ಕ್ರಿಶ್ಚಿಯನ್ ಧರ್ಮ
ಹಿಂದೆ

ಯೆಶಾಯನು 37

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಅರಸನಾದ ಹಿಜ್ಕೀಯನು ಅದನ್ನು ಕೇಳಿದಾಗ ತನ್ನ ಬಟ್ಟೆಗಳನ್ನು ಹರಿದುಕೊಂಡು ಗೋಣೀತಟ್ಟನ್ನು ಕಟ್ಟಿಕೊಂಡು ಯೆಹೋವನ ಆಲಯಕ್ಕೆ ಹೋದನು.

2ಇದಲ್ಲದೆ ಅವನು ರಾಜಗೃಹಾಧಿಪತಿಯಾದ ಎಲ್ಯಾಕೀಮ್, ಲೇಖಕನಾದ ಶೆಬ್ನ, ಹಿರಿಯರಾದ ಯಾಜಕರು ಇವರನ್ನು ಕರೆಯಿಸಿ, “ನೀವು ಗೋಣಿತಟ್ಟನ್ನು ಕಟ್ಟಿಕೊಂಡು ಆಮೋಚನ ಮಗನೂ, ಪ್ರವಾದಿಯೂ ಆಗಿರುವ ಯೆಶಾಯನ ಬಳಿಗೆ ಹೋಗಿ ಹೀಗೆ ಹೇಳಿರಿ” ಎಂದು ಆಜ್ಞಾಪಿಸಿದನು.

3ಆಗ ಅವರು ಯೆಶಾಯನಿಗೆ, “ಹಿಜ್ಕೀಯನು ಹೀಗೆ ಹೇಳುತ್ತಾನೆ, ‘ಈ ದಿನದಲ್ಲಿ ನಮಗೆ ಮಹಾಕಷ್ಟವೂ, ಶಿಕ್ಷೆಯೂ, ನಿಂದೆಯೂ ಸಂಭವಿಸಿರುತ್ತದೆ. ಹೆರಿಗೆಯ ಕಾಲ ಬಂದದೆ; ಆದರೆ ಹೆರುವುದಕ್ಕೆ ಬಲ ಸಾಲದು.

4ನಿನ್ನ ದೇವರಾದ ಯೆಹೋವನು ಅಶ್ಶೂರದ ಅರಸನಿಂದ ಕಳುಹಿಸಲ್ಪಟ್ಟ ರಬ್ಷಾಕೆಯ ನಿಂದಾವಾಕ್ಯಗಳನ್ನು ಕೇಳಿರುವನು, ಅವನು ತನ್ನ ಯಜಮಾನನ ಹೆಸರಿನಲ್ಲಿ ಜೀವಸ್ವರೂಪನಾದ ದೇವರನ್ನು ದೂಷಿಸಿದ್ದರಿಂದ ಆತನು ಅವನಿಗೆ ಮುಯ್ಯಿತೀರಿಸಾನು. ಆದುದರಿಂದ ಉಳಿದಿರುವ ಸ್ವಲ್ಪ ಜನರಿಗೋಸ್ಕರ ಯೆಹೋವನನ್ನು ಪ್ರಾರ್ಥಿಸು’” ಎಂದು ಹೇಳಿದರು.

5ಯೆಶಾಯನು ಅರಸನಾದ ಹಿಜ್ಕೀಯನ ಕಡೆಯಿಂದ ತನ್ನ ಬಳಿಗೆ ಬಂದ ಸೇವಕರಿಗೆ,

6“ಅಶ್ಶೂರದ ಅರಸನ ಸೇವಕರು ನನ್ನನ್ನು ದೂಷಿಸಿದ ಮಾತುಗಳನ್ನು ಕೇಳಿದ್ದೀ, ಅವುಗಳಿಗೆ ನೀನು ಹೆದರಬೇಡ.

7ಇಗೋ, ನಾನು ಅವನ ಮೇಲೆ ಭಯದ ಆತ್ಮವನ್ನು ಬರ ಮಾಡುವೆನು. ಅವನು ಒಂದು ಸುದ್ದಿಯನ್ನು ಕೇಳಿ ತಿರುಗಿಕೊಂಡು ಸ್ವದೇಶಕ್ಕೆ ಹೋಗಿ, ಅಲ್ಲಿ ಕತ್ತಿಯಿಂದ ಬೀಳುವಂತೆ ಮಾಡುವೆನು ಎಂಬ ಯೆಹೋವನ ಮಾತನ್ನು ನಿಮ್ಮ ಯಜಮಾನನಿಗೆ ಹೇಳಿರಿ” ಎಂಬುದಾಗಿ ಉತ್ತರಕೊಟ್ಟನು.

8ರಬ್ಷಾಕೆಯು ಹಿಂದಿರುಗಿ ಹೋಗುವಾಗ ದಾರಿಯಲ್ಲಿ ಅಶ್ಶೂರದ ಅರಸನು ಲಾಕೀಷನ್ನು ಬಿಟ್ಟು ಹೋದನೆಂಬ ವರ್ತಮಾನವನ್ನು ಕೇಳಿ ಲಿಬ್ನಕ್ಕೆ ಹೋಗಿ, ಅಲ್ಲಿ ಅವನನ್ನು ಕಂಡನು. ಆಗ ಅವನು ಆ ಪಟ್ಟಣದ ವಿರುದ್ಧವಾಗಿ ಯುದ್ಧಮಾಡುತ್ತಾ ಇದ್ದನು.

9ಅಷ್ಟರಲ್ಲಿ ಕೂಷಿನ ಅರಸನಾದ ತಿರ್ಹಾಕನು ತನ್ನ ವಿರುದ್ಧವಾಗಿ ಹೊರಟಿದ್ದಾನೆಂಬ ಸುದ್ದಿಯನ್ನು ಅಶ್ಶೂರದ ಅರಸನಾದ ಸನ್ಹೇರೀಬನು ಕೇಳಿ, ಹಿಜ್ಕೀಯನ ಬಳಿಗೆ ದೂತರನ್ನು ಕಳುಹಿಸಿ,

10“ಹಿಜ್ಕೀಯನೇ, ನೀನು ನಂಬುವ ದೇವರು, ‘ಯೆರೂಸಲೇಮು ಅಶ್ಶೂರದ ಅರಸನಿಗೆ ವಶವಾಗುವುದಿಲ್ಲವೆಂದು ಹೇಳಿ ನಿನ್ನನ್ನು ಮೋಸಗೊಳಿಸಾನು.’

11ಅಶ್ಶೂರದ ಅರಸರು ಎಲ್ಲಾ ರಾಜ್ಯಗಳನ್ನು ಸಂಪೂರ್ಣವಾಗಿ ನಾಶಮಾಡಿದರೆಂದು ಕೇಳಿದಿಯಲ್ಲಾ? ಹೀಗಿದ್ದ ಮೇಲೆ ನೀನು ಉಳಿಯುವಿಯೋ?

12ನನ್ನ ತಂದೆತಾತಂದಿರು ಗೋಜಾನ್, ಖಾರಾನ್, ರೆಚೆಫ್ ಎಂಬ ಪಟ್ಟಣಗಳ ಜನರನ್ನೂ ತೆಲಸ್ಸಾರ್ ಪ್ರಾಂತ್ಯದಲ್ಲಿರುವ ಎದೆನಿನ ಜನರನ್ನೂ ನಾಶಮಾಡುವುದಕ್ಕೆ ಹೋದಾಗ ಅವರ ದೇವತೆಗಳು ಅವರನ್ನು ಕಾಪಾಡಿದವೋ?

13ಹಮಾತ್, ಅರ್ಪಾದ್, ಸೆಫರ್ವಯಿಮ್, ಹೇನ, ಇವ್ವಾ ಎಂಬ ಪಟ್ಟಣಗಳ ಅರಸರು ಏನಾದರು ಎಂಬ ನನ್ನ ಮಾತನ್ನು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಿರಿ” ಎಂಬುದಾಗಿ ದೂತರನ್ನು ಹಿಜ್ಕೀಯನ ಬಳಿಗೆ ಕಳುಹಿಸಿದನು.

14ಹಿಜ್ಕೀಯನು ಆ ದೂತರು ತಂದ ಪತ್ರವನ್ನು ತೆಗೆದುಕೊಂಡು ಓದಿದ ನಂತರ ಯೆಹೋವನ ಆಲಯಕ್ಕೆ ಹೋಗಿ ಅದನ್ನು ಯೆಹೋವನ ಮುಂದೆ ತೆರೆದಿಟ್ಟನು.

15ಹಿಜ್ಕೀಯನು ಯೆಹೋವನನ್ನು ಕುರಿತು

16“ಕೆರೂಬಿಗಳ ಮೇಲೆ ಆಸೀನನಾಗಿರುವಾತನೇ, ಇಸ್ರಾಯೇಲ್ ದೇವರೇ, ಸೇನಾಧೀಶ್ವರನಾದ ಯೆಹೋವನೇ, ಎಲ್ಲಾ ಭೂರಾಜ್ಯಗಳನ್ನು ಆಳುವ ದೇವರು ನೀನೊಬ್ಬನೇ, ಪರಲೋಕ ಭೂಲೋಕಗಳನ್ನು ಉಂಟುಮಾಡಿದವನು ನೀನೇ.

17ಯೆಹೋವನೇ, ಕಿವಿಗೊಟ್ಟು ಕೇಳು. ಯೆಹೋವನೇ, ಕಣ್ಣಿಟ್ಟು ನೋಡು. ಸನ್ಹೇರೀಬನು ಜೀವಸ್ವರೂಪ ದೇವರಾದ ನಿನ್ನನ್ನು ನಿಂದಿಸುವುದಕ್ಕೋಸ್ಕರ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲಾ ಮನಸ್ಸಿಗೆ ತಂದುಕೋ.

18ಯೆಹೋವನೇ, ಅಶ್ಶೂರದ ಅರಸರು ಸಕಲ ಜನಾಂಗಗಳನ್ನೂ, ಅವರ ದೇಶಗಳನ್ನೂ ಹಾಳು ಮಾಡಿದ್ದು ನಿಜ.

19ಅವರ ದೇವತೆಗಳನ್ನು ಬೆಂಕಿಯಲ್ಲಿ ಹಾಕಿದರು, ಏಕೆಂದರೆ ಅವು ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲು ಮರಗಳ ಬೊಂಬೆಗಳಷ್ಟೆ. ಆದುದರಿಂದಲೇ ಅವು ಅವರಿಂದ ಹಾಳಾದವು.

20ಹೀಗಿರುವುದರಿಂದ ಯೆಹೋವನೇ, ನಮ್ಮ ದೇವರೇ, ನೀನೇ ಅದ್ವಿತೀಯನಾದ ಯೆಹೋವನೆಂಬುದನ್ನು ಭೂರಾಜ್ಯಗಳೆಲ್ಲವೂ ತಿಳಿದುಕೊಳ್ಳುವಂತೆ ನಮ್ಮನ್ನು ಇವನ ಕೈಯಿಂದ ಬಿಡಿಸು ಎಂದು ಪ್ರಾರ್ಥಿಸಿದನು.”

21ಆಗ ಆಮೋಚನ ಮಗನಾದ ಯೆಶಾಯನು ಹಿಜ್ಕೀಯನಿಗೆ ಹೇಳಿಕಳುಹಿಸಿದ್ದೇನೆಂದರೆ, “ಇಸ್ರಾಯೇಲ್ ದೇವರಾದ ಯೆಹೋವನ ಈ ಮಾತುಗಳನ್ನು ಕೇಳು, ‘ನೀನು ಅಶ್ಶೂರದ ಅರಸನಾದ ಸನ್ಹೇರೀಬನ ವಿಷಯವಾಗಿ ಮಾಡಿದ ಬಿನ್ನಹಗಳನ್ನು ಕೇಳಿದೆನು.’

22ಯೆಹೋವನು ಅವನನ್ನು ಕುರಿತು ಹೇಳುವುದೇನೆಂದರೆ, ‘ಕನ್ನಿಕೆಯಾಗಿರುವ ಚೀಯೋನ್ ಕುವರಿಯು ನಿನ್ನನ್ನು ತಿರಸ್ಕರಿಸಿ ಪರಿಹಾಸ್ಯಮಾಡುತ್ತಾಳೆ, ಯೆರೂಸಲೇಮ್ ಕುವರಿಯು ನಿನ್ನ ಹಿಂದೆ ತಲೆಯಾಡಿಸುತ್ತಾಳೆ.

23ನೀನು ಯಾರನ್ನು ನಿಂದಿಸಿ ಯಾರನ್ನು ದೂಷಿಸಿದ್ಡೀ? ಯಾರ ವಿರುದ್ಧವಾಗಿ ಬಾಯ್ದೆರೆದು ಧ್ವನಿಯೆತ್ತಿದ್ದೀ? ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾಯೇಲರ ಸದಮಲಸ್ವಾಮಿಯನ್ನಲ್ಲವೇ!’

24ನೀನು ನಿನ್ನ ಸೇವಕರ ಮುಖಾಂತರವಾಗಿ ಕರ್ತನನ್ನು ನಿಂದಿಸಿ, ‘ನನ್ನ ರಥಸಮೂಹದೊಡನೆ ಪರ್ವತಶಿಖರಗಳನ್ನು ಹತ್ತಿದ್ದೇನೆ. ಲೆಬನೋನಿನ ದುರ್ಗಮಸ್ಥಳಗಳಿಗೆ ಹೋಗಿದ್ದೇನೆ; ಅದರ ಎತ್ತರವಾದ ದೇವದಾರು ವೃಕ್ಷಗಳನ್ನೂ, ಶ್ರೇಷ್ಠವಾದ ತುರಾಯಿ ಮರಗಳನ್ನೂ ಕಡಿದು ಬಿಟ್ಟಿದ್ದೇನೆ; ಅಲ್ಲಿನ ಬಹುದೂರದ ಶಿಖರವನ್ನೂ, ಉದ್ಯಾನವನಗಳನ್ನೂ ಪ್ರವೇಶಿಸಿದ್ದೇನೆ.

25ಪರದೇಶಗಳಲ್ಲಿ ಅಗೆದು ನೀರು ತೆಗೆದುಕೊಂಡು ಕುಡಿದಿದ್ದೇನೆ; ನನ್ನ ಪಾದಗಳಿಂದ ಐಗುಪ್ತದ ಎಲ್ಲಾ ಹೊಳೆಗಳನ್ನು ಬತ್ತಿಸಿದ್ದೇನೆ’ ಎಂಬುದಾಗಿ ನೀನು ಕೊಚ್ಚಿಕೊಂಡಿದ್ದಿ.

26ಇದನ್ನು ನೀನು ಕೇಳಲಿಲ್ಲವೋ? ಹೀಗಾಗಬೇಕೆಂದು ಬಹುಕಾಲದ ಹಿಂದೆಯೇ ಗೊತ್ತುಮಾಡಿದೆನು. ಪೂರ್ವಕಾಲದಲ್ಲಿ ನಿರ್ಣಯಿಸಿದ್ದನ್ನು ಈಗ ನೆರವೇರಿಸಿದ್ದೇನೆ. ಆದುದರಿಂದ ಕೋಟೆಕೊತ್ತಲುಗಳ ಪಟ್ಟಣಗಳನ್ನು ಹಾಳುದಿಬ್ಬಗಳನ್ನಾಗಿ ಮಾಡುವುದು ನಿನಗೆ ಸಾಧ್ಯವಾಯಿತು.

27ಅವುಗಳ ನಿವಾಸಿಗಳು ಬಲವಿಲ್ಲದವರಾಗಿ ಆಶಾಭಂಗಪಟ್ಟು ಕಳವಳಗೊಂಡರು. ಅವರು ಹೊಲದ ಗಿಡಕ್ಕೂ, ಹಸಿರು ಹುಲ್ಲಿಗೂ, ಮಾಳಿಗೆಯ ಮೇಲಣ ಹುಲ್ಲಿಗೂ, ಹೊಡೆಯುವುದಕ್ಕಿಂತ ಮೊದಲೇ ಒಣಗಿ ಹೋದ ಪೈರಿಗೂ ಸಮಾನರಾದರು.

28ನೀನು ಕುಳಿತುಕೊಳ್ಳುವುದೂ, ಹೊರಗೆ ಹೋಗುವುದೂ, ಒಳಗೆ ಬರುವುದೂ ನನಗೆ ಗೊತ್ತುಂಟು. ನೀನು ನನ್ನ ಮೇಲೆ ರೌದ್ರಾವೇಶನಾಗಿರುವುದನ್ನೂ ಬಲ್ಲೆನು.

29ಏಕೆಂದರೆ ನೀನು ನನ್ನ ವಿರುದ್ಧ ಕೋಪಗೊಂಡಿರುವುದೂ, ಅಸಮಾಧಾನವಾಗಿರುವುದೂ ನನಗೆ ತಿಳಿದುಬಂತು. ಆದುದರಿಂದ ನಿನಗೆ ಮೂಗುದಾರವನ್ನೂ, ಕಡಿವಾಣವನ್ನೂ ಹಾಕಿ ಬಂದ ದಾರಿಯಿಂದಲೇ ನಿನ್ನನ್ನು ಹಿಂದಕ್ಕೆ ಎಳೆದುಕೊಂಡು ಹೋಗುವೆನು” ಎಂಬುದಾಗಿ ಹೇಳಿದ್ದಾನೆ.

30ಈ ಮಾತುಗಳು ನೆರವೇರುವುದು ಎಂಬುದಕ್ಕೆ, ನೀವು ಈ ವರ್ಷದಲ್ಲಿ ಕೂಳೆಬೆಳೆಯನ್ನೂ, ಮುಂದಿನ ವರ್ಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ, ಮೂರನೆಯ ವರ್ಷ ಹೊಲಗಳಲ್ಲಿ ಬಿತ್ತಿ ಕೊಯ್ದದ್ದನ್ನೂ, ದ್ರಾಕ್ಷಿತೋಟಗಳಲ್ಲಿ ವ್ಯವಸಾಯಮಾಡಿ ಕೂಡಿಸಿದ್ದನ್ನೂ ಅನುಭವಿಸುವುದೇ ಗುರುತಾಗಿರುವುದು.

31ತಪ್ಪಿಸಿಕೊಂಡು ಉಳಿದ ಯೆಹೂದ್ಯರು ದೇಶದಲ್ಲಿ ನೆಲೆಗೊಂಡು ಅಭಿವೃದ್ಧಿಯಾಗುವರು.

32ಯೆರೂಸಲೇಮಿನಲ್ಲಿ ಉಳಿದವರು ಹರಡಿಕೊಳ್ಳುವರು, ಚೀಯೋನ್ ಪರ್ವತದಲ್ಲಿ ತಪ್ಪಿಸಿಕೊಂಡವರು ಅಭಿವೃದ್ಧಿಹೊಂದುವರು; ಸೇನಾಧೀಶ್ವರನಾದ ಯೆಹೋವನ ಅನುಗ್ರಹವು ಇದನ್ನು ನೆರವೇರಿಸುವುದು.

33ಆತನು ಅಶ್ಶೂರದ ಅರಸನನ್ನು ಕುರಿತು, “ಅವನು ಪಟ್ಟಣವನ್ನು ಸಮೀಪಿಸುವುದಿಲ್ಲ, ಅದಕ್ಕೆ ಬಾಣವನ್ನೆಸೆಯುವುದಿಲ್ಲ, ಗುರಾಣಿ ಹಿಡಿದಿರುವವರನ್ನು ಕಳುಹಿಸುವುದಿಲ್ಲ, ಅದನ್ನು ಕೆಡವಿ ಬಿಡುವುದಕ್ಕೋಸ್ಕರ ಅದರ ಎದುರಾಗಿ ಮಣ್ಣಿನ ದಿಬ್ಬವನ್ನು ಮಾಡುವುದಿಲ್ಲ.

34ಅವನು ಬಂದ ದಾರಿಯಿಂದಲೇ ಹಿಂದಿರುಗಿ ಹೋಗುವನು; ಈ ಪಟ್ಟಣಕ್ಕೆ ಬರುವುದೇ ಇಲ್ಲ.

35ನನಗೋಸ್ಕರವಾಗಿಯೂ, ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ ಪಟ್ಟಣವನ್ನು ಉಳಿಸಿ ಕಾಪಾಡುವೆನು” ಎಂದು ಹೇಳುತ್ತಾನೆ ಎಂಬುದೇ.

36ಆಗ ಯೆಹೋವನ ದೂತನು ಹೊರಟು ಬಂದು ಅಶ್ಶೂರ್ಯರ ಪಾಳೆಯದಲ್ಲಿ ಲಕ್ಷದ ಎಂಭತ್ತೈದು ಸಾವಿರ ಮಂದಿ ಸೈನಿಕರನ್ನು ಸಂಹರಿಸಿದನು. ಬೆಳಿಗ್ಗೆ ಎದ್ದು ನೋಡುವಲ್ಲಿ ಅವರೆಲ್ಲರು ಹೆಣಗಳಾಗಿದ್ದರು.

37ಆಗ ಅಶ್ಶೂರ್ಯರ ಅರಸನಾದ ಸನ್ಹೇರೀಬನು ಹಿಂದಿರುಗಿ ನಿನವೆ ಪಟ್ಟಣಕ್ಕೆ ಹೋಗಿ ಅಲ್ಲಿ ವಾಸಿಸಿದನು.

38ಅವನು ಒಂದು ದಿನ ಗುಡಿಗೆ ಹೋಗಿ ತನ್ನ ದೇವರಾದ ನಿಸ್ರೋಕನನ್ನು ಮನೆಯಲ್ಲಿ ಪೂಜಿಸುತ್ತಿರುವಾಗ ಅದ್ರಮ್ಮೆಲೆಕ್, ಸರೆಚೆರ್ ಎಂಬ ಅವನ ಮಕ್ಕಳು ಅವನನ್ನು ಕತ್ತಿಯಿಂದ ಕೊಂದು, ಅರರಾಟ್ ದೇಶಕ್ಕೆ ಓಡಿಹೋದರು. ಅವನಿಗೆ ಬದಲಾಗಿ ಅವನ ಮಗನಾದ ಏಸರ್ ಹದ್ದೋನನು ಅರಸನಾದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath