ಆದಿಕಾಂಡ 50
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆಗ ಯೋಸೇಫನು ತನ್ನ ತಂದೆಯ ಮುಖದ ಮೇಲೆ ಬಿದ್ದು ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು.
2ತರುವಾಯ ಯೋಸೇಫನು ತನ್ನ ಸೇವಕರಾದ ವೈದ್ಯರಿಗೆ, “ನನ್ನ ತಂದೆಯ ಶವವನ್ನು ಸುಗಂಧ ದ್ರವ್ಯಗಳಿಂದ ತುಂಬಿ ಸಿದ್ಧಪಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಇಸ್ರಾಯೇಲನ ಶವವನ್ನು ಸುಗಂಧ ದ್ರವ್ಯಗಳಿಂದ ತುಂಬಿದರು.
3ನಲ್ವತ್ತು ದಿನಗಳು ಸುಗಂಧದ್ರವ್ಯಗಳನ್ನು ತುಂಬುವ ಪದ್ಧತಿಯಿರುವುದರಿಂದ ಅಷ್ಟು ದಿನ ಸಿದ್ಧಪಡಿಸುತ್ತಾ ಇದ್ದರು. ಐಗುಪ್ತರು ಅವನಿಗೋಸ್ಕರ ಎಪ್ಪತ್ತು ದಿನ ಶೋಕಾಚರಣೆಯಲ್ಲಿದ್ದರು.
4ಶೋಕಾಚರಣೆಯು ಮುಗಿದ ನಂತರ ಯೋಸೇಫನು ಫರೋಹನ ಪರಿವಾರದವರಿಗೆ, “ದಯವಿಟ್ಟು ನೀವು ಫರೋಹನ ಬಳಿಗೆ ಹೋಗಿ ಈ ವಿಷಯವನ್ನು ಮನಮುಟ್ಟುವಂತೆ ಮಾಡಿ,
5‘ನನ್ನ ತಂದೆಯು, ತಾನು ಕಾನಾನ್ ದೇಶದಲ್ಲಿ ಸಿದ್ಧ ಮಾಡಿಕೊಂಡಿರುವ ಸ್ಥಳದಲ್ಲಿಯೇ ತನಗೆ ಸಮಾಧಿ ಮಾಡಬೇಕೆಂದು ಸಾಯುವುದಕ್ಕಿಂತ ಮೊದಲು ನನ್ನಿಂದ ಪ್ರಮಾಣ ಮಾಡಿಸಿದನು. ಆದ್ದರಿಂದ ನನ್ನ ಮೇಲೆ ಕಟಾಕ್ಷವಿದ್ದರೆ ನೀವು ಈ ಸಂಗತಿಯನ್ನು ಫರೋಹನಿಗೆ ತಿಳಿಸಿ ನಾನು ಹೋಗಿ ತಂದೆಗೆ ಸಮಾಧಿ ಮಾಡಿ ಬರುವುದಕ್ಕೆ ಅಪ್ಪಣೆ ಕೊಡಿಸಬೇಕೆಂದು ಬೇಡಿಕೊಳ್ಳುತ್ತೇನೆ’” ಎಂದನು.
6ಫರೋಹನು ಈ ಸಂಗತಿಯನ್ನು ಕೇಳಿ ಯೋಸೇಫನಿಗೆ, “ನಿನ್ನ ತಂದೆ ಪ್ರಮಾಣ ಮಾಡಿಸಿದ ಮೇರೆಗೆ ನೀನು ಹೋಗಿ ಅವನಿಗೆ ಸಮಾಧಿ ಮಾಡಿಬರಬಹುದು” ಎಂದು ಅಪ್ಪಣೆಕೊಟ್ಟನು.
7ಯೋಸೇಫನು ತಂದೆಗೆ ಸಮಾಧಿ ಮಾಡುವುದಕ್ಕೆ ಹೊರಟಾಗ ಅವನ ಜೊತೆಯಲ್ಲಿ ಫರೋಹನ ಸೇವಕರೆಲ್ಲರೂ, ಅರಮನೆಯ ಮುಖಂಡರೆಲ್ಲರೂ, ಐಗುಪ್ತ ದೇಶದ ಮುಖ್ಯಸ್ಥರೆಲ್ಲರೂ
8ಯೋಸೇಫನ ಮನೆಯವರೆಲ್ಲರೂ, ಅಣ್ಣತಮ್ಮಂದಿರೂ, ತಂದೆಯ ಮನೆಯವರೆಲ್ಲರೂ ಹೋದರು. ಅವರು ತಮ್ಮ ಹೆಂಡತಿ ಮಕ್ಕಳನ್ನು ಕುರಿದನಗಳನ್ನು ಮಾತ್ರ ಗೋಷೆನ್ ಸೀಮೆಯಲ್ಲಿ ಬಿಟ್ಟು ಹೋದರು.
9ಇದಲ್ಲದೆ ಅವನ ಸಂಗಡ ರಥಗಳೂ, ಕುದುರೆಗಳೂ ಸಹ ಹೋದವು. ಯೋಸೇಫನ ಹಿಂದೆ ಹೊರಟು ಹೋದವರು ಬಹು ಮಂದಿಯಾಗಿದ್ದರು.
10ಅವರು ಯೊರ್ದನ್ ಹೊಳೆಯಿಂದಾಚೆ ಇರುವ ಆಟಾದ್ ಎಂಬ ಕಣಕ್ಕೆ ಬಂದು ಅಲ್ಲಿ ಅತ್ಯಧಿಕವಾಗಿ ಗೋಳಾಡಿದರು. ಯೋಸೇಫನು ತನ್ನ ತಂದೆಗೋಸ್ಕರ ಏಳು ದಿನಗಳ ತನಕ ಶೋಕಾಚರಿಸಿದನು.
11ಆ ದೇಶದ ಜನರಾಗಿದ್ದ ಕಾನಾನ್ಯರು ಯೊರ್ದನ್ ಹೊಳೆಯಿಂದಾಚೆ ಇರುವ ಆಟಾದ್ ಎಂಬ ಕಣದಲ್ಲಿ ನಡೆದ ಗೋಳಾಟವನ್ನು ನೋಡಿ ಐಗುಪ್ತರಿಗೆ ಬಂದಿರುವ ಈ ಶೋಕವು ಬಹು ವಿಶೇಷವಾಗಿದೆ ಎಂದು ಹೇಳಿದ್ದರಿಂದ ಆ ಸ್ಥಳಕ್ಕೆ “ ಆಬೇಲ್ ಮಿಚ್ರಯಿಮ್” ಎಂದು ಹೆಸರಾಯಿತು.
12ಯಾಕೋಬನ ಮಕ್ಕಳು ತಂದೆಯ ಅಪ್ಪಣೆಯ ಮೇರೆಗೆ ಮಾಡಿದರು.
13ಅವನ ಶವವನ್ನು ಕಾನಾನ್ ದೇಶಕ್ಕೆ ಹೊತ್ತುಕೊಂಡು ಹೋಗಿ ಮಕ್ಪೇಲ ಎಂಬ ಬಯಲಿನಲ್ಲಿರುವ ಗುಹೆಯೊಳಗೆ ಸಮಾಧಿಮಾಡಿದರು. ಅಬ್ರಹಾಮನು ಹಿತ್ತಿಯನಾದ ಎಫ್ರೋನನಿಂದ ಮಮ್ರೆಗೆದುರಿನಲ್ಲಿರುವ ಆ ಗವಿಯನ್ನು ಸುತ್ತಲಿರುವ ಭೂಮಿ ಸಹಿತ ಸ್ವಂತ ಸ್ಮಶಾನ ಭೂಮಿಯನ್ನಾಗಿ ಕೊಂಡುಕೊಂಡಿದ್ದನು.
14ತಂದೆಗೆ ಸಮಾಧಿ ಮಾಡಿದ ಮೇಲೆ ಯೋಸೇಫನೂ ಅವನ ಅಣ್ಣತಮ್ಮಂದಿರೂ ತಂದೆಯ ಉತ್ತರ ಕ್ರಿಯೆಗೋಸ್ಕರ ಜೊತೆಯಲ್ಲಿ ಹೋಗಿದ್ದವರೆಲ್ಲರೂ ಐಗುಪ್ತಕ್ಕೆ ಹಿಂದಿರುಗಿ ಬಂದರು.
15ಯೋಸೇಫನ ಅಣ್ಣತಮ್ಮಂದಿರು ತಂದೆ ಸತ್ತದ್ದನ್ನು ಕಂಡು, “ಒಂದು ವೇಳೆ ಯೋಸೇಫನು ನಮ್ಮನ್ನು ದ್ವೇಷಿಸಿ ನಾವು ಅವನಿಗೆ ಮಾಡಿದ ಎಲ್ಲಾ ಕೇಡಿಗೆ ಪ್ರತಿಯಾಗಿ ನಮಗೆ ಶಿಕ್ಷೆಯನ್ನು ಕೊಡಬಹುದು” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
16ಅವರು ಯೋಸೇಫನಿಗೆ, ನಿನ್ನ ತಂದೆಯು ಸಾಯುವುದಕ್ಕಿಂತ ಮೊದಲು ನಮಗೆ ಅಪ್ಪಣೆ ಮಾಡಿದ್ದೇನೆಂದರೆ,
17“ನಿನ್ನ ಅಣ್ಣಂದಿರಾದ ನಾವು ನಿನಗೆ ಕೇಡು ಮಾಡಿದ್ದು ನಿಜವೇ. ಆದರೂ ನಮ್ಮ ತಂದೆಯ ದೇವರನ್ನು ಆರಾಧಿಸುವವರು, ಸೇವಕರೂ ಆದ ನಮ್ಮ ಅಪರಾಧವನ್ನು ಕ್ಷಮಿಸಬೇಕೆಂದು ಬೇಡಿಕೊಳ್ಳುತ್ತೇವೆ” ಎಂದು ಯೋಸೇಫನ ಬಳಿ ಬೇಡಿಕೊಳ್ಳಿರಿ ಎಂದು ಹೇಳಿದರು. ಯೋಸೇಫನು ಈ ಮಾತುಗಳನ್ನು ಕೇಳಿ ಕಣ್ಣೀರು ಸುರಿಸಿದನು.
18ಇದಲ್ಲದೆ ಅಣ್ಣಂದಿರು ತಾವೇ ಬಂದು ಅವನ ಮುಂದೆ ಅಡ್ಡಬಿದ್ದು, “ಇಗೋ ನಾವು ನಿನಗೆ ಗುಲಾಮರು” ಎಂದರು.
19ಯೋಸೇಫನು ಅವರಿಗೆ, “ಹೆದರಬೇಡಿರಿ, ನಾನೇನು ದೇವರ ಸ್ಥಾನದಲ್ಲಿ ಇದ್ದೇನೋ?
20ನೀವಂತೂ ನನಗೆ ಕೇಡಾಗಬೇಕೆಂದು ಎಣಿಸಿದಿರಿ. ಆದರೆ ದೇವರು ನನ್ನನ್ನು ಮೇಲಾಗಬೇಕೆಂದು ಸಂಕಲ್ಪಿಸಿದನು; ಆದುದರಿಂದ ಇಂದು ನೀವು ಕಾಣುವಂತೆ, ಅನೇಕ ಜನರ ಪ್ರಾಣವು ಸಂರಕ್ಷಿಸಲ್ಪಟ್ಟಿತ್ತು” ಎಂದನು.
21ಆದುದರಿಂದ ನೀವು ಸ್ವಲ್ಪವೂ ಭಯಪಡಬೇಡಿರಿ. ನಾನು ನಿಮ್ಮನ್ನೂ, ನಿಮಗೆ ಸೇರಿದವರೆಲ್ಲರನ್ನೂ ಪೋಷಿಸುವೆನು. ಎಂದು ಹೇಳಿ ಅವರನ್ನು ಸಂತೈಸಿ ಅವರ ಸಂಗಡ ಪ್ರೀತಿಯಿಂದ ಮಾತನಾಡಿದನು.
22ಹೀಗೆ ಯೋಸೇಫನು, ಅವನ ತಂದೆಯ ಮನೆಯವರೂ ಐಗುಪ್ತ ದೇಶದಲ್ಲಿ ವಾಸಮಾಡಿದರು. ಯೋಸೇಫನು ನೂರಹತ್ತು ವರ್ಷ ಬದುಕಿದನು.
23ಅವನು ಎಫ್ರಾಯೀಮನ ಮಕ್ಕಳ ಮೊಮ್ಮಕ್ಕಳನ್ನು ಅಂದರೆ ಮೂರನೇ ತಲೆಮಾರಿನವರೆಗೂ ನೋಡಿದನು. ಮತ್ತು ಮನಸ್ಸೆಯ ಮಗನಾದ ಮಾಕೀರನಿಗೂ ಮಕ್ಕಳು ಹುಟ್ಟಿದಾಗ ಅವರೂ ಯೋಸೇಫನ ಮಡಿಲಿನಲ್ಲಿಯೇ ಬೆಳೆದರು. ಅವರನ್ನು ತನ್ನ ತೊಡೆಯ ಮೇಲೆ ಮಲಗಿಸಿಕೊಂಡನು.
24ಯೋಸೇಫನು ತನ್ನ ಅಣ್ಣತಮ್ಮಂದಿರಿಗೆ, “ನನಗೆ ಅವಸಾನಕಾಲ ಸಮೀಪಿಸಿತು. ಆದರೆ ದೇವರು ನಿಶ್ಚಯವಾಗಿ ನಿಮ್ಮನ್ನು ಪರಾಂಬರಿಸಿ ತಾನು ಅಬ್ರಹಾಮ, ಇಸಾಕ್, ಯಾಕೋಬರಿಗೆ ಕೊಡುತ್ತೇನೆಂದು ಪ್ರಮಾಣಮಾಡಿ ಹೇಳಿದ ದೇಶಕ್ಕೆ ನೀವು ಹೋಗಿ ಸೇರುವಂತೆ ಮಾಡುವನು” ಎಂದು ತಿಳಿದುಕೊಳ್ಳಿರಿ.
25ಇದಲ್ಲದೆ ಯೋಸೇಫನು ಇಸ್ರಾಯೇಲನ ಮಕ್ಕಳಿಗೆ, “ದೇವರು ನಿಸ್ಸಂದೇಹವಾಗಿ ನಿಮ್ಮನ್ನು ಪರಾಂಬರಿಸುವನು. ಆಗ ನೀವು ನನ್ನ ಶವವನ್ನು ನಿಮ್ಮ ಸಂಗಡ ಹೊತ್ತುಕೊಂಡು ಹೋಗಬೇಕು” ಎಂದು ಅವರಿಂದ ಪ್ರಮಾಣಮಾಡಿಸಿದನು.
26ಯೋಸೇಫನು ನೂರಹತ್ತು ವರ್ಷದವನಾಗಿ ಪ್ರಾಣ ಬಿಟ್ಟನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ತುಂಬಿ ಐಗುಪ್ತ ದೇಶದೊಳಗೆ ಅದನ್ನು ಪೆಟ್ಟಿಗೆಯಲ್ಲಿ ಇರಿಸಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath