ಕ್ರಿಶ್ಚಿಯನ್ ಧರ್ಮ
ಹಿಂದೆ

ನ್ಯಾಯಸ್ಥಾಪಕರು 1

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋಶುವನು ಮರಣಹೊಂದಿದ ನಂತರ ಇಸ್ರಾಯೇಲ್ಯರು “ಕಾನಾನ್ಯರೊಡನೆ ಯುದ್ಧಮಾಡುವುದಕ್ಕೆ ನಮ್ಮಲ್ಲಿ ಮೊದಲು ಯಾರು ಹೋಗಬೇಕು?” ಎಂದು ಯೆಹೋವನನ್ನು ಕೇಳಲು

2ಆತನು ಅವರಿಗೆ “ಯೆಹೂದ್ಯರು ಹೋಗಲಿ; ಇಗೋ, ದೇಶವನ್ನು ಅವರಿಗೆ ಒಪ್ಪಿಸಿದ್ದೇನೆ” ಅಂದನು.

3ಆಗ ಯೆಹೂದ್ಯರು ತಮ್ಮ ಸಹೋದರರಾದ ಸಿಮೆಯೋನ್ಯರಿಗೆ, “ಕಾನಾನ್ಯರೊಡನೆ ಯುದ್ಧಮಾಡುವುದಕ್ಕೋಸ್ಕರ ನೀವು ನಮ್ಮ ಸಂಗಡ ನಮ್ಮ ಸ್ವಾಧೀನದಲ್ಲಿರುವ ಭೂಮಿಗೆ ಬನ್ನಿರಿ; ಅನಂತರ ನಾವೂ ನಿಮ್ಮ ಸಂಗಡ ನಿಮ್ಮ ಸ್ವಾಧೀನದಲ್ಲಿರುವ ಭೂಮಿಗೆ ಬರುವೆವು” ಎಂದು ಹೇಳಿದರು.

4ಅವರು ಒಪ್ಪಿ ಯೆಹೂದ್ಯರ ಜೊತೆಯಲ್ಲಿ ಯುದ್ಧಕ್ಕೆ ಹೋದರು. ಆಗ ಯೆಹೋವನು ಕಾನಾನ್ಯರನ್ನೂ, ಪೆರಿಜ್ಜೀಯರನ್ನೂ ಅವರ ಕೈಗೆ ಒಪ್ಪಿಸಿದ್ದರಿಂದ ಅವರು ಅವರಲ್ಲಿ ಹತ್ತು ಸಾವಿರ ಮಂದಿಯನ್ನು ಬೆಜೆಕ್ ಎಂಬ ಸ್ಥಳದಲ್ಲಿ ಹತ್ಯೆಮಾಡಿದರು.

5ಅವರು ಅಲ್ಲಿ ಅದೋನೀ ಬೆಜೆಕನನ್ನು ಸಂಧಿಸಿ, ಅವನೊಡನೆ ಯುದ್ಧಮಾಡಿ ಕಾನಾನ್ಯರನ್ನೂ, ಪೆರಿಜ್ಜೀಯರನ್ನೂ ಸೋಲಿಸಿದರು.

6ಅದೋನೀಬೆಜೆಕನು ಓಡಿಹೋಗಲು ಅವನನ್ನು ಹಿಂದಟ್ಟಿ ಹಿಡಿದು ಅವನ ಕೈಕಾಲುಗಳ ಹೆಬ್ಬೆರಳುಗಳನ್ನು ಕತ್ತರಿಸಿಬಿಟ್ಟರು.

7ಆಗ ಅದೋನೀಬೆಜೆಕನು, “ಕೈ ಕಾಲುಗಳ ಹೆಬ್ಬೆರಳುಗಳನ್ನು ನಾನು ಕತ್ತರಿಸಿಬಿಟ್ಟ ಎಪ್ಪತ್ತು ಮಂದಿ ಅರಸರು ನನ್ನ ಮೇಜಿನ ಕೆಳಗೆ ಬೀಳುವ ಆಹಾರದ ಚೂರುಗಳನ್ನು ಕೂಡಿಸಿಕೊಂಡು ತಿನ್ನುತ್ತಿದ್ದರು. ನಾನು ಅವರಿಗೆ ಮಾಡಿದಂತೆಯೇ ದೇವರು ನನಗೆ ಮಾಡಿದ್ದಾನೆ” ಅಂದನು. ಅವರು ಅವನನ್ನು ಯೆರೂಸಲೇಮಿಗೆ ಕರೆದುಕೊಂಡು ಬರಲು ಅವನು ಅಲ್ಲಿ ಸತ್ತನು.

8ಯೆಹೂದ್ಯರು ಯೆರೂಸಲೇಮಿನವರೊಡನೆ ಯುದ್ಧಮಾಡಿ, ಅಲ್ಲಿನ ಜನರನ್ನು ಹಿಡಿದು ಕತ್ತಿಯಿಂದ ಸಂಹರಿಸಿ ಪಟ್ಟಣಕ್ಕೆ ಬೆಂಕಿಯಿಟ್ಟರು.

9ತರುವಾಯ ಯೆಹೂದ್ಯರು ಹೋಗಿ ಪರ್ವತಪ್ರದೇಶ, ದಕ್ಷಿಣಸೀಮೆ ಹಾಗೂ ಕಣಿವೆ ಪ್ರದೇಶಗಳಲ್ಲಿದ್ದ ಕಾನಾನ್ಯರೊಡನೆ ಯುದ್ಧಮಾಡಿದರು.

10ಅವರು ಮೊದಲು ಕಿರ್ಯತರ್ಬ ಎಂಬ ಹೆಸರಿದ್ದ ಹೆಬ್ರೋನಿಗೆ ಹೋಗಿ ಅಲ್ಲಿದ್ದ ಕಾನಾನ್ಯರ ಮೇಲೆ ಬಿದ್ದು, ಅವರಲ್ಲಿ ಶೇಷೈ, ಅಹೀಮನ್, ತಲ್ಮೈ ಎಂಬುವರನ್ನು ಸೋಲಿಸಿದರು.

11ಅಲ್ಲಿಂದ ದೆಬೀರಿನವರಿಗೆ ವಿರೋಧವಾಗಿ ಹೋದರು; ದೆಬೀರಕ್ಕೆ ಮೊದಲು ಕಿರ್ಯತಸೇಫೆರ್ ಎಂಬ ಹೆಸರಿತ್ತು.

12ಕಿರ್ಯತಸೇಫೆರ ಎಂಬ ಪಟ್ಟಣವನ್ನು ವಶಪಡಿಸಿಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾಳನ್ನು ಮದುವೆಮಾಡಿಕೊಡುತ್ತೇನೆಂದು ಕಾಲೇಬನು ಹೇಳಿದನು.

13ಅವನ ತಮ್ಮನೂ, ಕೆನಜನ ಮಗನೂ ಆದ ಒತ್ನೀಯೇಲನು ಕಿರ್ಯತ್ ಸೇಫೆರನ್ನು ವಶಪಡಿಸಿಕೊಂಡನು. ಆಗ ಕಾಲೇಬನು ತನ್ನ ಮಗಳಾದ ಅಕ್ಷಾಳನ್ನು ಅವನಿಗೆ ಮದುವೆಮಾಡಿಕೊಟ್ಟನು.

14ಆಕೆಯು ಬರುತ್ತಿರುವಾಗ ತನ್ನ ತಂದೆಯ ಹತ್ತಿರ ಹೊಲವನ್ನು ಕೇಳಬೇಕೆಂದು ಗಂಡನನ್ನು ಪ್ರೇರೇಪಿಸಿ ತಾನು ಕತ್ತೆಯಿಂದ ಇಳಿದಳು. ಕಾಲೇಬನು, “ನಿನಗೇನು ಬೇಕು?” ಎಂದು ಆಕೆಯನ್ನು ಕೇಳಲು

15ಆಕೆಯು, “ನನಗೊಂದು ದಾನಕೊಡಬೇಕು; ನೀನು ನನ್ನನ್ನು ದಕ್ಷಿಣ ಪ್ರಾಂತ್ಯಕ್ಕೆ ಕೊಟ್ಟುಬಿಟ್ಟಿಯಲ್ಲಾ, ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡು” ಅಂದಳು. ಆಗ ಅವನು ಆಕೆಗೆ ಮೇಲಣ ಬುಗ್ಗೆ ಮತ್ತು ಕೆಳಗಣ ಪ್ರದೇಶದ ಬುಗ್ಗೆಗಳನ್ನು ಕೊಟ್ಟನು.

16ಮೋಶೆಯ ಮಾವನಾದ ಕೇನ್ಯನ ವಂಶದವರು ಖರ್ಜೂರ ನಗರದಿಂದ ಹೊರಟು ಯೆಹೂದ್ಯರ ಜೊತೆಯಲ್ಲಿ ಅರಾದಿನ ದಕ್ಷಿಣದಲ್ಲಿರುವ ಯೆಹೂದ ಅಡವಿಗೆ ಬಂದು ಅಲ್ಲಿನ ಜನರ ಸಂಗಡ ವಾಸಮಾಡಿದರು.

17ತರುವಾಯ ಯೆಹೂದ್ಯರು ತಮ್ಮ ಬಂಧುಗಳಾದ ಸಿಮೆಯೋನ್ಯರ ಸಂಗಡ ಹೋಗಿ ಚೆಫತ್ ಎಂಬ ಪಟ್ಟಣದಲ್ಲಿದ್ದ ಕಾನಾನ್ಯರನ್ನು ಸೋಲಿಸಿ, ಆ ಪಟ್ಟಣವನ್ನು ಹಾಳುಮಾಡಿ ಅದನ್ನು ಹೊರ್ಮಾ ಎಂದು ಕರೆದರು.

18ಅನಂತರ ಅವರು ಗಾಜಾ, ಅಷ್ಕೆಲೋನ್, ಎಕ್ರೋನ್ ಎಂಬ ಪಟ್ಟಣಗಳನ್ನೂ ಅವುಗಳ ಮೇರೆಗಳನ್ನೂ ಸ್ವಾಧೀನಮಾಡಿಕೊಂಡರು.

19ಯೆಹೋವನು ಯೆಹೂದ್ಯರ ಸಂಗಡ ಇದ್ದುದರಿಂದ ಅವರು ಪರ್ವತಪ್ರದೇಶಗಳನ್ನೆಲ್ಲಾ ಸ್ವಾಧೀನಪಡಿಸಿಕೊಂಡರು. ಆದರೆ ತಗ್ಗಿನ ಪ್ರದೇಶಗಳಲ್ಲಿ ವಾಸಿಸುವವರಿಗೆ ಕಬ್ಬಿಣದ ರಥಗಳಿದ್ದುದರಿಂದ ಅವರನ್ನು ಹೊರಡಿಸುವುದಕ್ಕೆ ಆಗಲಿಲ್ಲ.

20ಮೋಶೆ ಆಜ್ಞಾಪಿಸಿದಂತೆ ಅವರು ಕಾಲೇಬನಿಗೆ ಹೆಬ್ರೋನ್ ಪಟ್ಟಣವನ್ನು ಕೊಟ್ಟರು. ಅವನು ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಓಡಿಸಿಬಿಟ್ಟನು.

21ಯೆರೂಸಲೇಮಿನಲ್ಲಿದ್ದ ಯೆಬೂಸಿಯರನ್ನು ಬೆನ್ಯಾಮೀನ್ಯರು ಹೊರಡಿಸಿಬಿಡಲಿಲ್ಲ. ಅವರು ಇಂದಿನವರೆಗೂ ಬೆನ್ಯಾಮೀನ್ಯರ ಸಂಗಡ ಯೆರೂಸಲೇಮಿನಲ್ಲಿಯೇ ವಾಸವಾಗಿದ್ದಾರೆ.

22ಇವರ ಹಾಗೆಯೇ ಯೋಸೇಫನ ವಂಶದವರೂ ಹೊರಟು ಬೇತೇಲಿಗೆ ಬಂದರು. ಯೆಹೋವನು ಅವರ ಸಂಗಡ ಇದ್ದನು.

23ಅವರು ಲೂಜ್ ಎಂದು ಕರೆಯುತ್ತಿದ್ದ ಬೇತೇಲ್ ಊರನ್ನು ಸಂಚರಿಸಿ ನೋಡುವುದಕ್ಕೆ ಗೂಢಚಾರರನ್ನು ಕಳುಹಿಸಿದರು.

24ಅವರು ಆ ಊರೊಳಗಿನಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ, “ದಯವಿಟ್ಟು ಪಟ್ಟಣದೊಳಗೆ ನುಗ್ಗಬಹುದಾದ ದಾರಿಯನ್ನು ನಮಗೆ ತೋರಿಸು; ನಾವೂ ನಿನಗೆ ದಯೆತೋರಿಸುವೆವು” ಎಂದು ಹೇಳಲು ಅವನು ಅವರಿಗೆ ಆ ದಾರಿಯನ್ನು ತೋರಿಸಿದನು.

25ಆಗ ಅವರು ಆ ಪಟ್ಟಣವನ್ನು ಕತ್ತಿಯಿಂದ ಸಂಹರಿಸಿದರು. ಆದರೆ ಆ ಮನುಷ್ಯನನ್ನೂ ಅವನ ಕುಟುಂಬವನ್ನೂ ಏನು ಮಾಡದೆ ಕಳುಹಿಸಿಬಿಟ್ಟರು.

26ಅವನು ಹಿತ್ತಿಯರ ದೇಶಕ್ಕೆ ಹೋಗಿ ಒಂದು ಪಟ್ಟಣವನ್ನು ಕಟ್ಟಿಕೊಂಡು ಅದಕ್ಕೆ ಲೂಜ್ ಎಂದು ಹೆಸರಿಟ್ಟನು; ಅದಕ್ಕೆ ಇಂದಿನವರೆಗೂ ಅದೇ ಹೆಸರಿರುತ್ತದೆ.

27ಮನಸ್ಸೆಯವರು ಬೇತ್ ಷೆಯಾನ್, ತಾನಾಕ್, ದೋರ್, ಇಬ್ಲೆಯಾಮ್, ಮೆಗಿದ್ದೋ ಎಂಬ ಪಟ್ಟಣಗಳಲ್ಲಿಯೂ ಅವುಗಳ ಗ್ರಾಮಗಳಲ್ಲಿಯೂ ವಾಸವಾಗಿದ್ದವರನ್ನು ಹೊರಡಿಸಿಬಿಡಲಿಲ್ಲ. ಆದುದರಿಂದ ಕಾನಾನ್ಯರು ಆ ಪ್ರಾಂತ್ಯಗಳಲ್ಲೇ ವಾಸಿಸುವುದಕ್ಕೆ ದೃಢಮಾಡಿಕೊಂಡರು.

28ಇಸ್ರಾಯೇಲ್ಯರು ಬಲಗೊಂಡ ಮೇಲೆ ಅವರನ್ನು ದಾಸತ್ವದಲ್ಲಿ ಇಟ್ಟುಕೊಂಡರೇ ಹೊರತು ಅಲ್ಲಿಂದ ಓಡಿಸಲಿಲ್ಲ.

29ಎಫ್ರಾಯೀಮ್ಯರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಆದ್ದರಿಂದ ಕಾನಾನ್ಯರು ಎಫ್ರಾಯೀಮ್ಯರ ಮಧ್ಯದಲ್ಲೇ ವಾಸಿಸುವವರಾದರು.

30ಜೆಬುಲೂನ್ಯರು ಕಿತ್ರೋನ್, ನಹಲೋಲ್ ಎಂಬ ಪಟ್ಟಣಗಳ ನಿವಾಸಿಗಳನ್ನು ಓಡಿಸಲಿಲ್ಲ. ಇದರಿಂದ ಕಾನಾನ್ಯರು ಅವರ ಮಧ್ಯದಲ್ಲೇ ವಾಸಮಾಡುವವರಾದರು. ಆದರೆ ಜೆಬುಲೂನ್ಯರು ಕಾನಾನ್ಯರನ್ನು ಗುಲಾಮರನ್ನಾಗಿ ಮಾಡಿಕೊಂಡರು.

31ಆಶೇರ್ಯರು ಅಕ್ಕೋ, ಚೀದೋನ್, ಅಹ್ಲಾಬ್, ಅಕ್ಜೀಬ್, ಹೆಲ್ಬಾ, ಅಫೀಕ್, ರೆಹೋಬ್ ಎಂಬ ಪಟ್ಟಣಗಳಲ್ಲಿ ವಾಸವಾಗಿದ್ದ ಜನರನ್ನು ಹೊರಡಿಸಿಬಿಡಲಿಲ್ಲ;

32ಹೀಗಾಗಿ ಆಶೇರ್ಯರು ಕಾನಾನ್ಯರನ ಮಧ್ಯದಲ್ಲೇ ವಾಸಮಾಡಿದರು.

33ನಫ್ತಾಲಿ ಕುಲದವರು ಬೇತ್ ಷೆಮೆಷ್, ಬೇತನಾತ್ ಎಂಬ ಊರುಗಳಲ್ಲಿ ಸ್ವಾಧೀನ ಮಾಡಿಕೊಳ್ಳದೆ ಅಲ್ಲಿಯ ನಿವಾಸಿಗಳಾದ ಕಾನಾನ್ಯರ ಮಧ್ಯದಲ್ಲೇ ವಾಸಮಾಡಿದರು ಮತ್ತು ಬೇತ್ ಷೆಮೆಷ್, ಬೇತನಾತ್ ಊರುಗಳ ಜನರು ಅವರಿಗೆ ಗುಲಾಮರಾದರು.

34ಇದಲ್ಲದೆ ಅಮೋರಿಯರು ದಾನ್ ಕುಲದವರನ್ನು ತಗ್ಗಿನ ಪ್ರದೇಶಕ್ಕೆ ಇಳಿಯಗೊಡದೆ ಹಿಂದಟ್ಟಿ ಬೆಟ್ಟಗಳಿಗೆ ಓಡಿಸಿಬಿಟ್ಟರು.

35ಹೀಗೆ ಅಮೋರಿಯರು ಅಯ್ಯಾಲೋನ್, ಶಾಲ್ಬೀಮ್ ಎಂಬ ಊರುಗಳ ಬಳಿ ಇದ್ದ ಹರ್ ಹೆರೆಸ್ ಎಂಬ ಬೆಟ್ಟದ ಹತ್ತಿರ ವಾಸಿಸಲು ನಿರ್ಧಾರಮಾಡಿಕೊಂಡರು. ಆದರೆ ಯೋಸೇಫನ ಕುಲದವರು ಅವರನ್ನು ಸೋಲಿಸಿ ಗುಲಾಮರನ್ನಾಗಿ ಮಾಡಿಕೊಂಡರು.

36ಅಮೋರಿಯರ ಮೇರೆಯು ಅಕ್ರಬ್ಬೀಮ್ ಮೇಲುದಿಣ್ಣೆಯಿಂದ ಸೇಲಾ ಊರಿನಿಂದ ಮೇಲಕ್ಕೆ ವಿಸ್ತರಿಸಿಕೊಂಡಿದೆ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath