಯಾಯವೂ, ಧರ್ಮವೂ ಆಗಿದ್ದರೆ ಅಬೀಮೆಲೆಕನಲ್ಲಿ ಆನಂದಿಸಿರಿ; ಅವನು ನಿಮ್ಮಲ್ಲಿ ಆನಂದಿಸಲಿ.

20ಇಲ್ಲವಾದರೆ ಅಬೀಮೆಲೆಕನಿಂದ ಬೆಂಕಿಹೊರಟು ಶೆಕೆಮಿನವರನ್ನೂ, ಮಿಲ್ಲೋ ಕೋಟೆಯವರನ್ನೂ ದಹಿಸಿಬಿಡಲಿ; ಶೆಕೆಮಿನವರಿಂದಲೂ, ಮಿಲ್ಲೋ ಕೋಟೆಯವರಿಂದಲೂ ಬೆಂಕಿಹೊರಟು ಅಬೀಮೆಲೆಕನನ್ನು ದಹಿಸಿಬಿಡಲಿ” ಎಂದನು.

21ಯೋತಾಮನು ಇಷ್ಟು ಹೇಳಿ ತನ್ನ ಸಹೋದರನಾದ ಅಬೀಮೆಲೆಕನಿಂದ ತಪ್ಪಿಸಿಕೊಂಡು ಬೇರಕ್ಕೆ ಓಡಿಹೋಗಿ ಅಲ್ಲೇ ವಾಸಮಾಡಿದನು.

22ಅಬೀಮೆಲೆಕನು ಇಸ್ರಾಯೇಲರನ್ನು ಮೂರು ವರ್ಷ ಆಳಿದ ನಂತರ

23ಯೆಹೋವನು ಅವನಿಗೂ ಶೆಕೆಮಿನ ಹಿರಿಯರಿಗೂ ವೈಮನಸ್ಸು ಹುಟ್ಟುವಂತೆ ಮಾಡಿದನು. ಅವರು ಅವನಿಗೆ ದ್ರೋಹಮಾಡಿದರು.

24ಇದರಿಂದ ಯೆರುಬ್ಬಾಳನ ಎಪ್ಪತ್ತು ಮಂದಿ ಮಕ್ಕಳನ್ನು ಕ್ರೂರತನದಿಂದ ಕೊಂದುಹಾಕಿದ ರಕ್ತಾಪರಾಧಫಲವು ಅವರ ಸಹೋದರನಾದ ಅಬೀಮೆಲೆಕನ ಮೇಲೆಯೂ, ಆ ಕೃತ್ಯದಲ್ಲಿ ಅವನಿಗೆ ಸಹಾಯಕರಾಗಿದ್ದ ಶೆಕೆಮಿನವರ ಮೇಲೆಯೂ ಬರುವುದಕ್ಕೆ ಕಾರಣವಾಯಿತು.

25ಶೆಕೆಮಿನವರು ಅಬೀಮೆಲೆಕನಿಗೆ ವಿರೋಧವಾಗಿ ಪರ್ವತಶಿಖರಗಳಲ್ಲಿ ಹೊಂಚುಗಾರರನ್ನಿಟ್ಟರು. ಇವರು ಆ ದಾರಿಗಳಲ್ಲಿ ಸಂಚರಿಸುವ ಪ್ರಯಾಣಿಕರನ್ನು ಸುಲಿಗೆ ಮಾಡಿಕೊಳ್ಳುತ್ತಿದ್ದರು. ಈ ವರ್ತಮಾನವು ಅಬೀಮೆಲೆಕನಿಗೆ ಮುಟ್ಟಿತು.

26ಅದೇ ಸಮಯದಲ್ಲಿ ಎಬೆದನ ಮಗನಾದ ಗಾಳನೆಂಬುವನು ತನ್ನ ಬಂಧುಗಳೊಡನೆ ಶೆಕೆಮಿಗೆ ಬಂದನು. ಶೆಕೆಮಿನ ಹಿರಿಯರು ಅವನಲ್ಲಿ ಭರವಸವಿಟ್ಟರು.

27ಆ ಊರಿನವರು ಒಂದಾನೊಂದು ದಿನ ತಮ್ಮ ದ್ರಾಕ್ಷಾಫಲಗಳನ್ನು ಕೊಯಿದು, ಆಲೆಗಳಲ್ಲಿ ರಸತೆಗೆದು, ತಮ್ಮ ದೇವರ ಗುಡಿಗೆ ಹೋಗಿ ಹಬ್ಬಮಾಡಿ, ಉಂಡು ಕುಡಿದು ಅಬೀಮೆಲೆಕನನ್ನು ಶಪಿಸಿದರು.

28ಎಬೆದನ ಮಗನಾದ ಗಾಳನೂ ಅವರ ಸಂಗಡ ಕೂಡಿಕೊಂಡು, “ಅಬೀಮೆಲೆಕನು ಎಷ್ಟರವನು? ಶೆಕೆಮಿನವರಾದ ನಾವು ಎಷ್ಟರವರು? ನಾವು ಅಬೀಮೆಲೆಕನನ್ನು ಯಾಕೆ ಸೇವಿಸಬೇಕು? ಅವನು ಯೆರುಬ್ಬಾಳನ ಮಗನಲ್ಲವೋ? ಅವನ ಪುರಾಧಿಕಾರಿಯು ಜೆಬುಲನಲ್ಲವೋ? ನಾವು ಅವನನ್ನು ಯಾಕೆ ಸೇವಿಸಬೇಕು? ಶೆಕೆಮನ ತಂದೆಯಾದ ಹಮೋರನ ವಂಶದವರ ಸೇವೆಯನ್ನು ಮಾಡಲಿ.

29ಈ ಜನರ ಮೇಲೆ ನನಗೆ ಅಧಿಕಾರವಿದ್ದಿದ್ದರೆ ಅಬೀಮೆಲೆಕನನ್ನು ಓಡಿಸಿಬಿಡುತ್ತಿದ್ದೆನು” ಎಂದು ಹೇಳಿ, “ಎಲಾ, ಅಬೀಮೆಲೆಕನೇ, ಸೈನ್ಯವನ್ನು ತೆಗೆದುಕೊಂಡು ನನ್ನೊಡನೆ ಯುದ್ಧಕ್ಕೆ ಬಾ” ಎಂದು ಕೊಚ್ಚಿಕೊಂಡನು.

30ಪುರಾಧಿಕಾರಿಯಾದ ಜೆಬುಲನು ಎಬೆದನ ಮಗನಾದ ಗಾಳನ ಮಾತುಗಳನ್ನು ಕೇಳಿ, ಕೋಪಗೊಂಡು ಯಾರಿಗೂ ತಿಳಿಯದಂತೆ ಅಬೀಮೆಲೆಕನ ಬಳಿಗೆ ದೂತರನ್ನು ಕಳುಹಿಸಿ,

31“ಇಗೋ, ಎಬೆದನ ಮಗನಾದ ಗಾಳನೂ ಅವನ ಬಂಧುಗಳೂ ಇಲ್ಲಿಗೆ ಬಂದು ಶೆಕೆಮಿನವರೆಲ್ಲರನ್ನೂ ನಿನಗೆ ವಿರೋಧವಾಗಿ ಹುರಿದುಂಬಿಸುತ್ತಿದ್ದಾರೆ.

32ಆದುದರಿಂದ ನೀನು ಈ ರಾತ್ರಿಯೇ ಸೈನ್ಯವನ್ನು ತೆಗೆದುಕೊಂಡು ಬಂದು ಹೊಲಗಳಲ್ಲಿ ಹೊಂಚುಹಾಕಿಕೊಂಡಿರು. ಸೂರ್ಯನು ಉದಯಿಸುತ್ತಲೇ ಎದ್ದು ಪಟ್ಟಣದ ಮೇಲೆ ಬೀಳು. ಅವನೂ ಅವನ ಜೊತೆಯಲ್ಲಿರುವವರೂ

33ನಿನಗೆ ವಿರೋಧವಾಗಿ ಹೊರಟು ಬಂದಾಗ ನಿನಗೆ ಅನುಕೂಲ ತೋರಿದ ಹಾಗೆ ಮಾಡು” ಎಂದು ಹೇಳಿಸಿದನು.

34ಅಬೀಮೆಲೆಕನೂ, ಅವನ ಜನರೂ ರಾತ್ರಿಯಲ್ಲೇ ಹೊರಟು ಬಂದು ನಾಲ್ಕು ಗುಂಪಾಗಿ ಶೆಕೆಮಿನವರನ್ನು ಹೊಂಚಿಕಾಯುತ್ತಿದ್ದರು.

35ಎಬೆದನ ಮಗನಾದ ಗಾಳನು ಹೊರಗೆ ಹೋಗಿ ಊರಬಾಗಿಲಲ್ಲಿ ನಿಂತುಕೊಂಡಾಗ ಅಬೀಮೆಲೆಕನೂ ಅವನ ಜನರೂ ತಾವು ಹೊಂಚಿನೋಡುತ್ತಿದ್ದ ಸ್ಥಳದಿಂದ ಎದ್ದು ಬಂದರು.

36ಗಾಳನು ಅವರನ್ನು ಕಂಡು ಜೆಬುಲನಿಗೆ, “ಇಗೋ, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ” ಎಂದು ಹೇಳಿದನು. ಜೆಬುಲನು ಅವನಿಗೆ, “ನೀನು ಬೆಟ್ಟದ ನೆರಳನ್ನು ನೋಡಿ ಜನರೆಂದು ಭಾವಿಸುತ್ತೀ” ಅನ್ನಲು

37ಅವನು ತಿರುಗಿ, “ನೋಡು, ಬೆಟ್ಟದ ಮೇಲಿನಿಂದ ಜನರು ಬರುತ್ತಿದ್ದಾರೆ; ಕಣಿಹೇಳುವವರ ಮರದ ಮಾರ್ಗವಾಗಿ ಇನ್ನೊಂದು ಗುಂಪು ಬರುತ್ತಿದೆ” ಅಂದನು.

38ಆಗ ಜೆಬುಲನು ಅವನಿಗೆ, “ಈಗ ನಿನ್ನ ಬಾಯೆಲ್ಲಿದೆ? ಅಬೀಮೆಲೆಕನು ಎಷ್ಟರವನು? ನಾವು ಅವನನ್ನು ಯಾಕೆ ಸೇವಿಸಬೇಕು ಎಂದು ಕೊಚ್ಚಿಕೊಂಡಿಯಲ್ಲಾ; ಅವರು ನೀನು ತಿರಸ್ಕರಿಸಿದ ಜನರಲ್ಲವೋ? ಹಾಗಾದರೆ ಹೋಗಿ ಅವರೊಡನೆ ಯುದ್ಧಮಾಡು, ನೋಡೋಣ” ಎಂದು ಹೇಳಿದನು.

39ಗಾಳನು ಶೆಕೆಮಿನವರ ನಾಯಕನಾಗಿ ಹೊರಟು ಅಬೀಮೆಲೆಕನೊಡನೆ ಕಾದಾಡಿದನು.

40ಆದರೆ ಅಬೀಮೆಲೆಕನಿಗೆ ಬೆನ್ನು ತೋರಿಸಿ ಓಡಿಹೋಗಲು, ಅವನು ಇವನನ್ನು ಹಿಂದಟ್ಟಿದನು. ಊರುಬಾಗಿಲಿನವರೆಗೆ ಅನೇಕ ಮಂದಿ ಹತರಾಗಿ ಬಿದ್ದರು.

41ಅನಂತರ ಅಬೀಮೆಲೆಕನು ಹೋಗಿ ಅರೂಮದಲ್ಲಿ ವಾಸಮಾಡಿದನು. ಇತ್ತ ಜೆಬುಲನು ಗಾಳನನ್ನೂ ಅವನ ಬಂಧುಗಳನ್ನೂ ಶೆಕೆಮಿನಿಂದ ಓಡಿಸಿಬಿಟ್ಟನು.

42ಮರುದಿನ ಜನರು ಬೈಲಿಗೆ ಹೊರಟು ಬಂದರು;

43ಇದು ಅಬೀಮೆಲೆಕನಿಗೆ ಗೊತ್ತಿದ್ದುದರಿಂದ ಅವನು ತನ್ನ ಜನರನ್ನು ಮೂರು ಗುಂಪು ಮಾಡಿ ಅವರನ್ನು ಕರೆದುಕೊಂಡು ಬಂದು ಹೊಲಗಳಲ್ಲಿ ಹೊಂಚಿ ನೋಡುತ್ತಿದ್ದನು. ಜನರು ಪಟ್ಟಣದಿಂದ ಹೊರಟು ಬರುವುದನ್ನು ಇವನು ಕಾಣುತ್ತಲೇ, ಅಲ್ಲಿಂದ ಎದ್ದು ಅವರನ್ನು ಹೊಡೆದನು.

44ಅಬೀಮೆಲೆಕನೂ ಅವನ ಸಂಗಡ ಇದ್ದ ಗುಂಪಿನವರೂ ಓಡಿ ಬಂದು ಊರು ಬಾಗಿಲಲ್ಲಿ ನಿಂತರು; ಉಳಿದ ಎರಡು ಗುಂಪಿನವರು ಬೈಲಿನಲ್ಲಿದ್ದ ಶೆಕೆಮಿನವರ ಮೇಲೆ ಬಿದ್ದು ಅವರನ್ನು ಹತಮಾಡಿದರು.

45ಅಬೀಮೆಲೆಕನು ಆ ದಿನವೆಲ್ಲಾ ಯುದ್ಧಮಾಡಿ, ಪಟ್ಟಣವನ್ನು ಸ್ವಾಧೀನಮಾಡಿಕೊಂಡು, ಅದರ ಜನರನ್ನೆಲ್ಲಾ ಸಂಹರಿಸಿ, ಊರನ್ನು ಕೆಡವಿಬಿಟ್ಟು, ಅಲ್ಲಿ ಉಪ್ಪನ್ನು ಎರಚಿಬಿಟ್ಟನು.

46ಶೆಕೆಮಿನ ಕೋಟೆಯವರು ಇದನ್ನು ಕೇಳಿ ಏಲ್‌ಬೆರೀತೆ ಎಂಬ ದೇವರ ಗುಡಿಯ ನೆಲಮನೆಯಲ್ಲಿ ಅಡಗಿಕೊಂಡರು.

47ಕೋಟೆಯವರೆಲ್ಲರೂ ಅಲ್ಲಿ ಅಡಗಿಕೊಂಡಿದ್ದಾರೆಂಬುದು ಅಬೀಮೆಲೆಕನಿಗೆ ಗೊತ್ತಾದಾಗ

48ಅವನು ಕೊಡಲಿಯನ್ನು ತೆಗೆದುಕೊಂಡು ತನ್ನ ಜನರೆಲ್ಲರೊಡನೆ ಚಲ್ಮೋನ್ ಗುಡ್ಡವನ್ನೇರಿ ತನ್ನವರಿಗೆ, “ನಾನು ಮಾಡುವಂತೆಯೇ ನೀವೂ ತೀವ್ರವಾಗಿ ಮಾಡಿರಿ” ಎಂದು ಹೇಳಿ ತಾನು ಒಂದು ಮರದ ಕೊಂಬೆಯನ್ನು ಕಡಿದು ಹೆಗಲ ಮೇಲೆ ಹೊತ್ತುಕೊಳ್ಳಲು

49ಅವರೂ ಅದರಂತೆಯೇ ಮಾಡಿ, ಅವನ ಹಿಂದೆ ಹೋಗಿ, ಆ ಕೊಂಬೆಗಳನ್ನು ಅವರಿದ್ದ ನೆಲಮನೆಯ ಸುತ್ತಲೂ ಹಾಕಿ, ಬೆಂಕಿಹೊತ್ತಿಸಿ ಅದನ್ನು ಸುಟ್ಟುಬಿಟ್ಟರು. ಹೀಗೆ ಶೆಕೆಮ್‌ ಕೋಟೆಯವರೆಲ್ಲರೂ ಸತ್ತರು. ಅವರ ಸ್ತ್ರೀಪುರುಷರೆಲ್ಲಾ ಸುಮಾರು ಸಾವಿರ ಜನರಿದ್ದರು.

50ಅನಂತರ ಅಬೀಮೆಲೆಕನು ತೇಬೇಚಿಗೆ ಹೋಗಿ ಮುತ್ತಿಗೆಹಾಕಿ ಅದನ್ನು ಹಿಡಿದನು.

51ಆ ಊರಿನ ಮಧ್ಯದಲ್ಲಿ ಒಂದು ಭದ್ರವಾದ ಬುರುಜು ಇತ್ತು; ಊರಿನ ಸ್ತ್ರೀಪುರುಷರೆಲ್ಲರೂ ಓಡಿಹೋಗಿ, ಅದರೊಳಗೆ ಹೊಕ್ಕು, ಬಾಗಿಲನ್ನು ಮುಚ್ಚಿಕೊಂಡು ಮೇಲೆ ಹತ್ತಿದರು.

52ಅಬೀಮೆಲೆಕನು ಅಲ್ಲಿಗೆ ಬಂದು ಯುದ್ಧಮಾಡುತ್ತಾ ಬುರುಜಿನ ಬಾಗಿಲಿಗೆ ಬೆಂಕಿ ಹೊತ್ತಿಸಬೇಕೆಂದು ಅದರ ಸಮೀಪಕ್ಕೆ ಹೋಗಲು,

53ಒಬ್ಬ ಸ್ತ್ರೀಯು ಮೇಲಿನಿಂದ ಒಂದು ಬೀಸುವ ಕಲ್ಲನ್ನು ಬೀಳಿಸಿ, ಅವನ ತಲೆಬುರುಡೆಯನ್ನು ಒಡೆದುಬಿಟ್ಟಳು.

54ಅವನು ಕೂಡಲೆ ತನ್ನ ಆಯುಧ ಹೊರುವವನನ್ನು ಕರೆದು ಅವನಿಗೆ, “ಕತ್ತಿಯನ್ನು ಹಿರಿದು ನನ್ನನ್ನು ಕೊಲ್ಲು; ಇಲ್ಲವಾದರೆ ನಾನು ಹೆಂಗಸಿನ ಕೈಯಿಂದ ಸತ್ತನೆಂದು ಜನರು ಹೇಳಾರು” ಎನ್ನಲು ಆ ಪ್ರಾಯಸ್ಥನು ಅವನನ್ನು ತಿವಿದು ಕೊಂದುಹಾಕಿದನು.

55ಅಬೀಮೆಲೆಕನು ಸತ್ತು ಹೋದದ್ದನ್ನು ಕಂಡು ಇಸ್ರಾಯೇಲರು ತಮ್ಮ ತಮ್ಮ ಸ್ಥಳಗಳಿಗೆ ಹಿಂದಿರುಗಿದರು.

56ಎಪ್ಪತ್ತು ಮಂದಿ ಸಹೋದರರನ್ನು ಕೊಂದುಹಾಕಿ, ತನ್ನ ತಂದೆಗೆ ದ್ರೋಹಿಯಾದ ಅಬೀಮೆಲೆಕನಿಗೆ ದೇವರು ಈ ರೀತಿಯಾಗಿ ಮುಯ್ಯಿತೀರಿಸಿದನು.

57ಶೆಕೆಮಿನವರಿಗಾದರೋ ಅವರ ದುಷ್ಟತನವನ್ನು ಅವರ ತಲೆಯ ಮೇಲೆಯೇ ಬರಮಾಡಿದನು. ಹೀಗೆ ಯೆರುಬ್ಬಾಳನ ಮಗನಾದ ಯೋತಾಮನು ಇವರ ವಿಷಯದಲ್ಲಿ ನುಡಿದ ಶಾಪವು ನೆರವೇರಿತು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath