ಇಬ್ರಿಯರಿಗೆ 8
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ನಾವು ಈಗ ಹೇಳುವ ಸಂಗತಿಗಳಲ್ಲಿ ಮುಖ್ಯವಾದ ಮಾತೇನೆಂದರೆ, ಪರಲೋಕದೊಳಗೆ ಮಹೋನ್ನತನ ಸಿಂಹಾಸನದ ಬಲಗಡೆಯಲ್ಲಿ ಆಸನಾರೂಢನಾದಂಥ ಮಹಾಯಾಜಕನು ನಮಗಿದ್ದಾನೆ.
2ಆತನು ಪವಿತ್ರ ಸ್ಥಾನದಲ್ಲಿ ಮನುಷ್ಯರಿಂದಲ್ಲ, ಕರ್ತನೇ ಹಾಕಿದ ನಿಜವಾದ ದೇವದರ್ಶನ ಗುಡಾರದಲ್ಲಿ ಯಾಜಕೋದ್ಯೋಗ ನಡಿಸುವವನಾಗಿದ್ದಾನೆ.
3ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ, ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಈತನಿಗೂ ಸಹ ಏನಾದರೂ ಇರುವುದು ಅಗತ್ಯವಾಗಿದೆ.
4ಆತನು ಇನ್ನೂ ಭೂಮಿಯ ಮೇಲೆ ಇದ್ದಿದ್ದರೆ ಯಾಜಕನಾಗುತ್ತಿರಲಿಲ್ಲ. ಯಾಕೆಂದರೆ ಧರ್ಮಶಾಸ್ತ್ರದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.
5ಮೋಶೆಯು ಗುಡಾರವನ್ನು ಕಟ್ಟುವುದಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು” ಎಂದು ದೇವರಿಂದ ಎಚ್ಚರಿಸಲ್ಪಟ್ಟಂತೆಯೇ ಪರಲೋಕದಲ್ಲಿರುವವುಗಳ ಪ್ರತಿರೂಪವೂ, ಛಾಯೆಯೂ ಆಗಿರುವ ಆಲಯದಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.
6ಆದರೆ ಯೇಸು ಕ್ರಿಸ್ತನು ಅದಕ್ಕಿಂತ ಶ್ರೇಷ್ಠವಾದ ಉತ್ತಮ ಸೇವೆಯನ್ನು ಹೊಂದಿದವನಾಗಿದ್ದಾನೆ, ಯಾಕೆಂದರೆ ಈತನು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಉತ್ತಮವಾದ ಒಡಂಬಡಿಕೆಗೆ ಮಧ್ಯಸ್ಥನಾಗಿದ್ದಾನೆ.
7ಆ ಮೊದಲನೆಯ ಒಡಂಬಡಿಕೆಯು ದೋಷವಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅಗತ್ಯವಿರುತ್ತಿರಲಿಲ್ಲ.
8ಆದರೆ ದೇವರು ಆ ಜನರಲ್ಲಿ ತಪ್ಪು ಹೊರಿಸಿ ಹೀಗೆಂದನು, “‘ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೆಹೂದ ವಂಶದವರೊಂದಿಗೂ ಹೊಸದಾಗಿರುವ ಒಂದು ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು’ ಎಂದು ಕರ್ತನು ಹೇಳುತ್ತಾನೆ.
9‘ಈ ಒಡಂಬಡಿಕೆಯು ನಾನು ಇವರ ಪೂರ್ವಿಕರನ್ನು ಕೈಹಿಡಿದು ಐಗುಪ್ತ ದೇಶದೊಳಗಿನಿಂದ ಕರೆದುಕೊಂಡು ಬಂದ ದಿನದಲ್ಲಿ ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯ ಹಾಗಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲವಾದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ’ ಎಂದು ಕರ್ತನು ಹೇಳುತ್ತಾನೆ.
10‘ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು’ ಹೀಗಿರುವುದು, ‘ನಾನು ನನ್ನ ಆಜ್ಞೆಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನ್ನ ಜನರಾಗಿರುವರು.
11ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ ತನ್ನ ಸಹೋದರನಿಗೂ “ಕರ್ತನನ್ನು ತಿಳಿದುಕೊಳ್ಳಿರಿ” ಎಂದು ಬೋಧಿಸಬೇಕಾಗಿರುವುದಿಲ್ಲ. ಏಕೆಂದರೆ ಹೀನರಾದವರು ಮೊದಲುಗೊಂಡು ಉನ್ನತರಾದವರ ತನಕ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು.
12ನಾನು ಅವರ ದುಷ್ಕೃತ್ಯಗಳನ್ನು ಕರುಣೆಯಿಂದ ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಎಂದಿಗೂ ನೆನಪಿಗೆ ತಂದುಕೊಳ್ಳುವುದಿಲ್ಲ’” ಎಂದು ಕರ್ತನು ನುಡಿಯುತ್ತಾನೆ.
13ಆತನು “ಹೊಸತು” ಎಂದು ಹೇಳಿದ್ದರಲ್ಲಿ ಮೊದಲಿದ್ದ ಒಡಂಬಡಿಕೆಯನ್ನು ಹಳೆಯದಾಗಿ ಮಾಡಿದ್ದಾನೆ. ಅದು ಹಳೆಯದಾಗುತ್ತಾ ಅಳಿದುಹೋಗುವುದಕ್ಕೆ ಸಮೀಪವಾಗಿದೆ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath