ಯೆಶಾಯನು 42
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಇಗೋ, ನನ್ನ ಸೇವಕನು! ಇವನಿಗೆ ನಾನೇ ಆಧಾರ. ಇವನು ನನಗೆ ಇಷ್ಟನು, ನನ್ನ ಪ್ರಾಣಪ್ರಿಯನು. ಇವನಲ್ಲಿ ನನ್ನ ಆತ್ಮವನ್ನು ಇರಿಸಿದ್ದೇನೆ. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.
2ಇವನು ಕೂಗಾಡುವುದಿಲ್ಲ, ಆರ್ಭಟಿಸುವುದಿಲ್ಲ, ಬೀದಿಗಳಲ್ಲಿ ಇವನ ಧ್ವನಿಯೇ ಕೇಳಿಸುವುದಿಲ್ಲ.
3ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ಸದ್ಧರ್ಮವನ್ನು ಪ್ರಚುರಪಡಿಸಿ ಸಿದ್ಧಿಗೆ ತರುವನು.
4ಲೋಕದಲ್ಲಿ ಸದ್ಧರ್ಮವನ್ನು ಸ್ಥಾಪಿಸುವ ತನಕ ಇವನು ಕಳೆಗುಂದದೆಯೂ, ಜಜ್ಜಿಹೋಗದೆಯೂ ತನ್ನ ಕಾರ್ಯದಲ್ಲಿ ನಿರತನಾಗಿರುವನು. ದ್ವೀಪಗಳು ಇವನ ಧರ್ಮಪ್ರಮಾಣಕ್ಕೆ ಕಾದಿರುವವು.
5ಆಕಾಶಮಂಡಲವನ್ನು ಉಂಟುಮಾಡಿ ಹರಡಿ ಭೂಮಂಡಲವನ್ನೂ, ಅದರಲ್ಲಿನ ಉತ್ಪತ್ತಿಯನ್ನೂ ವಿಸ್ತರಿಸಿ ಲೋಕದ ಜನರಿಗೆ ಪ್ರಾಣವನ್ನು, ಹೌದು, ಭೂಜನರಿಗೆ ಜೀವಾತ್ಮವನ್ನೂ ದಯಪಾಲಿಸುವ ಯೆಹೋವನೆಂಬ ದೇವರು ಹೀಗೆನ್ನುತ್ತಾನೆ,
6“ಯೆಹೋವನೆಂಬ ನಾನು ನನ್ನ ಧರ್ಮದ ಸಂಕಲ್ಪಾನುಸಾರವಾಗಿ ನಿನ್ನನ್ನು ಕೈಹಿಡಿದು, ಕಾಪಾಡಿ ನನ್ನ ಜನರಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಅನ್ಯಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
7ನೀನು ಕುರುಡರಿಗೆ ಕಣ್ಣುಕೊಟ್ಟು, ಬಂದಿಗಳನ್ನು ಸೆರೆಯಿಂದಲೂ, ಕತ್ತಲಲ್ಲಿ ಬಿದ್ದವರನ್ನು ಕಾರಾಗೃಹದಿಂದಲೂ ಹೊರಗೆ ತರುವಿ.
8ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.
9ಇಗೋ ಮೊದಲನೆಯ ಸಂಗತಿಗಳು ನೆರವೇರಿವೆ, ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ತಲೆದೋರುವುದಕ್ಕೆ ಮೊದಲು ಅವುಗಳನ್ನು ನಿಮಗೆ ತಿಳಿಸುತ್ತೇನೆ.”
10ಸಮುದ್ರಪ್ರಯಾಣಿಕರೇ, ಸಕಲಜಲಚರಗಳೇ, ದ್ವೀಪಾಂತರಗಳೇ, ದ್ವೀಪಾಂತರವಾಸಿಗಳೇ, ಯೆಹೋವನ ಘನತೆಗಾಗಿ ನೂತನ ಗೀತೆಯನ್ನು ಹಾಡಿ ದಿಗಂತಗಳಲ್ಲಿಯೂ ಆತನನ್ನು ಕೀರ್ತಿಸಿರಿ.
11ಅರಣ್ಯವೂ, ಅಲ್ಲಿನ ಊರುಗಳೂ, ಕೇದಾರಿನವರು ವಾಸಿಸುವ ಗ್ರಾಮಗಳೂ ಆರ್ಭಟಿಸಲಿ, ಸೆಲ ಪಟ್ಟಣದವರು ಹರ್ಷಧ್ವನಿಗೈದು ಪರ್ವತಾಗ್ರಗಳಲ್ಲಿ ಜಯಘೋಷ ಮಾಡಿರಿ.
12ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.
13ಯೆಹೋವನು ಶೂರನಂತೆ ಹೊರಟು, ಯುದ್ಧವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸುವನು. ಆರ್ಭಟಿಸಿ ಗರ್ಜಿಸಿ ಶತ್ರುಗಳ ಮೇಲೆ ಬಿದ್ದು ತನ್ನ ಪರಾಕ್ರಮವನ್ನು ತೋರ್ಪಡಿಸುವನು.
14ನಾನು ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿ ಹಿಡಿದಿದ್ದೆನು. ಈಗ ಹೆರುವವಳಂತೆ ಕೂಗುವೆನು. ನಿಟ್ಟುಸಿರಿನೊಡನೆ ಏದುವೆನು.
15ಬೆಟ್ಟಗುಡ್ಡಗಳನ್ನು ನಾಶಪಡಿಸಿ ಅಲ್ಲಿಯ ಮೇವನ್ನೆಲ್ಲಾ ಒಣಗಿಸಿ, ನದಿಗಳನ್ನು ಒಣ ದಿಣ್ಣೆಮಾಡಿ ಕೆರೆಗಳನ್ನು ಬತ್ತಿಸುವೆನು.
16ಕುರುಡರನ್ನು ತಿಳಿಯದ ಮಾರ್ಗದಲ್ಲಿ ಬರಮಾಡುವೆನು, ಅವರಿಗೆ ಗೊತ್ತಿಲ್ಲದ ದಾರಿಗಳಲ್ಲಿ ಅವರನ್ನು ನಡೆಸುವೆನು, ಅವರೆದುರಿಗೆ ಕತ್ತಲನ್ನು ಬೆಳಕುಮಾಡಿ, ಡೊಂಕನ್ನು ಸರಿಪಡಿಸುವೆನು. ಈ ಕಾರ್ಯಗಳನ್ನು ಬಿಡದೆ ಮಾಡುವೆನು. ನಾನು ಅವರನ್ನು ಕೈ ಬಿಡುವುದಿಲ್ಲ.
17ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, “ನೀವೇ ನಮ್ಮ ದೇವರುಗಳು” ಎಂದು ಎರಕದ ಬೊಂಬೆಗಳಿಗೆ ಅರಿಕೆಮಾಡುವವರು ಹಿಂದೆ ಬಿದ್ದು ಕೇವಲ ಅವಮಾನಕ್ಕೆ ಈಡಾಗುವರು.
18ಕಿವುಡರೇ, ಕೇಳಿರಿ! ಕುರುಡರೇ, ನೀವು ಕಣ್ಣಿಟ್ಟು ನೋಡಿರಿ!
19ನನ್ನ ಸೇವಕನ ಹೊರತು ಯಾರು ಕುರುಡರು? ನಾನು ಕಳುಹಿಸುವ ದೂತನಂತೆ ಯಾರು ಕಿವುಡರು? ನನ್ನ ಭಕ್ತನ ಹಾಗೆ ಯಾರು ಕುರುಡರು? ಯೆಹೋವನ ಸೇವಕನ ಪ್ರಕಾರ ಅಂಧರು ಯಾರು?
20ನೀನು ಬಹು ವಿಷಯಗಳನ್ನು ಕಂಡಿದ್ದರೂ ನಿನಗೆ ಗಮನವಿಲ್ಲ, ಇವನ ಕಿವಿ ತೆರೆದಿದ್ದರೂ ಕೇಳನು.
21ಯೆಹೋವನು ಧರ್ಮಸ್ವರೂಪನಾಗಿರುವುದರಿಂದ ಧರ್ಮೋಪದೇಶವನ್ನು ಘನಪಡಿಸಿ ಮಹತ್ತಿಗೆ ತರಬೇಕೆಂದು ಇಷ್ಟಪಟ್ಟನು.
22ಈ ಜನರೇ ಕೊಳ್ಳೆಗೆ ಈಡಾಗಿ ಸೂರೆಹೋಗಿದ್ದಾರೆ. ಎಲ್ಲರೂ ಹಳ್ಳಕೊಳ್ಳಗಳಿಗೆ ಸಿಕ್ಕಿಬಿದ್ದಿದ್ದಾರೆ, ಸೆರೆಮನೆಗಳಲ್ಲಿ ಮುಚ್ಚಲ್ಪಟ್ಟಿದ್ದಾರೆ. ಅವರು ಸುಲಿಗೆಯಾಗಿದ್ದರೂ ಯಾರೂ ಬಿಡಿಸರು, ಸೂರೆಯಾಗಿದ್ದರೂ ಯಾರೂ ಹಿಂದಕ್ಕೆ ಬಿಡು ಎನ್ನುವುದಿಲ್ಲ.
23ನಿಮ್ಮಲ್ಲಿ ಯಾರು ಈ ಮಾತಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?
24ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಕೊಟ್ಟವನು ಯಾರು? ಯಾರ ವಿರುದ್ಧವಾಗಿ ನಾವು ದ್ರೋಹಮಾಡಿದೆವೋ ಆ ಯೆಹೋವನಲ್ಲವೆ. ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ಉಪದೇಶವನ್ನು ಕೇಳಲಿಲ್ಲ
25ಆದುದರಿಂದ ಆತನು ಅವರ ಮೇಲೆ ತನ್ನ ರೋಷಾಗ್ನಿಯನ್ನೂ, ಯುದ್ಧದ ರೌದ್ರವನ್ನೂ ಸುರಿಸಿದನು. ಎಲ್ಲಾ ಕಡೆಯಿಂದಲೂ ಅವರಿಗೆ ಉರಿಹೊತ್ತಿಕೊಂಡಿತು, ಆದರೆ ಅವರು ತಿಳಿಯಲಿಲ್ಲ. ದಹಿಸಿತು, ಆದರೆ ಅವರು ಲಕ್ಷ್ಯಕ್ಕೆ ತಂದುಕೊಳ್ಳಲಿಲ್ಲ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath