ಕ್ರಿಶ್ಚಿಯನ್ ಧರ್ಮ
ಹಿಂದೆ

ಆದಿಕಾಂಡ 35

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ದೇವರು ಯಾಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾ ಹತ್ತಿ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿ ಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ, ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು” ಎಂದು ಹೇಳಿದನು.

2ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ “ನಿಮ್ಮ ಮಧ್ಯಲ್ಲಿರುವ ಅನ್ಯ ದೇವರುಗಳನ್ನು ತೆಗೆದುಹಾಕಿ ನಿಮ್ಮನ್ನು ಶುದ್ಧಪಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿರಿ,

3ನಾವು ಇಲ್ಲಿಂದ ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಲಾಲಿಸಿ ನಾನು ಹೋದ ಮಾರ್ಗದಲ್ಲೆಲ್ಲಾ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟಿಸುತ್ತೇನೆ” ಎಂದು ಹೇಳಿದನು.

4ಆಗ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯ ದೇವರುಗಳನ್ನು, ತಮ್ಮ ಕಿವಿಯಲ್ಲಿದ್ದ ಓಲೆಗಳನ್ನು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರವಿರುವ ಏಲಾ ಮರದ ಕೆಳಗೆ ಹೂಣಿಟ್ಟನು.

5ಆಮೇಲೆ ಅವರು ಪ್ರಯಾಣ ಮಾಡುತ್ತಿರುವಾಗ, ಸುತ್ತಲಿರುವ ಊರುಗಳಲ್ಲಿ ದೇವರ ಭಯವು ಇದ್ದುದರಿಂದ ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.

6ಹೀಗೆ ಯಾಕೋಬನೂ ಅವನ ಸಂಗಡ ಇದ್ದ ಜನರೆಲ್ಲರೂ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದರು.

7ಅವನು ತನ್ನ ಅಣ್ಣನ ಬಳಿಯಿಂದ ಓಡಿಹೋದಾಗ ದೇವರು ಅವನಿಗೆ ಪ್ರತ್ಯಕ್ಷನಾದನು. ಅದುದರಿಂದ ಅವನು ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.

8ಅಲ್ಲಿ ರೆಬೆಕ್ಕಳ ದಾಸಿಯಾದ ದೆಬೋರಳು ಸತ್ತು ಹೋದಾಗ, ಅವರು ಆಕೆಯನ್ನು ಬೇತೇಲಿನ ತಗ್ಗಿನಲ್ಲಿರುವ ಅಲ್ಲೋನ್ ಮರದ ಬುಡದಲ್ಲಿ ಸಮಾಧಿಮಾಡಿದರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಿಟ್ಟರು.

9ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಪುನಃ ಅವನಿಗೆ ದರ್ಶನ ಕೊಟ್ಟು ಅವನನ್ನು ಆಶೀರ್ವದಿಸಿದನು.

10ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಿಸಿಕೊಳ್ಳದೆ ‘ಇಸ್ರಾಯೇಲ್’ ಎಂದು ಕರೆಯಿಸಿಕೊಳ್ಳುವೆ” ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.

11ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು, ನೀನು ಬಹು ಸಂತಾನವುಳ್ಳವನಾಗಿ ಹೆಚ್ಚುವೆ, ನಿನ್ನಿಂದ ಜನಾಂಗವೂ, ಜನಾಂಗಗಳ ಗುಂಪು ಉಂಟಾಗುವುದು. ಅನೇಕ ಜನಾಂಗಗಳ ಅರಸರು ನಿನ್ನಿಂದ ಹುಟ್ಟುವರು.

12ನಾನು ಅಬ್ರಹಾಮ ಮತ್ತು ಇಸಾಕರಿಗೆ ವಾಗ್ದಾನ ಮಾಡಿದ ದೇಶವನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು.

13ಅನಂತರ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದನು.

14ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳದಲ್ಲಿ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಅದರ ಮೇಲೆ ಪಾನಕಾಭಿಷೇಕಮಾಡಿ ಎಣ್ಣೆಯನ್ನು ಹೊಯ್ದನು.

15ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.

16ಅವರು ಬೇತೇಲಿನಿಂದ ಪ್ರಯಾಣಮಾಡುತ್ತಿರಲು ಎಫ್ರಾತಿಗೆ ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ಪ್ರಸವ ವೇದನೆಯಿಂದ ನರಳಿದಳು.

17ಆಕೆಯು ಹೆರಿಗೆಯ ನೋವಿನಿಂದ ಬಹು ಕಷ್ಟಪಡುತ್ತಿರುವಾಗ ಸೂಲಗಿತ್ತಿಯು ಆಕೆಗೆ, “ಅಂಜಬೇಡ ಇನ್ನೊಂದು ಗಂಡು ಮಗುವು ಹುಟ್ಟುವುದು” ಎಂದು ಹೇಳಿದಳು.

18ಆದರೆ ರಾಹೇಲಳು ಸತ್ತುಹೋದಳು. ಪ್ರಾಣಬಿಡುವಾಗ ಆಕೆಯು ಆ ಮಗುವಿಗೆ, “ ಬೆನೋನಿ” ಎಂದು ಹೆಸರಿಟ್ಟಳು. ಆದರೆ ಅದರ ತಂದೆಯು ಅದಕ್ಕೆ, “ ಬೆನ್ಯಾಮೀನ” ಎಂದು ಹೆಸರಿಟ್ಟನು.

19ರಾಹೇಲಳು ಸತ್ತ ಮೇಲೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಆಕೆಯನ್ನು ಸಮಾಧಿಮಾಡಿದರು.

20ಯಾಕೋಬನು ಆಕೆಯ ಸಮಾಧಿಯ ಮೇಲೆ ಸ್ತಂಭವನ್ನು ನಿಲ್ಲಿಸಿದನು. ಅದು ಇಂದಿನವರೆಗೂ “ರಾಹೇಲಳ ಸಮಾಧಿಯ ಸ್ತಂಭ” ಎಂದೇ ಎನಿಸಿಕೊಂಡಿದೆ.

21ಅಲ್ಲಿಂದ ಇಸ್ರಾಯೇಲನು ಪ್ರಯಾಣ ಮಾಡಿ ಮಿಗ್ದಲ್ ಏದರಿನ ಆಚೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು.

22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳನ್ನು ಸಂಗಮಿಸಿದನು. ಈ ಸಂಗತಿಯು ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಗಂಡು ಮಕ್ಕಳಿದ್ದರು.

23ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದವರು ಯಾರೆಂದರೆ: ಯಾಕೋಬನ ಚೊಚ್ಚಲ ಮಗನಾದ ರೂಬೇನ್ ಮತ್ತು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್.

24ರಾಹೇಲಳಲ್ಲಿ ಹುಟ್ಟಿದವರು: ಯೋಸೇಫನು ಮತ್ತು ಬೆನ್ಯಾಮೀನನು.

25ರಾಹೇಲಳ ದಾಸಿಯಾದ ಬಿಲ್ಹಳಲ್ಲಿ ಹುಟ್ಟಿದವರು: ದಾನ್, ನಫ್ತಾಲಿ.

26ಲೇಯಳ ದಾಸಿಯಾದ ಜಿಲ್ಪಳಲ್ಲಿ ಹುಟ್ಟಿದವರು: ಗಾದ್, ಆಶೇರ್. ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು ಇವರೇ.

27ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿರುವುದು. ಅದು ಅಬ್ರಹಾಮ ಇಸಾಕರು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.

28ಇಸಾಕನು ದಿನತುಂಬಿದ ಮುದುಕನಾಗಿದ್ದು ನೂರ ಎಂಭತ್ತನೆಯ ವರ್ಷದಲ್ಲಿ ಪ್ರಾಣಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.

29ಇಸಾಕನ ಮಕ್ಕಳಾದ ಏಸಾವ, ಯಾಕೋಬರು ಅವನನ್ನು ಸಮಾಧಿಮಾಡಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath